ಬೆಂಗಳೂರು: ವೀರಶೈವ-ಲಿಂಗಾಯತ ನಾಯಕರು ನಾಲ್ಕು ದಶಕಗಳಿಂದ ಕರ್ನಾಟಕ ಲೋಕಸೇವಾ ಆಯೋಗದ ಕಡೆಗೆ ಚಿತ್ತಹರಿಸದ ಕಾರಣ ಸಮುದಾಯ ದುರ್ಬಲವಾಗಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.
ಕರ್ನಾಟಕ ವೀರಶೈವ ಲಿಂಗಾಯತ ಎಂಪ್ಲಾಯೀಸ್ ಕ್ರೆಡಿಟ್ ಕೋ–ಆಪ್‌ರೇಟಿವ್ ಸೊಸೈಟಿ (ಕೆವಿಎಲ್) ಶನಿವಾರ ಹಮ್ಮಿಕೊಂಡಿದ್ದ ಮೂರನೇ ವಾರ್ಷಿಕ ಸಾಮಾನ್ಯಸಭೆ ಹಾಗೂ ಸಮಾಜದ ಸಾಧಕ ಅಧಿಕಾರಿಗಳ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಉತ್ತರ ಕರ್ನಾಟಕದಲ್ಲಿ ಹಲವು ಹಿರಿಯರ ಶ್ರಮದಿಂದ ಶೈಕ್ಷಣಿಕ ಕ್ರಾಂತಿಯಾಗಿದೆ. ಇದೇ ತರಹದ ಸಾಧನೆ ಉಳಿದ ರಂಗಗಳಲ್ಲಿ ಇಲ್ಲ. ಕೆಪಿಎಸ್‌ಸಿಯತ್ತ ಚಿತ್ತಹರಿಸಿದ್ದರೆ ಸಮುದಾಯದ ಹೆಚ್ಚಿನ ಪ್ರತಿಭಾವಂತರು ಉನ್ನತ ಹುದ್ದೆ ಅಲಂಕರಿಸುತ್ತಿದ್ದರು. ಇದರಲ್ಲಿ ನಾನೂ ಸೇರಿದಂತೆ ಸಮುದಾಯದ ಎಲ್ಲ ನಾಯಕರ ತಪ್ಪಿದೆ’ ಎಂದರು.
ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ, ‘ರಾಜ್ಯ ಆಡಳಿತ ಸೇವೆಯ ಅಧಿಕಾರಿಗಳು ನಂಬಿಕೆಗೆ ಅರ್ಹರು. ನಾನು ಮುಖ್ಯಮಂತ್ರಿಯಾದಾಗಲೂ ಇದು ಅನುಭವಕ್ಕೆ ಬಂದಿದೆ. ಹಾಗಾಗಿ, ಅವರನ್ನೇ ಹೆಚ್ಚು ನಂಬುತ್ತಿದ್ದೆ. ನಂಬಿಕೆಗೆ ತಕ್ಕಂತೆ ಅವರೂ ಕೆಲಸ ಮಾಡಿದ್ದಾರೆ’ ಎಂದು ಶ್ಲಾಘಿಸಿದರು.
ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಕೆಲಸದ ಒತ್ತಡದ ಮಧ್ಯೆಯೂ ಕೆಎಎಸ್ ಅಧಿಕಾರಿಗಳು ಸಮಾಜದ ಪ್ರಗತಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಮೆಚ್ಚುಗೆಯ ಸಂಗತಿ ಎಂದರು.
ತುಮಕೂರು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಸಿರಿಗೆರೆ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸಚಿವರಾದ ಶರಣಪ್ರಕಾಶ ಪಾಟೀಲ, ಈಶ್ವರ ಖಂಡ್ರೆ, ಸೊಸೈಟಿ ಅಧ್ಯಕ್ಷ ಸುರೇಶ್ ಗೌಡ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.