ಬೆಂಗಳೂರು: ‘ನೀಟ್’ನಲ್ಲಿ ತೇರ್ಗಡೆ ಹೊಂದಿರುವ ರಾಜ್ಯದ ಅರ್ಹ ಅಭ್ಯರ್ಥಿಗಳು ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಜುಲೈ 21ರವರೆಗೆ ಅವಕಾಶ ನೀಡಿದೆ.
ವೈದ್ಯಕೀಯ, ದಂತ ವೈದ್ಯಕೀಯ, ಆಯುರ್ವೇದ, ಯುನಾನಿ ಮತ್ತು ಹೋಮಿಯೋಪಥಿ ಕೋರ್ಸ್‌ಗಳ ಅಭ್ಯರ್ಥಿಗಳಿಗೆ ಇದು ಅನ್ವಯವಾಗಲಿದೆ. ಆನ್‌ಲೈನ್ ಅರ್ಜಿ ತುಂಬಿದ ನಂತರ ನಿಗದಿತ ಶುಲ್ಕವನ್ನು ಜುಲೈ 22ರ ಸಂಜೆ 6ರ ಒಳಗೆ ಪಾವತಿಸಬೇಕು. ಆಯುರ್ವೇದ ಕಾಲೇಜುಗಳ ಅಖಿಲ ಭಾರತ ವ್ಯಾಪ್ತಿಯ ಶೇ 15ರಷ್ಟು ಸೀಟುಗಳನ್ನು ಹೊರತುಪಡಿಸಿ, ಉಳಿದ ಶೇ 85ರಷ್ಟು ಸೀಟುಗಳನ್ನು ಪ್ರಾಧಿಕಾರದ ಮೂಲಕವೇ ಹಂಚಿಕೆ ಮಾಡಲಾಗುವುದು. ಮಾಹಿತಿಗೆ ಪ್ರಾಧಿಕಾರದ ವೆಬ್‌ಸೈಟ್ http://kea.kar.nic.in ನಲ್ಲಿರುವ ಸೂಚನೆಗಳನ್ನು ಪಾಲಿಸಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಬಯಸುವ ಹೊರರಾಜ್ಯದ ಅಭ್ಯರ್ಥಿಗಳಿಗೆ ಮೀಸಲಾತಿ ಸವಲತ್ತುಗಳು ಅನ್ವಯಿಸುವುದಿಲ್ಲ. ಪರಿಶಿಷ್ಟ ಜಾತಿ, ಪಂಗಡಗಳು ಮತ್ತು ಇತರೆ ಹಿಂದುಳಿದ ವರ್ಗಗಳ ಮೀಸಲಾತಿ ಕರ್ನಾಟಕದ ಅಭ್ಯರ್ಥಿಗಳಿಗೆ ಮಾತ್ರ ಅನ್ವಯ. ಈಗಾಗಲೇ ಸಿಇಟಿ ಬರೆದು ದಾಖಲೆಗಳ ಪರಿಶೀಲನೆಗೆ ಹಾಜರಾದವರು ಮತ್ತೆ ಹಾಜರಾಗಬೇಕಾದ ಆವಶ್ಯಕತೆ ಇಲ್ಲ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.