ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಪ ವಿಭಾಗಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಚಿವ ಕೃಷ್ಣ ಬೈರೇಗೌಡ ಸೂಚನೆ

ಎಸಿ ನ್ಯಾಯಾಲಯಗಳಲ್ಲಿ ವಿಲೇವಾರಿಯಾದ ಪ್ರಕರಣಗಳು
Published : 23 ಆಗಸ್ಟ್ 2024, 17:25 IST
Last Updated : 23 ಆಗಸ್ಟ್ 2024, 17:25 IST
ಫಾಲೋ ಮಾಡಿ
Comments

ಬೆಂಗಳೂರು: ಉಪ ವಿಭಾಗಾಧಿಕಾರಿಗಳ ನ್ಯಾಯಾಲಯಗಳಲ್ಲಿ ಇರುವ ಪ್ರಕರಣಗಳನ್ನು ವಿಲೇವಾರಿ ಮಾಡದ ಉಪ ವಿಭಾಗಾಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಅವರಿಗೆ ಸೂಚಿಸಿದ್ದಾರೆ.

ಮಂಡ್ಯ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ತುಮಕೂರು, ಕೊಪ್ಪಳ, ಮೈಸೂರು, ಮಂಗಳೂರು ಹಾಗೂ ಬೆಳಗಾವಿ ಜಿಲ್ಲೆಗಳ ಆಯ್ದ 30 ಉಪ-ವಿಭಾಗಾಧಿಕಾರಿಗಳು ಹಾಗೂ ವಲಯ ಆಯುಕ್ತರ ಜೊತೆ ಶುಕ್ರವಾರ ವಿಡಿಯೊ ಸಂವಾದದ ಮೂಲಕ ಅವರು ಸಭೆ ನಡೆಸಿದರು. ಲೋಕಸಭಾ ಚುನಾವಣೆಯ ನಂತರ ಪ್ರಕರಣಗಳು ಇತ್ಯರ್ಥವಾಗದೇ ಇರುವುದನ್ನು ಗಮನಿಸಿದ ಅವರು ಅಧಿಕಾರಿಗಳ ಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚಿಸಿದರು.

‘ಹಲವು ವರ್ಷಗಳಿಂದ ನ್ಯಾಯಾಲಯಗಳಿಗೆ ಅಲೆದಾಡಿ ಜನ ಬಸವಳಿದಿದ್ದಾರೆ. ಹೀಗಾಗಿ ಬಾಕಿ ಇರುವ ಎಲ್ಲಾ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸಬೇಕು ಎಂದು ಎಲ್ಲಾ ಅಧಿಕಾರಿಗಳಿಗೂ ಗುರಿ ನಿಗದಿ ಮಾಡಲಾಗಿತ್ತು. ಮಾರ್ಚ್‌ವರೆಗೆ ವಿಲೇವಾರಿ ವೇಗವಾಗಿಯೇ ಇತ್ತು. ನಂತರ ಇಳಿಮುಖವಾಗಿದೆ. ಪ್ರಶ್ನಿಸಿದರೆ ಚುನಾವಣೆಯ ನೆಪ ಹೇಳುತ್ತಾರೆ. ದುಡ್ಡು ಮಾಡೋದಕ್ಕೆ ಚುನಾವಣೆ ಅಡ್ಡ ಬರುವುದಿಲ್ಲ. ಆದರೆ ಜನರ ಕೆಲಸ ಮಾಡಲು ಮಾತ್ರ ಚುನಾವಣೆ ಅಡ್ಡಬರುತ್ತದೆಯೇ’ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ರಾಜ್ಯದಾದ್ಯಂತ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಒಟ್ಟು 36,430 ಪ್ರಕರಣಗಳು ಬಾಕಿ ಇವೆ. ಬೆಂಗಳೂರು ಉತ್ತರ ವಲಯದಲ್ಲೇ ಗರಿಷ್ಠ, 5,419 ಪ್ರಕರಣಗಳು ಮತ್ತು ಬೆಂಗಳೂರು ದಕ್ಷಿಣ ವಲಯದಲ್ಲಿ 4,351 ಪ್ರಕರಣಗಳು ಬಾಕಿ ಇವೆ. ಜತೆಗೆ ಈ ಎರಡೂ ವಿಭಾಗಗಳಲ್ಲಿ ತಮ್ಮ ವ್ಯಾಪ್ತಿಗೆ ಬರದೇ ಇರುವ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ ಎಂಬುದನ್ನು ಗಮನಿಸಿದ ಸಚಿವರು, ‘ಇಂತಹ ಪ್ರಕರಣಗಳನ್ನು ದಾಖಲಿಸಿಕೊಳ್ಳಲು ಎಷ್ಟು ಹಣ ತೆಗೆದುಕೊಂಡಿದ್ದೀರಿ’ ಎಂದು ಉತ್ತರ ವಿಭಾಗದ ವಿಭಾಗಾಧಿಕಾರಿ ಪ್ರಮೋದ್‌ ಪಾಟೀಲ್‌ಮತ್ತು ದಕ್ಷಿಣ ವಿಭಾಗದ ವಿಭಾಗಾಧಿಕಾರಿ ರಜನೀಕಾಂತ ಚೌಹ್ಹಾಣ್‌ ಅವರನ್ನು ಪ್ರಶ್ನಿಸಿದರು.

ಐದು ತಿಂಗಳಿಂದ ಒಂದೂ ಪ್ರಕರಣ ವಿಲೇವಾರಿ ಮಾಡದ ಮಧುಗಿರಿ ಉಪ-ವಿಭಾಗಾಧಿಕಾರಿ ಶಿವಪ್ಪ ಹಾಗೂ ತುಮಕೂರು ಉಪ-ವಿಭಾಗಾಧಿಕಾರಿ ಗೌರವ್‌ ಶೆಟ್ಟಿ ಅವರನ್ನು ತರಾಟೆಗೆ ತೆಗೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT