ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಾಶಯಗಳಿಗೆ ಜೀವಕಳೆ: ಮರುಕಳಿಸಿದ ಜೋಗದ ವೈಭವ

ರಾಜ್ಯದ ವಿವಿಧೆಡೆ ಮನೆಗಳಿಗೆ ಹಾನಿ
Last Updated 9 ಜುಲೈ 2022, 19:31 IST
ಅಕ್ಷರ ಗಾತ್ರ

ಕಾರ್ಗಲ್ (ಶಿವಮೊಗ್ಗ): ಮುಂಗಾರು ಮಳೆಯ ಅಬ್ಬರಕ್ಕೆ ಮೈದುಂಬಿರುವ ಜೋಗ ಜಲಪಾತದ ವೈಭವವನ್ನು ಸವಿಯಲು ವಾರಾಂತ್ಯದಲ್ಲಿ ಪ್ರವಾಸಿಗರ ದಂಡು ಜೋಗಕ್ಕೆ ಲಗ್ಗೆಯಿಡುತ್ತಿದೆ.

ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಪ್ರವಾಸಿಗರು ಶನಿವಾರ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ಜಲಪಾತದ ಮುಂಭಾಗದ ಮೈಸೂರು ಬಂಗಲೆಯಲ್ಲಿ ಛಾಯಾಚಿತ್ರ ಕ್ಲಿಕ್ಕಿಸುತ್ತಿದ್ದರು.

ಜೋಗ ಜಲಪಾತವನ್ನು ವಿಶ್ವದರ್ಜೆಯ ಪ್ರವಾಸಿ ತಾಣವಾಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ₹185 ಕೋಟಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ‘ಕಾಮಗಾರಿ ನಡೆಯುತ್ತಿರುವುದರಿಂದ ಭಾರಿ ವಾಹನಗಳು ಮತ್ತು ಯಂತ್ರಗಳ ಮಧ್ಯೆಯೇ ಸಂಚರಿಸಬೇಕಾಗಿದ್ದು, ಪ್ರವಾಸಿಗರಿಗೆ ಕಿರಿಕಿರಿಯಾಗಿದೆ. ಶನಿವಾರ ಮತ್ತು ಭಾನುವಾರ ಕಾಮಗಾರಿಗಳನ್ನು ಸ್ಥಗಿತಗೊಳಿಸಬೇಕು’ ಎಂದು ಹುಬ್ಬಳ್ಳಿಯ ಪ್ರವಾಸಿಗ ಮೈಲಾರಪ್ಪ ಒತ್ತಾಯಿಸಿದರು.

ಜೋಗ ಜಲಪಾತದ ವೈಭವ ಶನಿವಾರ ಕಂಡುಬಂದಿದ್ದು ಹೀಗೆ...
ಜೋಗ ಜಲಪಾತದ ವೈಭವ ಶನಿವಾರ ಕಂಡುಬಂದಿದ್ದು ಹೀಗೆ...

ಮಳೆ ಕೊಂಚ ಇಳಿಮುಖ: ಶಿವಮೊಗ್ಗ ಜಿಲ್ಲೆಯಲ್ಲಿ 24 ಗಂಟೆಗಳಲ್ಲಿ ಮಳೆಯ ಪ್ರಮಾಣ ಕೊಂಚ ಇಳಿಮುಖವಾಗಿದೆ. ಸಾಗರ ತಾಲ್ಲೂಕಿನ ಭಾರಂಗಿ ಹೋಬಳಿಯ ಉರುಳುಗಲ್ಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ.

ಜಲಾಶಯಗಳಿಗೆ ಜೀವಕಳೆ: ಕೆಆರ್‌ಎಸ್ ಜಲಾಶಯ ಹಾಗೂ ತುಂಗಭದ್ರಾ ಜಲಾಶಯ ತುಂಬುವ ಹಂತಕ್ಕೆ ಬಂದಿವೆ.

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ಹಿಡಕಲ್‌ನ ರಾಜಾ ಲಖಮಗೌಡ ಜಲಾಶಯದಲ್ಲಿ ಶನಿವಾರ ಒಂದೇ ದಿನ ಆರು ಅಡಿ ನೀರು ಹೆಚ್ಚಳವಾಗಿದೆ.

ಕೆಆರ್‌ಎಸ್‌ನಿಂದ 10 ಸಾವಿರ ಕ್ಯುಸೆಕ್ ನೀರು ಬಿಡುಗಡೆ (ಮಂಡ್ಯ): ಕೆಆರ್‌ಎಸ್ ಜಲಾಶಯ ಗರಿಷ್ಠಮಟ್ಟ ತಲುಪುತ್ತಿದ್ದು ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಶನಿವಾರ 10 ಸಾವಿರ ಕ್ಯುಸೆಕ್‌ ನೀರು ಬಿಡುಗಡೆ ಮಾಡಿದ್ದಾರೆ. ಜಲಾಶಯ ಭರ್ತಿಗೆ 2.75 ಅಡಿ ಬಾಕಿ ಉಳಿದಿದೆ.
ಹೇಮಾವತಿ ಜಲಾಶಯದಿಂದಲೂ ನೀರು ಬರುತ್ತಿರುವ ಕಾರಣ ನೀರು ಬಿಡು ಗಡೆ ಮಾಡಲಾಗಿದೆ. ನದಿ ತೀರದಲ್ಲಿ ವಾಸಿಸುವ ಜನರ ಸುರಕ್ಷತೆ ದೃಷ್ಟಿಯಿಂದ ನಿಗಮದ ಅಧಿಕಾರಿಗಳು ಜನರಿಗೆ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ರಾತ್ರಿ, ಭಾನುವಾರ ಮತ್ತಷ್ಟು ನೀರು ಹರಿಸುವ ಸಾಧ್ಯತೆ ಇದ್ದು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಕರಾವಳಿಯಲ್ಲಿ ಮಳೆ ಮುಂದುವರಿಕೆ (ಮಂಗಳೂರು): ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಹಾಗೂ ಚಿಕ್ಕ ಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಮುಂದುವರಿದಿದೆ.

ಅರಬ್ಬೀಸಮುದ್ರದಲ್ಲಿ ಜುಲೈ 10 ರವರೆಗೂ 3.5 ಮೀ.ನಿಂದ 4 ಮೀ. ಎತ್ತರದ ಅಲೆಗಳು ಕಾಣಿಸಿಕೊಳ್ಳಲಿವೆ. ಪ್ರತಿ ಸೆಕೆಂಡ್‌ಗೆ 50ಸೆಂ.ಮೀ.ನಿಂದ 70 ಸೆಂ.ಮೀ ವೇಗದಲ್ಲಿ ಅಲೆಗಳು ಅಪ್ಪಳಿಸ ಲಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉಡುಪಿ ಜಿಲ್ಲೆಯ ಕಾಪು ತಾಲ್ಲೂಕು ಪಡುಬಿದ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಡಿಪಟ್ನ
ದಲ್ಲಿ ಕಡಲ್ಕೊರೆತ ಉಂಟಾಗಿದೆ. ಪಾದೆಬೆಟ್ಟುವಿನಲ್ಲಿ ನೆರೆ ಬಂದಿದ್ದು ಹಲವು ಮನೆಗಳಿಗೆ ನೀರು ನುಗ್ಗಿದೆ.

ಚಿಕ್ಕಮಗಳೂರು ಜಿಲ್ಲೆಯ ಗಿರಿ ಶ್ರೇಣಿಯ ಕವಿಕಲ್‌ ಗಂಡಿಯ ಬಳಿ ಎಸ್ಟೇಟ್‌ ಪಕ್ಕದ ಪ್ರದೇಶದಲ್ಲಿ ಮಣ್ಣು ಕುಸಿದಿದೆ. ಐದಳ್ಳಿ ಗ್ರಾಮದಲ್ಲಿ ನೀಲಮ್ಮ ಅವರ ಮನೆ ನೆಲಸಮವಾಗಿದೆ. ಕೊಪ್ಪ ತಾಲ್ಲೂಕಿನ ನಾರ್ವೆ ಭಾಗದಲ್ಲಿ ತುಂಗಾ ನದಿ ನೀರು ಗದ್ದೆಗಳಿಗೆ ನುಗ್ಗಿದೆ.

ಭಾರಿ ವಾಹನ ಸಂಚಾರ ನಿಷೇಧ (ಮಡಿಕೇರಿ): ಕೊಡಗು ಜಿಲ್ಲೆಯಲ್ಲಿ ಶನಿವಾರ ಬಿರುಸಿನಿಂದ ಮಳೆಸುರಿದಿದ್ದು, ರಸ್ತೆಗಳೆಲ್ಲವೂ ಹಾಳಾಗಿರುವುದರಿಂದ ಜಿಲ್ಲೆಯಾದ್ಯಂತ ಭಾರಿ ವಾಹನಗಳ ಸಂಚಾರವನ್ನು ಅ.15ರವರೆಗೂ ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್‌ ಆದೇಶ ಹೊರಡಿಸಿದ್ದಾರೆ.

ಸೋಮವಾರಪೇಟೆ ತಾಲ್ಲೂಕಿನ ಶುಂಠಿ ಮಂಗಳೂರು– ಕೊರ್ಲಳ್ಳಿ– ಬೀಟಿಕಟ್ಟೆ ಸಂಪರ್ಕ ರಸ್ತೆ ಸುಮಾರು 30 ಮೀಟರ್ ದೂರದವರೆಗೆ ಬಿರುಕು ಬಿಟ್ಟಿದೆ. ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿ, ಮಲ್ಲಳ್ಳಿ, ಪುಷ್ಪಗಿರಿ ಮಾರ್ಗ ಮಧ್ಯೆ ರಸ್ತೆಗೆ ಮಣ್ಣು ಕುಸಿದಿದೆ.

ಕುಸಿದ ಮಣ್ಣು (ಹಾಸನ): ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ದೋಣಿ ಗಾಲ್‌ನ ಬೆಂಗಳೂರು– ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕೆಳಭಾಗದಲ್ಲಿ ಸಣ್ಣದಾಗಿ ಭೂಕುಸಿತ ಉಂಟಾಗಿದೆ.

ಆಲೂರು ತಾಲ್ಲೂಕಿನಲ್ಲಿ 4 ಮನೆಹಾನಿಗೀಡಾಗಿವೆ. ಅರಕಲ ಗೂಡು ತಾಲ್ಲೂಕಿನ ಕೊಣನೂರು ವ್ಯಾಪ್ತಿ ಯಲ್ಲಿ 15 ಹಾಗೂ ಅರಕಲಗೂಡು ತಾಲ್ಲೂಕು ಮರವಳಲು ಗ್ರಾಮದಲ್ಲಿ ಮನೆಯ ಗೋಡೆ ಕುಸಿದಿದೆ.

ಕಾರವಾರ: ಮುಂಡಗೋಡ, ದಾಂಡೇಲಿ, ಹಳಿಯಾಳ ಮತ್ತು ಶಿರಸಿ ತಾಲ್ಲೂಕುಗಳಲ್ಲಿ ದಿನವಿಡೀ ಮಳೆ ಯಾಗಿದೆ. ಜಿಲ್ಲೆಯಲ್ಲಿ ಶುಕ್ರವಾರ 16 ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ಧಾರಾಕಾರ ಮಳೆ (ಕಲಬುರಗಿ): ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಶನಿವಾರ ಇಡೀ ದಿನ ಮಳೆಯಾಯಿತು.

ಕಲಬುರಗಿ ಜಿಲ್ಲೆಯ ಚಿಂಚೋಳಿ ಮತ್ತು ಸೇಡಂ ತಾಲ್ಲೂಕಿನ ಕೆಲ ಗ್ರಾಮಗಳ ಜಮೀನುಗಳಲ್ಲಿ ಮಳೆ ನೀರು ನಿಂತಿದ್ದು, ಬೆಳೆ ಹಾನಿಯಾಗಿವೆ. ಕಲಬುರಗಿ ನಗರ ಸೇರಿ ಚಿಂಚೋಳಿ, ಸೇಡಂ, ಕಮಲಾ ಪುರ, ಚಿತ್ತಾಪುರ ತಾಲ್ಲೂಕಿನ ವಿವಿಧೆಡೆ ಬಿರುಸಿನ ಮಳೆಯಾಗಿದೆ. ಯಾದಗಿರಿ, ಬೀದರ್ ಮತ್ತು ರಾಯಚೂರು ಜಿಲ್ಲೆಗಳ ವಿವಿಧೆಡೆ ತುಂತುರು ಮಳೆಯಾಗಿದೆ.

ಕೆಟ್ಟುನಿಂತ ದೋಣಿ: 8 ಜನರ ರಕ್ಷಣೆ

ಕೊಡಗು: ಕುಶಾಲನಗರ ತಾಲ್ಲೂಕಿನ ನಂಜರಾಯಪಟ್ಟಣದಿಂದ ದುಬಾರೆ ಹಾಡಿಗೆ 8 ಜನರನ್ನು ಕರೆದೊಯುತ್ತಿದ್ದ ಯಾಂತ್ರಿಕ ದೋಣಿಯೊಂದು ಶನಿವಾರ ಉಕ್ಕಿ ಹರಿಯುತ್ತಿದ್ದ ಕಾವೇರಿ ನದಿಯ ಮಧ್ಯೆ ಕೆಟ್ಟು ನಿಂತು ಆತಂಕ ಸೃಷ್ಟಿಸಿತ್ತು. ಮತ್ತೊಂದು ದೋಣಿಯ ಮೂಲಕ ಅವರನ್ನು ರಕ್ಷಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT