ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ತಮ್ಮ ವಿರುದ್ಧ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮವನ್ನು ಪ್ರಶ್ನಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ಸೋಮವಾರವೂ ನಡೆಯಲಿದೆ.
ಸಿದ್ದರಾಮಯ್ಯ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠದ ಎದುರು ಈಗಾಗಲೇ ವಾದ ಮಂಡಿಸಿದ್ದಾರೆ. ರಾಜ್ಯಪಾಲರ ಕಾರ್ಯದರ್ಶಿಯ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ದೂರುದಾರ ಟಿ.ಜೆ.ಅಬ್ರಹಾಂ ಮತ್ತು ಪ್ರದೀಪ್‌ಕುಮಾರ್ ಪರವಾಗಿ ವಕೀಲರು ಪ್ರತಿವಾದ ಮುಂದಿಟ್ಟಿದ್ದಾರೆ.
ಮತ್ತೊಬ್ಬ ದೂರುದಾರ ಸ್ನೇಹಮಯಿ ಕೃಷ್ಣ ಪರ ವಕೀಲರು ತಮ್ಮ ವಾದ ಮಂಡಿಸಲು ಪೀಠವು ಸೋಮವಾರ ಮಧ್ಯಾಹ್ನ 2.30ಕ್ಕೆ ಸಮಯ ನಿಗದಿಪಡಿಸಿದೆ. ಇವರ ಪ್ರತಿವಾದಗಳಿಗೆ ಪ್ರತಿಕ್ರಿಯೆ ನೀಡುವ ಹಕ್ಕನ್ನು ಸಿಂಘ್ವಿ ಅವರು ಸೋಮವಾರಕ್ಕೆ ಕಾಯ್ದಿರಿಸಿದ್ದಾರೆ.
ಈ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಪೀಠವು ಸೂಚಿಸಿತ್ತು.