ಬೆಂಗಳೂರು: ಮುಡಾ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಬಿಜೆಪಿ–ಜೆಡಿಎಸ್ ನಾಯಕರು, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ‘ಮೈಸೂರು ಚಲೋ’ ಪಾದಯಾತ್ರೆ ಮೂಲಕ ಬೃಹತ್ ಹೋರಾಟಕ್ಕೆ ಶನಿವಾರ ಚಾಲನೆ ನೀಡಲಿದ್ದಾರೆ.
‘ಕಾಂಗ್ರೆಸ್ ಸರ್ಕಾರದ ಹಗರಣಗಳು ಮತ್ತು ಭ್ರಷ್ಟಾ ಚಾರದ ವಿರುದ್ಧ ಹೋರಾಟದ ಕಹಳೆ ಮೊಳಗಿಸಿದ್ದೇವೆ. ಸಿದ್ದರಾಮಯ್ಯ ರಾಜೀನಾಮೆ ಕೊಡುವವರೆಗೂ ವಿರಮಿಸುವುದಿಲ್ಲ’ ಎಂದೂ ಬಿಜೆಪಿ ಸವಾಲು ಎಸೆದಿದೆ.
‘ಕಾಂಗ್ರೆಸ್ ಅಧಿಕಾರಕ್ಕೆ ಬಂದು ವರ್ಷದೊಳಗೇ ಮುಡಾ ನಿವೇಶನ ಹಂಚಿಕೆ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ದೊಡ್ಡಮಟ್ಟದ ಅಕ್ರಮ ನಡೆದಿದ್ದು, ಅಧಿಕಾರ ದುರುಪಯೋಗವನ್ನು ಮಾಡಿಕೊಳ್ಳಲಾಗಿದೆ’ ಎಂದು ಆಪಾದಿಸಿರುವ ಬಿಜೆಪಿ, ಯಾತ್ರೆಯನ್ನು ಸರ್ಕಾರದ ವಿರುದ್ಧ ಪ್ರಬಲ ಅಸ್ತ್ರವಾಗಿ ಬಳಸಿಕೊಳ್ಳಲು ಮುಂದಾಗಿದೆ. ಆರಂಭದಲ್ಲಿ ಪಾದಯಾತ್ರೆಗೆ ಜತೆಗೂಡುವುದಾಗಿ ಜೆಡಿಎಸ್ ನಾಯಕರು ಹೇಳಿದ್ದರು. ಹಾಸನದ ಮಾಜಿ ಶಾಸಕ ಪ್ರೀತಂಗೌಡ ವಿರುದ್ಧ ಹರಿ ಹಾಯ್ದಿದ್ದ ಕೇಂದ್ರದ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ, ಯಾತ್ರೆಗೆ ನೈತಿಕ ಬೆಂಬಲವನ್ನೂ ಕೊಡುವುದಿಲ್ಲ ಎಂದು ಘೋಷಿಸಿದ್ದರು. ಬಿಜೆಪಿ ವರಿಷ್ಠರ ಮಧ್ಯ ಪ್ರವೇಶದ ಬಳಿಕ, ಯೂಟರ್ನ್ ಹೊಡೆದ ಕುಮಾರಸ್ವಾಮಿ, ಯಾತ್ರೆಯಲ್ಲಿ ಭಾಗಿಯಾಗುವುದಾಗಿ ಹೇಳಿದ್ದಾರೆ. ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಮತ್ತು ಎಚ್.ಡಿ.ಕುಮಾರ
ಸ್ವಾಮಿ ಅವರು ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ.
ಪಾದಯಾತ್ರೆ ಕುರಿತು ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ‘ನಮ್ಮದು ವ್ಯಕ್ತಿ ಕೇಂದ್ರಿತ ಹೋರಾಟವಲ್ಲ. ಕಾಂಗ್ರೆಸ್‌ನ ಭ್ರಷ್ಟ ಹಾಗೂ ಸ್ವಜನ ಪಕ್ಷಪಾತದ ವಿರುದ್ಧದ ಜನಪರ ಹೋರಾಟ. ಜನರ ದನಿಯಾಗಿ ನಿಂತು, ಜನರ ಸಂಪತ್ತು ಹಾಗೂ ಹಕ್ಕುಗಳನ್ನು ರಕ್ಷಿಸುವುದಕ್ಕಾಗಿ ಪ್ರಾಮಾಣಿಕ ಕಾಳಜಿಯ ಹೋರಾಟವಾಗಿದೆ. ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವುದು ಅನಿವಾರ್ಯ. ಅದಕ್ಕಾಗಿ ಜನಾಕ್ರೋಶ ಪ್ರತಿನಿಧಿಸಲು ಹೋರಾಟ ಹಮ್ಮಿಕೊಳ್ಳಲಾಗಿದೆ’ ಎಂದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ವಿ. ಸುನಿಲ್ ಕುಮಾರ್, ರಾಜ್ಯ ಕಾರ್ಯದರ್ಶಿ ಡಿ.ಎಸ್.ಅರುಣ್, ರಾಜ್ಯ ಉಪಾಧ್ಯಕ್ಷ ಅನಿಲ್ ಬೆನಕೆ, ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಎ.ಎಸ್. ಪಾಟೀಲ್ ನಡಹಳ್ಳಿ ಅವರು
ಸುದ್ದಿಗೋಷ್ಠಿಯಲ್ಲಿ ಇದ್ದರು.
ಡಿಕೆಶಿ ಭ್ರಷ್ಟಾಚಾರದ ಪಿತಾಮಹ: ವಿಜಯೇಂದ್ರ
‘ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭ್ರಷ್ಟಾಚಾರದ ಪಿತಾಮಹ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಹಗರಣಗಳಿಗೆ ಸಂಬಂಧಿಸಿ ಅವರೇ ಉತ್ತರ ಕೊಡಬೇಕು. ಈ ಸರ್ಕಾರ ರಾಜ್ಯದ ಜನರ ಪಾಲಿಗೆ ಶಾಪವಾಗಿದೆ’ ಎಂದು ವಿಜಯೇಂದ್ರ ಕಿಡಿಕಾರಿದರು.
‘ಪಾದಯಾತ್ರೆ ಮೂಲಕ ನಾವು ತೊಡೆ ತಟ್ಟಿದ್ದೇವೆ. ಅವರು ಉತ್ತರ ಕೊಡಲಿ’ ಎಂದು ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ‘ಶಿವಕುಮಾರ್ ಅವರ ಬಾಯಲ್ಲಿ ಭ್ರಷ್ಟಾಚಾರದ ಕುರಿತ ಮಾತು ಬಾರದೇ ಇದ್ದರೆ ಒಳ್ಳೆಯದು’ ಎಂದು ಕುಟುಕಿದರು.
‘ಕಾಂಗ್ರೆಸ್ ನಡೆಸುತ್ತಿರುವುದು ಪಶ್ಚಾತ್ತಾಪದ ಯಾತ್ರೆ. ಭ್ರಷ್ಟಾಚಾರ ರಹಿತ ಆಡಳಿತ ನಡೆಸುವ ಭರವಸೆ ನೀಡಿ, ಜನರ ಕಿವಿಗೆ ಹೂವು ಮುಡಿಸಿದವರ ಪಶ್ಚಾತ್ತಾಪದ ಯಾತ್ರೆ ಇದು. ನಮ್ಮ ಯಾತ್ರೆ ಯಶಸ್ವಿಯಾಗಲಿ ಎಂದು ಒಂದು ದಿನ ಮುಂಚಿತವಾಗಿ ಅವರು ಆಂದೋಲನ ಹಮ್ಮಿಕೊಂಡಿದ್ದಾರೆ’ ಎಂದು ಅವರು
ವ್ಯಂಗ್ಯವಾಡಿದರು.
ಪಾದಯಾತ್ರೆಯ ಹಾದಿ...
*ಶನಿವಾರ 16 ಕಿ.ಮೀ ಪಾದಯಾತ್ರೆ ನಡೆಯಲಿದೆ. ಎರಡನೇ ದಿನ ಭಾನುವಾರ (ಆ.4) ಬಿಡದಿಯ ಮಂಜುನಾಥ ಕನ್ವೆನ್ಷನ್ ಹಾಲ್‌ನಿಂದ ಆರಂಭಗೊಂಡು 22 ಕಿ.ಮೀ, ಆ.5 ರಂದು ಕೆಂಗಲ್‌ನ ಕೆವಿಕೆ ಕನ್ವೆನ್ಷನ್ ಹಾಲ್‌ನಿಂದ ಶುರುವಾಗಿ 20 ಕಿ.ಮೀ ಕ್ರಮಿಸಲಿದೆ.
*ಆ. 6 ರಂದು ನಿಡಘಟ್ಟ ಸುಮಿತ್ರಾದೇವಿ ಕನ್ವೆನ್ಷನ್ ಹಾಲ್‌ನಿಂದ ಆರಂಭಿಸಿ 20 ಕಿ.ಮೀ, ಆ.7 ರಂದು ಮಂಡ್ಯದ ಶಶಿಕಿರಣ್ ಕನ್ವೆನ್ಷನ್ ಹಾಲ್‌ನಿಂದ ಆರಂಭಿಸಿ 16 ಕಿ.ಮೀ, ಆ.8 ರಂದು ತೂಬಿನಕರೆ ಕೈಗಾರಿಕಾ ಪ್ರದೇಶದ ಬಳಿಯಿಂದ ಮತ್ತು ಆ.9 ರಂದು ಶ್ರೀರಂಗಪಟ್ಟಣದ ಮಂಜುನಾಥ ಕಲ್ಯಾಣ ಮಂಟಪದ ಆವರಣದಿಂದ ಯಾತ್ರೆ ಹೊರಡಲಿದೆ.
* 140 ಕಿ.ಮೀ ದೂರದ ಮೈಸೂರನ್ನು 8 ದಿನಗಳಲ್ಲಿ ತಲುಪಲಿದೆ. ಪ್ರತಿ ದಿನ 8 ಸಾವಿರ ರಿಂದ 10 ಸಾವಿರ ಜನರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಉದ್ಘಾಟನೆ, ಸಮಾರೋಪ ಸೇರಿ ಒಟ್ಟು 7 ದೊಡ್ಡ ಪ್ರತಿಭಟನಾ ಸಭೆಗಳು ನಡೆಯಲಿವೆ. ಆ. 10 ಶನಿವಾರ ಮೈಸೂರಿನಲ್ಲಿ ಸಮಾರೋಪ ನಡೆಯುತ್ತದೆ.
ಮುಖ್ಯಮಂತ್ರಿಗೆ ವಿಜಯೇಂದ್ರ ಪ್ರಶ್ನೆ
ಮುಡಾ ನಿವೇಶನ ಹಂಚಿಕೆಗೆ ಸಂಬಂಧಿಸಿದ, ವಿಜಯೇಂದ್ರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ.
* ಮುಡಾದಿಂದ ನಿವೇಶನ ಪಡೆಯಲು ಲಕ್ಷಾಂತರ ಜನ ಅರ್ಜಿ ಸಲ್ಲಿಸಿ ಹತ್ತಾರು ವರ್ಷಗಳಿಂದ ಚಾತಕ ಪಕ್ಷಿಗಳಂತೆ ಕಾದು ಕುಳಿತಿದ್ದಾರೆ. ಇವರಿಗೆ ನ್ಯಾಯವಾಗಿ ಸಿಗಬೇಕಾಗಿದ್ದ 5,000 ನಿವೇಶನಗಳನ್ನು ನಿಮ್ಮ ಸರ್ಕಾರ ಬಂದ ಮೇಲೆ ನೀತಿ ನಿಯಮಗಳನ್ನು ತೂರಿ ಪ್ರಭಾವಿಗಳು ಮತ್ತು ರಿಯಲ್ ಎಸ್ಟೇಟ್ ಮಾಫಿಯಾಗೆ ಅಕ್ರಮವಾಗಿ ಕೊಟ್ಟಿದ್ದು ನಿಜವಲ್ಲವೇ?
* 5,000 ಅಕ್ರಮ ನಿವೇಶನಗಳ ಪಾಲುದಾರರ ಮುಂಚೂಣಿಯಲ್ಲಿ ಇರುವುದು ಸ್ವತಃ ನಿಮ್ಮ ಕುಟುಂಬ. ನಿಮ್ಮ ಪತ್ನಿ ಪಾರ್ವತಿ ಅವರ ಹೆಸರಿನ ಭೂಮಾಲೀಕತ್ವದ (ಕೆಸರೆ ಸರ್ವೆ ನಂ 464 ರ 3.16 ಎಕರೆ) ಅಸಲಿತನದ ಬಗ್ಗೆ ಬಲವಾದ ಶಂಕೆ ವ್ಯಕ್ತವಾಗಿದೆ. ಬಡ ದಲಿತ ಕುಟುಂಬವೊಂದಕ್ಕೆ ಸೇರಬೇಕಾದ ಪರಿಹಾರ ನಿಮ್ಮ ಕುಟುಂಬ ಕಬಳಿಸಿದೆ. ವಿಧಾನಮಂಡಲದ ಅಧಿವೇಶನದಲ್ಲಿ ಈ ವಿಚಾರವಾಗಿ ಚರ್ಚೆಗೆ ಬರದೇ, ಉತ್ತರವನ್ನೂ ನೀಡದೇ ಮುಖ್ಯಮಂತ್ರಿ ಪಲಾಯನ ಮಾಡಿದ್ದು ಏಕೆ?
ಭ್ರಷ್ಟಾಚಾರದ ವಿರುದ್ಧ ದಂಡಯಾತ್ರೆ: ಅಶೋಕ
‘ಪಾದಯಾತ್ರೆ ಕೇವಲ ರಾಜಕೀಯ ಹೋರಾಟವಲ್ಲ. ಇದು ಭ್ರಷ್ಟಾಚಾರದ ವಿರುದ್ಧದ ದಂಡಯಾತ್ರೆ’ ಎಂದು ವಿರೋಧಪಕ್ಷದ ನಾಯಕ ಆರ್.ಅಶೋಕ ಹೇಳಿದ್ದಾರೆ.
‘ಆರೂವರೆ ಕೋಟಿ ಕನ್ನಡಿಗರ ಜನಾಕ್ರೋಶಕ್ಕೆ ಧ್ವನಿಗೂಡಿಸುವ ಪ್ರಜಾಯಾತ್ರೆ. ಅನೈತಿಕತೆಯ ವಿರುದ್ಧ ನೈತಿಕತೆಯ ಮೌನಯಾತ್ರೆ. ಅಧರ್ಮ ರಾಜಕಾರಣದ ವಿರುದ್ಧ ಧರ್ಮ ರಾಜಕಾರಣದ ಸಂಘರ್ಷ ಯಾತ್ರೆ. ಅಸತ್ಯದ ವಿರುದ್ಧ ಸತ್ಯದ ನ್ಯಾಯ ಯಾತ್ರೆ’ ಎಂದು ತಿಳಿಸಿದ್ದಾರೆ.
‘ಈಗ ಪ್ರಾಯಶ್ಚಿತ ಮಾಡಿಕೊಳ್ಳದಿದ್ದರೆ ಮುಂದೆ ಪಶ್ಚಾತ್ತಾಪಕ್ಕೂ ಅವಕಾಶ ಇರುವುದಿಲ್ಲ’ ಎಂದೂ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.