ಬೆಂಗಳೂರು: ‘ಸಾಕ್ಷ್ಯ ನಾಶ ಮಾಡಿ, ಮುಡಾ ಹಗರಣವನ್ನು ಮುಚ್ಚಿಹಾಕುವ ಉದ್ದೇಶದಿಂದಲೇ ಸಿದ್ದರಾಮಯ್ಯ ಅವರು ತಮ್ಮ ಪತ್ನಿಯಿಂದ ನಿವೇಶನಗಳನ್ನು ವಾಪಸ್ ಮಾಡಿಸಿದ್ದಾರೆ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಗಾಂಧಿ ಜಯಂತಿ ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸಿದ್ದರಾಮಯ್ಯ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಲೋಕಾಯುಕ್ತ ಅಧಿಕಾರಿಗಳು ಹಾಗೂ ಮುಡಾ ಅಧಿಕಾರಿಗಳು ವ್ಯವಸ್ಥಿತವಾಗಿ ಶಾಮೀಲಾಗಿದ್ದಾರೆ’ ಎಂದು ಆಪಾದಿಸಿದರು.
‘ಜಾರಿ ನಿರ್ದೇಶನಾಲಯವು ಸಿದ್ದರಾಮಯ್ಯ ವಿರುದ್ಧ ಸೋಮವಾರ ಪ್ರಕರಣ ದಾಖಲಿಸಿತು. ಮರುದಿನವೇ ಪಾರ್ವತಿ ಅವರು ಮುಡಾ ಕಚೇರಿಗೆ ಖುದ್ದು ಭೇಟಿ ನೀಡಿ, ನಿವೇಶನಗಳನ್ನು ವಾಪಸ್ ನೀಡುವುದಾಗಿ ದಾಖಲೆ ಸಲ್ಲಿಸಿದರು. ತಕ್ಷಣವೇ ನಿವೇಶನಗಳು ಮುಡಾಗೆ ವರ್ಗಾವಣೆಗೊಂಡವು. ಎಲ್ಲವೂ ರಾಕೆಟ್ ವೇಗದಲ್ಲಿ ಆಗುವಲ್ಲಿ ಸಿದ್ದರಾಮಯ್ಯ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ’ ಎಂದರು.
‘ಈ ನಿವೇಶನಗಳ ಹಂಚಿಕೆಗೆ ಸಂಬಂಧಿಸಿದ ಪ್ರಕರಣವು ನ್ಯಾಯಾಲಯದಲ್ಲಿದೆ. ಲೋಕಾಯುಕ್ತ ಮತ್ತು ಇತರ ಸಂಸ್ಥೆಗಳಲ್ಲಿ ತನಿಖಾ ಹಂತದಲ್ಲಿಯೂ ಇದೆ. ಇದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶವೂ ಇದೆ. ಇದೆಲ್ಲವನ್ನೂ ಉಲ್ಲಂಘಿಸಿ ಸಿದ್ದರಾಮಯ್ಯ ಕುಟುಂಬದವರು ನಿವೇಶನ ವಾಪಸ್ ಮಾಡಿದ್ದಾರೆ. ಇದು ನ್ಯಾಯಾಂಗ ನಿಂದನೆ’ ಎಂದರು.