ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೈಟ್ ವಾಪಸ್ ನೀಡಿದರೂ ಸಿದ್ದರಾಮಯ್ಯ ರಾಜೀನಾಮೆ ನೀಡುವುದು ಅನಿವಾರ್ಯ: ವಿಜಯೇಂದ್ರ

Published : 1 ಅಕ್ಟೋಬರ್ 2024, 13:33 IST
Last Updated : 1 ಅಕ್ಟೋಬರ್ 2024, 13:33 IST
ಫಾಲೋ ಮಾಡಿ
Comments

ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 14 ನಿವೇಶನಗಳನ್ನು ವಾಪಸ್‌ ಮಾಡುವುದಾಗಿ ತಮ್ಮ ಪತ್ನಿ ಪಾರ್ವತಿ ಅವರಿಂದ ಹೇಳಿಸಿದ್ದಾರೆ. ಈ ಮೂಲಕ ಮಾಡಿರುವ ತಪ್ಪನ್ನು ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಹೈಕೋರ್ಟ್‌ ತೀರ್ಪು, ಜನಪ್ರತಿನಿಧಿಗಳ ಆದೇಶ ಮತ್ತು ಇಡಿ ಕೇಸು ದಾಖಲಾಗಿರುವುದರಿಂದ ಕಾನೂನಿನ ಕುಣಿಕೆ ಬಿಗಿಯಾಗುತ್ತಿದೆ. ಹೀಗಾಗಿ ನಿವೇಶನಗಳನ್ನು ವಾ‍ಪಸ್‌ ಮಾಡುವ ತೀರ್ಮಾನಕ್ಕೆ ಬಂದಿರಬಹುದು. ಮುಖ್ಯಮಂತ್ರಿಯವರು ರಾಜೀನಾಮೆ ನೀಡುವುದು ಅನಿವಾರ್ಯ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

2011ರಲ್ಲಿ ರಾಚೇನಹಳ್ಳಿ ಡಿನೋಟಿಫಿಕೇಷ್‌ ಪ್ರಕರಣದಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕುರಿತು ಸಿದ್ದರಾಮಯ್ಯ ಅವರು ಮಾತನಾಡಿ ವಿಡಿಯೋವೊಂದನ್ನು ಪ್ರದರ್ಶಿಸಿದರು. ಅದರಲ್ಲಿ ಸಿದ್ದರಾಮಯ್ಯ ಅವರು, ‘ಮಕ್ಕಳಿಗೆ ಅಕ್ರಮವಾಗಿ ಕೊಟ್ಟ ನಿವೇಶನ ವಾಪಸ್‌ ಮಾಡಿದ್ದಾರೆ. ದುಡ್ಡು ತಗೊಂಡಿದ್ದಾರೆ. ಇದರ ಅರ್ಥ ಏನು? ತಪ್ಪು ಮಾಡದೇ ಇದ್ದರೆ ನಿವೇಶನ ಏಕೆ ವಾಪಸ್‌ ಮಾಡುತ್ತಿದ್ದರು. ತ‍ಪ್ಪು ಮಾಡಿದ್ದರಿಂದ ತಾನೇ ನಿವೇಶನ ವಾಪಸ್‌ ಮಾಡಿದ್ದು, ತಪ್ಪು ಒಪ್ಪಿಕೊಂಡಿದ್ದಾರಲ್ಲ’ ಎಂದಿದ್ದಾರೆ. ‘ಸಿದ್ದರಾಮಯ್ಯ ಅವರೇ ನೀವು ಈ ಹಿಂದೆ ಆಡಿರುವ ಮಾತಿಗೆ ತಕ್ಕಂತೆ ನಡೆದುಕೊಳ್ಳಿ’ ಎಂದು ವಿಜಯೇಂದ್ರ ಒತ್ತಾಯಿಸಿದರು.

‘ರಾಚೇನಹಳ್ಳಿ ಪ್ರಕರಣದಲ್ಲಿ ಯಡಿಯೂರಪ್ಪ ತಪ್ಪು ಮಾಡಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿ, ಪ್ರಕರಣ ರದ್ದು ಮಾಡಿತ್ತು’ ಎಂದು ವಿವರಿಸಿದರು.

ಮುಖ್ಯಮಂತ್ರಿ ಸ್ಥಾನದಿಂದ ಇಳಿಯವುದನ್ನೇ ಕಾಂಗ್ರೆಸ್‌ ಪಕ್ಷದ ಕೆಲವರು ಕಾಯುತ್ತಿದ್ದಾರೆ ಎಂದು ಮುಖ್ಯಮಂತ್ರಿಯವರ ಆಪ್ತರಾದ ಎಚ್‌.ಸಿ.ಮಹದೇವಪ್ಪ ಹೇಳಿದ್ದಾರೆ. ಅದಕ್ಕೂ ಮೊದಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಸಿದ್ದರಾಮಯ್ಯ ಇವತ್ತು ಇರ್ತಾರೆ. ನಾಳೆ ಹೋಗ್ತಾರೆ ಎಂದಿದ್ದಾರೆ. ಇದು ಸಿದ್ದರಾಮಯ್ಯ ಅವರ ನಿರ್ಗಮನದ ಸೂಚನೆ ಎಂದು ವಿಜಯೇಂದ್ರ ಹೇಳಿದರು.

ಮುಖ್ಯಮಂತ್ರಿ ವಿರುದ್ಧ ದೂರು ದಾಖಲಿಸಿರುವ ಸ್ನೇಹಮಯಿ ಕೃಷ್ಣ ಅವರ ಮೇಲೆ ದೂರು ದಾಖಲಿಸಿ ಬೆದರಿಸುವ ತಂತ್ರವನ್ನು ಮುಖ್ಯಮಂತ್ರಿ ಮತ್ತು ಅವರ ಹಿಂಬಾಲಕರು ಮಾಡುತ್ತಿದ್ದಾರೆ. ಗೃಹ ಸಚಿವರು ಮತ್ತು ಡಿಜಿಪಿಯವರು ಸ್ನೇಹಮಯಿ ಕೃಷ್ಣ ಅವರಿಗೆ ಸೂಕ್ತ ಭದ್ರತೆ ನೀಡಬೇಕು ಎಂದು ಒತ್ತಾಯಿಸಿದರು.

ಕ್ಷಮೆ ಯಾಚಿಸಲಿ: ‘ಮುಡಾ ಪ್ರಕರಣದಲ್ಲಿ ಇಡೀ ಸಚಿವ ಸಂಪುಟ ಸಿದ್ದರಾಮಯ್ಯ ಅವರನ್ನು ಸಮರ್ಥಿಸಿಕೊಂಡಿದೆ. ಕಾಂಗ್ರೆಸ್‌ ಹೈಕಮಾಂಡ್‌ ಮತ್ತು ಸಮಸ್ತ ಆಡಳಿತ ಯಂತ್ರವೇ ಅವರ ಬೆಂಬಲಕ್ಕೆ ನಿಂತಿದೆ. ಹೈಕೋರ್ಟ್‌ ಮತ್ತು ಜನಪ್ರತಿನಿಧಿಗಳ ತೀರ್ಪು ಹಾಗೂ ತಪ್ಪು ಒಪ್ಪಿಕೊಂಡು ಸಿದ್ದರಾಮಯ್ಯ ನಿವೇಶನಗಳನ್ನು ಹಿಂತಿರುಗಿಸಿದ್ದಾರೆ. ಆದ್ದರಿಂದ, ಸಿದ್ದರಾಮಯ್ಯ ಅವರನ್ನು ಸಮರ್ಥಿಸಿಕೊಂಡ ಪ್ರತಿಯೊಬ್ಬರು ಕರ್ನಾಟಕದ ಜನರ ಕ್ಷಮೆ ಕೇಳಬೇಕು’ ಎಂದು ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯಾ ಹೇಳಿದ್ದಾರೆ.

ಸಿಎಂಗೆ ತಪ್ಪಿನ ಅರಿವಾಗಿದೆ: ಅಶೋಕ

‘ಕೆಟ್ಟ ಮೇಲೆ ಬುದ್ಧಿ ಬಂತು ಎಂಬಂತೆ ಈಗಲಾದರೂ ಸಿದ್ದರಾಮಯ್ಯನವರಿಗೆ ತಮ್ಮ ತಪ್ಪಿನ ಆರಿವಾಯಿತಲ್ಲ ಎನ್ನುವುದು ಸಮಾಧಾನಕರ ವಿಷಯ’ ಎಂದು ‘ಎಕ್ಸ್‌’ ಮೂಲಕ ತಿಳಿಸಿದ್ದಾರೆ. ‘ಆದರೆ ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬರುವುದಿಲ್ಲ. ಸಿದ್ದರಾಮಯ್ಯನವರೇ ನೀವು ತನಿಖೆ ಎದುರಿಸಲೇಬೇಕು. ನಿಷ್ಪಕ್ಷಪಾತ ಮತ್ತು ಪಾರದರ್ಶಕ ತನಿಖೆಗಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಲೇಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯುತ್ತದೆ’ ಎಂದಿ‌ದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT