ಮೈಸೂರು: ‘ಶಾಸಕ ಟಿ.ಎಸ್. ಶ್ರೀವತ್ಸ ಅವರು ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ‘ಜಿ-ಕ್ಯಾಟಗರಿ’ ನಿವೇಶನ (50x80 ಚ.ಅಡಿ) ಪಡೆದಿದ್ದಾರೆ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಆರೋಪಿಸಿದರು.
ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಶ್ರೀವತ್ಸ ಆಗ ಪಕ್ಷದ ಕಾರ್ಯಕರ್ತರಷ್ಟೇ ಆಗಿದ್ದರು. ಅವರು ನಿವೇಶನ ಪಡೆದುಕೊಂಡಿದ್ದು ಹೇಗೆ? ಆ ಬಗ್ಗೆ ಅವರ ಪಕ್ಷದ ಕಾರ್ಯಕರ್ತರು ಹಾಗೂ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ನಾನೂ ಶೀಘ್ರದಲ್ಲೇ ದಾಖಲೆ ಬಿಡುಗಡೆ ಮಾಡುತ್ತೇನೆ. ಅಲ್ಲಿವರೆಗೆ ಶಾಸಕರು ಸ್ಪಷ್ಟನೆ ನೀಡಲಿ’ ಎಂದರು.
‘ಲಾಟರಿ ಹೊಡೆದ ರೀತಿಯಲ್ಲಿ ಶಾಸಕರಾಗಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ನವರನ್ನು ಬೈಯ್ಯಬಹುದು. ಆಗ ನಾವು ಸುಮ್ಮನೆ ಕೂರಬೇಕಾ’ ಎಂದು ಕೇಳಿದರು.
‘ರಾಜಕೀಯವಾದ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಕ್ಕೆ ಅವರು ನನಗೆ ಲೀಗಲ್ ನೋಟಿಸ್ ಕೊಟ್ಟಿದ್ದಾರೆ. ಮಾನನಷ್ಟ ಮೊಕದ್ದಮೆಗಳನ್ನೇ ಎದುರಿಸುತ್ತಿರುವ ನಾನು ನೋಟಿಸ್‌ಗೆ ಹೆದರುತ್ತೀನಾ? ನಾನು ರಾಜಕಾರಣಿಯೂ ಹೌದು; ರಾಷ್ಟ್ರೀಯ ಪಕ್ಷದ ಕರ್ನಾಟಕದ ವಕ್ತಾರ ಕೂಡ. ನನಗೆ ನನ್ನದೇ ಜವಾಬ್ದಾರಿ ಇದೆ. ಅದನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದೇನೆ. ಬಿಜೆಪಿಯವರನ್ನು ಓಲೈಸುತ್ತಾ ಕುಳಿತುಕೊಳ್ಳಬೇಕಾ? ಬೇಕಿದ್ದರೆ ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಿ; ಎದುರಿಸುತ್ತೇನೆ. ಅವರ ಬಳಿ ಕ್ಷಮೆ ಯಾಚಿಸುವ ಪ್ರಶ್ನೆಯೇ ಇಲ್ಲ’ ಎಂದು ಸವಾಲು ಹಾಕಿದರು.
‘ಕ್ಷಮೆ ಯಾಚಿಸಬೇಕಾಗಿರುವುದು ಅವರೇ ಹೊರತು ನಾವಲ್ಲ’ ಎಂದರು.
‘ಸಿದ್ದರಾಮಯ್ಯ ವಿರುದ್ಧ 63 ಕೇಸ್ ಇವೆ ಎಂದು ಕುಮಾರಸ್ವಾಮಿ ಸುಳ್ಳು ಹೇಳಿದ್ದಾರೆ. ಆದರೆ, ಇರುವುದು 22 ಪ್ರಕರಣಗಳು ಮಾತ್ರ (2007ರಿಂದ 2022ರವರೆಗೆ). ಅದನ್ನು ಅವರು ಚುನಾವಣೆಯ ವೇಳೆ ಪ್ರಮಾಣಪತ್ರದಲ್ಲೇ ತಿಳಿಸಿದ್ದಾರೆ. ಅವೆಲ್ಲವೂ ಪ್ರತಿಭಟನೆಗೆ ಸಂಬಂಧಿಸಿದವೇ ಆಗಿವೆ. ಕಳವು, ಮೋಸ, ವಂಚನೆ ಅಥವಾ ಅಧಿಕಾರ ದುರ್ಬಳಕೆ ಮಾಡಿದ್ದಕ್ಕಾಗಿ ಯಾವ ಪ್ರಕರಣವೂ ಇಲ್ಲ’ ಎಂದು ತಿರುಗೇಟು ನೀಡಿದರು. ‘63 ದೂರುಗಳ ಬಗ್ಗೆ ಕುಮಾರಸ್ವಾಮಿ ವಿವರಣೆ ಕೊಡಬೇಕು’ ಎಂದು ಒತ್ತಾಯಿಸಿದರು.
ನನ್ನ ವಿರುದ್ಧದ ಆರೋಪ ಸಾಬೀತಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಸುಳ್ಳು ಎಂದಾದರೆ ಲಕ್ಷ್ಮಣ ಅವರು ರಾಜಕೀಯ ನಿವೃತ್ತಿ ಪಡೆಯುತ್ತಾರೆಯೇ? ಇಂಥ ಆರೋಪಗಳನ್ನು ಸಹಿಸುವುದಿಲ್ಲ.–ಟಿ.ಎಸ್. ಶ್ರೀವತ್ಸ, ಶಾಸಕ
‘ಕುಮಾರಸ್ವಾಮಿ ವಿರುದ್ಧ ಎಸ್‌ಐಟಿ ಮಾಡಿರುವುದು ನಾವಲ್ಲ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಆಗಿದೆ. ಆದರೂ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿಲ್ಲವೇಕೆ? ಮತ್ತೆ ಅನುಮತಿ ಕೇಳಿ 48 ಗಂಟೆಯಾದರೂ ಚಕಾರ ಎತ್ತಲಿಲ್ಲವೇಕೆ?’ ಎಂದು ಕೇಳಿದರು.
‘ರಾಜ್ಯಪಾಲರು ಬುಲೆಟ್ ಪ್ರೂಫ್ ಕಾರ್ ಪಡೆದುಕೊಂಡಿದ್ದಾರೆ. ಅವರಿಗೆ ಏನಾದರೂ ಅನಾಹುತವಾದರೆ ಬಿಜೆಪಿಯವರು ಹಾಗೂ ಜೆಡಿಎಸ್‌ನವರೇ ಕಾರಣವೇ ಹೊರತು ಕಾಂಗ್ರೆಸ್‌ನವರಲ್ಲ’ ಎಂದರು.
ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್‌ಖಾನ್, ಪಕ್ಷದ ನಗರ ಜಿಲ್ಲಾ ಘಟಕದ ಅಧ್ಯಕ್ಷ ಆರ್. ಮೂರ್ತಿ, ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ಮುಖಂಡರಾದ ಬಿ.ಎಂ.ರಾಮು, ಸೈಯದ್ ಇಕ್ಬಾಲ್, ಭಾಸ್ಕರ್ ಗೌಡ, ವಕ್ತಾರ ಮಹೇಶ್ ಪಾಲ್ಗೊಂಡಿದ್ದರು.
ರಾಜ್ಯಪಾಲರಿಗೆ ಏನಾದರೂ ಧಕ್ಕೆಯಾಗಿದ್ದರೆ ಅವರ ಕಚೇರಿಯಿಂದ ದೂರು ನೀಡಲಿ. ಬಿಜೆಪಿಯವರು ಏಕೆ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯಪಾಲರೇನು ಬಿಜೆಪಿ ಕಾರ್ಯಕರ್ತರಾ?–ಎಂ. ಲಕ್ಷ್ಮಣ, ವಕ್ತಾರ, ಕೆಪಿಸಿಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.