ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮುಡಾ ಪ್ರಕರಣದಲ್ಲಿ ತನಿಖೆ ನಡೆಸಲು ರಾಜ್ಯಪಾಲರು ಅನುಮತಿ ಕೊಟ್ಟ ಬಳಿಕ ರಾಜಕೀಯ ನಾಯಕರ ನಡುವೆ ವಾಕ್ಸಮರ ತೀವ್ರಗೊಂಡಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧವೂ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಪ್ರಕರಣದಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆಗೆ ಅನುಮತಿ ನೀಡಬೇಕು ಎಂದು ಕಾಂಗ್ರೆಸ್ ಒತ್ತಡ ಹೇರುತ್ತಿದೆ. ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ನಡುವೆ ಮಾತಿನ ಸಮರ ಬುಧವಾರ ತಾರಕಕ್ಕೆ ಏರಿದೆ
ಬೆಂಗಳೂರು: ‘ನಾನು ಕೇಂದ್ರ ಸಚಿವನಾಗಿದ್ದೇನೆ ಎಂದು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ಗೆ ಹೊಟ್ಟೆ ಉರಿ. ಹೀಗಾಗಿಯೇ ನನ್ನನ್ನು ಜೈಲಿಗೆ ಕಳುಹಿಸಲು ತುದಿಗಾಲಲ್ಲಿ ನಿಂತಿದ್ದಾರೆ. ನನ್ನನ್ನು ಬಂಧಿಸಲು ನೂರು ಮಂದಿ ಸಿದ್ದರಾಮಯ್ಯ ಬರಬೇಕಾಗುತ್ತದೆ’ ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಸವಾಲಿನ ರೂಪದಲ್ಲಿ ಹೇಳಿದರು.
ಗಣಿಗಾರಿಕೆ ನಡೆಸಲು ಸಾಯಿ ವೆಂಕಟೇಶ್ವರ ಲಿಮಿಟೆಡ್‌ಗೆ ಅನುಮತಿ ನೀಡಿದ ಪ್ರಕರಣದಲ್ಲಿ ಅಕ್ರಮವಾಗಿದೆ ಎಂದು ಆರೋಪಿಸಿ ತನಿಖೆ ನಡೆಸಿದ್ದ ಲೋಕಾಯುಕ್ತದ ಎಸ್‌ಐಟಿಯು, ಕುಮಾರಸ್ವಾಮಿ ವಿರುದ್ಧ ದೋಷಾರೋಪ ಪಟ್ಟಿ ಸಿದ್ಧಪಡಿಸಲು ಅನುಮತಿ ನೀಡುವಂತೆ ರಾಜ್ಯಪಾಲ ಗೆಹಲೋತ್ ಅವರಿಗೆ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಿದೆ.
ಈ ಕುರಿತು ಜೆಡಿಎಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.
ಜೈಲಿಗೆ ಕಳುಹಿಸುವುದಕ್ಕಾಗಿಯೇ 14 ವರ್ಷದಷ್ಟು ಹಳೆಯ ಪ್ರಕರಣ ಕೆದಕಿಕೊಂಡು ಕೂತಿದ್ದಾರೆ
ನನಗೆ ಭಯ ಶುರುವಾಗಿದೆಯಾ? ನನ್ನ ನೋಡಿದರೆ ನಿಮಗೆ ಹಾಗೆ ಅನಿಸುತ್ತಾ? ಸಿದ್ದರಾಮಯ್ಯ ಕಳೆದ ವಾರದಿಂದ ಹೇಗೆ ನಡೆದುಕೊಂಡಿದ್ದಾರೆ ಎಂಬುದನ್ನು ನೋಡಿದ್ದೀರಲ್ಲಾ? ನನ್ನನ್ನು ಹೇಗೆ ಬಂಧಿಸುತ್ತಾರೆ?
ನನ್ನ ವಿರುದ್ಧ ಮತ್ತೊಂದು ಪ್ರಕರಣ ತೆರೆದು, ಲೋಕಾಯುಕ್ತ ಕಚೇರಿಗೆ ಕರೆಸುತ್ತೇನೆ ಎಂದು ಬಸವರಾಜ ಮುದ್ಗಮ್ ಎಂಬ ಡಿವೈಎಸ್‌ಪಿ ಸಿದ್ದರಾಮಯ್ಯಗೆ ಮಾತು ಕೊಟ್ಟಿದ್ದಾನಂತೆ. ಈ ಬಗ್ಗೆ ಮುಖ್ಯಮಂತ್ರಿ ಮನೆಯಲ್ಲೇ ಚರ್ಚೆಯಾಗಿದೆಯಂತೆ. ಅಲ್ಲಿ ಇರುವವರೇ ಈ ಬಗ್ಗೆ ನನಗೆ ಮಾಹಿತಿ ಕೊಟ್ಟಿದ್ದಾರೆ. ನನ್ನನ್ನು ಅದೆಲ್ಲಿಗೆ ಕರೆಸುತ್ತಾರೋ ಕರೆಸಲಿ ನೋಡೋಣ
ಕೊಪ್ಪಳ/ವಿಜಯಪುರ: ಕುಮಾರಸ್ವಾಮಿಯನ್ನು ಬಂಧಿಸಲು ನೂರು ಸಿದ್ದರಾಮಯ್ಯ ಏಕೆ ಬೇಕು? ಒಬ್ಬ ಕಾನ್‌ಸ್ಟೆಬಲ್ ಸಾಕು. ಕುಮಾರಸ್ವಾಮಿ ಅವರನ್ನು ಬಂಧಿಸುವುದು ಪೊಲೀಸರೇ ಹೊರತು ನಾನಲ್ಲ. ರಾಜ್ಯಪಾಲರು ದೋಷಾರೋಪ ಪಟ್ಟಿ ಸಲ್ಲಿಕೆಗೆ ಎಲ್ಲಿ ಅನುಮತಿ ಕೊಡುವರೋ ಎಂಬ ಭೀತಿಯಲ್ಲಿ ಕುಮಾರಸ್ವಾಮಿ ತರಾತುರಿಯಲ್ಲಿ ಪತ್ರಿಕಾಗೋಷ್ಠಿ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಜಯಪುರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತಾ ಬುಧವಾರ ಹೇಳಿದ್ದಾರೆ.
ಕುಮಾರಸ್ವಾಮಿ ಅವರನ್ನು ಬಂಧಿಸುವ ಅಗತ್ಯಬಿದ್ದರೆ ಮುಲಾಜಿಲ್ಲದೆ ಬಂಧಿಸುತ್ತೇವೆ. ಆದರೆ, ಈಗ ಇನ್ನೂ ಅಂಥ ಸನ್ನಿವೇಶ ಬಂದಿಲ್ಲ. ಆದರೂ ಕುಮಾರಸ್ವಾಮಿ ಈಗಲೇ ಹೆದರಿದ್ದಾರೆ
ಗಣಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಬಹುದು ಎಂಬ ಭಯ ಅವರನ್ನು ಕಾಡುತ್ತಿದೆ. ಅವರ ವಿರುದ್ಧ ಲೋಕಾಯುಕ್ತ, ಎಸ್‌ಐಟಿಯವರು ತನಿಖಾ ವರದಿ ನೀಡಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಕೋರಿದರೂ ರಾಜ್ಯಪಾಲರು ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಎಸ್‌ಐಟಿ ಮತ್ತೊಮ್ಮೆ ಅರ್ಜಿ ಸಲ್ಲಿಸಿದೆ
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಕುಮಾರಸ್ವಾಮಿ ಹೇಳುತ್ತಿದ್ದಾರೆ. ಯಾವಾಗಲೂ ಅವರದ್ದು ಹಿಟ್ ಅಂಡ್ ರನ್ ರೀತಿಯ ಹೇಳಿಕೆ. ಪೆನ್ ಡ್ರೈವ್ ನನ್ನ ಜೇಬಿನಲ್ಲಿಯೇ ಇದೆ ಎಂದರೂ ಒಂದೇ ಒಂದು ಸಲ ತೆಗೆದು ತೋರಿಸಲಿಲ್ಲ
ಕುಮಾರಸ್ವಾಮಿ ಪ್ರಕರಣದಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ರಾಜ್ಯಪಾಲರು, ನನ್ನ ವಿರುದ್ಧ ಮಾತ್ರ ಯಾವುದೇ ತನಿಖಾ ವರದಿಯ ಆಧಾರವಿಲ್ಲದೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.