ನವದೆಹಲಿ: ಹಿಂದುಳಿದ ವರ್ಗಗಳ ಕೋಟಾದಲ್ಲಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮುಸ್ಲಿಮರಿಗೆ ನೀಡಿದ್ದ ಶೇ 4ರಷ್ಟು ಮೀಸಲಾತಿಯನ್ನು ಹಿಂಪಡೆದಿರುವ ನಿರ್ಧಾರವನ್ನು ಕರ್ನಾಟಕ ಸರ್ಕಾರ ಸಮರ್ಥಿಸಿಕೊಂಡಿದೆ. ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಿರುವುದು ಸಂವಿಧಾನ ವಿರೋಧಿ ಮತ್ತು ಭಾರತೀಯ ಸಂವಿಧಾನದ 14ರಿಂದ 16ರ ಪರಿಚ್ಛೇದದ ಉಲ್ಲಂಘನೆ ಎಂದೂ ಸರ್ಕಾರ ಪ್ರತಿಪಾದಿಸಿದೆ.
ಮುಸ್ಲಿಮರ ಶೇ 4ರಷ್ಟು ಮೀಸಲಾತಿ ಹಿಂಪಡೆದ ಕರ್ನಾಟಕ ಸರ್ಕಾರದ ಮಾರ್ಚ್ 27ರ ಆದೇಶ ಪ್ರಶ್ನಿಸಿ ಎಲ್. ಗುಲಾಮ್ ರಸೂಲ್ ಮತ್ತು ಇತರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಮಂಗಳವಾರ ವಿಚಾರಣೆಯ ವೇಳೆ ರಾಜ್ಯ ಸರ್ಕಾರದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ‘ಮುಸ್ಲಿಮರಿಗೆ ನೀಡಿದ್ದ ಶೇ 4ರಷ್ಟು ಮೀಸಲಾತಿಯನ್ನು ಹಿಂಪಡೆದು, ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳಿಗೆ ಮರುಹಂಚಿಕೆ ಮಾಡಿರುವ ಮಾರ್ಚ್ 27ರ ಆದೇಶದ ಮೇಲೆ ಸದ್ಯ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ’ ಎಂದು ವಾಗ್ದಾನ ನೀಡಿದ್ದರು.
ಇದೇ ವೇಳೆ, ನ್ಯಾಯಪೀಠಕ್ಕೆ ಪ್ರಮಾಣಪತ್ರವನ್ನೂ ಸಲ್ಲಿಸಿರುವ ರಾಜ್ಯ ಸರ್ಕಾರ, ‘ಹಿಂದುಳಿದ ವರ್ಗಗಳನ್ನು ರಕ್ಷಿಸುವ ಜವಾಬ್ದಾರಿ ರಾಜ್ಯ ಸರ್ಕಾರಗಳದ್ದು. ಸಮಾಜದಲ್ಲಿ ಬಹುಕಾಲದಿಂದ ಹಿಂದುಳಿದ ಹಾಗೂ ತಾರತಮ್ಯ ಎದುರಿಸಿದ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಒದಗಿಸಲಾಗುವುದು. ಆದರೆ, ಈ ಸೌಲಭ್ಯವನ್ನು ಒಂದು ಧರ್ಮಕ್ಕೆ ಸಂಪೂರ್ಣವಾಗಿ ವಿಸ್ತರಿಸಲು ಸಾಧ್ಯವಾಗದು’ ಎಂದು ಸ್ಪಷ್ಟಪಡಿಸಿದೆ.
‘ಮುಸ್ಲಿಮರಿಗೆ ಮೀಸಲಾತಿ ನೀಡಿರುವ ನಿರ್ಧಾರ ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತ ಸಿದ್ಧಾಂತದ ವಿರುದ್ಧವಾಗಿದೆ ಎಂದಿರುವ ರಾಜ್ಯ ಸರ್ಕಾರ, 2002ರ ಮೀಸಲಾತಿ ಆದೇಶದಲ್ಲಿ ಗ್ರೂಪ್ 1 (ಆರ್ಥಿಕವಾಗಿ ಹಿಂದುಳಿದಿರುವ) ಎಂದು ಗುರುತಿಸಿಕೊಂಡಿರುವ ಮುಸ್ಲಿಂ ಸಮುದಾಯದವರಿಗೆ ಮಾತ್ರ ಮೀಸಲಾತಿಯ ಸೌಲಭ್ಯ ಮುಂದುವರಿಯಲಿದೆ’ ಎಂದು ವಾದಿಸಿದೆ.
‘ಮುಸ್ಲಿಮರಲ್ಲಿ ಸುಮಾರು 17 ಉಪ ಜಾತಿಗಳಿವೆ. ಅವುಗಳೆಲ್ಲವೂ ಹಿಂದುಳಿದ ವರ್ಗದಲ್ಲಿಯೇ ಇವೆ. ಇಲ್ಲಿಯೂ ಕಡಿಮೆ ಆದಾಯ ಹೊಂದಿದವರಿಗೆ ಮೀಸಲಾತಿ ಸೌಲಭ್ಯ ಸಿಗುತ್ತಿತ್ತು. ಮುಸ್ಲಿಮರಿಗೆ ಮೀಸಲಾತಿ ಹಿಂಪಡೆದ ಬಳಿಕವೂ ಅವರಿಗೆ ಅನ್ಯಾಯವಾಗುವುದಿಲ್ಲ. ಅವರಿಗೆ ಸದ್ಯದ ಸೌಲಭ್ಯಗಳು ಮುಂದುವರಿಯಲಿವೆ. ಅವರಿಗೆ ರೂಪಿಸಿದ್ದ ಮಾನದಂಡಗಳು ಬದಲಾಗಿಲ್ಲ’ ಎಂದೂ ಸರ್ಕಾರ ಸ್ಪಷ್ಟಪಡಿಸಿದೆ.
‘ಸಂವಿಧಾನದ ಪರಿಚ್ಛೇದ 14, 15 ಹಾಗೂ 16ರ ನಿಯಮಗಳ ಅನುಸಾರ ಪ್ರಜೆಗಳನ್ನು ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗ (ಎಸ್‌ಇಬಿಸಿ) ಎಂದು ವರ್ಗೀಕರಿಸಬಹುದು. ಕೆಲವು ಆಯೋಗಗಳು ಮುಸ್ಲಿಮರನ್ನು ಹಿಂದುಳಿದ ಜಾತಿಗೆ ಸೇರಿಸಲು ಶಿಫಾರಸು ಮಾಡಿವೆ. ಆದರೆ, ಈ ಕುರಿತು ಕಾನೂನು ಪ್ರಕಾರ ನಿರ್ಧಾರ ತೆಗೆದುಕೊಳ್ಳುವುದು ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಬರುತ್ತದೆ’ ಎಂದು ಹೇಳಿದೆ.
‘ಕೇಂದ್ರದ ಮೀಸಲು ಪಟ್ಟಿಯಲ್ಲಿ ಕೂಡಾ ಧರ್ಮದ ಆಧಾರದಲ್ಲಿ ಮುಸ್ಲಿಂ ಸಮುದಾಯಕ್ಕೆ ಯಾವುದೇ ಮೀಸಲಾತಿ ನೀಡಲಾಗಿಲ್ಲ’ ಎಂಬ ಅಂಶವನ್ನು ಒತ್ತಿ ಹೇಳಿರುವ ಸರ್ಕಾರ, ‘ದೇಶದಲ್ಲಿ ಕೇರಳ ರಾಜ್ಯವನ್ನು ಹೊರತುಪಡಿಸಿ ಯಾವುದೇ ರಾಜ್ಯದಲ್ಲಿ ಕೂಡ ಸಂಪೂರ್ಣ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ನೀಡಿಲ್ಲ’ ಎಂದು ಸ್ಪಷ್ಟಪಡಿಸಿದೆ.
‘ಮುಸ್ಲಿಂ ಧರ್ಮದ ಹಲವಾರು ಸಮುದಾಯಗಳು ಎಸ್‌ಇಬಿಸಿ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದು, ಈ ಸಮುದಾಯಗಳಿಗೆ ಮೀಸಲಾತಿ ಮುಂದುವರಿಯಲಿದೆ. ಆದರೆ, ಕೇವಲ ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುವ ಪದ್ಧತಿ ಕೇರಳದಲ್ಲಷ್ಟೇ ಜಾರಿಯಲ್ಲಿದೆ’ ಎಂದು ಸರ್ಕಾರ ಹೇಳಿದೆ.
‘ಧರ್ಮವನ್ನಷ್ಟೇ ಆಧರಿಸಿ ಮೀಸಲಾತಿ ನೀಡುವುದು ಸಾಮಾಜಿಕ ನ್ಯಾಯದ ಸಿದ್ಧಾಂತಕ್ಕೆ ವಿರುದ್ಧವಾಗಿದೆ. ಸಾಮಾಜಿಕ ನ್ಯಾಯವೆಂದರೆ ಸಮಾಜದೊಳಗೆ ಹಿಂದುಳಿದವರು ಹಾಗೂ ತಾರತಮ್ಯ ಎದುರಿಸಿದವರಿಗೆ ರಕ್ಷಣೆ ನೀಡುವುದು. ಇದನ್ನು ಒಂದು ಸಂಪೂರ್ಣ ಧರ್ಮಕ್ಕೆ ನೀಡುವುದು ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ನೈತಿಕತೆಗೆ ವಿರುದ್ಧವಾಗಿದೆ. ಆದ್ದರಿಂದ, ಧರ್ಮದ ಆಧಾರದಲ್ಲಿ ಯಾವುದೇ ಸಮುದಾಯಕ್ಕೆ ಮೀಸಲಾತಿ ವಿಸ್ತರಿಸಲಾಗದು’ ಎಂದು ತಿಳಿಸಿದೆ.
‘ಕರ್ನಾಟಕ ಹೈಕೋರ್ಟ್ ಮಾರ್ಚ್ 23ರಂದು ನೀಡಿರುವ ಆದೇಶದ ಆಧಾರದಲ್ಲಿ ಮುಸ್ಲಿಮರ ಮೀಸಲಾತಿಯನ್ನು ಹಿಂಪಡೆಯುವ ತೀರ್ಮಾನವನ್ನು ಮಾರ್ಚ್ 27ರಂದು ತೆಗೆದುಕೊಳ್ಳಲಾಗಿದೆ’ ಎಂದೂ ಸರ್ಕಾರ ಹೇಳಿಕೊಂಡಿದೆ.
‘1979 ರಲ್ಲಿ ಮುಸ್ಲಿಂ ಸಮುದಾಯವನ್ನು ಇತರ ಹಿಂದುಳಿದ ವರ್ಗಗಳ ಗುಂಪಿಗೆ ಸೇರಿಸಿರುವುದು ಎಲ್. ಜಿ. ಹಾವನೂರ ನೇತೃತ್ವದ ಮೊದಲ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸುಗಳಿಗೆ ವಿರುದ್ಧವಾಗಿತ್ತು’ ಎಂದು ಸರ್ಕಾರ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.