ಬೆಂಗಳೂರು: ‘ನಿಮ್ಮ (ಕಾಂಗ್ರೆಸ್) ಭ್ರಷ್ಟಾಚಾರವನ್ನು ಬುಡ ಸಮೇತ ಕಿತ್ತೊಗೆಯಲು ನಾವು ಒಟ್ಟಾಗಿದ್ದೇವೆ’ ಎಂದು ರಣಕಹಳೆ ಮೊಳಗಿಸಿ, ನಗಾರಿ ಬಾರಿಸುವ ಮೂಲಕ ಬಿಜೆಪಿ ಮತ್ತು ಜೆಡಿಎಸ್ ಮಿತ್ರಪಕ್ಷಗಳ ನಾಯಕರು ಹಾಗೂ ಕಾರ್ಯಕರ್ತರು ಶನಿವಾರ ‘ಮೈಸೂರು ಚಲೋ’ ಆರಂಭಿಸಿದರು. ‘ಯಾತ್ರೆ ಮೈಸೂರು ತಲುಪುವುದರ ಒಳಗೆ ಮುಖ್ಯಮಂತ್ರಿ ರಾಜೀನಾಮೆ ನೀಡುತ್ತಾರೆ. 10 ತಿಂಗಳ ಒಳಗೆ ಸರ್ಕಾರ ಪತನ ಖಚಿತ’ ಎಂದೂ ಸಾರಿದರು.
ಪಾದಯಾತ್ರೆ ಸಂಬಂಧ ಕೊನೆಯ ಕ್ಷಣದಲ್ಲಿ ಸೃಷ್ಟಿಯಾಗಿದ್ದ ಮಿತ್ರ ಪಕ್ಷಗಳ ನಡುವಿನ ಗೊಂದಲ, ಮುನಿಸು ತಿಳಿಗೊಂಡ ಬಳಿಕ ನಿಗದಿಯಂತೆ ಕೆಂಗೇರಿಯ ಜೆ.ಕೆ ಗ್ರ್ಯಾಂಡ್ ಅರೆನಾ ಸೆಂಟರ್‌ನಿಂದ ಪಾದಯಾತ್ರೆ ಆರಂಭಗೊಂಡಿತು. ಎರಡೂ ಪಕ್ಷಗಳ ನಾಯಕರು ಒಗ್ಗಟ್ಟಿನಿಂದ ಹೆಜ್ಜೆ ಹಾಕಿದರು.
‘ಮುಡಾ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ ನಡೆದಿರುವ ಆರೋಪದ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಲೇಬೇಕು’ ಎಂದು ಒತ್ತಾಯಿಸುವ ಮೂಲಕ ಕಾಂಗ್ರೆಸ್ ನಾಯಕರ ವಿರುದ್ಧ ತೊಡೆ ತಟ್ಟಿದರು. ‘ತೊಲಗಲಿ, ತೊಲಗಲಿ ಕಾಂಗ್ರೆಸ್ ತೊಲಗಲಿ’, ‘ಧಿಕ್ಕಾರ, ಧಿಕ್ಕಾರ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ’ ಘೋಷಣೆಗಳನ್ನು ಮೊಳಗಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಅಕ್ರಮವಾಗಿ ಹಣ ವರ್ಗಾವಣೆಯ ನೈತಿಕ ಹೊಣೆ ಮುಖ್ಯಮಂತ್ರಿಯವರೇ ಹೊರಬೇಕು. ಪರಿಶಿಷ್ಟರ ಹಣವನ್ನು ದುರ್ಬಳಕೆ ಮಾಡಲಾಗಿದೆ.
ಈ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು ಎಂಬ ಘೋಷಣೆಗಳು ಮುಗಿಲು ಮುಟ್ಟಿತ್ತು. ಯಾದಗಿರಿಯ ಪಿಎಸ್ಐ ಪರಶುರಾಮ್ ಅವರ ಸಾವಿನ ಪ್ರಕರಣವೂ ಹೋರಾಟದ ಬತ್ತಳಿಕೆಗೆ ಮತ್ತೊಂದು ಅಸ್ತ್ರವಾಗಿ ಸೇರಿತು.
ಮುಗಿಲು ಮುಟ್ಟಿದ ಹುಮ್ಮಸ್ಸು:
ಭಾರಿ ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರಿಂದ ಎರಡೂ ಪಕ್ಷಗಳ ನಾಯಕರೂ ಹುಮ್ಮಸ್ಸಿನಿಂದ ಹೆಜ್ಜೆ ಹಾಕುವಂತಾಯಿತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದ ಬಿಜೆಪಿ- ಜೆಡಿಎಸ್ ಪಕ್ಷಗಳ ಕಾರ್ಯಕರ್ತರಿಗೆ ಈ ಹೋರಾಟ ಚೈತನ್ಯ ತುಂಬಿತ್ತು.
ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ. ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಕೇಂದ್ರ ಸಚಿವರಾದ ಎಚ್. ಡಿ. ಕುಮಾರಸ್ವಾಮಿ, ಪ್ರಲ್ಹಾದ ಜೋಶಿ, ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್‌ದಾಸ್ ಅಗರ್‌ವಾಲ್, ಸಹ ಉಸ್ತುವಾರಿ ಸುಧಾಕರ ರೆಡ್ಡಿ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಗುಡುಗಿದರು.
ಬೆಳಿಗ್ಗೆ 8ಕ್ಕೆ ಕಾರ್ಯಕ್ರಮ ನಿಗದಿಯಾಗಿದ್ದರೂ, ವಿಜಯೇಂದ್ರ ಹಾಗೂ ಕುಮಾರಸ್ವಾಮಿ ಎರಡೂವರೆ ಗಂಟೆ ತಡವಾಗಿ ವೇದಿಕೆಗೆ ಬಂದರು. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಇಬ್ಬರು ನಾಯಕರು ಪಾದಯಾತ್ರೆ ಆರಂಭಕ್ಕೂ ಮೊದಲು ಕೆಂಗೇರಿಯ ಕೆಂಪಮ್ಮ ದೇವಿಗೆ ಪೂಜೆ ಸಲ್ಲಿಸಿದರು. ನಂತರ ನಡೆದ ಸಾರ್ವಜನಿಕ ಸಭೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಎಲ್ಲರ ಮಾತು ಮುಗಿಯುತ್ತಿದ್ದಂತೆಯೇ ಸ್ವಲ್ಪ ಸಮಯ ಮಳೆಯ ಸಿಂಚನವಾಯಿತು.
ಯಡಿಯೂರಪ್ಪ, ಕುಮಾರಸ್ವಾಮಿ ಸೇರಿದಂತೆ ಬಹುತೇಕ ಗಣ್ಯರು ಸ್ವಲ್ಪ ದೂರ ನಡೆದ ನಂತರ ಕಾರಿನಲ್ಲಿ ತೆರಳಿದರು. ವಿಜಯೇಂದ್ರ ಹಾಗೂ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಯಾತ್ರೆ ಮುಂದುವರಿಯಿತು.
ಯಾತ್ರೆ ಆರಂಭ ವಿಳಂಬವಾದ ಕಾರಣ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿ ಕೆಂಗೇರಿ– ಬಿಡದಿ ಮಧ್ಯೆ ಮೈಲುಗಟ್ಟಲೆ ವಾಹನಗಳು ಸಾಲು ಗಟ್ಟಿ ನಿಂತಿದ್ದವು. ಕೆಲ ವಾಹನಗಳ ಪ್ರಯಾಣಿಕರು ಪೊಲೀಸರ ಜೊತೆ ವಾಗ್ವಾದ ನಡೆಸಿದರು.
ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ–ಜೆಡಿಎಸ್ ಹಮ್ಮಿಕೊಂಡಿದ್ದ 'ಮೈಸೂರು ಚಲೋ' ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಎರಡೂ ಪಕ್ಷಗಳ ಕಾರ್ಯಕರ್ತರು.
ಕಪ್ಪು–ಬಿಳುಪು ಟಿ.ವಿಯವರ ಆಸ್ತಿ ₹1,400 ಕೋಟಿ: ಕುಮಾರಸ್ವಾಮಿ
‘ದೇವೆಗೌಡರು ಎಷ್ಟು ಆಸ್ತಿ ಮಾಡಿದ್ದಾರೆ ಎಂದು ಪ್ರಶ್ನೆ ಕೇಳುವ ಮೊದಲು ಕಪ್ಪು–ಬಿಳುಪು ಟಿ.ವಿ, ಡಿವಿಡಿ ಇಟ್ಟುಕೊಂಡು ಜನರಿಗೆ ಸಿನಿಮಾ ತೋರಿಸುತ್ತಿದ್ದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ₹1,400 ಕೋಟಿ ಆಸ್ತಿಯ ಒಡೆಯರು ಹೇಗಾದರು ಎಂದು ಹೇಳಲಿ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.
ಪಾದಯಾತ್ರೆಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ‘ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶ್ನೆಗಳಿಗೆ ಬಿಡದಿ, ರಾಮನಗರದಲ್ಲೇ ಉತ್ತರ ಕೊಡುತ್ತೇನೆ. ಅವರ ಆಸ್ತಿ ಎಷ್ಟಿದೆ ಎನ್ನುವುದರ ಲೆಕ್ಕ ಕೊಡುತ್ತೇನೆ’ ಎಂದರು.
‘ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅವರ ಆಸ್ತಿ, ಅಕ್ರಮಗಳ ದಾಖಲೆ ಪತ್ರಗಳನ್ನು ನಾನೇ ಕೇಂದ್ರ ಸರ್ಕಾರಕ್ಕೆ ಕೊಟ್ಟಿದೇನೆ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಅಂದರೆ ಅವರು ಜೈಲಿಗೆ ಹೋಗುವುದು ಮನವರಿಕೆಯಾಗಿದೆ. ಇನ್ನೂ ಹತ್ತು ವರ್ಷ ನಮ್ಮದೇ ಅಧಿಕಾರ ಎಂದು ಬೀಗುತ್ತಿದ್ದಾರೆ. ಹತ್ತು ವರ್ಷದ ಮಾತಿರಲಿ, ಹತ್ತು ತಿಂಗಳು ಅಧಿಕಾರದಲ್ಲಿ ಇರಲಿ ನೋಡೋಣ’ ಎಂದು ಸವಾಲೆಸೆದರು.
‘ಹಿಂದುಳಿದ ವರ್ಗಗಳ ನಾಯಕರು ಎರಡನೇ ಬಾರಿ ಮುಖ್ಯಮಂತ್ರಿ ಆಗಿರುವುದಕ್ಕೆ ಕೆಲವರಿಗೆ ಹೊಟ್ಟೆ ಉರಿ ಎನ್ನುತ್ತಾರೆ. ಒಳ್ಳೆಯ ಕೆಲಸ ಮಾಡಿದರೆ ಯಾರಿಗೆ ಹೊಟ್ಟೆ ಉರಿ ಏಕೆ ಬರುತ್ತದೆ? ಹಣ ಕೊಳ್ಳೆ ಹೊಡೆಯೋದು ಸಾಮಾಜಿಕ ನ್ಯಾಯವೇ. ಯಾದಗಿರಿಯಲ್ಲಿ ಪೊಲೀಸ್ ಅಧಿಕಾರಿ ಏಕೆ ಜೀವ ಕಳೆದುಕೊಂಡರು’ ಎಂದು ಪ್ರಶ್ನಿಸಿದರು.
‘ಯಾದಗಿರಿಯಲ್ಲಿ ಆ ಪೊಲೀಸ್ ಅಧಿಕಾರಿಯ ಪತ್ನಿ ಪ್ರಕಾರ ₹25 ಲಕ್ಷ ಲಂಚ ಹಣ ಕೊಡಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರ ಬಗ್ಗೆ ಗೃಹ ಸಚಿವ ಪರಮೇಶ್ವರ ಅವರು ಉತ್ತರ ಕೊಡಲಿ’ ಎಂದು ಸವಾಲು ಹಾಕಿದರು.
‘ನಾನು ಬಣ್ಣ ಬದಲಾಯಿಸಿದ್ದೇನೆ ಎಂದು ಪರಮೇಶ್ವರ ಅವರು ಹೇಳಿದ್ದಾರೆ. ನನ್ನದು ಒರಿಜಿನಲ್ ಬಣ್ಣ. ಅದು ಎಂದೂ ಬದಲಾಗದು’ ಎಂದು ತಿರುಗೇಟು ನೀಡಿದರು.
‘ಶಕ್ತಿ ಕಳೆದುಕೊಂಡಿರುವ ಜೆಡಿಎಸ್, ಕಾಂಗ್ರೆಸ್ ಪಕ್ಷವನ್ನು ಎದುರಿಸಲು ಬಿಜೆಪಿ ಜತೆಗೆ ಸೇರಿಕೊಂಡಿದೆ ಎಂದು ಸಿ.ಡಿ. ಶಿವು ಹೇಳಿದ್ದಾರೆ. ನಿಮ್ಮನ್ನು ಬುಡ ಸಮೇತ ಕಿತ್ತೊಗೆಯಲು ನಾವು ಜೊತೆಯಾಗಿದ್ದೇವೆ’ ಎಂದರು.
ಸಿ.ಎಂ ಬೆಂಗಲಿಗರಿಂದ 300 ನಿವೇಶನ ಕಬಳಿಕೆ: ವಿಜಯೇಂದ್ರ
ಮೈಸೂರು ಚಲೋ ಪಾದಯಾತ್ರೆ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವ ಶಕ್ತಿ ಹೊಂದಿದೆ. ಸುಳ್ಳು ಭರವಸೆ ಕೊಟ್ಟು ಅಧಿಕಾರಕ್ಕೆ ಬಂದ ಸರ್ಕಾರ ವಚನಭ್ರಷ್ಟವಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದರು.
ಮೈಸೂರಿನ ಮುಡಾದಿಂದ ಮುಖ್ಯಮಂತ್ರಿ 14 ನಿವೇಶನ ಪಡೆದ ನಂತರ ಅವರ ಬೆಂಬಲಿಗರು 300 ನಿವೇಶನ ಕಬಳಿಸಿದ್ದಾರೆ. ಅವುಗಳ ಮೌಲ್ಯ ₹5 ಸಾವಿರ ಕೋಟಿ. ಇದನ್ನು ಮುಡಾ ಅಧ್ಯಕ್ಷ ಮರಿಗೌಡರೇ ಹೇಳಿದ್ದಾರೆ. ಭ್ರಷ್ಟಾಚಾರದ ಹಣವನ್ನು ಸೋನಿಯಾ ಗಾಂಧಿ ಕುಟುಂಬಕ್ಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಮೊದಲ ದಿನ ಬಿಜೆಪಿಯದೇ ಹವಾ
ಮೊದಲ ದಿನ ಎಲ್ಲೆಡೆ ಬಿಜೆಪಿ ಕಾರ್ಯಕರ್ತರೇ ತುಂಬಿದ್ದರು. ಭಾಗವಹಿಸಿದ್ದರಲ್ಲಿ ಬಹುತೇಕರು ಬಿಜೆಪಿ ಶಾಲು ಧರಿಸಿದ್ದರು. ಪಾದಯಾತ್ರೆಯ ಹಾದಿಯ ಇಕ್ಕೆಲಗಳಲ್ಲಿ ಬಿಜೆಪಿ ಬಾವುಟಗಳೇ ರಾರಾಜಿಸುತ್ತಿದ್ದವು. ಜೆಡಿಎಸ್‌ಗಿಂತ ಬಿಜೆಪಿ ಕಾರ್ಯಕರ್ತರೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾರಣ ‘ಕೇಸರಿ’ ಲಹರಿ ಆವರಿಸಿತ್ತು.
ಕೇಂದ್ರ ಸಚಿವರಾದ ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಮಾಜಿ ಸಚಿವ ಡಿ.ವಿ.ಸದಾನಂದಗೌಡ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಜೆಡಿಎಸ್ ಪ್ರಮುಖರ ಸಮಿತಿ ಅಧ್ಯಕ್ಷ ಜಿ.ಟಿ. ದೇವೇಗೌಡ ಕಾರ್ಯಕ್ರಮದಲ್ಲಿ ಇದ್ದರು.
ದಿಢೀರ್ ಪ್ರತ್ಯಕ್ಷವಾದ ಪ್ರೀತಂ ಗೌಡ:
ಕೆಂಗೇರಿಯಿಂದ ಆರಂಭವಾದ ನಡಿಗೆಯಲ್ಲಿ ಎಲ್ಲೂ ಕಾಣಿಸಿಕೊಳ್ಳದ ಪ್ರೀತಂ ಗೌಡ ಬಿಡದಿ ಸಮೀಪಿಸುವಾಗ ಯಾತ್ರೆಯ ಮಧ್ಯೆ ದಿಢೀರ್ ಪ್ರತ್ಯಕ್ಷರಾದರು. ಬಿಜೆಪಿ ಕಾರ್ಯಕರ್ತರು ಪ್ರೀತಂಗೆ ಜಯಕಾರ ಹಾಕಿದರು. ಇದರಿಂದ ಜೆಡಿಎಸ್ ನಾಯಕರು ಕೆಲ ಕಾಲ ಮುಜುಗರ ಅನುಭವಿಸಿದರು.
ಬಿಜೆಪಿ ಭಿನ್ನರ ಸಭೆಯಲ್ಲಿ ಭಾಗವಹಿಸಿದ್ದ ಮಾಜಿ ಸಂಸದ ಪ್ರತಾಪಸಿಂಹ ಅವರು ಕೆಂಗೇರಿಯ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಸನಗೌಡ ಪಾಟೀಲ ಯತ್ನಾಳ, ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ ಅವರು ಭಾಗವಹಿಸಲಿಲ್ಲ. ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಸಹ ಭಾಗಿಯಾಗಿರಲಿಲ್ಲ. ಅವರ ಮನೆಯಲ್ಲಿ ಕಾರ್ಯಕ್ರಮವಿದ್ದು, ಭಾನುವಾರ ಭಾಗವಹಿಸುವರು ಎಂದು ಬಿಜೆಪಿ ನಾಯಕರು ಮಾಹಿತಿ ನೀಡಿದರು.
ಭ್ರಷ್ಟಾಚಾರದಲ್ಲಿ ಸಿಲುಕಿದ ಸಿದ್ದರಾಮಯ್ಯ ಅವರು ಪಾದಯಾತ್ರೆ ಮುಗಿಯುವ ಮೊದಲೇ ಗೌರವಯುತವಾಗಿ ರಾಜೀನಾಮೆ ಕೊಡುತ್ತಾರೆ ಎನ್ನುವ ವಿಶ್ವಾಸವಿದೆ-ಬಿ.ಎಸ್. ಯಡಿಯೂರಪ್ಪ, ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ
ರಾಹುಲ್ ಗಾಂಧಿ ಸೂಚನೆಯಂತೆ ಈ ಹಗರಣ ನಡೆದಿದೆ. ಹಣವನ್ನು ಚುನಾವಣೆಗೆ ಬಳಸಿದ್ದಾರೆ. ಸಿ.ಎಂ.ಗೆ ನೋಟಿಸ್ ಕೊಟ್ಟಿದ್ದು ಸರಿಯಿದೆ-ರಾಧಾಮೋಹನ್‌ದಾಸ್ ಅಗರ್‌ವಾಲ್, ರಾಜ್ಯ ಬಿಜೆಪಿ ಉಸ್ತುವಾರಿ
ಕಾಂಗ್ರೆಸ್ಸಿನ ಡಿಎನ್‌ಎಯಲ್ಲೇ ಭ್ರಷ್ಟಾಚಾರ ಹಾಸುಹೊಕ್ಕಾಗಿದೆ. ಈಗ ರಾಜ್ಯ ಸರ್ಕಾರ ಭ್ರಷ್ಟತನ ಮುಚ್ಚಿಹಾಕಲು ರಾಜ್ಯಪಾಲರನ್ನು ಬೆದರಿಸುವ ಕೆಲಸ ಮಾಡುತ್ತಿದೆ-ಪ್ರಲ್ಹಾದ ಜೋಶಿ, ಕೇಂದ್ರ ಸಚಿವ
ರಾಜ್ಯಪಾಲರು ನೀಡಿದ ಒಂದು ನೋಟಿಸ್‌ಗೇ ಕಾಂಗ್ರೆಸ್ ನಾಯಕರು ಗಡಗಡ ನಡುಗುತ್ತಿದ್ದಾರೆ. ಕಾಂಗ್ರೆಸ್ ಒಡೆದ ಮನೆಯಾಗಿದೆ-ಆರ್. ಅಶೋಕ, ವಿಧಾನಸಭೆ ವಿರೋಧ ಪಕ್ಷದ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.