ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು ಚಿತ್ರನಗರಿ: ಜಮೀನು ಹಸ್ತಾಂತರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ

3 ವರ್ಷದೊಳಗೆ ಪೂರ್ಣಗೊಳಿಸಲು ಗಡುವು | ಸಿಎಂ ಅಧ್ಯಕ್ಷತೆಯಲ್ಲಿ ಸಭೆ
Published : 30 ಸೆಪ್ಟೆಂಬರ್ 2024, 23:30 IST
Last Updated : 30 ಸೆಪ್ಟೆಂಬರ್ 2024, 23:30 IST
ಫಾಲೋ ಮಾಡಿ
Comments

ಬೆಂಗಳೂರು: ಚಿತ್ರನಗರಿಗಾಗಿ ಮೈಸೂರು ಜಿಲ್ಲೆಯ ಇಮ್ಮಾವು ಗ್ರಾಮದಲ್ಲಿ ಈಗಾಗಲೇ ಗುರುತಿಸಲಾಗಿರುವ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ 110 ಎಕರೆ ಭೂಮಿಯನ್ನು ತ್ವರಿತಗತಿಯಲ್ಲಿ ವಾರ್ತಾ ಇಲಾಖೆಗೆ ಹಸ್ತಾಂತರಿಸಿ ಆದೇಶ ಹೊರಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.

ಮುಖ್ಯಮಂತ್ರಿಯ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಸಭೆ ನಡೆಸಿ, ಚಿತ್ರನಗರಿಗೆ ಸಂಬಂಧಿಸಿದಂತೆ ಈವರೆಗಿನ ಪ್ರಗತಿಯ ಮಾಹಿತಿಯನ್ನು ಅವರು ಪಡೆದರು. ‘ಭೂಮಿ ವಶಕ್ಕೆ ಪಡೆದ ನಂತರ ತಕ್ಷಣವೇ ಟೆಂಡರ್‌ ಕರೆದು ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಬೇಕು. ಮೂರು ವರ್ಷದೊಳಗೆ ಚಿತ್ರನಗರಿ ಪೂರ್ಣಗೊಳ್ಳಬೇಕು’ ಎಂದು ಹೇಳಿದರು.

ಹೈದರಾಬಾದ್‌ನಲ್ಲಿರುವ ರಾಮೋಜಿ ಫಿಲಂಸಿಟಿ ಮಾದರಿಯಲ್ಲಿ ಚಿತ್ರನಗರಿ ನಿರ್ಮಾಣವಾಗಬೇಕು. ಸಿನಿಮಾ ಜಗತ್ತಿನ ಬೇಡಿಕೆಗೆ ಅನುಗುಣವಾಗಿ ಅತ್ಯಾಧುನಿಕ ತಂತ್ರಜ್ಞಾನ ಸೌಲಭ್ಯಗಳು ಇಲ್ಲಿ ಲಭ್ಯವಿರಬೇಕು. ಆದ್ದರಿಂದ ದೇಶದ ಪ್ರಮುಖ ಮೂರು ಚಿತ್ರ ನಗರಿಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಸರ್ಕಾರಕ್ಕೆ ಹೊರೆಯಾಗದಂತೆ ಚಿತ್ರನಗರಿ ನಿರ್ಮಾಣವಾಗಬೇಕು. ಚಿತ್ರನಗರಿಯ ಸ್ವರೂಪದ ಕುರಿತಾಗಿ ಸಮಗ್ರ ವರದಿಯೊಂದನ್ನು ಸಲ್ಲಿಸಬೇಕು. ಚಿತ್ರೋದ್ಯಮದವರಿಂದ ಸಲಹೆ ಸೂಚನೆಗಳನ್ನು ಪಡೆಯಬೇಕು. ಚಿತ್ರನಗರಿಯಿಂದ ಪ್ರವಾಸೋದ್ಯಮಕ್ಕೂ ಹೆಚ್ಚಿನ ಉತ್ತೇಜನ ದೊರೆಯಬೇಕು. ಇದಕ್ಕಾಗಿ ಪ್ರವಾಸೋದ್ಯಮ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸುವಂತೆ ಅವರು ಸೂಚನೆ ನೀಡಿದರು.

ಚಿತ್ರನಗರಿಯನ್ನು ಪಿಪಿಪಿ ಮಾದರಿಯಲ್ಲಿ ಅನುಷ್ಠಾನಗೊಳಿಸಲು ಟ್ರಾನ್ಸಾಕ್ಷನ್‌ ಅಡ್ವೈಸರ್‌ ನೇಮಕ ಮಾಡಲು ಟೆಂಡರ್‌ ಕರೆಯಬೇಕು. ಹೆಚ್ಚುವರಿಯಾಗಿ ಎರಡನೇ ಹಂತದ ವಿಸ್ತರಣೆಗೆ 50 ಎಕರೆ ಜಮೀನು ಗುರುತಿಸಿ ಹಸ್ತಾಂತರಿಸುವ ಪ್ರಕ್ರಿಯೆ ಆರಂಭಿಸಲು ಅಧಿಕಾರಿಗಳಿಗೆ ಸಿದ್ದರಾಮಯ್ಯ ಸೂಚಿಸಿದರು.

ಜಮೀನು ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ತಕ್ಷಣ, ಜಮೀನಿಗೆ ಕಾಂಪೌಂಡ್‌ ನಿರ್ಮಿಸಲು ಲೋಕೋಪಯೋಗಿ ಇಲಾಖೆಗೆ ಸೂಚಿಸಿದರು.

ಸಮಾಜ ಕಲ್ಯಾಣ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ, ಕಂದಾಯ ಸಚಿವ ಕೃಷ್ಣಬೈರೇಗೌಡ ಮತ್ತು ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT