ಮೈಸೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳೊಂದಿಗೆ ಗಡಿ ಹಂಚಿಕೊಂಡಿರುವ ತಮಿಳುನಾಡು ಹಾಗೂ ಮೈಸೂರು ಮತ್ತು ಕೊಡಗು ಜಿಲ್ಲೆಯ ಗಡಿಯಲ್ಲಿರುವ ಕೇರಳಂನಲ್ಲಿ ಸರ್ಕಾರ ಬದಲಾಗಿರುವುದು ‘ಮೈಸೂರು ಸೀಮೆ’ಯ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಉಂಟಾಗಲಿದೆ ಎಂಬ ಚರ್ಚೆ ಆರಂಭವಾಗಿದೆ.

ಈಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಚಲನಚಿತ್ರ ನಟ ಜೋಸೆಫ್ ವಿಜಯ್ ನೇತೃತ್ವದ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಹಾಗೂ ಕೇರಳಂನಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ ಸರ್ಕಾರ ರಚನೆಯ ಹೊಸ್ತಿಲಲ್ಲಿವೆ. ಇವು ನೆರೆಯೊಂದಿಗೆ ಸೌಹಾರ್ದ ಕಾಯ್ದುಕೊಳ್ಳುತ್ತವೆಯೋ ಅಥವಾ ಸಂಘರ್ಷಕ್ಕೆ ಇಳಿಯುತ್ತವೆಯೋ ಎಂಬ ಕುತೂಹಲ ಈ ಸೀಮೆಯ ಜನರಲ್ಲಿದೆ.

ಸಮನ್ವಯ ಇರುವುದೇ?: ತಮಿಳುನಾಡಿನಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಟಿವಿಕೆ ಪಕ್ಷ ಅಧಿಕಾರಕ್ಕೆ ಬರುವುದು, ಜೋಸೆಫ್ ವಿಜಯ್ ಮುಖ್ಯಮಂತ್ರಿ ಆಗಲಿದ್ದು, ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲಾಗಿದೆ. ಅಂತೆಯೇ, ಕೇರಳಂನಲ್ಲೂ ಕಾಂಗ್ರೆಸ್ ನೇತೃತ್ವದ ಯುಡಿಎಫ್ (ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್) ಸರ್ಕಾರ ರಚಿಸಲಿದೆ. ಅಂದರೆ, ರಾಜ್ಯದೊಂದಿಗೆ ಗಡಿ ಹಂಚಿಕೊಂಡಿರುವ ಎರಡೂ ರಾಜ್ಯಗಳಲ್ಲಿನ ಸರ್ಕಾರದಲ್ಲಿ ಕಾಂಗ್ರೆಸ್ ಪ್ರಮುಖ ಪಾತ್ರ ವಹಿಸಲಿದೆ. ಕರ್ನಾಟಕದಲ್ಲೂ ಕಾಂಗ್ರೆಸ್ ಪಕ್ಷವೇ ಆಡಳಿತದಲ್ಲಿರುವುದರಿಂದ ಮೂರು ರಾಜ್ಯಗಳ ಮಟ್ಟದಲ್ಲಿ ‘ಸಮನ್ವಯ’ದ ನಿರೀಕ್ಷೆ ಜನರದ್ದಾಗಿದೆ.

ಈ ಮೂರೂ ಸರ್ಕಾರಗಳು ಸೌಹಾರ್ದದಿಂದ ನಡೆದುಕೊಳ್ಳುವುದು ಗಡಿಯಲ್ಲಿ ಉತ್ತಮ ವಾತಾವರಣ ಕಾಯ್ದುಕೊಳ್ಳುವುದಕ್ಕೆ ಸಹಕಾರಿಯಾಗಲಿದೆ ಎನ್ನುವುದು ಜನರ ಆಶಯವಾಗಿದೆ.

ಕೊಡು–ಕೊಳ್ಳುವಿಕೆ ಇದೆ: ಮೂರೂ ರಾಜ್ಯಗಳ ಗಡಿಯ ಜನರ ನಡುವೆ ಕೊಡು–ಕೊಳ್ಳುವಿಕೆ ಸಂಬಂಧವಿದೆ. ವ್ಯಾಪಾರ–ವಹಿವಾಟು, ಚಾರಣ, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ, ಪ್ರವಾಸೋದ್ಯಮ ಮೊದಲಾದ ಕಾರಣಗಳಿಂದ ಅಲ್ಲಿನವರು ಇಲ್ಲಿಗೆ ಬರುತ್ತಾರೆ; ಇಲ್ಲಿಯವರು ಅಲ್ಲಿಗೆ ಹೋಗುತ್ತಾರೆ. ಈ ಪ್ರವಾಸಿಗರಿಗೆ ಎಲ್ಲೂ ತೊಂದರೆ ಆಗದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ಆಯಾ ಸರ್ಕಾರಗಳ ಮೇಲಿದೆ. ಪ್ರವಾಸಿಸ್ನೇಹಿ ಕಾರ್ಯಕ್ರಮಗಳಿಗೆ ಆದ್ಯತೆ ನೀಡಬೇಕು ಎನ್ನುವುದು ಪ್ರವಾಸೋದ್ಯಮ ವಲಯ ದವರ ನಿರೀಕ್ಷೆ ಯಾಗಿದೆ.

ಬಂಡೀಪುರ ರಕ್ಷಣೆಗೆ: ರಾಜ್ಯದ ವ್ಯಾಪ್ತಿಯ ಬಂಡೀಪುರ ಅರಣ್ಯದೊಳಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ 9ರ ನಂತರ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ವನ್ಯಜೀವಿಗಳ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಇದನ್ನು ತೆರವುಗೊಳಿಸಿ, ರಾತ್ರಿ ವಾಹನ ಸಂಚಾರಕ್ಕೆ ಅವಕಾಶ ಕೊಡಬೇಕು ಎನ್ನುವುದು ಕೇರಳಂನವರ ಬೇಡಿಕೆ. ಈ ಬಗ್ಗೆ ಪ್ರಸ್ತಾಪವಾದಾಗೆಲ್ಲ ಕರ್ನಾಟಕದ ಪರಿಸರವಾದಿಗಳು ಹಾಗೂ ವನ್ಯಜೀವಿ ಪ್ರಿಯರು ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಕೇರಳಂ ರಾಜ್ಯಕ್ಕೆ ಇದನ್ನು ಮನವರಿಕೆ ಮಾಡಿಕೊಟ್ಟು ಯಥಾಸ್ಥಿತಿ ಕಾಪಾಡಿ ಕೊಳ್ಳಬೇಕು ಎನ್ನುವುದು ಅವರ ಬೇಡಿಕೆಯಾಗಿದೆ. ರಾಜ್ಯಕ್ಕೆ ಕೇರಳಂನ ಹೊಸ ಸರ್ಕಾರ ಹೇಗೆ ಸ್ಪಂದಿಸುತ್ತದೆ ಎಂಬುದು ಕುತೂಹಲ ಮೂಡಿಸಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮೈಸೂರಿನ ರಾಜಕಾರಣಿ, ಕೆಪಿಸಿಸಿ ವಕ್ತಾರರೂ ಆಗಿರುವ ಎಂ.ಲಕ್ಷ್ಮಣ, ‘ಹಲವು ಜಿಲ್ಲೆಗಳೊಂದಿಗೆ ಕೇರಳ ಗಡಿ ಹಂಚಿಕೊಂಡಿದೆ. ಇಲ್ಲಿಂದ ತರಕಾರಿ ಹೋದರೆ, ಅಲ್ಲಿನ ಟೀ, ಕಾಫಿ ಕರ್ನಾಟಕಕ್ಕೆ ಬರುತ್ತದೆ. ಅಲ್ಲಿನ ರೈತರು ಇಲ್ಲಿ ಗಡಿ ಭಾಗದಲ್ಲಿ ಜಮೀನುಗಳನ್ನು ಖರೀದಿಸಿ ಶುಂಠಿ, ಬಾಳೆ, ಅರಿಸಿನ ಮೊದಲಾದ ಬೆಳೆ ಬೆಳೆಯುತ್ತಿದ್ದಾರೆ. ಎಲ್ಲರ ನಡುವೆ ಉತ್ತಮ ಬಾಂಧವ್ಯ ಕಲ್ಪಿಸುವ ನಿಟ್ಟಿನಲ್ಲಿ ಅಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆ ಆಗುತ್ತಿರುವುದರಿಂದ ಅನುಕೂಲ ಆಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಮಸ್ಯೆಗಳ ಪರಿಹಾರಕ್ಕೆ: ‘ಗಡಿಯಲ್ಲಿ ಹಲವು ರೀತಿಯ ಸಮಸ್ಯೆಗಳಿವೆ. ಇವುಗಳ ಪರಿಹಾರದ ನಿಟ್ಟಿನಲ್ಲಿ, ಹಿಂದೆ ಕೇರಳಂನಲ್ಲಿದ್ದ ಕಮ್ಯುನಿಸ್ಟ್ ತತ್ವಸಿದ್ಧಾಂತದ ಸರ್ಕಾರ ರಾಜ್ಯದೊಂದಿಗೆ ಕೈಜೋಡಿಸಿರಲಿಲ್ಲ. ಇಲ್ಲಿಂದ ಪತ್ರ ಬರೆದರೆ ಅಲ್ಲಿ ಉತ್ತರ ಸಿಗುತ್ತಿರಲಿಲ್ಲ, ಸಹಕಾರವೂ ಇರುತ್ತಿರಲಿಲ್ಲ. ಈಗ ಒಳ್ಳೆಯ ವಾತಾವರಣ ಸೃಷ್ಟಿಯಾಗಿದೆ’ ಎನ್ನುತ್ತಾರೆ ಅವರು.

‘ಎರಡೂ ರಾಜ್ಯಗಳ ರೈತರ ಸಮಸ್ಯೆಗಳನ್ನು ಬಗೆಹರಿಸಲು ಎರಡೂ ರಾಜ್ಯಗಳ ಸರ್ಕಾರಗಳೂ ಪ್ರಯತ್ನಿಸಬೇಕು. ಎಚ್.ಡಿ. ಕೋಟೆ ತಾಲ್ಲೂಕಿನ ಕಬಿನಿ ಜಲಾಶಯದ ಎತ್ತರ ಹೆಚ್ಚಿಸಿದರೆ ಹೆಚ್ಚುವರಿಯಾಗಿ 20 ಟಿ.ಎಂ.ಸಿ. ಅಡಿ ನೀರು ಶೇಖರಣೆಗೆ ಅವಕಾಶವಿದೆ. ಇದಕ್ಕೆ ಕೇರಳಂ ಸಹಕಾರವನ್ನು ನಮ್ಮ ಸರ್ಕಾರ ಪಡೆದುಕೊಳ್ಳಬೇಕು. ಮೇಕೆದಾಟು ಬಳಿ ಸಮತೋಲನ ಜಲಾಶಯ ನಿರ್ಮಿಸುವ ಯೋಜನೆಗೆ ತಮಿಳುನಾಡು ಜೊತೆ ಸಮನ್ವಯ ಅಗತ್ಯವಿದೆ’ ಎನ್ನುತ್ತಾರೆ ಅವರು.

‘ಮೇಕೆದಾಟು ಜಲಾಶಯ ನಿರ್ಮಾಣ ವಾದರೆ ಶೇ 90ರಷ್ಟು ಅನುಕೂಲ ತಮಿಳುನಾಡು ರಾಜ್ಯದವರಿಗೇ ಆಗುತ್ತದೆ. ಇದನ್ನು ಮನವರಿಕೆ ಮಾಡಿಕೊಂಡು ತಮಿಳುನಾಡು ಸರ್ಕಾರ ಸ್ಪಂದಿಸಬೇಕಾಗುತ್ತದೆ. ಎರಡೂ ರಾಜ್ಯಗಳ ಜನರ ಹಿತದೃಷ್ಟಿಯಿಂದ ಯೋಜನೆ ಅಗತ್ಯವಾಗಿದೆ. ಅಲ್ಲಿನ ಸರ್ಕಾರ ಹೇಗೆ ಸ್ಪಂದಿಸುತ್ತದೆ ಎನ್ನುವುದನ್ನು ತಿಳಿಯಲು ಕಾಲಾವಕಾಶ ಬೇಕಾಗುತ್ತದೆ’ ಎನ್ನುವ ಪ್ರತಿಪಾದನೆ ಅವರದು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-51-1692146004

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.