ಮೈಸೂರು: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿರುವವರೆಗೂ ಮೈಸೂರು ನಗರ ಹಾಗೂ ಜಿಲ್ಲೆಯು ‘ಮುಖ್ಯಮಂತ್ರಿ ತವರು’ ಎನಿಸಿಕೊಳ್ಳುತ್ತಿತ್ತು. ಇನ್ಮುಂದೆ, ‘ಸಿಎಂ ಬೀಗರೂರು’ ಎನಿಸಿಕೊಳ್ಳಲಿದೆ. ಏಕೆಂದರೆ, ಜೂನ್ 3ರಂದು ರಾಜ್ಯದ ಮುಖ್ಯಮಂತ್ರಿಯಾಗಿ ಗದ್ದುಗೆ ಏರಲಿರುವ ಡಿ.ಕೆ. ಶಿವಕುಮಾರ್ ಅವರು ಇಲ್ಲಿನ ಅಳಿಯ.

ಅವರ ಪತ್ನಿ ಉಷಾ ಅವರು, ಇಲ್ಲಿನ ಇಟ್ಟಿಗೆಗೂಡಿನ ತಿಮ್ಮಯ್ಯ (ಪಾಪಣ್ಣ) ಅವರ ಪುತ್ರಿ. ಪಾಪಣ್ಣ ಅವರು 2021ರಲ್ಲಿ ನಿಧನರಾಗಿದ್ದಾರೆ.

ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲ್ಲೂಕಿನ ದೊಡ್ಡಆಲಹಳ್ಳಿಯ ಕೆಂಪೇಗೌಡರ ಮಗನಾದ ಡಿ.ಕೆ.ಶಿವಕುಮಾರ್ ಅವರು ಮೈಸೂರಿನ ಜೊತೆಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದಾರೆ. ನೆಂಟಸ್ತಿಕೆಯ ಜೊತೆಗೆ ಅಪಾರ ಅಭಿಮಾನಿಗಳು, ಬಂಧುಗಳು ಹಾಗೂ ಹಿತೈಷಿಗಳನ್ನು ಅವರು ಗಳಿಸಿದ್ದಾರೆ. ಹೀಗಾಗಿ, ಅವರ ನೇತೃತ್ವದ ಸರ್ಕಾರದಲ್ಲಿ ಮೈಸೂರಿನ ಪ್ರಾತಿನಿಧ್ಯ ಹೇಗಿರಲಿದೆ, ಅಭಿವೃದ್ಧಿ ಯೋಜನೆಗಳ ಕೊಡುಗೆಗಳಲ್ಲಿ, ಅನುದಾನ ಹಂಚಿಕೆಯಲ್ಲಿ ಮೈಸೂರಿಗೆ ಎಷ್ಟರ ಮಟ್ಟಿಗೆ ಮನ್ನಣೆ ದೊರೆಯಲಿದೆ ಎನ್ನುವ ಕುತೂಹಲ ಜನರಲ್ಲಿದೆ.

ನೆನಪಿಸಿದ್ದರು: ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ, 2023ರ ಮೇ 3ರಂದು ರಾತ್ರಿ ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಹರೀಶ್ ಗೌಡ ಪರವಾಗಿ ನಗರದ ಮಾತೃಮಂಡಳಿ ವೃತ್ತದಲ್ಲಿ ‘ಪ್ರಜಾಧ್ವನಿ’ ಬಸ್ನಲ್ಲಿ ನಿಂತು ಪ್ರಚಾರ ನಡೆಸಿದ್ದ ಶಿವಕುಮಾರ್, ‘ನಾನೂ ಮೈಸೂರಿನವನೇ. ನನ್ನ ಪತ್ನಿ ಮೈಸೂರಿನವರೇ. ನಾನು ಇಲ್ಲಿಯ ಅಳಿಯ ಗೊತ್ತಾ? ಈ ಚುನಾವಣೆಯಲ್ಲಿ ನಮ್ಮವರನ್ನು ಗೆಲ್ಲಿಸಿ ನನ್ನ ಮರ್ಯಾದೆ ಉಳಿಸಿ’ ಎಂದು ಬೆಂಬಲಿಗರು ಹಾಗೂ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡಿದ್ದರು.

ಇದಲ್ಲದೇ, ಚುನಾವಣೆ ಕಾಲಕ್ಕೆ ವಿವಿಧೆಡೆ ನಡೆದಿದ್ದ ಒಕ್ಕಲಿಗ ಸಮಾಜದವರ ಸಭೆಗಳಲ್ಲಿ, ‘ಸಮಾಜದ ನಾಯಕ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಭವಿಷ್ಯಕ್ಕಾಗಿ, ಅವರಿಗೆ ದೊಡ್ಡ ಹುದ್ದೆ ದೊರೆಯುವ ಅವಕಾಶಗಳಿಗಾಗಿ ಈ ಬಾರಿ ಕಾಂಗ್ರೆಸ್ ಬೆಂಬಲಿಸಬೇಕು’ ಎಂದು ಮುಖಂಡರು ಕರೆ ಕೊಟ್ಟಿದ್ದರು. ‘ಅವರು ಇಲ್ಲಿನ ಅಳಿಯ ಎಂಬುದನ್ನು ಮರೆಯಬಾರದು’ ಎಂದೂ ನೆನಪಿಸುತ್ತಿದ್ದರು.

ಸ್ವಲ್ಪ ದಿನ ಕಾಯಿರಿ ಎಂದಿದ್ದರು

2024ರ ಏ.14ರಂದು ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ ಅವರ ಪರವಾಗಿ ಇಲ್ಲಿನ ಹೋಟೆಲ್ವೊಂದರಲ್ಲಿ ನಡೆದಿದ್ದ ಒಕ್ಕಲಿಗ ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿದ್ದ ಡಿಕೆಶಿ, ‘ತಲೆಕೆಡಿಸಿಕೊಳ್ಳಬೇಡಿ. ಸ್ವಲ್ಪ ದಿನವಷ್ಟೇ ಕಾಯಿರಿ. ದೆಹಲಿಯಲ್ಲಿ ಏನಾಗಬೇಕೋ ಆ ತೀರ್ಮಾನವಾಗಿದೆ. ಆ ಬಗ್ಗೆ ಚರ್ಚೆ ಬೇಡ. ನೀವು ನನ್ನ ಬೆಂಬಲವಾಗಿ ನಿಂತುಕೊಳ್ಳಿ ಸಾಕು. ನನಗೆ ಶಕ್ತಿ ತುಂಬಬೇಕು’ ಎಂದು ಕೋರಿದ್ದರು. ಅವರು ಹೇಳಿದ್ದು ಇಂದು ನಿಜವಾಗಿದ್ದು, ಹೈಕಮಾಂಡ್ ಅವರ ಬೆಂಬಲಕ್ಕೆ ನಿಂತ ಪರಿಣಾಮ, ಈಗ ಮುಖ್ಯಮಂತ್ರಿ ಹುದ್ದೆ ಅಲಂಕರಿಸುವ ಹೊಸ್ತಿಲಿಗೆ ಬಂದು ನಿಂತಿದ್ದಾರೆ.

‘ಪಾರಂಪರಿಕ, ಸಾಂಸ್ಕೃತಿಕವಾಗಿ ಅಪಾರ ಮಹತ್ವವನ್ನು ಪಡೆದಿರುವ, ಪ್ರವಾಸೋದ್ಯಮದ ನಕ್ಷೆಯಲ್ಲಿ ದೊಡ್ಡ ಸ್ಥಾನವನ್ನು ಪಡೆದಿರುವ ಮೈಸೂರಿನ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಕೊಡಬೇಕಾದ ಸವಾಲು ಹೊಸ ಮುಖ್ಯಮಂತ್ರಿಯ ಎದುರಿದೆ. ಮೈಸೂರಿನ ಅಳಿಯ ಎಂಬ ಕಾರಣಕ್ಕೆ ಅಭಿವೃದ್ಧಿ ವಿಷಯದಲ್ಲಿ ಜಿಲ್ಲೆಯ ಜನರಿಂದ ನಿರೀಕ್ಷೆಗಳೂ ಜಾಸ್ತಿ ಇದ್ದು, ಇದನ್ನು ಹುಸಿಗೊಳಿಸಿದಂತೆ ನೋಡಿಕೊಳ್ಳುವ ಸವಾಲು ಕೂಡ ಅವರ ಮೇಲಿದೆ’ ಎನ್ನುತ್ತಾರೆ ಕಾಂಗ್ರೆಸ್ ಪಕ್ಷದ ಮುಖಂಡರು.

ಬದಲಾಗುವುದೇ ದಸರಾ ‘ಸ್ವರೂಪ’, ಸೇರುವುದೇ ಕಂಬಳ?!

‘ನಾಡಹಬ್ಬ ಮೈಸೂರು ದಸರಾ ಮಹೋತ್ಸವವನ್ನು ಈ ಬಾರಿ ವಿನೂತನವಾಗಿ ಆಚರಿಸಲು ಚರ್ಚೆ ನಡೆಸಲಾಗಿದೆ’ ಎಂದು ಉಪಮುಖ್ಯಮಂತ್ರಿಯಾಗಿದ್ದ ಡಿ.ಕೆ.ಶಿವಕುಮಾರ್ ಅವರು ಹೋದ ವರ್ಷ ಇಲ್ಲಿ ಹೇಳಿದ್ದರು.

‘ಹಳೆಯ ಒಂದಷ್ಟು ಪದ್ಧತಿಗಳನ್ನು ಕೈಬಿಟ್ಟು ಹೊಸ ಪೀಳಿಗೆಯನ್ನು ಸೆಳೆಯುವಂತೆ ಕಾರ್ಯಕ್ರಮಗಳನ್ನು ಆಯೋಜಿಸುವ ಕುರಿತು ಚರ್ಚೆ ನಡೆಸಲಾಗಿದೆ. ಕಂಬಳ ನಮ್ಮ ರಾಜ್ಯದ ಕರಾವಳಿ ಭಾಗದ ವಿಶೇಷವಾದ ಆಚರಣೆ. ಹೀಗಾಗಿ ಕಂಬಳವನ್ನು ದಸರಾದಲ್ಲಿ ಸೇರಿಸಲಾಗುವುದು. ಈ ಕ್ರೀಡೆ ನಡೆಸಲು ಅಗತ್ಯವಾದ ಸ್ಥಳ ಹುಡುಕುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ’ ಎಂದು ಅವರು ತಿಳಿಸಿದ್ದರು.

ಆದರೆ, ಆಗ ಕಂಬಳ ನಡೆಸಲು ಸಾಧ್ಯವಾಗಿರಲಿಲ್ಲ. ಈ ಬಾರಿ ಅವರೇ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಏರುತ್ತಿರುವುದರಿಂದಾಗಿ, ಈ ಬಾರಿಯ ನಾಡಹಬ್ಬ ದಸರಾ ಮಹೋತ್ಸವದ ಸ್ವರೂಪವು ಶಿವಕುಮಾರ್ ಅವರು ಬಯಸಿದಂತೆ ಬದಲಾಗುವುದೇ, ಹೊಸ ಸೇರ್ಪಡೆಗಳು ಆಗುತ್ತವೆಯೇ? ಕಂಬಳ ಕ್ರೀಡೆಯು ದಸರಾ ಭಾಗವಾಗುವುದೇ? ಎಂಬ ಕುತೂಹಲ ಜನರಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.