ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವ ಕರ್ನಾಟಕ ಶೃಂಗ| 2047ಕ್ಕೆ ಆರ್ಥಿಕತೆಯಲ್ಲಿ ಭಾರತಕ್ಕೆ ನಂ. 1: ಭಗವಂತ ಖೂಬಾ

ಪ್ರಧಾನಿ ಮೋದಿ ನೇತೃತ್ವದಲ್ಲಿ ಪ್ರಗತಿ ಪಥದಲ್ಲಿ ಭಾರತ: ಕೇಂದ್ರ ಸಚಿವ ಭಗವಂತ ಖೂಬಾ
Last Updated 19 ಮಾರ್ಚ್ 2023, 21:26 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ರೂಪಿಸಿರುವ ನೀತಿಗಳು ಮತ್ತು ಯೋಜನೆಗಳಿಂದ ಭಾರತ 2047ಕ್ಕೆ ಆರ್ಥಿಕತೆಯಲ್ಲಿ ಮೊದಲ ಸ್ಥಾನ ಪಡೆಯಲಿದೆ’ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಪ್ರತಿಪಾದಿಸಿದರು.

‘ಪ್ರಜಾವಾಣಿ–ಡೆಕ್ಕನ್‌ ಹೆರಾಲ್ಡ್‌’ ಬ್ರ್ಯಾಂಡ್‌ ಸ್ಪಾಟ್‌ ಪ್ರಸ್ತುತಿ ಭಾನುವಾರ ನಗರದಲ್ಲಿ ಆಯೋಜಿಸಿದ್ದ ‘ನವ ಕರ್ನಾಟಕ ಶೃಂಗ’ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಶದ ಸಮಗ್ರ ಅಭಿವೃದ್ಧಿಗೆ ಕೈಗೊಂಡ ಕಾರ್ಯಗಳನ್ನು ವಿವರಿಸಿದರು.

‘ಕಳೆದ ಒಂಬತ್ತು ವರ್ಷಗಳಲ್ಲಿ ಹೊಸ ಪರಿವರ್ತನೆಯ ಮೂಲಕ ಭಾರತ ಅಭಿವೃದ್ಧಿ ಪಥದಲ್ಲಿ ಸಾಗಿತು. ಡಬಲ್‌ ಎಂಜಿನ್‌ ಸರ್ಕಾರಗಳಿಂದಾಗಿ ನವ ಭಾರತಕ್ಕಾಗಿ ನವ ಕರ್ನಾಟಕ ರೂಪುಗೊಳ್ಳುತ್ತಿದೆ’ ಎಂದು ವಿಶ್ಲೇಷಿಸಿದರು.

‘ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕರ್ನಾಟಕ ಇಂದು ಪ್ರಗತಿ ಪಥದಲ್ಲಿ ಸಾಗುತ್ತಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಹೂಡಿಕೆದಾರರ ಸಮಾವೇಶದಲ್ಲಿ ₹10 ಲಕ್ಷ ಕೋಟಿ ಹೂಡಿಕೆಗೆ ಉದ್ಯಮಿಗಳು ಒಪ್ಪಂದ ಮಾಡಿಕೊಂಡಿದ್ದಾರೆ. ರಾಜ್ಯ ಸರ್ಕಾರದ ಮೇಲಿನ ವಿಶ್ವಾಸ ಮತ್ತು ಸುಲಲಿತ ವ್ಯಾಪಾರದ ವಾತಾವರಣವನ್ನು ಸೃಷ್ಟಿಸಿದ್ದರಿಂದ ಇದು ಸಾಧ್ಯವಾಯಿತು’ ಎಂದರು.

‘ರಾಜ್ಯವು ವಿದ್ಯುತ್‌ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದೆ. ಜತೆಗೆ, ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ₹25 ಲಕ್ಷ ಕೋಟಿಗೂ ಹೆಚ್ಚು ಮೊತ್ತವನ್ನು ರಸ್ತೆಗಳ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ. ಅತ್ಯುತ್ತಮ ಸಂಪರ್ಕ ಜಾಲದಿಂದ ದೇಶದ ಅಭಿವೃದ್ಧಿ ಸಾಧ್ಯ ಎನ್ನುವುದನ್ನು ಸಾಧಿಸಲಾಗಿದೆ. ಬೆಂಗಳೂರು–ಮೈಸೂರು ಹೆದ್ದಾರಿ ಅಭಿವೃದ್ಧಿಪಡಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ. 2024ರ ಒಳಗೆ ರೈಲ್ವೆ ವಿದ್ಯುದ್ದೀಕರಣದ ಕಾರ್ಯವೂ ಸಂಪೂರ್ಣವಾಗಲಿದೆ. ಈ ರೀತಿಯ ಮೂಲಸೌಕರ್ಯಗಳ ಅಭಿವೃದ್ಧಿಯಿಂದಾಗಿ ಉತ್ಪಾದನೆ ವಲಯದ ಕ್ಷೇತ್ರಗಳಲ್ಲೂ ಪ್ರಗತಿಯಾಗಲಿದೆ’ ಎಂದು ವಿವರಿಸಿದರು.

‘ಕೋವಿಡ್‌ನಿಂದ ಇಡೀ ವಿಶ್ವವೇ ಸಂಕಷ್ಟಕ್ಕೆ ಸಿಲುಕಿತು. ಅಭಿವೃದ್ಧಿಶೀಲ ರಾಷ್ಟ್ರಗಳು ಸಹ ಕೋವಿಡ್‌ ನಿಯಂತ್ರಿಸಲು ಹರಸಾಹಸ ಮಾಡಿದವು. ಇಂತಹ ಸಂಕಷ್ಟದ ಸಂದರ್ಭವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಯಶಸ್ವಿಯಾಗಿ ನಿರ್ವಹಿಸಿ 140 ಕೋಟಿ ಜನರ ಜೀವ ರಕ್ಷಿಸಿದರು. 220 ಕೋಟಿ ಡೋಸ್‌ಗಳ ಲಸಿಕೆಯನ್ನು ನಾಗರಿಕರಿಗೆ ನೀಡಲಾಯಿತು. ಭಾರತದ ಈ ಸಾಧನೆಯನ್ನು ವಿಶ್ವವೇ ಬೆರಗಾಗಿ ನೋಡಿತು. ಇದು ನವಭಾರತಕ್ಕೆ ಉತ್ತಮ ಉದಾಹರಣೆ’ ಎಂದು ಕೇಂದ್ರ ಸರ್ಕಾರದ ಕಾರ್ಯನಿರ್ವಹಣೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

‘ಸ್ವತಂತ್ರ ಭಾರತದಲ್ಲಿ ವೇಗವಾಗಿ ಅಭಿವೃದ್ಧಿ ಕಾರ್ಯಗಳು ನಡೆಯಲಿಲ್ಲ. ಅಂದಿನ ಸರ್ಕಾರಗಳ ಮನಃಸ್ಥಿತಿ, ಅಂದಿನ ಸಮಸ್ಯೆಗಳು ಮತ್ತು ಅಂದಿನ ರಾಜಕೀಯ ಪರಿಸ್ಥಿತಿಗಳು ಸಹ ಕಾರಣವಾಗಿದ್ದವು. ಆದರೆ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಸಮಗ್ರ ಅಭಿವೃದ್ಧಿಯ ಕಲ್ಪನೆಯಿಂದ ಯೋಜನೆಗಳನ್ನು ರೂಪಿಸಿತು. ಜತೆಗೆ, ನೆರೆಯ ದೇಶಗಳ ಬೆಳವಣಿಗೆಗಳನ್ನು ಸಹ ವಿಶ್ಲೇಷಿಸಿ ನಿರ್ಧಾರಗಳನ್ನು ಕೈಗೊಂಡರು’ ಎಂದರು.

‘ಪ್ರಗತಿ ಪಥದಲ್ಲಿ ಸಾಗುವ ನಿರ್ಣಯಗಳನ್ನು ಕೈಗೊಳ್ಳುವ ಎದೆಗಾರಿಕೆಯೂ ನಾಯಕರಿಗೆ ಮುಖ್ಯ. ಕೇವಲ ಚುನಾವಣೆಗಳ ಬಗ್ಗೆ ಚಿಂತಿಸುವ ರಾಜಕಾರಣಗಳಿಂದ ಅಭಿವೃದ್ಧಿ ಸಾಧ್ಯವಿಲ್ಲ. ಇದೇ ಕಾರಣಕ್ಕೆ ಕಳೆದ 75 ವರ್ಷಗಳಲ್ಲಿ 60 ವರ್ಷ ಭಾರತ ಅಭಿವೃದ್ಧಿ ಸಾಧಿಸಲಿಲ್ಲ. 1972ರಲ್ಲಿ ‘ಗರೀಬಿ ಹಟಾವೋ ಎಂದು ಅಂದಿನ ಸರ್ಕಾರ ಘೋಷಿಸಿತು. ಆದರೆ, ಈ ಯೋಜನೆ ಯಶಸ್ವಿಯಾಗಲಿಲ್ಲ. ಸರ್ಕಾರ ಕೈಗೊಳ್ಳುವ ನಿರ್ಣಯದ ಜತೆಗೆ ಆಡಳಿತ ಯಂತ್ರವು ಸಹ ಜನರ ಶ್ರೇಯೋಭಿವೃದ್ಧಿಗಾಗಿ ಕಾರ್ಯ ನಿರ್ವಹಿಸುವಂತೆ ಕ್ರಮಕೈಗೊಳ್ಳಬೇಕು. ಆಗ ಮಾತ್ರ ಯೋಜನೆಗಳು ಯಶಸ್ವಿಯಾಗಲು ಸಾಧ್ಯ’ ಎಂದು ಹೇಳಿದರು.

‘ಪಾರದರ್ಶಕ ಆಡಳಿತ, ಪ್ರಗತಿಯ ಹೆಜ್ಜೆ’

‘ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡ ಯಾವುದೇ ನಿರ್ಣಯಗಳು ಅನುಮಾನ ಮೂಡಿಸಲು ಸಾಧ್ಯವೇ ಇಲ್ಲ. ಪಾರದರ್ಶಕ ಆಡಳಿತ ನೀಡಿರುವ ಮೋದಿ ಅವರು ಎಲ್ಲ ವರ್ಗದ ಜತೆ ನೇರವಾಗಿ ಸಂವಾದ ಕೈಗೊಂಡಿದ್ದಾರೆ. ಇದರಿಂದಾಗಿಯೇ ಜನಪರ ಯೋಜನೆಗಳನ್ನು ರೂಪಿಸಲು ಸಾಧ್ಯವಾಗಿದೆ’ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.

‘ಭಾರತ ಆರ್ಥಿಕತೆಯಲ್ಲಿ 2014ರ ಮುನ್ನ 10ನೇ ಸ್ಥಾನದಲ್ಲಿತ್ತು. ಈಗ 5ನೇ ಸ್ಥಾನದಲ್ಲಿದೆ. ಆಸ್ತಿಗಳು, ಮಾನವ ಸಂಪನ್ಮೂಲ ಮತ್ತು ಹಣಕಾಸಿನ ನಿರ್ವಹಣೆಯಗಳನ್ನು ಯಶಸ್ವಿಯಾಗಿ ಕೈಗೊಂಡರೆ ಮಾತ್ರ ಅಭಿವೃದ್ಧಿ ಸಾಧ್ಯ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT