ಬೆಂಗಳೂರು: ಹಿಂದಿನ ಸರ್ಕಾರದ ಅವಧಿಯಲ್ಲಿ ನೀಡಬೇಕಿದ್ದ ಬಾಕಿ ಮೊತ್ತ ಇತ್ಯರ್ಥವಾಗದ ಕಾರಣ 2022–23ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆಯಲ್ಲಿ ರೈತರಿಂದ ಖರೀದಿಸಿದ್ದ ಭತ್ತವನ್ನು ಹಲ್ಲಿಂಗ್ ಮಾಡಲು (ಭತ್ತವನ್ನು ಅಕ್ಕಿ ಮಾಡಿಕೊಡುವ ಪ್ರಕ್ರಿಯೆ) ಅಕ್ಕಿ ಗಿರಣಿಗಳ ಮಾಲೀಕರು ನಿರಾಕರಿಸಿದ್ದು, 1.90 ಲಕ್ಷ ಟನ್ ಭತ್ತ ಗೋದಾಮುಗಳಲ್ಲೇ ಉಳಿದಿದೆ.
2019–22ನೇ ಸಾಲಿನಲ್ಲಿ ಭತ್ತ ಹಲ್ಲಿಂಗ್ ಮಾಡಿದ್ದ ಸುಮಾರು ₹23 ಕೋಟಿ ಬಾಕಿ ಇರುವ ಕಾರಣಕ್ಕೆ ಕಳೆದ ವರ್ಷ ಪಡಿತರ ಅಕ್ಕಿ ಪೂರೈಕೆಯ ಹೊಣೆ ನಿಭಾಯಿಸಲು ರಾಜ್ಯದ ಅಕ್ಕಿ ಗಿರಣಿಗಳ ಮಾಲೀಕರು ನಿರಾಕರಿಸಿದ್ದರು. ‘ಕೇಂದ್ರದ ಮಾರ್ಗಸೂಚಿ ನಿಯಮಗಳಂತೆ ಹಣ ನೀಡಲಾಗಿದೆ. ಹೆಚ್ಚುವರಿ ಹಣ ನೀಡಲು ಸಾಧ್ಯವಿಲ್ಲ’ ಎಂದು ಆಹಾರ ಇಲಾಖೆ ಗಿರಣಿಗಳ ಮಾಲೀಕರ ಸಂಘಕ್ಕೆ ವರ್ಷದ ಹಿಂದೆಯೇ ಲಿಖಿತವಾಗಿ ಉತ್ತರವನ್ನೂ ನೀಡಿತ್ತು. ನಂತರ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವೇ ನೇರವಾಗಿ ರೈತರಿಂದ ಭತ್ತ ಖರೀದಿಸಿತ್ತು. ಖರೀದಿಸಿದ ಭತ್ತ ಸಂಗ್ರಹಕ್ಕೆ ಕರ್ನಾಟಕ ರಾಜ್ಯ ಉಗ್ರಾಣ ನಿಗಮ, ಕರ್ನಾಟಕ ಸಹಕಾರ ಮಹಾಮಂಡಲದ ಸಹಕಾರ ಪಡೆಯಲಾಗಿತ್ತು.
ಈಗ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ಹೊಸ ಸರ್ಕಾರದ ಮೇಲೂ ಒತ್ತಡ ತಂತ್ರ ಅನುಸರಿಸುತ್ತಿರುವ ಗಿರಣಿಗಳ ಮಾಲೀಕರು, ಹಲ್ಲಿಂಗ್ ಮಾಡಿಕೊಡದಿರುವ ನಿರ್ಧಾರಕ್ಕೆ ಬಂದಿದ್ದಾರೆ.
ರಾಜ್ಯದ ಕುಟುಂಬಗಳಿಗೆ ಅಕ್ಕಿ ಪೂರೈಸಲು ಅಗತ್ಯವಿರುವ ಭತ್ತವನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ನೇರವಾಗಿ ಖರೀದಿಸಿ, ಹಲ್ಲಿಂಗ್ ಮಾಡಿಕೊಡಲು ಅಕ್ಕಿಗಿರಣಿಗಳಿಗೆ ಅವಕಾಶ ನೀಡಲಾಗಿತ್ತು. 2018–19ರಿಂದ ನಾಲ್ಕು ವರ್ಷ ಪಡಿತರ ವಿತರಣೆಗೆ ಅಗತ್ಯವಾದ ಅಕ್ಕಿ ಪೂರೈಕೆಯ ಕಾರ್ಯವನ್ನು ರಾಜ್ಯದ ಅಕ್ಕಿ ಗಿರಣಿಗಳು ನಿರ್ವಹಿಸಿದ್ದವು. ಪ್ರತಿ ವರ್ಷ ಸುಮಾರು 4 ಲಕ್ಷ ಟನ್ ಭತ್ತವನ್ನು ಹಲ್ಲಿಂಗ್ ಮಾಡಲಾಗುತ್ತಿತ್ತು. ರೈತರಿಂದ ಖರೀದಿಸಿದ ಪ್ರತಿ ಕ್ವಿಂಟಲ್ ಭತ್ತಕ್ಕೆ ಪರ್ಯಾಯವಾಗಿ ಗಿರಣಿಗಳು 67 ಕೆ.ಜಿ. ಅಕ್ಕಿ ಪೂರೈಸಿದ್ದವು.
‘ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ರೈತರು ನೇರವಾಗಿ ಅಕ್ಕಿಗಿರಣಿಗಳಿಗೆ ಭತ್ತ ನೀಡುತ್ತಿದ್ದರು. ನಾವು ಹಲ್ಲಿಂಗ್ ಮಾಡಿದ ನಂತರ ಸರ್ಕಾರ ನಿಗದಿ ಮಾಡಿದಂತೆ ಪ್ರತಿ ಕ್ವಿಂಟಲ್‌ಗೆ 67 ಕೆ.ಜಿ. ಅಕ್ಕಿ ಪೂರೈಸಿದ್ದೇವೆ. ಕೇಂದ್ರ ಸರ್ಕಾರದ ನಿಯಮಗಳಂತೆ ಪ್ರತಿ ಕ್ವಿಂಟಲ್ ಭತ್ತ ಹಲ್ಲಿಂಗ್ ಮಾಡಲು ₹120 ನಿಗದಿ ಮಾಡಲಾಗಿತ್ತು. 2019ರಲ್ಲಿ ರಾಜ್ಯ ಸರ್ಕಾರದ ಜತೆ ಮಾಡಿಕೊಂಡ ಒಪ್ಪಂದಂತೆ ಸಾಗಣೆ ವೆಚ್ಚ, ಸಂಗ್ರಹ ವೆಚ್ಚ ಸೇರಿ ₹42 ಹೆಚ್ಚುವರಿ ನೀಡಲು ಒಪ್ಪಂದವಾಗಿತ್ತು. ಆದರೆ, ಕೇಂದ್ರ ನಿಗದಿ ಮಾಡಿದಷ್ಟೇ ಹಣ ನೀಡಲಾಗಿದೆ. ಬಾಕಿ ಮೊತ್ತ ಇದುವರೆಗೂ ಪಾವತಿಸಿಲ್ಲ. ಬಾಕಿ ಇತ್ಯರ್ಥಕ್ಕೆ ಆಗ್ರಹಿಸಿ ಕಳೆದ ಬಾರಿ ರೈತರಿಂದ ನೇರವಾಗಿ ಭತ್ತ ಪಡೆಯಲು ನಿರಾಕರಿಸಿದ್ದೆವು. ಸರ್ಕಾರ ಖರೀದಿಸಿದ ಭತ್ತ ಗೋದಾಮುಗಳಲ್ಲೇ ಇದೆ. ಸಮಸ್ಯೆ ಬಗೆಹರಿಸದಿದ್ದರೆ ಹಲ್ಲಿಂಗ್ ಮಾಡದಿರಲು ನಿರ್ಧರಿಸಿದ್ದೇವೆ’ ಎನ್ನುತ್ತಾರೆ ಕರ್ನಾಟಕ ರಾಜ್ಯ ಅಕ್ಕಿಗಿರಣಿಗಳ ಮಾಲೀಕರ ಸಂಘದ ಅಧ್ಯಕ್ಷ ಹಾಗೂ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ.
‘ಪಡಿತರ ವ್ಯವಸ್ಥೆಗೆ ಅಗತ್ಯವಾದ ಅಕ್ಕಿಯನ್ನು ಕೇಂದ್ರ ಸರ್ಕಾರದ ಭಾರತೀಯ ಆಹಾರ ನಿಗಮದ ನಿಯಮಗಳಿಗೆ ಅನುಗುಣವಾಗಿ ನಿರ್ವಹಿಸಲಾಗುತ್ತದೆ. ಹಾಗಾಗಿ, ಕೇಂದ್ರ ನಿಗದಿಪಡಿಸಿದ ಮೊತ್ತವನ್ನಷ್ಟೇ ಪಾವತಿಸಿದ್ದೇವೆ. ನಿಯಮ ಮೀರಿ ಮಾಡಿಕೊಳ್ಳಲಾದ ಹೆಚ್ಚುವರಿ ಹಣ ಪಾವತಿಯ ಒಪ್ಪಂದ ಪಾಲಿಸಲು ಸಾಧ್ಯವಿಲ್ಲ. ಅದನ್ನು ಈಗಾಗಲೇ ಲಿಖಿತವಾಗಿ ಸ್ಪಷ್ಟಪಡಿಸಿದ್ದೇವೆ. ಕೆಲ ಗಿರಣಿಗಳ ಮಾಲೀಕರ ಮನವೊಲಿಸಲಾಗಿದೆ. ಅದೂ ಸಾಧ್ಯವಾಗದಿದ್ದರೆ ಬೇರೆ ರಾಜ್ಯಗಳಿಗೆ ಕಳುಹಿಸಿ ಹಲ್ಲಿಂಗ್ ಮಾಡಿಸಲಾಗುವುದು’ ಎನ್ನುತ್ತಾರೆ ಆಹಾರ ಇಲಾಖೆಯ ಉನ್ನತಾಧಿಕಾರಿಗಳು.
ಅಕ್ಕಿ ಗಿರಣಿಗಳಿಗೆ ಬಾಕಿ ಹಣ ನೀಡುವ ಜತೆಗೆ ಪಡಿತರ ಅಕ್ಕಿ ಪೂರೈಸುವ ಹೊಣೆಯನ್ನು ರಾಜ್ಯದ ಗಿರಣಿಗಳಿಗೆ ನೀಡಬೇಕು. ತಕ್ಷಣ ಮಾತುಕತೆಗೆ ಆಹ್ವಾನಿಸಬೇಕು.-ಪರಣ್ಣ ಮುನವಳ್ಳಿ, ಅಧ್ಯಕ್ಷ,ರಾಜ್ಯ ಅಕ್ಕಿ ಗಿರಣಿಗಳ ಮಾಲೀಕರ ಸಂಘ
ರಾಜ್ಯ ಸರ್ಕಾರ ಪಡಿತರ ಅಕ್ಕಿ ಪೂರೈಕೆಯ ಹೊಣೆಯನ್ನು ರಾಜ್ಯದ ಅಕ್ಕಿ ಗಿರಣಿಗಳಿಗೆ ನೀಡಿದರೆ ಪರೋಕ್ಷವಾಗಿ ರೈತರಿಗೆ ಅನುಕೂಲ ಮಾಡಿದಂತೆ ಆಗುತ್ತದೆ.-ಎಚ್.ಆರ್.ಬಸವರಾಜಪ್ಪ, ಅಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.