ಮಂಡ್ಯ: ‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಜಾರಿಯ ಹಿಂದೆ ಹಿಂದಿ ಭಾಷೆ ಹೇರುವ ಉದ್ದೇಶವಿದೆ, ಇದರಿಂದ ಕನ್ನಡ ಭಾಷೆಗೂ ಧಕ್ಕೆಯಾಗುತ್ತದೆ. ಹಿಂದಿ ಹೇರಿಕೆಯಿಂದ ಕನ್ನಡ ಭಾಷೆಯನ್ನೇ ಮರೆತುಬಿಡುವ ಸ್ಥಿತಿ ಬರಬಹುದು’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಶುಕ್ರವಾರ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಪ್ರತಿ ರಾಜ್ಯದಲ್ಲೂ ತನ್ನದೇ ಸಂಸ್ಕೃತಿ, ಭಾಷೆ, ಶಿಕ್ಷಣ ವ್ಯವಸ್ಥೆ ಇರುತ್ತದೆ. ಕೇಂದ್ರ ಸರ್ಕಾರ ಒಂದು ರಾಜ್ಯದ ಸಂಸ್ಕೃತಿಯನ್ನು ಇನ್ನೊಂದು ರಾಜ್ಯದ ಮೇಲೆ ಹೇರುವ ಕೆಟ್ಟ ಕೆಲಸ ಮಾಡುತ್ತಿದೆ. ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದು ಎಲ್ಲಾ ರಾಜ್ಯಗಳ ಸಂಸ್ಕೃತಿ, ಭಾಷೆ ಹಾಗೂ ಶಿಕ್ಷಣಕ್ಕೆ ಗೌರವ ನೀಡಬೇಕು’ ಎಂದರು.
‘ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಎನ್‌ಇಪಿಯನ್ನು ವಿರೋಧಿಸಿದ್ದೆವು, ಪಠ್ಯ ಪರಿಷ್ಕರಣೆ ಮಾಡುವುದಾಗಿ ತಿಳಿಸಿದ್ದೆವು. ಈ ಕಾರಣಕ್ಕಾಗಿ ನಾವಿಂದು ಅಧಿಕಾರದಲ್ಲಿ ಕುಳಿತಿದ್ದೇವೆ. ಮಕ್ಕಳ ಶಿಕ್ಷಣ ರಾಜಕೀಯ ಪಕ್ಷಗಳ ಸಿದ್ಧಾಂತದ ಮೇಲೆ ನಡೆಯಬಾರದು. ನಮ್ಮ ಸರ್ಕಾರ ಶಿಕ್ಷಣದಲ್ಲಿ ಉತ್ತಮ ವಾತಾವರಣ ರೂಪಿಸಲು ಬದ್ಧವಾಗಿದೆ’ ಎಂದರು.
ಸರ್ಕಾರಿ ಶಾಲೆಗಳ ಖಾಸಗೀಕರಣ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು ‘ಸರ್ಕಾರಿ ಶಾಲೆಗಳನ್ನು ಖಾಸಗೀಕರಣ ಮಾಡುವುದು, ಖಾಸಗಿಯವರೆಗೆ ಗುತ್ತಿಗೆ ನೀಡುವುದು ಅಸಾಧ್ಯ. ಖಾಸಗಿ ಸಹಭಾಗಿತ್ವದಲ್ಲಿ ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸಬಹುದು. ಖಾಸಗಿಯವರಿಗೆ ಗುತ್ತಿಗೆ ಕೊಡುವ ಯಾವುದೇ ಪ್ರಸ್ತಾವ ಇಲಾಖೆಯ ಮುಂದಿಲ್ಲ’ ಎಂದರು.
‘ಶಿಕ್ಷಕರ ನೇಮಕಾತಿ ವಿಚಾರ ಹೈಕೋರ್ಟ್‌ನಲ್ಲಿದ್ದು ಆ.21 ಅಥವಾ ಆ.27ರಂದು ವರದಿ ಸಲ್ಲಿಸುವಂತೆ ಸೂಚಿಸಿದೆ. ಆ.28ರಂದು ಪ್ರಕರಣ ವಿಚಾರಣೆಗೆ ಬರಲಿದೆ. ತೀರ್ಪು ಬರುವವರೆಗೂ ನೇಮಕಾತಿ ಪತ್ರ ನೀಡದಂತೆ ಕೋರ್ಟ್ ಸೂಚಿಸಿದೆ. ತ್ವರಿತಗತಿಯಲ್ಲಿ 13,500 ಶಿಕ್ಷಕರ ನೇಮಕಾತಿಗೆ ಕ್ರಮ ವಹಿಸಲಾಗುವುದು’ ಎಂದರು.
‘ಹಿಂದೆ 8ನೇ ತರಗತಿವರೆಗೆ ಮಾತ್ರ ವಾರಕ್ಕೊಮ್ಮೆ ಮೊಟ್ಟೆ ವಿತರಣೆ ಮಾಡಲಾಗುತ್ತಿತ್ತು. ಈಗ ನಾವು 1–10ನೇ ತರಗತಿವರೆಗೆ ವಾರಕ್ಕೆ ಎರಡು ದಿನ ಮೊಟ್ಟೆ ನೀಡಲು ನಿರ್ಧರಿಸಿದ್ದೇವೆ. ಗ್ಯಾರಂಟಿ ಯೋಜನೆಗಳ ನಡುವೆಯೂ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಮೊಟ್ಟೆ ವಿತರಣೆ ಮಾಡಲು ನಿರ್ಧರಿಸಿದ್ದೇವೆ’ ಎಂದರು.
ಆಪರೇಷನ್ ಹಸ್ತ ಕುರಿತ ಪ್ರಶ್ನೆಗೆ ‘ಅದನ್ನು ಮಾಧ್ಯಮದವರ ಮುಂದೆ ಹೇಳಲು ಸಾಧ್ಯವೇ? ಯೋಜನೆ ಜಾರಿಯಾದ ನಂತರ ನಿಮಗೇ ತಿಳಿಯಲಿದೆ’ ಎಂದರು.
‘ಕಾವೇರಿ ನದಿ ನೀರಿನ ವಿಷಯದಲ್ಲಿ ಕೇಂದ್ರ ಸರ್ಕಾರದ ಬಳಿ ಬೀಗದ ಕೀ ಇದೆ. ರಾಜ್ಯದಿಂದ ಗೆದ್ದು ಹೋಗಿರುವ 26 ಮಂದಿ ಬಿಜೆಪಿ ಸಂಸದರು ಏನು ಮಾಡುತ್ತಿದ್ದಾರೆ, ತಮಿಳುನಾಡಿಗೆ ನೀರು ಹರಿದು ಹೋಗುತ್ತಿದ್ದರೂ ಅವರು ಏಕೆ ಧ್ವನಿ ಎತ್ತುತ್ತಿಲ್ಲ’ ಎಂದು ಮಧು ಬಂಗಾರಪ್ಪ ಪ್ರಶ್ನಿಸಿದರು.
‘ಜನಪ್ರತಿನಿಧಿಗಳು ಪಕ್ಷಕ್ಕೆ ಸೇರಿದವರಲ್ಲ, ಸರ್ಕಾರಕ್ಕೆ ಸೇರಿದವರು. ನಾನು ಸಂಸದರಿಗೆ ಮನವಿ ಮಾಡುತ್ತೇನೆ, ಅವರು ಕೂಡಲೇ ಕಾವೇರಿ ವಿಚಾರದಲ್ಲಿ ಧ್ವನಿ ಎತ್ತಬೇಕು. ಸಂಸತ್ತಿನಲ್ಲಿ ಹಾಗೂ ಪ್ರಧಾನಿಯ ಮುಂದೆ ಕಾವೇರಿ ವಿಚಾರವನ್ನು ಪ್ರಸ್ತಾಪ ಮಾಡಬೇಕು’ ಎಂದು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.