ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕರ್ನಾಟಕ ಸರ್ಕಾರ ಅರಣ್ಯ ಭೂಮಿ ಕೊಟ್ಟರೆ ಶಿರಾಡಿಯಲ್ಲಿ ಸುರಂಗ: ನಿತಿನ್‌ ಗಡ್ಕರಿ

Published 8 ಆಗಸ್ಟ್ 2024, 15:03 IST
Last Updated 8 ಆಗಸ್ಟ್ 2024, 15:03 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕ ಸರ್ಕಾರವು ಅಲ್ಪ ಪ್ರಮಾಣದ ಅರಣ್ಯ ಭೂಮಿ ನೀಡಲು ಸಿದ್ಧರಿದ್ದರೆ, ಶಿರಾಡಿ ಘಾಟ್‌ ರಸ್ತೆಯನ್ನು ಅಭಿವೃದ್ಧಿಪಡಿಸಲು ಕೆಲವು ಸಾವಿರ ಕೋಟಿಗಳನ್ನು ಹೂಡಿಕೆ ಮಾಡಲು ತಮ್ಮ ಇಲಾಖೆ ಪರಿಗಣಿಸಲಿದೆ ಎಂದು ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಭರವಸೆ ನೀಡಿದರು. 

ರಾಜ್ಯಸಭಾ ಸದಸ್ಯ ಎಚ್‌.ಡಿ.ದೇವೇಗೌಡ ಅವರು ಗಡ್ಕರಿ ಅವರನ್ನು ಗುರುವಾರ ಭೇಟಿ ಮಾಡಿ ರಾಜ್ಯದ ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚಿಸಿದರು. ಈ ವೇಳೆ ಗಡ್ಕರಿ, ‘ಅಭಿವೃದ್ಧಿ ಯೋಜನೆಯು ಸುರಂಗ ತಂತ್ರಜ್ಞಾನ ಬಳಸುವುದನ್ನು ಒಳಗೊಂಡಿರುತ್ತದೆ. ರಾಜ್ಯ ಸರ್ಕಾರ ಇದನ್ನು ಮುಂದಕ್ಕೆ ತೆಗೆದುಕೊಳ್ಳುತ್ತದೆ ಎಂಬ ವಿಶ್ವಾಸ ಇದೆ’ ಎಂದರು. ಈ ಮಾಹಿತಿಯನ್ನು ದೇವೇಗೌಡರು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಹಂಚಿಕೊಂಡಿದ್ದಾರೆ. 

‘ಮಂಗಳೂರು– ಬೆಂಗಳೂರು ಸಂಪರ್ಕಿಸುವ ಶಿರಾಡಿ ಘಾಟ್‌ನಲ್ಲಿ ಸುರಂಗ ಮಾರ್ಗ ನಿರ್ಮಾಣಕ್ಕೆ ಭಾರಿ ಮೊತ್ತ ಬೇಕಾಗುತ್ತದೆ. ಜತೆಗೆ, ಅದು ಕಾರ್ಯಸಾಧು ಅಲ್ಲ’ ಎಂದು ಗಡ್ಕರಿ ಅವರು 2022ರ ಡಿಸೆಂಬರ್‌ನಲ್ಲಿ ಹೇಳಿದ್ದರು. 

ಲೋಕಸಭೆಯಲ್ಲಿ ದಕ್ಷಿಣ ಕನ್ನಡದ ಆಗಿನ ಸಂಸದ ನಳಿನ್‌ ಕುಮಾರ್ ಕಟೀಲ್‌ ಅವರ ಪ್ರಶ್ನೆಗೆ ಸಚಿವರು ಈ ಉತ್ತರ ನೀಡಿದ್ದರು.  

‘ಶಿರಾಡಿ ಘಾಟ್‌ನಲ್ಲಿ ವಾಹನಗಳ ದಟ್ಟಣೆ ಜಾಸ್ತಿ ಇರುವುದು ಗಮನಕ್ಕೆ ಬಂದಿದೆ. ಹೀಗಾಗಿ, ದ್ವಿಪಥವನ್ನು ಚತುಷ್ಪಥವನ್ನಾಗಿ ಪರಿವರ್ತಿಸಲಾಗುತ್ತದೆ. ಇದಕ್ಕೆ ಸಮಗ್ರ ಯೋಜನಾ ವರದಿ ಸಿದ್ಧಪಡಿಸಲು ಸಮಾಲೋಚಕರನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೇಮಿಸಿದ್ದು, ವರದಿ ಸಿದ್ಧಪಡಿಸಲಾಗುತ್ತಿದೆ’ ಎಂದು ಹೇಳಿದ್ದರು. 

ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟ್‌ ರಸ್ತೆಯಲ್ಲಿ ಆಗಾಗ ಭೂಕುಸಿತ ಸಂಭವಿಸುತ್ತಿದೆ. ಶಿರಾಡಿ ಘಾಟ್‌ನಲ್ಲಿ ಸುರಂಗ ನಿರ್ಮಿಸಿದರೆ ಇನ್ನಷ್ಟು ಅನಾಹುತ ಉಂಟಾಗಲಿದೆ ಎಂದು ಪರಿಸರವಾದಿಗಳು ಎಚ್ಚರಿಸಿದ್ದಾರೆ. ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT