ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Bengaluru Mysuru Expressway: ಮೊದಲ ದಿನ ₹68 ಸಾವಿರ ದಂಡ ವಸೂಲಿ

ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಬೈಕ್‌, ಆಟೊ ಸಂಚಾರದ ಮೇಲೆ ಪೊಲೀಸರ ಕಣ್ಗಾವಲು
Published : 2 ಆಗಸ್ಟ್ 2023, 0:07 IST
Last Updated : 2 ಆಗಸ್ಟ್ 2023, 0:07 IST
ಫಾಲೋ ಮಾಡಿ
Comments

ರಾಮನಗರ: ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ (ರಾಷ್ಟ್ರೀಯ ಹೆದ್ದಾರಿ 275) ಬೈಕ್‌, ಆಟೊ, ಟ್ರ್ಯಾಕ್ಟರ್‌ ಹಾಗೂ ಕೃಷಿ ಬಳಕೆ ವಾಹನ ಸಂಚಾರ ನಿರ್ಬಂಧ ಮಂಗಳವಾರದಿಂದ ಕಟ್ಟುನಿಟ್ಟಾಗಿ ಜಾರಿಯಾಗಿದೆ. ನಿಯಮ ಮೀರಿ ಹೆದ್ದಾರಿ ಪ್ರವೇಶಿಸಿದವರಿಗೆ ಪೊಲೀಸರು ₹500 ದಂಡ ವಿಧಿಸಿದರು. ಮೊದಲ ದಿನ ಒಟ್ಟು ₹68,500 ದಂಡ ವಸೂಲಿ ಮಾಡಿದರು

ಬೆಳಿಗ್ಗೆ 8 ಗಂಟೆಯಿಂದಲೇ ಹೆದ್ದಾರಿಯ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಬೀಡು ಬಿಟ್ಟಿದ್ದ ಪೊಲೀಸರು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ ನಿರ್ಬಂಧಿತ ವಾಹನಗಳು ಎಕ್ಸ್‌ಪ್ರೆಸ್ ವೇ ಪ್ರವೇಶಿಸದಂತೆ ನೋಡಿಕೊಂಡರು. ಸವಾರರಿಗೆ ಮಾಹಿತಿ ನೀಡಲು ಹೆದ್ದಾರಿಯ ಅಲ್ಲಲ್ಲಿ ಪ್ರವೇಶ ನಿರ್ಬಂಧ ಪೋಸ್ಟರ್‌ ಹಾಕಲಾಗಿತ್ತು.

‘ಪ್ರವೇಶ ನಿರ್ಬಂಧ ಕುರಿತು ಕೆಲವರಿಗೆ ಮಾಹಿತಿ ಕೊರತೆ ಇದೆ. ಹಾಗಾಗಿ, ಮೊದಲ ದಿನ ಹೆದ್ದಾರಿ ಪ್ರವೇಶಿಸಲು ಮುಂದಾದವರಿಗೆ ಪ್ರವೇಶ ಸ್ಥಳದ ಬಳಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಸಿಬ್ಬಂದಿ ಎಚ್ಚರಿಕೆ ನೀಡಿ‌, ಸರ್ವೀಸ್ ರಸ್ತೆಯಲ್ಲಿ ಕಳಿಸಿದರು. ಅದನ್ನು ಮೀರಿಯೂ ಹೆದ್ದಾರಿ ಪ್ರವೇಶಿಸಿದವರಿಗೆ ನಿರ್ಗಮನ ಸ್ಥಳಗಳಲ್ಲಿ ₹500 ದಂಡ ಹಾಕಲಾಯಿತು’ ಎಂದು ಪೊಲೀಸರು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಹೆಚ್ಚುವರಿ ಎಸ್‌ಪಿ ಟಿ.ವಿ. ಸುರೇಶ್, ಡಿವೈಎಸ್‌ಪಿ ದಿನಕರ ಶೆಟ್ಟಿ, ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ರಾಹುಲ್ ಗುಪ್ತಾ ಅವರು ಹೆದ್ದಾರಿಗೆ ಭೇಟಿ ನೀಡಿ, ಮೊದಲ ದಿನ ವಾಹನ ಸವಾರರ ಪ್ರತಿಕ್ರಿಯೆ ಗಮನಿಸಿದರು.

ನಿಯಮ ಪಾಲಿಸಬೇಕು: ‘ಅಪಘಾತ ತಡೆಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬೈಕ್, ಆಟೊ ಹಾಗೂ ಟ್ರಾಕ್ಟರ್‌ಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿದೆ. ನಿಯಮವನ್ನು ಸಂಬಂಧಪಟ್ಟ ಸವಾರರು ಹಾಗೂ ಚಾಲಕರು ಕಡ್ಡಾಯವಾಗಿ ಪಾಲಿಸಬೇಕು. ನಿಯಮ ಉಲ್ಲಂಘಿಸಿದರೆ, ಪೊಲೀಸರು ಪ್ರಕರಣ ದಾಖಲಿಸಿ ದಂಡ ವಿಧಿಸಲಿದ್ದಾರೆ’ ಎಂದು ಕಾರ್ತಿಕ್ ರೆಡ್ಡಿ ಹೇಳಿದರು.

ಎಕ್ಸ್‌ಪ್ರೆಸ್‌ ವೇನಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಳವಾದ ಬೆನ್ನಲ್ಲೇ, ಪ್ರಾಧಿಕಾರವು ದ್ವಿಚಕ್ರ, ತ್ರಿಚಕ್ರ ಹಾಗೂ ಕೃಷಿ ಬಳಕೆಯ ವಾಹನಗಳಿಗೆ ನಿರ್ಬಂಧ ಹೇರುವ ತೀರ್ಮಾನ ಕೈಗೊಂಡಿತ್ತು. ಆಗಸ್ಟ್ 1ರಿಂದ ನಿಯಮ ಜಾರಿಗೆ ಬರುವಂತೆ ಸರ್ಕಾರ ಇದೇ ಜುಲೈ 12ರಂದು ಅಧಿಸೂಚನೆ ಹೊರಡಿಸಿತ್ತು.

ರಾಮನಗರ ಹೊರವಲಯದಲ್ಲಿರುವ ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಡಿವೈಎಸ್ಪಿ ದಿನಕರ ಶೆಟ್ಟಿ ಹೆಚ್ಚುವರಿ ಎಸ್ಪಿ ಟಿ.ವಿ. ಸುರೇಶ್ ಸಂಚಾರ ಠಾಣೆ ಸಬ್ ಇನ್‌ಸ್ಪೆಕ್ಟರ್ ಸರಸ್ವತಿ ಇದ್ದಾರೆ
– ಪ್ರಜಾವಾಣಿ ಚಿತ್ರ
ರಾಮನಗರ ಹೊರವಲಯದಲ್ಲಿರುವ ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಡಿವೈಎಸ್ಪಿ ದಿನಕರ ಶೆಟ್ಟಿ ಹೆಚ್ಚುವರಿ ಎಸ್ಪಿ ಟಿ.ವಿ. ಸುರೇಶ್ ಸಂಚಾರ ಠಾಣೆ ಸಬ್ ಇನ್‌ಸ್ಪೆಕ್ಟರ್ ಸರಸ್ವತಿ ಇದ್ದಾರೆ – ಪ್ರಜಾವಾಣಿ ಚಿತ್ರ

ಬೆಳಿಗ್ಗೆಯಿಂದಲೇ ಪೊಲೀಸರ ಕಾರ್ಯಾಚರಣೆ ನಿರ್ಬಂಧ ನಿಯಮ ಮೀರಿದವರಿಗೆ ₹500 ದಂಡ ನಿಯಮ ಪಾಲಿಸಲು ಪೊಲೀಸರ ಸೂಚನೆ

ಮೊದಲ ದಿನ ನಿರ್ಬಂಧ ಮೀರಿ ಎಕ್ಸ್‌ಪ್ರೆಸ್‌ ವೇಯಲ್ಲಿ ಸಂಚರಿಸಿದ 137 ಸವಾರರ ವಿರುದ್ಧ ಪ್ರಕರಣ ದಾಖಲಿಸಿ ₹68500 ದಂಡ ವಸೂಲಿ ಮಾಡಲಾಗಿದೆ

– ಕಾರ್ತಿಕ್ ರೆಡ್ಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮನಗರ

ಶಪಿಸುತ್ತಲೇ ದಂಡ ತೆತ್ತ ಬೈಕ್‌ ಸವಾರರು

ಹೆದ್ದಾರಿ ಪ್ರವೇಶಿಸಿ ಬೆಂಗಳೂರು ಕಡೆಯಿಂದ ಬಂದ ಬೈಕ್ ಸವಾರರಿಬ್ಬರನ್ನು ಸಂಗಬಸವನ ದೊಡ್ಡಿ ಬಳಿ ಇರುವ ಹೆದ್ದಾರಿ ನಿರ್ಗಮನ ಸ್ಥಳದಲ್ಲಿ ಪೊಲೀಸರು ತಡೆದರು. ‘ನಿಯಮ ಮೀರಿ ಪ್ರವೇಶಿಸಿದ್ದಕ್ಕಾಗಿ ದಂಡ ಪಾವತಿಸಿ’ ಎಂದರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸವಾರರು ‘ನಾವೂ ರಸ್ತೆ ತೆರಿಗೆ ಪಾವತಿಸುತ್ತೇವೆ. ನಮಗೂ ಬೇಗನೇ ಹೋಗಬೇಕಿರುತ್ತದೆ. ಹೀಗಿರುವಾಗ ನಿರ್ಬಂಧ ಹೇರುವುದು ಎಷ್ಟು ಸರಿ?’ ಎಂದು ವಾಗ್ವಾದ ನಡೆಸಿದರು. ಅದಕ್ಕೆ ಪೊಲೀಸರು ‘ಎಕ್ಸ್‌ಪ್ರೆಸ್‌ ವೇನಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ ಎಲ್ಲಿಯೂ ಪ್ರವೇಶವಿಲ್ಲ. ಈ ಕುರಿತು ಅಧಿಸೂಚನೆ ಹೊರಡಿಸಲಾಗಿದೆ. ಹೆದ್ದಾರಿಯಲ್ಲಿ ಈ ಬಗ್ಗೆ ಪೋಸ್ಟರ್ ಮತ್ತು ಫ್ಲೆಕ್ಸ್ ಕೂಡ ಹಾಕಲಾಗಿದೆ. ಅದನ್ನು ಗಮನಿಸದೆ ನಿಯಮ ಉಲ್ಲಂಘಿಸಿದ್ದೀರಿ. ಹಾಗಾಗಿ ದಂಡ ಪಾವತಿಸಲೇಬೇಕು’ ಎಂದರು. ನಿರ್ಬಂಧಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಲೇ ₹500 ದಂಡ ಪಾವತಿಸಿದ ಸವಾರರು ನಂತರ ಸರ್ವಿಸ್ ರಸ್ತೆಯಲ್ಲಿ ಮೈಸೂರು ಕಡೆಗೆ ತೆರಳಿದರು.  

ಸರ್ವೀಸ್ ರಸ್ತೆಯಲ್ಲಿ ದಟ್ಟಣೆ

ಎಕ್ಸ್‌ಪ್ರೆಸ್ ವೇನಲ್ಲಿ ಸಂಚಾರ ನಿರ್ಬಂಧದಿಂದಾಗಿ ಸರ್ವೀಸ್ ರಸ್ತೆಯ ಕೆಲವೆಡೆ ದಟ್ಟಣೆ ಕಂಡುಬಂತು. ಹೆದ್ದಾರಿ ಆರಂಭವಾಗುವ ವಿಶ್ವ ಒಕ್ಕಲಿಗರ ಸಂಸ್ಥಾನ ಮಠದಿಂದಿಡಿದು ನಗರ ಮತ್ತು ಪಟ್ಟಣ ಪ್ರದೇಶಗಳ ವ್ಯಾಪ್ತಿಯಲ್ಲಿ ಬೆಳಿಗ್ಗೆ ಮತ್ತು ಸಂಜೆ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು ಹೆಚ್ಚಾಗಿ ಸಂಚರಿಸಿದವು. ‘ಆಟೊದವರು ಸಹ ಎಕ್ಸ್‌ಪ್ರೆಸ್‌ ವೇ ಪ್ರವೇಶಿಸಬಾರದು ಎಂದು ಪ್ರಾಧಿಕಾರದವರ ನಿರ್ಬಂಧ ಹೇರಿರುವುದು ಸರಿಯಲ್ಲ. ಎಲ್ಲರಿಗೂ ಮುಕ್ತ ಪ್ರವೇಶ ನೀಡಬೇಕು. ಸಂಚಾರ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸಬೇಕು. ಅದು ಬಿಟ್ಟು ರಸ್ತೆಗೆ ಬರಬಾರದು ಎಂದು ಹೇಳುವುದು ಸರಿಯಲ್ಲ’ ಎಂದು ರಾಮನಗರದ ಆಟೊ ಚಾಲಕ ಚಂದ್ರು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT