ಬೆಂಗಳೂರು: ಶಿಶುಕೇಂದ್ರಿತ ಯೋಜನೆಯಡಿ ನಡೆಯುತ್ತಿರುವ ವಿಶೇಷ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಇನ್ನು ಮುಂದೆ ದಸರಾ ಹಾಗೂ ಬೇಸಿಗೆ ರಜೆಗಳ ಸೌಲಭ್ಯದಿಂದ ವಂಚಿತರಾಗಲಿದ್ದಾರೆ.
ಶಾಲಾ ಶಿಕ್ಷಣ ಇಲಾಖೆಯ ಇತರೆ ಶಾಲೆಗಳಂತೆ ರಾಜ್ಯದಲ್ಲಿನ ಸರ್ಕಾರಿ, ಅನುದಾನಿತ ಹಾಗೂ ಶಿಶುಕೇಂದ್ರಿತ ಯೋಜನೆಯಡಿ ಸ್ವಯಂಸೇವಾ ಸಂಸ್ಥೆಗಳ ಸಹಯೋಗದಲ್ಲಿ ನಡೆಯುತ್ತಿರುವ ಬುದ್ಧಿಮಾಂದ್ಯ, ದೃಷ್ಟಿದೋಷ, ಶ್ರವಣದೋಷವಿರುವ ಮಕ್ಕಳ ವಿಶೇಷ ಶಾಲೆಗಳಿಗೂ ದಸರಾ ಹಾಗೂ ಬೇಸಿಗೆ ರಜೆಗಳನ್ನು ನೀಡಲಾಗುತ್ತಿತ್ತು. ಈ ಸೌಲಭ್ಯವನ್ನು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಅನ್ವಯವಾಗುವಂತೆ ರದ್ದು ಮಾಡಿ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯ ಹೊರಡಿಸಿರುವ ಸುತ್ತೋಲೆಗೆ ಶಿಕ್ಷಕರ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.
2010ಕ್ಕೂ ಮೊದಲು ರಾಜ್ಯದಲ್ಲಿ ಸರ್ಕಾರಿ ಹಾಗೂ ಅನುದಾನಿತ 20 ವಿಶೇಷ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದವು. ರಾಜ್ಯ ಸರ್ಕಾರ 2010ರಲ್ಲಿ ಶಿಶುಕೇಂದ್ರಿತ ಯೋಜನೆಯನ್ನು ಜಾರಿಗೊಳಿಸಿತು. ಬಾಲ್ಯದಿಂದಲೇ ದೈಹಿಕ ಹಾಗೂ ಮಾನಸಿಕ ನ್ಯೂನತೆಗೆ ಒಳಗಾಗಿರುವ ಮಕ್ಕಳಿಗೆ ವಿಶೇಷ ಶಿಕ್ಷಣ ಕಲ್ಪಿಸಲು ಖಾಸಗಿ ಸಹಭಾಗಿತ್ವದಲ್ಲಿ ಹೊಸದಾಗಿ 144 ಶಾಲೆಗಳನ್ನು ಈ ಯೋಜನೆಯಡಿ ಆರಂಭಿಸಲಾಗಿತ್ತು.
ವಿಶೇಷ ಶಾಲೆಗಳಿಗೆ ನೀಡುವ ಅನುದಾನ, ನಿರ್ವಹಣೆ, ಉಸ್ತುವಾರಿಯ ಹೊಣೆಗಾರಿಕೆ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗೆ ಸೇರಿದೆ. ಪಠ್ಯಕ್ರಮ, ಪರೀಕ್ಷೆ, ಶೈಕ್ಷಣಿಕ ಅವಧಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವೇಳಾಪಟ್ಟಿಯಂತೆ ನಡೆಯುತ್ತಿದ್ದವು. ಶಾಲಾ ಶಿಕ್ಷಣ ಇಲಾಖೆಯ ಇತರೆ ಶಾಲೆಗಳ ವೇಳಾಪಟ್ಟಿಯಂತೆ ರಜೆಗಳನ್ನು ನೀಡಲಾಗುತ್ತಿತ್ತು.
‘ಸರ್ಕಾರಿ ಹಾಗೂ ಸ್ವಯಂಸೇವಾ ಸಂಸ್ಥೆಗಳ ಮೂಲಕ ನಡೆಸುತ್ತಿರುವ ವಿಶೇಷ ಶಾಲೆಗಳು ಶಾಲಾ ಶಿಕ್ಷಣ ಇಲಾಖೆಯ ಪಠ್ಯಕ್ರಮವನ್ನು ಅನುಸರಿಸಿದರೂ, 2010ರಲ್ಲಿ ಸರ್ಕಾರ ಹೊರಡಿಸಿದ್ದ ಆದೇಶದ ಅನ್ವಯ ದಸರಾ ಹಾಗೂ ಬೇಸಿಗೆ ರಜೆಯನ್ನು ನಿಗದಿ ಮಾಡಲು ಅವಕಾಶವಿಲ್ಲ. ಹಾಗಾಗಿ, ವರ್ಷದ 365 ದಿನಗಳೂ ಶಾಲೆಗಳು ಕಾರ್ಯನಿರ್ವಹಿಸಬೇಕು’ ಎಂದು ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯ ಹೇಳಿದೆ.
10 ತಿಂಗಳಿಗಷ್ಟೇ ಅನುದಾನ: ರಜೆಗಳನ್ನು ರದ್ದು ಮಾಡಿ ಸುತ್ತೋಲೆ ಹೊರಡಿಸಲಾಗಿದ್ದರೂ, ಶಿಶುಕೇಂದ್ರಿತ ಯೋಜನೆಯಡಿ ನಡೆಯುತ್ತಿರುವ ವಿಶೇಷ ಶಾಲೆಗಳಿಗೆ ಸರ್ಕಾರ 10 ತಿಂಗಳಿಗಷ್ಟೇ ಅನುದಾನ ನೀಡುತ್ತಿದೆ. ಶ್ರವಣ ಹಾಗೂ ದೃಷ್ಟಿದೋಷವಿರುವ ಪ್ರತಿ ಮಗುವಿಗೆ ಮಾಸಿಕ ₹ 7,800 ಹಾಗೂ ಬುದ್ಧಿಮಾಂದ್ಯ ಮಗುವಿಗೆ ₹ 11 ಸಾವಿರ ನಿಗದಿ ಮಾಡಲಾಗಿದೆ. ಈ ಹಣದಲ್ಲಿ ಮಕ್ಕಳ ವಸತಿ, ಸಮವಸ್ತ್ರ, ಪಠ್ಯಪುಸ್ತಕ, ಊಟ, ವೈದ್ಯಕೀಯ ಖರ್ಚು ಹಾಗೂ ವಿಶೇಷ ಶಿಕ್ಷಕರ ವೇತನವನ್ನೂ ಭರಿಸಬೇಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.