‘ಮನುಷ್ಯನಿಗೆ ಅನ್ನವೂ ಬೇಕು, ಗುಲಾಬಿಯೂ ಬೇಕು’ ಎಂದಿದ್ದಾರೆ ಕಾರ್ಮಿಕ ಹಕ್ಕು ಹೋರಾಟಗಾರರಾದ ಹೆಲೆನ್ ಟಾಡ್. ಆದರೆ, ಅಸಂಘಟಿತ ಕಾರ್ಮಿಕರ ಬದುಕು ಕಡುಕಷ್ಟದ್ದು. ಹೊಟ್ಟೆಗೆ ಅನ್ನ ದಕ್ಕಿಸಿಕೊಳ್ಳಲು ಜೀವಮಾನವಿಡೀ ತಮ್ಮೆಲ್ಲ ಶ್ರಮವನ್ನು ಪಣಕ್ಕೊಡ್ಡಿ ದುಡಿಯಬೇಕಾದ ಸ್ಥಿತಿಯಲ್ಲಿ ಕಾರ್ಮಿಕರಿದ್ದಾರೆ.

ಬಹಳ ಕಾಲದಿಂದಲೂ ಕಾಣದಿದ್ದಂತಹ ಕಾರ್ಮಿಕ ಮುಷ್ಕರವೊಂದು ಇತ್ತೀಚೆಗೆ ನೋಯ್ಡಾದಲ್ಲಿ ಸ್ಫೋಟಗೊಂಡಿತು. ಅದು ಉತ್ತರ ಪ್ರದೇಶ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳ ಮುಂದೆ ಕೆಲವೊಂದು ಅಹಿತಕರವಾದ ಪ್ರಶ್ನೆಗಳನ್ನು ಇಟ್ಟಿದೆ. ದಿನದಿಂದ ದಿನಕ್ಕೆ ಕುಸಿಯುತ್ತಿರುವ ಜೀವನಮಟ್ಟದಿಂದ ನೊಂದ ಅಸಹಾಯಕ ಕಾರ್ಮಿಕರ ಪ್ರತಿಭಟನೆ ಅದು. ನಮ್ಮ ಧ್ವನಿಯನ್ನು ಸೂಕ್ತ ಕಾಲದಲ್ಲಿ ಕೇಳಿಸಿಕೊಳ್ಳದಿದ್ದರೆ ಏನಾಗುತ್ತದೆ ನೋಡಿ ಎಂದು ನೊಂದವರು ಅಭಿವ್ಯಕ್ತಿಸಿದ ಸಿಟ್ಟು ಅದು. ಹರಿಯಾಣ ರಾಜ್ಯವು 11 ವರ್ಷಗಳಿಂದ, ಉತ್ತರ ಪ್ರದೇಶವು 14 ವರ್ಷಗಳಿಂದ ಅಸಂಘಟಿತ ಕಾರ್ಮಿಕರ ಕನಿಷ್ಠ ವೇತನವನ್ನು ಹೆಚ್ಚಿಸದಿರುವುದರಿಂದ ದುಡಿಯುವ ವರ್ಗವು ರೊಚ್ಚಿಗೆದ್ದಿದೆ.

ಇದರಲ್ಲಿ ಬೇರೆ ರಾಜ್ಯಗಳಿಗೆ ಸಹ ಪಾಠವಿದೆ. ಕೋವಿಡ್ ನಂತರದ ದಿನಗಳಲ್ಲಿ ಬಡವರು ದಿವಾಳಿಯಾದರೆ, ದೊಡ್ಡ ಉದ್ದಿಮೆದಾರರು ಮಾತ್ರ ಬೆಳೆಯುತ್ತಲೇ ಇದ್ದಾರೆ. ಅವರ ಅಭಿವೃದ್ಧಿಯ ಮಾದರಿಯಲ್ಲಿ ಬಡವರ ಧ್ವನಿಗೆ ಬೆಲೆಯಿಲ್ಲ. ‘ಬರಿದೋ ಬರಿದು, ತೆರವೋ ತೆರವು ಬಡವರ ಬಗ್ಗರ ತುತ್ತಿನ ಚೀಲ’ ಎಂಬ ಪರಿಸ್ಥಿತಿಗೆ ಜನರು ತಳ್ಳಲ್ಪಟ್ಟಿದ್ದಾರೆ.

ಸಿದ್ದರಾಮಯ್ಯನವರ ಕನಸು: ಅಧಿಕಾರ ಬಿಡುವ ಮುನ್ನ ತಮ್ಮ ಕಾಲದಲ್ಲಿ ಆರಂಭವಾದ ಮೂರು ಉಪಕ್ರಮಗಳನ್ನು ಪೂರ್ಣ ಮಾಡಬೇಕು ಎಂಬ ಇರಾದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇತ್ತಂತೆ. ಅವುಗಳೆಂದರೆ, ಒಳಮೀಸಲಾತಿ, ಜಾತಿ ಗಣತಿ ಮತ್ತು ಕಾರ್ಮಿಕರಿಗೆ ಕನಿಷ್ಠ ವೇತನವನ್ನು ನಿಗದಿಮಾಡುವುದು. ಸಾಮಾಜಿಕ ನ್ಯಾಯದ ನಿಷ್ಠಾವಂತ ಪ್ರತಿಪಾದಕರೆಂಬ ಛಾಪನ್ನು ನಿರ್ಗಮನದ ಸಮಯದಲ್ಲಿಯೂ ಒತ್ತಿಹೋಗುವ ಬಯಕೆ ಅವರದಾಗಿತ್ತು. ಮೊದಲಿನ ಎರಡು ಅಂಶಗಳು ಬಹಳಷ್ಟು ಸಾರ್ವಜನಿಕ ಚರ್ಚೆಗೆ, ವಿವಾದಗಳಿಗೆ ಕಾರಣವಾದವು. ಆದರೆ, ಯಾವುದೇ ಮತಬ್ಯಾಂಕ್ ಅಲ್ಲದ ದುಡಿಯುವ ಜನರ ಅಳಲು ಮತ್ತು ಅದರ ಕುರಿತು ಸರ್ಕಾರ ತೆಗೆದುಕೊಂಡ ತೀರ್ಮಾನ ಮಾತ್ರ ಮಾಧ್ಯಮಗಳಲ್ಲಿ ಚರ್ಚೆಯಾಗಲಿಲ್ಲ. ಅದು ಬ್ರೇಕಿಂಗ್ ನ್ಯೂಸ್ ಆಗುವಂತಹ ರೋಚಕ ಸುದ್ದಿ ಅಲ್ಲವಲ್ಲ.

ಅಸಂಘಟಿತ ಕಾರ್ಮಿಕರನ್ನು ಅವರ ಕೌಶಲ ಮತ್ತು ಅವರು ವಾಸಿಸುವ ಪ್ರದೇಶಗಳಿಗೆ ಅನುಗುಣವಾಗಿ ವಿಂಗಡಿಸಿ ಅವರಿಗೆ ವಿಭಿನ್ನ ರೀತಿಯ ಕನಿಷ್ಠ ವೇತನ ನಿಗದಿಪಡಿಸಿ ಕರ್ನಾಟಕ ಸರ್ಕಾರವು ಮೇ 22ರಂದು ಅಧಿಸೂಚನೆ ಹೊರಡಿಸಿದೆ. ಅದರ ಪ್ರಕಾರ ಕಾರ್ಮಿಕರಿಗೆ ಅವರವರ ಶ್ರೇಣಿಗೆ ಅನುಗುಣವಾಗಿ ₹20 ಸಾವಿರದಿಂದ ₹32 ಸಾವಿರದವರೆಗೂ ಕನಿಷ್ಠ ಮಾಸಿಕ ಆದಾಯ ದೊರಕಲಿದೆ.

ನಿಜಕ್ಕೂ ಈ ಕನಿಷ್ಠ ವೇತನ ಕುರಿತಾದ ಸರ್ಕಾರದ ತೀರ್ಮಾನಕ್ಕೆ ದೂರಗಾಮಿ ಪರಿಣಾಮಗಳಿವೆ. ಅದು ರಾಜ್ಯದ ಆರ್ಥಿಕತೆಯ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರಲಿದೆ. ಕಾರ್ಮಿಕರಿಗೆ ಒಳ್ಳೆಯದನ್ನು ಮಾಡುತ್ತದೆ ಎಂಬ ಪ್ರಶ್ನೆಯನ್ನು ಬದಿಗಿಟ್ಟರೂ ಅದು ಒಟ್ಟಾರೆ ಸಮಾಜದ ಪ್ರಗತಿಗೆ ನೀಡಬಹುದಾದ ಕೊಡುಗೆಯನ್ನು ಗಮನಿಸಿ ಅರ್ಥಪೂರ್ಣ ಚರ್ಚೆ ನಡೆಯಬೇಕಿತ್ತು.

ಸುಪ್ರೀಂ ಕೋರ್ಟ್ ಮಾರ್ಗಸೂಚಿ: ಮಾಲೀಕ ವರ್ಗವು ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳಕ್ಕೆ ವಿರುದ್ಧವಾಗಿದೆ. ಇದು ಜಾರಿಯಾಗಕೂಡದೆಂದು ವಿಪರೀತ ಒತ್ತಡ ಹೇರಿದೆ. ಈಗಾಗಲೇ ಉದ್ದಿಮೆದಾರರು ಬಿಕ್ಕಟ್ಟಿನಲ್ಲಿದ್ದಾರೆಂದೂ ವೇತನ ಹೆಚ್ಚಳದಿಂದ ಅದು ಉಲ್ಬಣಿಸುತ್ತದೆ ಎಂದೂ ಅವರು ವಾದಿಸುತ್ತಿದ್ದಾರೆ.

ವೇತನ ಹೆಚ್ಚಿ, ಸಂಕಷ್ಟ ಸ್ಥಿತಿ ನಿರ್ಮಾಣವಾದರೆ, ಬಂಡವಾಳದಾರರು ಇಲ್ಲಿಂದ ಹೊರಹೋಗುತ್ತಾರೆ ಎಂಬುದು ಅವರ ಇನ್ನೊಂದು ಬೆದರಿಕೆ. ಆದರೆ, ಗಮನಾರ್ಹ ವಿಚಾರವೇನೆಂದರೆ, ಕಾರ್ಮಿಕರ ವೇತನ ಹೆಚ್ಚಳದ ಹಿಂದೆ ಕೇವಲ ಮಾನವೀಯ ಕಾಳಜಿ ಅಷ್ಟೆ ಅಲ್ಲ, ಕಾನೂನಿನ ಬೆಂಬಲ, ನ್ಯಾಯಾಲಯದ ಮಾರ್ಗದರ್ಶನವೂ ಇದೆ.

1992ರಲ್ಲಿ ಸುಪ್ರೀಂ ಕೋರ್ಟ್ ರೆಪ್ಟಕೋಸ್ ಬ್ರೆಟ್ ಆ್ಯಂಡ್ ಕಂಪನಿ ಪ್ರಕರಣದಲ್ಲಿ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ನಿಗದಿಪಡಿಸಲೇಬೇಕೆಂದು ಮಾರ್ಗಸೂಚಿಯನ್ನು ಪ್ರಕಟಿಸಿತ್ತು. ಅದರ ಪ್ರಕಾರ, ವೇತನವನ್ನು ಹೆಚ್ಚಿಸುವಾಗ ಆಹಾರ, ವಸತಿ, ಉಡುಪು, ಮಕ್ಕಳ ಶಿಕ್ಷಣ, ವಿದ್ಯುಚ್ಛಕ್ತಿ, ಆರೋಗ್ಯ, ನಿವೃತ್ತಿ ಭದ್ರತೆ ಇತ್ಯಾದಿ ಖರ್ಚುಗಳ ಏರಿಕೆಯನ್ನು ಗಣನೆಗೆ ತೆಗೆದುಕೊಳ್ಳಬೇಕು. ಅಂತಹ ಲೆಕ್ಕಾಚಾರದಿಂದ ಬರುವ ಮೊತ್ತವು ಈಗ ನಿಗದಿ ಮಾಡಿರುವುದಕ್ಕಿಂತ ಕೊಂಚ ಮೇಲಿನ ಮಟ್ಟದಲ್ಲೇ ಇರುತ್ತದೆ.

ವೇತನ ಹೆಚ್ಚಳದಿಂದ ಉದ್ದಿಮೆ ರಂಗ ಕುಸಿಯುವುದಾಗಲಿ ಅಥವಾ ಬಂಡವಾಳದಾರರು ಹೊರಹೋಗುವುದಾಗಲಿ ಘಟಿಸುವುದಿಲ್ಲ ಎಂಬುದಕ್ಕೆ ವಿಶ್ವದಾದ್ಯಂತ ನಡೆದಿರುವ ಅಧ್ಯಯನಗಳು ಬೇಕಾದಷ್ಟು ಪುರಾವೆಗಳನ್ನು ನೀಡಿವೆ. ಆದ್ದರಿಂದ, ಕಾರ್ಮಿಕ ವೇತನ ಹೆಚ್ಚಳಕ್ಕೆ ನ್ಯಾಯಾಲಯ ಅಥವಾ ಯಾವುದೇ ಮಾರ್ಗದ ಮೂಲಕ ಬರುವ ಅಡೆತಡೆಗಳನ್ನು ನಿವಾರಿಸಲು ಕರ್ನಾಟಕ ಸರ್ಕಾರ ಬದ್ಧವಾಗಿರಬೇಕು.

ಸಕಾರಾತ್ಮಕ ಪರಿಣಾಮ: ಅಂಕಿಅಂಶಗಳ ಪ್ರಕಾರ ಆರೂ ಮುಕ್ಕಾಲು ಕೋಟಿ ಜನಸಂಖ್ಯೆ ಇರುವ ಕರ್ನಾಟಕದಲ್ಲಿ ಅಂದಾಜು ಒಂದೂಮುಕ್ಕಾಲು ಕೋಟಿ ಅಸಂಘಟಿತ ಕಾರ್ಮಿಕರಿದ್ದಾರೆ. ಹೊಸದಾಗಿ ರೂಪಿಸಿರುವ ಕಾರ್ಮಿಕ ಕನಿಷ್ಠ ವೇತನದ ಮಾದರಿಯ ಪ್ರಕಾರ ಕಾರ್ಮಿಕರ ಆದಾಯ ಹೆಚ್ಚಿದರೆ ಒಟ್ಟು ₹43,000 ಕೋಟಿ ಕರ್ನಾಟಕದ ಬಡವರ ಜೇಬನ್ನು ಸೇರುತ್ತದೆ. ಕರ್ನಾಟಕವು ಗ್ಯಾರಂಟಿ ಯೋಜನೆಗಳ ಮೂಲಕ ಖರ್ಚು ಮಾಡುತ್ತಿರುವ ಹಣ ₹53,000 ಕೋಟಿ ಅಷ್ಟೇ. ಹೀಗಿರುವಾಗ ಸರ್ಕಾರ ಇಂತಹ ನ್ಯಾಯಯುತ ಆದಾಯವನ್ನು ಕಲ್ಪಿಸುವ ಮೂಲಕ ರಾಜ್ಯದ ಆರ್ಥಿಕತೆಗೆ ಬಹುದೊಡ್ಡ ಪುನಶ್ಚೇತನವನ್ನು ಒದಗಿಸಬಹುದು.

ಇನ್ನೊಂದು ಗಮನಾರ್ಹ ಸಂಗತಿಯೆಂದರೆ, ದಕ್ಷಿಣ ಭಾರತದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿನ 5 ವರ್ಷದ ಒಳಗಿರುವ ಮಕ್ಕಳಲ್ಲಿ ರಕ್ತಹೀನತೆ, ಕುಂಠಿತ ಬೆಳವಣಿಗೆ, ಕೃಶಕಾಯ, ತೂಕ ಕಡಿಮೆ ಇರುವುದು ಅತಿ ಹೆಚ್ಚು ಎಂಬುದು ಕಂಡುಬಂದಿದೆ; ಕಾರಣ, ಬಡತನ. ಮುಂದಿನ ತಲೆಮಾರಿನ ಮಾನವ ಸಂಪನ್ಮೂಲಗಳನ್ನು ಬಲಪಡಿಸಬೇಕಾದದ್ದು ಯಾವುದೇ ದೂರಗಾಮಿ ಆರ್ಥಿಕ ಯೋಜನೆಯ ಮುನ್ನೋಟವಾಗಬೇಕು.

ರಾಹುಲ್ ಗಾಂಧಿಯವರು ಬಹಳ ಕಾಲದಿಂದಲೂ ‘ನ್ಯಾಯ್’ ಯೋಜನೆಯ ಬಗ್ಗೆ ಮಾತನಾಡುತ್ತಿದ್ದಾರೆ. ಜನರಿಗೆ ಒಂದು ಸಾರ್ವತ್ರಿಕ ಮೂಲಾಧಾರ ಆದಾಯವನ್ನು ಕಲ್ಪಿಸಬೇಕೆಂಬ ಖ್ಯಾತ ಅರ್ಥಶಾಸ್ತ್ರಜ್ಞರ ಚಿಂತನೆಯ ಮೇಲೆ ಅವರ ಪ್ರತಿಪಾದನೆ ನಿಂತಿದೆ. ಅಮರ್ತ್ಯ ಸೇನ್, ಅಭಿಜಿತ್ ಬ್ಯಾನರ್ಜಿ, ಅರವಿಂದ್ ಪನಗಡಿಯಾ ಇವರೆಲ್ಲರೂ ಇದೇ ಮಾತನ್ನು ಬೇರೆ ಬೇರೆ ರೀತಿಯಲ್ಲಿ ಹೇಳಿದ್ದಾರೆ. ಕರ್ನಾಟಕ ಸರ್ಕಾರ ಇದನ್ನು ಜಾರಿಗೊಳಿಸಲು ಹೊರಟು, ತನ್ನ ಮಿತಿಯಲ್ಲಿ ದಿಟ್ಟ ಹೆಜ್ಜೆಯನ್ನೇ ಇಟ್ಟಿದೆ. ಹೊಸ ಸರ್ಕಾರವು ನ್ಯಾಯಾಲಯದ ಮೂಲಕವಾಗಲಿ ಅಥವಾ ಅಧಿಕಾರಶಾಹಿ ಕ್ರಮಗಳ ಮೂಲಕವಾಗಲಿ ಅದನ್ನು ದುರ್ಬಲಗೊಳಿಸಬಾರದು ಎಂಬುದು ಕಾರ್ಮಿಕ ವರ್ಗದ ನಿರೀಕ್ಷೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-51-781825046

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.