ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಐಆರ್ ದಾಖಲಿಸದ ಪೊಲೀಸರು: ಹೈಕೋರ್ಟ್ ಕಿಡಿ

Published 4 ಆಗಸ್ಟ್ 2023, 23:56 IST
Last Updated 4 ಆಗಸ್ಟ್ 2023, 23:56 IST
ಅಕ್ಷರ ಗಾತ್ರ

ಬೆಂಗಳೂರು: ‘ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳ ಮಾಹಿತಿ ನೀಡಿದಾಗ ತಕ್ಷಣವೇ ಎಫ್‌ಐಆರ್ ದಾಖಲು ಮಾಡಬೇಕು’ ಎಂದು ನಿರ್ದೇಶಿಸಿರುವ ಹೈಕೋರ್ಟ್, ಈ ಸಂಬಂಧ ಸುಪ್ರೀಂಕೋರ್ಟ್ ನೀಡಿರುವ ಲಲಿತಾಕುಮಾರಿ ಪ್ರಕರಣದ ಸಾರಾಂಶವನ್ನು ಎಲ್ಲ ಪೊಲೀಸ್ ಠಾಣೆಗಳಿಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಒದಗಿಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶಿಸಿದೆ.

ದೂರು ಸಲ್ಲಿಸಿದ್ದರೂ ಎಫ್‌ಐಆರ್ ದಾಖಲಿಸದ ಬಬಲೇಶ್ವರ ಪೊಲೀಸ್ ಠಾಣಾಧಿಕಾರಿಯ ಕ್ರಮವನ್ನು ಪ್ರಶ್ನಿಸಿ ವಿಜಯಪುರ ಜಿಲ್ಲೆಯ ಕಿಲಾರಹಟ್ಟಿಯ ವಿಠ್ಠಲ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ನಿರ್ದೇಶನ ನೀಡಿದೆ.

ಲಲಿತಾ ಕುಮಾರಿ ವಿರುದ್ಧದ ಉತ್ತರಪ್ರದೇಶ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಸಂಬಂಧ ಮಾರ್ಗಸೂಚಿ ಒಳಗೊಂಡ ಸುತ್ತೋಲೆ ಹೊರಡಿಸಲು ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದೆ.

‘ತೀರ್ಪಿನ 120ನೇ ಖಂಡಿಕೆಯನ್ನು (ಪ್ಯಾರ) ಕನ್ನಡ, ಇಂಗ್ಲಿಷ್ ಭಾಷೆಗಳಲ್ಲಿ ಸುತ್ತೋಲೆ ಹೊರಡಿಸಬೇಕು. ಎಫ್‌ಐಆರ್ ದಾಖಲಿಸಲು ವಿಳಂಬ ಮಾಡದಂತೆ ನೋಡಿಕೊಳ್ಳಬೇಕು’ ಎಂದು ತಾಕೀತು ಮಾಡಿದೆ.

‘ಗಂಭೀರ ಸ್ವರೂಪದ ಅಪರಾಧದ ದೂರುಗಳು ಬಂದಾಗ ಪ್ರಾಥಮಿಕ ತನಿಖೆ ನಡೆಸುವ ಅಗತ್ಯವಿಲ್ಲ. ಏಳು ದಿನಗಳ ಒಳಗಾಗಿ ಪ್ರಾಥಮಿಕ ತನಿಖೆ ಮುಕ್ತಾಯಗೊಳಿಸಿ ಎಫ್‌ಐಆರ್ ದಾಖಲಿಸಬೇಕು. ಈ ಸಂಬಂಧ ಪೊಲೀಸ್ ಠಾಣಾ ಡೈರಿಯಲ್ಲಿ ತನಿಖೆಯ ಸಂಪೂರ್ಣ ಮಾಹಿತಿ ಉಲ್ಲೇಖಿಸಬೇಕು’ ಎಂದು ನ್ಯಾಯಪೀಠ ನಿರ್ದೇಶಿಸಿದೆ.

‘ಈ ಸಂಬಂಧದ ಅನುಪಾಲನಾ ವರದಿಯನ್ನು ಇದೇ 29ರಂದು ಸಲ್ಲಿಸಬೇಕು’ ಎಂದು ಪೊಲೀಸ್ ಮಹಾ ನಿರ್ದೇಶಕರಿಗೆ ನಿರ್ದೇಶನ ನೀಡಿದೆ.

ಪ್ರಕರಣವೇನು ?: ‘ನನ್ನ ಸೊಸೆಯ ಮೇಲೆ ಕೆಲ ವ್ಯಕ್ತಿಗಳು ಹಲ್ಲೆ ನಡೆಸಿ ಅವರ ಮೊಬೈಲ್ ಫೋನ್ ಕಸಿದುಕೊಂಡು ಅವರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ’ ಎಂದು ವಿಠ್ಠಲ ಅವರು 2022ರ ನವೆಂಬರ್ 18ರಂದು ಬಬಲೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

‘ದೂರಿಗೆ ಸಂಬಂಧಿಸಿದಂತೆ ಪೊಲೀಸರು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿಯಲ್ಲಿ ಇದು ಸಂಜ್ಞೇಯ ಅಪರಾಧ ಇದ್ದರೂ, ಪೊಲೀಸರು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಿಲ್ಲ’ ಎಂದು ಆಕ್ಷೇಪಿಸಿ ಪ್ರಶ್ನಿಸಿ ವಿಠ್ಠಲ ಹೈಕೋರ್ಟ್ ಮೆಟ್ಟಿಲೇರಿದ್ದರು.

ಲಲಿತಾ ಕುಮಾರಿ ಪ್ರಕರಣದಲ್ಲಿನ ‘ಸುಪ್ರೀಂ’ ನಿರ್ದೇಶನಗಳೇನು ?

*ಪ್ರಕರಣ ಸಂಜ್ಞೇಯ ಎಂದು ತಿಳಿಯುತ್ತಿದ್ದಂತೆಯೇ ಯಾವುದೇ ಪ್ರಾಥಮಿಕ ತನಿಖೆ ನಡೆಸದೆ ತಕ್ಷಣ ಎಫ್‌ಐಆರ್ ದಾಖಲಿಸಬೇಕು.

*ಸ್ವೀಕರಿಸಿದ ದೂರಿನ ಮಾಹಿತಿಯ ಪ್ರಕಾರ ಪ್ರಕರಣ ಸಂಜ್ಞೇಯವಲ್ಲ ಎಂಬುದು ಗೊತ್ತಾದಲ್ಲಿ ಅದನ್ನು ಖಚಿತ ಪಡಿಸಿಕೊಳ್ಳುವುದಕ್ಕೆ ಮಾತ್ರ ಪ್ರಾಥಮಿಕ ತನಿಖೆ ನಡೆಸಬೇಕು.

*ಪ್ರಕರಣ ಸಂಜ್ಞೇಯ ಎಂದು ಗೊತ್ತಾದರೆ ತಕ್ಷಣವೇ ಎಫ್‌ಐಆರ್ ದಾಖಲಿಸಬೇಕು. ಒಂದು ವೇಳೆ ಪ್ರಾಥಮಿಕ ವಿಚಾರಣೆಯಲ್ಲಿ ದೂರನ್ನು ಮುಕ್ತಾಯ ಮಾಡುವಂತಿದ್ದರೆ ದೂರುದಾರರಿಗೆ ಒಂದು ವಾರದ ಒಳಗಾಗಿ ಮಾಹಿತಿ ನೀಡಬೇಕು. ಅಲ್ಲದೆ, ದೂರನ್ನು ಮುಕ್ತಾಯಗೊಳಿಸುತ್ತಿರುವ ಸಂಕ್ಷಿಪ್ತ ಕಾರಣಗಳನ್ನು ಒದಗಿಸಬೇಕು.

*ಸಂಜ್ಞೇಯ ಅಪರಾಧದ ಪ್ರಕರಣ ಎಂದು ಗೊತ್ತಾದ ತಕ್ಷಣವೇ ಎಫ್‌ಐಆರ್ ದಾಖಲಿಸುವುದು ಠಾಣಾ ಮುಖ್ಯಸ್ಥರ ಕರ್ತವ್ಯ. ಒಂದು ವೇಳೆ ಸಂಜ್ಞೇಯ ಅಪರಾಧ ಎಂದು ಗೊತ್ತಿದ್ದರೂ ದೂರು ದಾಖಲಿಸದೇ ಇದ್ದಲ್ಲಿ ಅಂತಹ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು.

*ಪ್ರಾಥಮಿಕ ತನಿಖೆಯು ಕೇವಲ ದೂರಿಗೆ ಸಂಬಂಧಿಸಿದಂತೆ ಸತ್ಯಾಸತ್ಯತೆಯನ್ನು ಪರಿಶೀಲಿಸುವುದಲ್ಲ. ಬದಲಿಗೆ ಸಲ್ಲಿಕೆಯಾಗಿರುವ ದೂರಿನಲ್ಲಿ ಸಂಜ್ಞೇಯ ಅಪರಾಧ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಮಾತ್ರ ಆಗಿರುತ್ತದೆ.

*ಯಾವ ಯಾವ ಪ್ರಕರಣಗಳಲ್ಲಿ ಪ್ರಾಥಮಿಕ ತನಿಖೆ ಮಾಡಬಹುದು ?

*ಕೌಟುಂಬಿಕ ವ್ಯಾಜ್ಯಗಳು,

*ವಾಣಿಜ್ಯ ಅಪರಾಧಗಳು

*ವೈದ್ಯಕೀಯ ನಿರ್ಲಕ್ಷ್ಯ ಪ್ರಕರಣಗಳು

*ಭ್ರಷ್ಟಾಚಾರ ಆರೋಪದ ಪ್ರಕರಣಗಳು

*ಕ್ರಿಮಿನಲ್ ಪ್ರಕರಣಗಳಲ್ಲಿ 3 ತಿಂಗಳು ವಿಳಂಬವಾಗಿರುವುದು.

*ಆರೋಪಿ ಮತ್ತು ದೂರುದಾರರ ಹಕ್ಕುಗಳ ರಕ್ಷಣೆಯನ್ನು ಖಾತ್ರಿ ಪಡಿಸುವ ಸಂದರ್ಭದಲ್ಲಿ ಮಾತ್ರ ಪ್ರಾಥಮಿಕ ವಿಚಾರಣೆಗೆ ಒಳಪಡಿಸಬೇಕು. ಅದು ಏಳು ದಿನಗಳಿಗೆ ಮೀರದಂತಿರಬೇಕು. ವಿಳಂಬವಾಗಿದ್ದಲ್ಲಿ ಅದಕ್ಕೆ ಸೂಕ್ತ ಕಾರಣಗಳನ್ನು ಠಾಣೆಯ ಡೈರಿಯಲ್ಲಿ ನಮೂದಿಸಬೇಕು.

*ಠಾಣೆಯ ಡೈರಿಯು ದೂರು ಸ್ವೀಕಾರದ ಮಾಹಿತಿಯ ದಾಖಲೆಯಾಗಿದ್ದು, ಎಫ್‌ಐಆರ್ ನೋಂದಣಿ, ತನಿಖೆಗೆ ಅಗತ್ಯವಿರುವ ಸಂಜ್ಞೇಯ ಅಪರಾಧಗಳ ಕುರಿತ ಸಂಪೂರ್ಣ ಮಾಹಿತಿ ದಾಖಲಿಸಬೇಕು. ಜತೆಗೆ, ಪ್ರಾಥಮಿಕ ವಿಚಾರಣೆ ನಡೆಸುವ ನಿರ್ಧಾರವನ್ನು ತಿಳಿಸಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT