ಬೆಂಗಳೂರು: ‘ಇನ್ನು ಮುಂದೆ ರಾಜಕೀಯ ಸಮಾವೇಶ, ಮದುವೆ, ಹಬ್ಬ, ಶುಭ ಸಮಾರಂಭಗಳಲ್ಲೂ ಅಪಾಯಕಾರಿ ಪಟಾಕಿಗಳ ಬದಲು ಹಸಿರು ಪಟಾಕಿ ಬಳಕೆಗೆ ಮಾತ್ರ ಅವಕಾಶ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅತ್ತಿಬೆಲೆ ಪಟಾಕಿ ದುರಂತದ ಬಳಿಕ ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಂಗಳವಾರ ಉನ್ನತಮಟ್ಟದ ಸಭೆಯನ್ನು ಮುಖ್ಯಮಂತ್ರಿ ನಡೆಸಿದರು.
ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸುಪ್ರೀಂ ಕೋರ್ಟಿನ ನಿರ್ದೇಶನದಂತೆ ಹಸಿರು ಪಟಾಕಿ ಬಳಕೆಗೆ ಮಾತ್ರ ಅವಕಾಶ. ಅಕ್ರಮವಾಗಿ ಪಟಾಕಿ ಮಾರಾಟ ಮಾಡಿದರೆ ಪರವಾನಗಿ ರದ್ದುಗೊಳಿಸಲಾಗುವುದು' ಎಂದು ಎಚ್ಚರಿಕೆ ನೀಡಿದರು.
‘ಪಟಾಕಿ ಮಳಿಗೆ, ದಾಸ್ತಾನಿಗೆ ಐದು ವರ್ಷ ಅವಧಿಗೆ ನೀಡಲಾಗುವ ಪರವಾನಗಿಯನ್ನು ಇನ್ನು ಮುಂದೆ ಒಂದು ವರ್ಷಕ್ಕೆ ಮಾತ್ರ ಸೀಮಿತಗೊಳಿಸಲಾಗುವುದು. ಹೀಗಾಗಿ, ಪರವಾನಗಿದಾರರು ಪ್ರತಿವರ್ಷ ನವೀಕರಣ ಮಾಡಿಕೊಳ್ಳಬೇಕು’ ಎಂದರು.
ಮುಖ್ಯಮಂತ್ರಿ ಸೂಚನೆ: ‘ಎಲ್ಲ ಪಟಾಕಿ ಮಾರಾಟ ಪರವಾನಗಿದಾರ ಮಾರಾಟ ಸ್ಥಳವನ್ನು ಪರಿಶೀಲಿಸಬೇಕು. ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಗೋದಾಮುಗಳು ಮತ್ತು ಮಳಿಗೆಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಅತ್ತಿಬೆಲೆ- ಹೊಸೂರು ಗಡಿಭಾಗದಲ್ಲಿರುವ ಎಲ್ಲ ಪಟಾಕಿ ಮಳಿಗೆಗಳ ಮೇಲೆ ತೀವ್ರ ನಿಗಾ ವಹಿಸಬೇಕು. ಸುರಕ್ಷತೆಯನ್ನೂ ತಪಾಸಣೆ ಮಾಡಬೇಕು ಎಂದು ಸೂಚಿಸಿದ ಸಿದ್ದರಾಮಯ್ಯ, ‘ಪರವಾನಗಿ ನೀಡುವಾಗ ಜಿಲ್ಲಾಧಿಕಾರಿ, ಎಸ್‌ಪಿ ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳ ಪರಿಶೀಲಿಸಬೇಕು. ಈ ನಿಟ್ಟಿನಲ್ಲಿ ನ್ಯಾಯಾಲಯಗಳ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು. ಹಸಿರು ಪಟಾಕಿಗಳ ಮಾರಾಟವನ್ನೂ ಖಾತರಿಪಡಿಸಿಕೊಳ್ಳಬೇಕು‘ ಎಂದೂ ಅಧಿಕಾರಿಗಳಿಗೆ ಹೇಳಿದರು.
‘ಬೆಂಗಳೂರು ನಗರದಲ್ಲಿ ಶಾಶ್ವತ ಹಾಗೂ ತಾತ್ಕಾಲಿಕ ಪಟಾಕಿ ಮಳಿಗೆಗಳಿಗೆ ಬಿಬಿಎಂಪಿ, ವಿದ್ಯುತ್, ಅಗ್ನಿಶಾಮಕ, ಸಂಚಾರ ಮತ್ತು ಕಾನೂನು-ಸುವ್ಯವಸ್ಥೆ ವಿಭಾಗದ ನಿರಾಕ್ಷೇಪಣಾ ಪತ್ರ ಪಡೆದು ಪರವಾನಗಿ ನೀಡಲಾಗುತ್ತದೆ. ಈ ಪರವಾನಗಿಯನ್ನು ಐದು ವರ್ಷಗಳಿಗೊಮ್ಮೆ ನೀಡಲಾಗುತ್ತಿದೆ. ಪರವಾನಗಿ ನವೀಕರಿಸಲು ನಿರಾಕ್ಷೇಪಣಾ ಪತ್ರದ ಅಗತ್ಯ ಇರುವುದಿಲ್ಲ. ಸ್ಫೋಟಕಗಳ ನಿಯಂತ್ರಕರು ನವೀಕರಿಸುತ್ತಾರೆ. ಈ ಕುರಿತು ನಿಯಮಾವಳಿ ತಿದ್ದುಪಡಿಯ ಅಗತ್ಯವಿದ್ದು, ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಬೇಕು. ರಾಜ್ಯಕ್ಕೆ ಅನ್ವಯಿಸುವ ನಿಯಮ ಬದಲಿಸಬೇಕು’ ಎಂದೂ ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿದ್ದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ‘ಸುರಕ್ಷತೆ ದೃಷ್ಟಿಯಿಂದ ರಾಜಕೀಯ ಸಮಾವೇಶಗಳು ಹಾಗೂ ವಿವಾಹ ಸಮಾರಂಭಗಳಲ್ಲಿ ಪಟಾಕಿ ಬಳಕೆಯನ್ನು ನಿಷೇಧಿಸಬೇಕು’ ಎಂದು ಸಲಹೆ ನೀಡಿದರು.
ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್, ಮುಖ್ಯಮಂತ್ರಿಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶಿವಶಂಕರ್ ಸಭೆಯಲ್ಲಿ ಇದ್ದರು.
ಹಸಿರು ಪಟಾಕಿ ಎಂದರೆ. .
*ಮಾಲಿನ್ಯಕಾರಕ ಹೊಗೆ ಸೂಸುವ ಪ್ರಮಾಣ ಅತಿ ಕಡಿಮೆ
*ಇಂತಹ ಪಟಾಕಿ ತಯಾರಿಕೆಗೆ ಕಡಿಮೆ ಕಚ್ಚಾವಸ್ತುಗಳನ್ನು ಬಳಸಲಾಗುತ್ತದೆ
*ಪಟಾಕಿಗಳ ಗಾತ್ರವೂ ಚಿಕ್ಕದಾಗಿರುತ್ತವೆ, ಸಿಡಿಸಿದಾಗ ಬೂದಿಯಾಗುವುದಿಲ್ಲ
*ಸಾಮಾನ್ಯ ಪಟಾಕಿಗಳಲ್ಲಿರುವಂತಹ ಅಪಾಯಕಾರಿ ರಾಸಾಯನಿಕ ಅಂಶಗಳು ಕಡಿಮೆ ಪ್ರಮಾಣದಲ್ಲಿ ಇರುತ್ತವೆ
* ಅಧಿಕ ಶಬ್ದ ಮತ್ತು ಹೊಗೆಯ ಬದಲಿಗೆ ನೀರಿನ ಆವಿಯನ್ನು ಬಿಡುಗಡೆ ಮಾಡುತ್ತವೆ
ಪಟಾಕಿ ಮಾರಾಟಕ್ಕೆ ಕಾನೂನು ಮೀರಿ ಅಧಿಕಾರಿಗಳು ಪರವಾನಗಿ ನೀಡಿದ್ದರೆ ಅಂತಹ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು. ಪರಿಶೀಲನೆ ಮಾಡದ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದ.- ಡಿ.ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿ
‘ಸ್ಫೋಟಕ ವಸ್ತುಗಳ ಕಾಯ್ದೆ ಓದಿದ್ದೀರಾ?’
‘ಪಟಾಕಿ ಮಳಿಗೆಗಳಿಗೆ ಪರವಾನಗಿ ನೀಡುವಾಗ ವಹಿಸಬೇಕಾದ ಎಚ್ಚರಿಕೆಯ ಬಗ್ಗೆ ಸ್ಫೋಟಕ ವಸ್ತುಗಳ (ಎಕ್ಸ್‌ಪ್ಲೋಸಿವ್) ಕಾಯ್ದೆಯಲ್ಲಿ ವಿವರಿಸಲಾಗಿದೆ. ಈ ಕಾಯ್ದೆಯನ್ನು ಓದಿದ್ದೀರಾ?’ ಎಂದು ಅಧಿಕಾರಿಗಳನ್ನು ಸಿದ್ದರಾಮಯ್ಯ ಅವರು ಖಾರವಾಗಿ ಪ್ರಶ್ನಿಸಿದರು. ‘ಅತ್ತಿಬೆಲೆಯಲ್ಲಿ ಸಂಭವಿಸಿದ ಪಟಾಕಿ ದುರಂತದಲ್ಲಿ ಜೀವ ಕಳೆದುಕೊಂಡ 14 ಜನರ ಜೀವಕ್ಕೆ ಯಾರು ಹೊಣೆ? ಇನ್ನು ಮುಂದೆ ಈ ಕಾಯ್ದೆಯಲ್ಲಿರುವ ಎಲ್ಲ ಮಾನದಂಡಗಳನ್ನು ಪಟಾಕಿ ಮಾರಾಟ ಪರವಾನಗಿದಾರರು ಪೂರೈಸಿದ್ದಾರೆಯೇ ಎಂದು ನೋಡಬೇಕು. ಕೆಳಹಂತದ ಅಧಿಕಾರಿಗಳು ಸಲ್ಲಿಸಿದ ವರದಿ ಸರಿ ಇದೆಯೇ ಎಂದು ಜಿಲ್ಲಾಧಿಕಾರಿ ಪರಿಶೀಲಿಸಬೇಕು’ ಎಂದು ತಾಕೀತು ಮಾಡಿದರು.
‘ಅತ್ತಿಬೆಲೆ ದುರಂತ: ಅಧಿಕಾರಿಗಳ ಅಮಾನತು’
‘ಅತ್ತಿಬೆಲೆ ಪಟಾಕಿ ದುರಂತವನ್ನು ಗಂಭೀರವಾಗಿ ಪರಿಗಣಿಸಿದ್ದು ಸ್ಥಳೀಯ ತಹಶೀಲ್ದಾರ್ ಇನ್‌ಸ್ಪೆಕ್ಟರ್ ಮತ್ತು ಪ್ರಾದೇಶಿಕ ಅಗ್ನಿ ಶಾಮಕ ಅಧಿಕಾರಿಯನ್ನು ಅಮಾನತು ಮಾಡಬೇಕು. ಇಂಥ ಘಟನೆ ಮರುಕಳಿಸದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ನಿರ್ದೇಶನ ನೀಡಿದರು. ‘ಅತ್ತಿಬೆಲೆ ಪಟಾಕಿ ಮಳಿಗೆಗೆ ಸಂಬಂಧಿಸಿದಂತೆ ಸರ್ಕಲ್ ಇನ್ಸ್‌ಪೆಕ್ಟರ್ ವರದಿ ಛಾಯಾಚಿತ್ರಗಳೊಂದಿಗೆ ಚೆಕ್‌ಬಂದಿ ನಿಗದಿಪಡಿಸಿ ವರದಿ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿಗೆ ಎಸ್‌ಪಿ ವರದಿ ಸಲ್ಲಿಸಿದ್ದಾರೆ. ಅದರ ಆಧಾರದಲ್ಲಿ ಜಿಲ್ಲಾಧಿಕಾರಿ ಪರವಾನಗಿ ನೀಡಿದ್ದಾರೆ. ತಹಶೀಲ್ದಾರರಿಂದಲೂ ಜಿಲ್ಲಾಧಿಕಾರಿ ವರದಿ ಪಡೆದಿದ್ದಾರೆ ಎಂದು ಸಭೆಗೆ ಅಧಿಕಾರಿಗಳು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.