ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಣಿಗೆ ಅನುಮತಿ | ಫೋರ್ಜರಿ ಸಹಿ ಬಗ್ಗೆ ಅವತ್ತೆ ಏಕೆ HDK ದೂರು ನೀಡಿಲ್ಲ: ದಿನೇಶ್

Published : 23 ಆಗಸ್ಟ್ 2024, 7:33 IST
Last Updated : 23 ಆಗಸ್ಟ್ 2024, 7:33 IST
ಫಾಲೋ ಮಾಡಿ
Comments

ಹುಬ್ಬಳ್ಳಿ: ಗಣಿಗೆ ಅನುಮತಿ ನೀಡಿದ ಆದೇಶದಲ್ಲಿರುವುದು ತಮ್ಮ ಸಹಿ ಅಲ್ಲ, ಅದು ಫೋರ್ಜರಿ ಎಂದು ಈಗ ಹೇಳುತ್ತಿರುವ ಎಚ್‌.ಡಿ. ಕುಮಾರಸ್ವಾಮಿ ಅವತ್ತೇ ಏಕೆ ದೂರು ನೀಡಲಿಲ್ಲ? ಇಂತಹ ಹೇಳಿಕೆಯನ್ನು ಕೇಂದ್ರ ಸಚಿವರಾದವರು, ಮಾಜಿ ಮುಖ್ಯಮಂತ್ರಿಯಾಗಿದ್ದವರು ಕೊಡಲಾಗುತ್ತದೆಯೇ? ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಪ್ರಶ್ನಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಗಣಿಗೆ ಅಕ್ರಮವಾಗಿ ಅನುಮತಿ ನೀಡಿದ ಪ್ರಕರಣದಲ್ಲಿ ಕುಮಾರಸ್ವಾಮಿ ಅವರ ಪಾತ್ರ ಇರುವುದು ಸ್ಪಷ್ಟವಾಗಿದೆ. ಇದರ ಬಗ್ಗೆ ತನಿಖೆಯೂ ಆಗಿದೆ. ಇವರ ವಿರುದ್ಧ ಕ್ರಮಕೈಗೊಳ್ಳಲು ಅನುಮತಿ ನೀಡಬೇಕೆಂದು ಲೋಕಾಯುಕ್ತರು ರಾಜ್ಯಪಾಲರಿಗೆ ಕೋರಿದ್ದಾರೆ’ ಎಂದರು.

‘ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಲೇಬೇಕಾಗುತ್ತದೆ. ಇಲ್ಲದಿದ್ದರೆ, ಕೇಂದ್ರ ಸರ್ಕಾರಕ್ಕೆ ಕಳುಹಿಸಬಹುದು. ಕುಮಾರಸ್ವಾಮಿ ರಾಜೀನಾಮೆ ಕೊಡಲೇಬೇಕಾಗುತ್ತದೆ. ಕುಮಾರಸ್ವಾಮಿ ಅವರ ತಲೆದಂಡವಾಗಲಿ ಎಂದುಕೊಂಡೇ ಬಿಜೆಪಿಯವರು ಮಾಡಿಸಿರಬಹುದು. ಜೆಡಿಎಸ್‌ ಹಾಗೂ ಕುಮಾರಸ್ವಾಮಿ ಅವರನ್ನು ಮುಗಿಸಲು ಬಿಜೆಪಿ ಷಡ್ಯಂತ್ರ ಮಾಡಿದೆ’ ಎಂದು ಆರೋಪಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಯಾವುದೇ ತನಿಖೆಯಾಗಿಲ್ಲ. ಅವರ ವಿರುದ್ಧ ಯಾವುದೇ ಭ್ರಷ್ಟಾಚಾರದ ಆರೋಪವಿಲ್ಲ. ಅವರ ವರ್ಚಸ್ಸು ಹಾಳು ಮಾಡುವ ಉದ್ದೇಶದಿಂದಲೇ ಬಿಜೆಪಿ ಹಾಗೂ ಕೇಂದ್ರ ಸರ್ಕಾರ ಖಾಸಗಿ ದೂರಿನ ಆಧಾರದ ಮೇಲೆ ರಾಜ್ಯಪಾಲರ ಮೇಲೆ ಒತ್ತಡ ತಂದು, ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಿಸಿದೆ’ ಎಂದು ಆರೋಪಿಸಿದರು.

‘ರಾಜ್ಯಪಾಲರ ಮೇಲೆ ನಮಗೆ ವಿಶ್ವಾಸ, ನಂಬಿಕೆ ಉಳಿದಿಲ್ಲ. ಇದನ್ನು ರಾಷ್ಟ್ರಪತಿ ಅವರ ಗಮನಕ್ಕೆ ತರಬೇಕು. ರಾಜ್ಯಪಾಲರನ್ನು ಬದಲಾಯಿಸಬೇಕೆಂದು ಕೋರಲು ಶಾಸಕಾಂಗ ಸಭೆಯಲ್ಲಿ ಪಕ್ಷದ ಎಲ್ಲ ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಷ್ಟ್ರಪತಿ ಅವರನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಭೇಟಿಯಾಗುವ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ’ ಎಂದು ಹೇಳಿದರು.

‘ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ನಿರಂತರವಾಗಿ ನಡೆಯುತ್ತಿವೆ. ಇವುಗಳನ್ನು ತಡೆಯಬೇಕು, ಅಭಿವೃದ್ಧಿ ಕೆಲಸಗಳನ್ನು ನಿಲ್ಲಿಸಬೇಕೆಂದು ಬಿಜೆಪಿ, ಆರ್‌ಎಸ್‌ಎಸ್‌ ಷಡ್ಯಂತ್ರ ರಚಿಸುತ್ತಿದೆ. ಅನಾವಶ್ಯಕ ಗೊಂದಲ ಸೃಷ್ಟಿಸಿ, ಜನರಿಂದ ಆಯ್ಕೆಯಾದ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT