ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಟ ದರ್ಶನ್‌ಗೆ ಮನೆಯೂಟ ವಿರೋಧಿಸಿ ಅರ್ಜಿ: ಹೈಕೋರ್ಟ್ ಅತೃಪ್ತಿ

Published : 14 ಆಗಸ್ಟ್ 2024, 15:52 IST
Last Updated : 14 ಆಗಸ್ಟ್ 2024, 15:52 IST
ಫಾಲೋ ಮಾಡಿ
Comments

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್‌ ಅವರಿಗೆ ಮನೆಯ ಊಟ ನೀಡಲು ವಿರೋಧಿಸಿ ಸಲ್ಲಿಸಲಾದ ಅರ್ಜಿಗೆ ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ.

ಈ ಸಂಬಂಧ ಎನ್‌.ಪಿ.ಅಮೃತೇಶ್‌ ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ ಚಂದನಗೌಡರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಈ ರೀತಿ ವಿರೋಧ ಮಾಡಲು ನೀವು ಯಾರು’ ಎಂದು ಪ್ರಶ್ನಿಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಡಿ.ಮೋಹನ್‌ ಕುಮಾರ್, ‘ಅರ್ಜಿದಾರರು ಸರ್ಕಾರಕ್ಕೆ ಈ ಕುರಿತು ಮನವಿ ಸಲ್ಲಿಸಿದ್ದಾರೆ. ಈ ಮನವಿಯನ್ನು ಪರಿಗಣಿಸುವಂತೆ ನಿರ್ದೇಶಿಸಬೇಕು’ ಎಂದು ಕೋರಿದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ‘ಪ್ರಚಾರಕ್ಕಾಗಿ ಇಂತಹ ಅರ್ಜಿ ಹಾಕಿದ್ದೀರಾ? ಬೇಕಿದ್ದರೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿ. ಅಷ್ಟಕ್ಕೂ ಮನೆಯ ಊಟ ಕೊಡಲು ಆದೇಶ ಮಾಡಿದರೆ ಅದನ್ನು ಪ್ರಶ್ನಿಸಿಕೊಂಡು ಬನ್ನಿ. ಈ ಹಂತದಲ್ಲಿ ಮನೆಯೂಟ ಕೊಡುವುದನ್ನು ವಿರೋಧಿಸಲು ನಿಮಗೆ ಯಾವ ಅಧಿಕಾರವಿದೆ? ಈ ಅರ್ಜಿಯನ್ನು ದಂಡ ಹಾಕಿ ವಜಾ ಮಾಡಲಾಗುವುದು’ ಎಂದು ಎಚ್ಚರಿಸಿತು.

ಇದಕ್ಕೆ ಮೋಹನ್‌ ಕುಮಾರ್, ‘ಅರ್ಜಿದಾರರ ಮನವಿಯ ಬಗ್ಗೆ ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಡಲು ಸಮಯಾವಕಾಶ ನೀಡಬೇಕು’ ಎಂದು ಕೋರಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಒಂದು ವಾರ ಕಾಲ ವಿಚಾರಣೆ ಮುಂದೂಡಿ ಆದೇಶಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT