ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹ್ಯಾಕಿಂಗ್‌ಗೆ ಎಂ.ಎಸ್ಸಿ, ಎಲ್‌ಎಲ್‌ಬಿ ಪದವೀಧರರ ಸಹಕಾರ!

ಮದ್ಯ, ಡ್ರಗ್ಸ್ ಪಾರ್ಟಿಯಲ್ಲಿ ಶ್ರೀಕೃಷ್ಣ ಪರಿಚಯ l ಬಿಟ್‌ ಕಾಯಿನ್ ವ್ಯವಹಾರಕ್ಕೆ ಪಾಲುದಾರಿಕೆ
Last Updated 4 ನವೆಂಬರ್ 2021, 21:45 IST
ಅಕ್ಷರ ಗಾತ್ರ

ಬೆಂಗಳೂರು: ಹಣ ವಿನಿಮಯ ಏಜೆನ್ಸಿಗಳ ಸರ್ವರ್, ಆನ್‌ಲೈನ್ ಗೇಮಿಂಗ್ ಜಾಲತಾಣಗಳನ್ನು ಹ್ಯಾಕ್ ಮಾಡಿ ಕೋಟ್ಯಂತರ ರೂಪಾಯಿ ಮೌಲ್ಯದ ಬಿಟ್ ಕಾಯಿನ್ ಗಳಿಸುತ್ತಿದ್ದ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಗೆ (26), ಎಂ.ಎಸ್ಸಿ ಹಾಗೂ ಎಲ್‌ಎಲ್‌ಬಿ ಪದವೀಧರರು ಸಹಕಾರ ನೀಡುತ್ತಿದ್ದ ಸಂಗತಿ ಬಯಲಾಗಿದೆ.

ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಕಾಟನ್‌ಪೇಟೆ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿರುವ ಸಿಸಿಬಿ ಪೊಲೀಸರು, ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣನಿಗೆ ಸಹಕಾರ ನೀಡಿದ್ದವರ ವಿವರಗಳನ್ನೂ ಉಲ್ಲೇಖಿಸಿದ್ದಾರೆ.

‘ಎಂ.ಎಸ್ಸಿ ಪದವೀಧರ ಪ್ರಸೀದ್ ಶೆಟ್ಟಿ ಅಲಿಯಾಸ್ ಚಿಕ್ಕು (25), ಎಲ್‌ಎಲ್‌ಬಿ ಪದವೀಧರ ಸುಜಯ್‌ರಾಜ್ (29), ಶ್ರೀಕೃಷ್ಣನಿಗೆ ಸಹಕಾರ ನೀಡುತ್ತಿದ್ದರು. ಅವರಿಬ್ಬರು ಪ್ರಕರಣದ ನಾಲ್ಕು, ಐದನೇ ಆರೋಪಿಗಳು. ಶ್ರೀಕೃಷ್ಣ ಜೊತೆಗಿನ ಒಡನಾಟದ ಬಗ್ಗೆ ಅವರಿಬ್ಬರು ಹೇಳಿಕೆ ನೀಡಿದ್ದಾರೆ’ ಎಂಬುದಾಗಿ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

‘ನಗರದ ಐಷಾರಾಮಿ ಹೋಟೆಲ್‌ಗಳು ಹಾಗೂ ಸ್ವಂತ ಫ್ಲಾಟ್‌ನಲ್ಲಿ ಆರೋಪಿಗಳು ಆಗಾಗ್ಗೆ ಡ್ರಗ್ಸ್ ಪಾರ್ಟಿ ಮಾಡುತ್ತಿದ್ದರು. ಅಗತ್ಯವಿದ್ದ ಡ್ರಗ್ಸ್‌ನ್ನು ಶ್ರೀಕೃಷ್ಣನೇ ಡಾರ್ಕ್‌ನೆಟ್ ಮೂಲಕ ತರಿಸಿಕೊಡುತ್ತಿದ್ದ. ಪಾರ್ಟಿ ವೇಳೆಯೇ ಎಲ್ಲರೂ ಪರಸ್ಪರ ಪರಿಚಯವಾಗಿದ್ದರು. ಶ್ರೀಕೃಷ್ಣ ಹ್ಯಾಕರ್ ಎಂಬುದು ತಿಳಿಯುತ್ತಿದ್ದಂತೆ, ಎಲ್ಲರೂ ಆತನಿಗೆ ಸಹಕಾರ ನೀಡಲಾರಂಭಿಸಿದ್ದರು. ಹ್ಯಾಕಿಂಗ್‌ನಿಂದ ಬಂದ ಹಣದಲ್ಲಿ ಪಾಲುದಾರಿಕೆ ಹೊಂದಿದ್ದರು’ ಎಂಬ ಮಾಹಿತಿಯೂ ಪಟ್ಟಿಯಲ್ಲಿದೆ.

ಲಂಡನ್‌ನಲ್ಲಿ ವ್ಯಾಸಂಗ: ‘ಸದಾಶಿವನಗರದ ಆರ್‌ಎಂವಿ ಎಕ್ಸ್‌ಟೆನ್ಷನ್ ನಿವಾಸಿ ಪ್ರಸೀದ್ ಶೆಟ್ಟಿ, ನಗರದ ಕಾಲೇಜೊಂದರಲ್ಲಿ ಬಿಬಿಎ ಮುಗಿಸಿದ್ದ. 2019ರಲ್ಲಿ ಲಂಡನ್‌ಗೆ ಹೋಗಿದ್ದ ಆತ, ಅಲ್ಲಿಯ ವೆಸ್ಟ್ ಮಿನಿಸ್ಟರ್ ವಿಶ್ವವಿದ್ಯಾಲಯದಲ್ಲಿ ಎಂಎಸ್ಸಿ ಮುಗಿಸಿದ್ದ. 2020ರ ಅ. 5ರಂದು ಭಾರತಕ್ಕೆ ವಾಪಸು ಬಂದಿದ್ದ. ಈತ, ಪ್ರಕರಣದ ಎರಡನೇ ಆರೋಪಿ ಸುನೀಶ್ ಹೆಗ್ಡೆ ಸಂಬಂಧಿ’ ಎಂಬ ಸಂಗತಿ ಪಟ್ಟಿಯಲ್ಲಿದೆ.

‘ಸ್ನೇಹಿತರೊಬ್ಬರ ಮೂಲಕ ಪ್ರಸೀದ್‌ಗೆ ಶ್ರೀಕೃಷ್ಣನ ಪರಿಚಯವಾಗಿತ್ತು. ಸರ್ವರ್ ಹಾಗೂ ಜಾಲತಾಣ ಹ್ಯಾಕ್ ಮಾಡುವುದರಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಬಿಟ್‌ ಕಾಯಿನ್ ಸಂಪಾದಿಸುವುದಾಗಿ ಹೇಳಿದ್ದ ಶ್ರೀಕೃಷ್ಣ, ಅದರಲ್ಲಿ ಪಾಲು ನೀಡುವುದಾಗಿ ತಿಳಿಸುತ್ತಿದ್ದ’.

‘ಸ್ಪಾಟ್ ಅಂಡ್ ಪೋಕರ್, ಪೋಕರ್‌ ಬಾಜಿ ಸೇರಿದಂತೆ ಇತರೆ ಗೇಮಿಂಗ್ ಸರ್ವರ್‌ಗಳನ್ನು ಹ್ಯಾಕ್ ಮಾಡುತ್ತಿದ್ದ ಶ್ರೀಕೃಷ್ಣ, ಇಸ್ಪೀಟ್ ಎಲೆಗಳ ಮಾಹಿತಿಯನ್ನು ಪ್ರಸೀದ್ ಹಾಗೂ ಇತರರಿಗೆ ಮುಂಗಡವಾಗಿ ತಿಳಿಸುತ್ತಿದ್ದ. ಅದರ ಮೂಲಕವೇ ಆರೋಪಿಗಳು ಗೇಮ್ ಆಡಿ ಹಣ ಗಳಿಸುತ್ತಿದ್ದರು. ಎಲ್ಲಿಯೂ ಕೆಲಸಕ್ಕೆ ಹೋಗದ ಪ್ರಸೀದ್, ಶ್ರೀಕೃಷ್ಣನಿಂದಲೇ ಹಣ ಸಂಪಾದಿಸಬಹುದೆಂದು ಆತನ ಕೆಲಸಕ್ಕೆ ಸಹಕಾರ ನೀಡಲಾರಂಭಿಸಿದ್ದ’ ಎಂಬ ಮಾಹಿತಿಯನ್ನು ಉಲ್ಲೇಖಿಸಲಾಗಿದೆ.

‘ಶ್ರೀಕೃಷ್ಣನ ಮೂಲಕ ಪ್ರಸೀದ್‌ಗೆ ರಾಬಿನ್ ಖಂಡೇಲ್‌ವಾಲಾ ಪರಿಚಯವಾಗಿತ್ತು.ಬಿಟ್ ಕಾಯಿನ್ ವ್ಯವಹಾರ ಮಾಡಲಾರಂಭಿಸಿದ್ದ. ಶ್ರೀಕೃಷ್ಣ ಹಾಗೂ ಇತರೆ ಆರೋಪಿಗಳ ಸುತ್ತಾಟಕ್ಕಾಗಿ ಪ್ರಸೀದ್ ತನ್ನ ಕಾರು (ಕೆಎ 53 ಎಂಎಫ್‌ 0799) ನೀಡಿದ್ದ’ ಎಂಬ ಸಂಗತಿಯೂ ಪಟ್ಟಿಯಲ್ಲಿದೆ.

ಕೃತ್ಯಕ್ಕೆ ಪ್ರಚೋದನೆ: ‘ಇನ್ನೊಬ್ಬ ಆರೋಪಿ ಸುಜಯ್ ರಾಜ್, ಸದಾಶಿವನಗರ ನಿವಾಸಿ. ಜಯನಗರದ ಕಾಲೇಜೊಂದರಲ್ಲಿ ಎಲ್‌ಎಲ್‌ಬಿ ಮುಗಿಸಿದ್ದ ಆತ, ಯಾವುದೇ ವೃತ್ತಿ ಕೈಗೊಂಡಿರಲಿಲ್ಲ. ಸ್ನೇಹಿತರ ಮೂಲಕ ಆತನಿಗೆ ಶ್ರೀಕೃಷ್ಣ ಪರಿಚಯವಾಗಿತ್ತು’ ಎಂಬ ಮಾಹಿತಿ ಪಟ್ಟಿಯಲ್ಲಿದೆ.

‘ಐಟಿಸಿ ಗಾರ್ಡೆನಿಯಾ, ಶಾಂಗ್ರಿಲಾ, ಗೋಕುಲಂ ಗ್ರ್ಯಾಂಡ್‌ , 4 ಸೀಜನ್ ಹೋಟೆಲ್, ಕೂರ್ಗ್‌ನ ತಾಜ್ ಹೋಟೆಲ್, ಗೋವಾದ ತಾಜ್ ಎಕ್ಸಾಟಿಕಾ, ತಾಜ್ ಆಗ್ವಾಡಾ, ಲೀಲಾ ಗೋವಾ ವಿಲ್ಲಾ ಹಾಗೂ ಇತರ ಕಡೆಗಳಲ್ಲಿ ಆರೋಪಿಗಳು ತಂಗುತ್ತಿದ್ದರು. ಅಲ್ಲಿಯೇ ಆರೋಪಿ ಶ್ರೀಕೃಷ್ಣ, ಸರ್ವರ್‌, ಜಾಲತಾಣಗಳನ್ನು ಹ್ಯಾಕ್ ಮಾಡುತ್ತಿದ್ದ. ಅದಕ್ಕೆ ಉಳಿದವರು ಪ್ರಚೋದಿಸುತ್ತಿದ್ದರು. ಪೋಕರ್ ಬಾಜಿ ಗೇಮಿಂಗ್ ಜಾಲತಾಣ ಹ್ಯಾಕ್ ಪ್ರಕರಣದಲ್ಲೂ ಸುಜಯ್‌ ರಾಜ್ ಭಾಗಿಯಾಗಿದ್ದ’ ಎಂಬ ಅಂಶ ದೋಷಾರೋಪ
ಪಟ್ಟಿಯಲ್ಲಿದೆ.

‘2019 ರಲ್ಲಿ ಗೋಕುಲಂ ಗ್ರ್ಯಾಂಡ್ ಹೋಟೆಲ್‌ನಲ್ಲಿ ನಾಲ್ಕು ತಿಂಗಳು ತಂಗಿದ್ದ ಶ್ರೀಕೃಷ್ಣ, ಸಾಕಷ್ಟು ಸರ್ವರ್ ಹಾಗೂ ಜಾಲತಾಣಗಳನ್ನು ಹ್ಯಾಕ್ ಮಾಡಿದ್ದ. ಇದರಲ್ಲೂ ಇತರೆ ಆರೋಪಿಗಳು ಪಾಲು ಪಡೆದಿದ್ದರು’ ಎಂಬ ಮಾಹಿತಿಯನ್ನೂ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT