ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಡಿಸೆಂಬರ್‌ನಲ್ಲಿ ನೇಮಕಾತಿ ಆದೇಶ ನೀಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಹೇಳಿದರು.
ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಂದ ಮಂಗಳವಾರ ಸನ್ಮಾನ ಸ್ವೀಕರಿಸಿದ ನಂತರ ಅವರು ಮಾತನಾಡಿದರು.
‘ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. 1,242 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. 1,208 ಅಭ್ಯರ್ಥಿಗಳನ್ನು ಮೆರಿಟ್ ಮತ್ತು ರೋಸ್ಟರ್ ಆಧಾರದಲ್ಲಿ ಆಯ್ಕೆ ಮಾಡಲಾಗಿದೆ. ನೇಮಕಾತಿ ಪ್ರಕ್ರಿಯೆಗೆ ಯಾವುದೇ ಅಡಚಣೆ ಇಲ್ಲ. ಸಿಂಧುತ್ವ ಪ್ರಮಾಣಪತ್ರ, ಪೊಲೀಸ್ ಪರಿಶೀಲನೆ, ವೈದ್ಯಕೀಯ ಪರಿಶೀಲನಾ ಕಾರ್ಯಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಿದ್ದೇನೆ’ ಎಂದರು.
ಮುಖ್ಯಮಂತ್ರಿ ಸಹಕಾರದಿಂದ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲಾಗಿದೆ. ಭವಿಷ್ಯದ ಕನಸು ಕಟ್ಟಿಕೊಂಡಿದ್ದ ಪ್ರತಿಭಾವಂತರ ಕುಟುಂಬಗಳ ಬದುಕು ಹಸನಾಗಿದೆ. ಆಯ್ಕೆಯಾದವರು ಕಡ್ಡಾಯವಾಗಿ ಗ್ರಾಮೀಣ ಪ್ರದೇಶಕ್ಕೆ ತೆರಳಿ ಸೇವೆ ಸಲ್ಲಿಸಬೇಕು. ನೆಪಗಳನ್ನು ಹೇಳಿಕೊಂಡು ವರ್ಗಾವಣೆಗೆ ಒತ್ತಡ ತರುವ ಕೆಲಸ ಮಾಡಬಾರದು. ಕಷ್ಟಪಟ್ಟು ಕೆಲಸ ಮಾಡಬೇಕು. ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಬೇಕು ಎಂದು ಕಿವಿಮಾತು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.