ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗಪಟ್ಟಣ: ಬಾಲಮಂದಿರದಲ್ಲಿ ನಾಲ್ವರು ಹೆಣ್ಣುಮಕ್ಕಳ ರಕ್ಷಣೆ

ಆಶ್ರಯ, ಶಿಕ್ಷಣ ನೀಡುವ ಭರವಸೆ ನೀಡಿದ ಅಧಿಕಾರಿಗಳು, ಸ್ಪಂದಿಸಿದ ವಿವಿಧ ಸಂಘಟನೆಗಳು
Last Updated 20 ಜನವರಿ 2023, 13:40 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ತಾಲ್ಲೂಕಿನ ಮಹದೇವಪುರ ಗ್ರಾಮದಲ್ಲಿ ಶಿಥಿಲಗೊಂಡಿದ್ದ ಮನೆಯಲ್ಲಿ ಸಂಕಷ್ಟ ಸ್ಥಿತಿಯಲ್ಲಿದ್ದ ನಾಲ್ವರು ನಿರಾಶ್ರಿತ ಹೆಣ್ಣುಮಕ್ಕಳನ್ನು ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಶುಕ್ರವಾರ ಮಂಡ್ಯದ ಬಾಲಕಿಯರ ಬಾಲಮಂದಿರಕ್ಕೆ ಕಳುಹಿಸಿದರು.

‘ಪ್ರಜಾವಾಣಿ’ಯಲ್ಲಿ ಶುಕ್ರವಾರ ಪ್ರಕಟವಾಗಿದ್ದ ‘ತಬ್ಬಲಿ ಬಾಲೆಯರಿಗೆ ಯಾರು ದಿಕ್ಕು?’ ವಿಶೇಷ ವರದಿಯಿಂದ ಎಚ್ಚೆತ್ತುಕೊಂಡು ಅಧಿಕಾರಿಗಳು ಬೆಳಿಗ್ಗೆಯೇ ಗ್ರಾಮಕ್ಕೆ ಭೇಟಿ ನೀಡಿ ಬಾಲಕಿಯರ ಜೊತೆ ಮಾತನಾಡಿದರು. ಆಶ್ರಯದ ಅವಶ್ಯಕತೆ ಅರಿತ ಅಧಿಕಾರಿಗಳು ಬಾಲಕಿಯರನ್ನು ಬಾಲಮಂದಿರದಲ್ಲಿ ರಕ್ಷಿಸುವ ನಿರ್ಧಾರ ಕೈಗೊಂಡರು.

‘ಜ.21ರಂದು ಮಕ್ಕಳ ಕಲ್ಯಾಣ ಸಮಿತಿಯ ಸಭೆ ಇದ್ದು ಅಲ್ಲಿ ಬಾಲಕಿಯರನ್ನು ಹಾಜರುಪಡಿಸಲಾಗುವುದು. ಬಾಲಕಿಯರ ಬಾಲಮಂದಿರಕ್ಕೆ ಸಮೀಪದ ಶಾಲಾ– ಕಾಲೇಜುಗಳಲ್ಲಿ ಅವರನ್ನು ದಾಖಲು ಮಾಡಲಾಗುವುದು. ವರ್ಗಾವಣೆ ಪತ್ರ ಕಳುಹಿಸುವಂತೆ ಶಾಲೆ, ಕಾಲೇಜು ಮುಖ್ಯಸ್ಥರಿಗೆ ಸೂಚಿಸಲಾಗಿದೆ. ಬಾಲ ನ್ಯಾಯ ಕಾಯ್ದೆ ಪ್ರಕಾರ ಮಕ್ಕಳ ರಕ್ಷಣೆಗೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಅಶೋಕ್‌ ತಿಳಿಸಿದರು.

‘ನಿರಾಶ್ರಿತ ಮಕ್ಕಳಿಗೆ 18 ವರ್ಷ ತುಂಬುವವರೆಗೆ ಊಟ, ವಸತಿ, ಬಟ್ಟೆ, ಚಿಕಿತ್ಸೆಯ ಜತೆಗೆ ಶಿಕ್ಷಣ ವೆಚ್ಚವನ್ನು ಬಾಲಕಿಯರ ಬಾಲ ಮಂದಿರವೇ ಭರಿಸುತ್ತದೆ. ವಿಶೇಷ ಅನುಮತಿ ಪಡೆದು ಈ ಮಕ್ಕಳಿಗೆ 21ವರ್ಷ ತುಂಬುವವರೆಗೆ ಆಶ್ರಯ ನೀಡಲಾಗುವುದು. ರಾಜ್ಯ ಮಹಿಳಾ ನಿಲಯಗಳಲ್ಲಿ ಕೂಡ ಆಶ್ರಯ ಸಿಗಲಿದ್ದು, ಸ್ವಾವಲಂಬಿಗಳಾಗಿ ಬದುಕಲು ನಡೆಸಲು ಕೌಶಲ ತರಬೇತಿ ಮತ್ತು ಮಾರ್ಗದರ್ಶನ ಸೌಲಭ್ಯ ಒದಗಿಸಲಾಗುವುದು’ ಎಂದರು.

ಪಡಿತರ ಚೀಟಿ: ‘ಮಕ್ಕಳ ಹೆಸರಿಗೆ ಪಡಿತರ ಚೀಟಿ ಕೊಡಿಸುವಂತೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪ ನಿರ್ದೇಶಕರ ಜತೆ ಚರ್ಚಿಸಲಾಗಿದೆ. ಮಹದೇವಪುರದಲ್ಲೇ ಇವರು ನೆಲೆ ನಿಲ್ಲಲು ಅನುಕೂಲ ಆಗುವಂತೆ ನಿವೇಶನ ಮಂಜೂರು ಮಾಡುವಂತೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಪಿಡಿಒಗೆ ಪತ್ರ ಬರೆಯುತ್ತಿದ್ದೇನೆ’ ಎಂದು ಅಶೋಕ್‌ ತಿಳಿಸಿದರು.

ಮಕ್ಕಳಿಗೆ ಖುಷಿ: ತಾಯಿಯ ಮರಣದ ನಂತರ ಮದ್ಯ ವ್ಯಸನಿ ತಂದೆಯ ಕಿರುಕುಳ ಮತ್ತು ಹಸಿವಿನಿಂದ ಕಂಗಾಲಾಗಿದ್ದ ಮಕ್ಕಳು ಅಧಿಕಾರಿಗಳು ಕರೆದೊಡನೆ ಬಾಲಕಿಯರ ಬಾಲಮಂದಿರಕ್ಕೆ ಬರಲು ಖುಷಿಯಿಂದ ಒಪ್ಪಿಕೊಂಡರು. ಮದ್ಯದ ಅಮಲಿನಲ್ಲಿದ್ದ ತಂದೆ ಸಂದೀಪ್ ಅನುಮತಿಯನ್ನೂ ಕೇಳದೇ ಅಧಿಕಾರಿಗಳ ಜತೆ ಹೊರಬಿಟ್ಟರು.

*******

ವರದಿಗೆ ಸ್ಪಂದಿಸಿದ ಸಂಘಟನೆಗಳು

‘ಪ್ರಜಾವಾಣಿ’ ವರದಿಗೆ ಸ್ಪಂದಿಸಿದ ಜನರು, ವಿವಿಧ ಸಂಘಟನೆಗಳ ಸದಸ್ಯರು ಬಾಲಕಿರಿಗೆ ನೆರವು ನೀಡುವುದಾಗಿ ಘೋಷಿಸಿದ್ದಾರೆ. ಚಿತ್ರ ನಟ ಡಾಲಿ ಧನಂಜಯ ಅವರ ಸಹೋದರ ಗಿರೀಶ್‌ ತಮ್ಮ ಟ್ರಸ್ಟ್‌ ಮೂಲಕ ಮಕ್ಕಳಿಗೆ ಅಗತ್ಯ ನೆರವು ನೀಡುವುದಾಗಿ ತಿಳಿಸಿದರು.

ನಾಲ್ಕೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಅವರ ಭವಿಷ್ಯ ರೂಪಿಸುವುದಾಗಿ ಬೆಂಗಳೂರಿನ ಸುಕಾಂಕ್ಷಾ ಚಾರಿಟಬಲ್‌ ಟ್ರಸ್ಟ್‌ನ ಮುಖ್ಯಸ್ಥ ಜ್ಞಾನೇಂದ್ರ ಕುಮಾರ್‌ ಹೇಳಿದರು. ಮಂಡ್ಯದಲ್ಲಿ ಮಮತೆಯ ಮಡಿಲು ಸಂಸ್ಥೆ ಮತ್ತು ಹೆಣ್ಣು ಮಕ್ಕಳ ಆಶ್ರಯಧಾಮ ನಡೆಸುವ ಅರುಣಾಕುಮಾರಿ ಯೋಗೇಶ್‌ ಈ ಮಕ್ಕಳ ಪೋಷಣೆ, ಪಾಲನೆಯ ಹೊಣೆ ಹೊರುವುದಾಗಿ ಮುಂದೆ ಬಂದರು.

ಮಕ್ಕಳನ್ನು ತಮ್ಮ ಆಶ್ರಮಕ್ಕೆ ಕಳುಹಿಸಿಕೊಡಿ ಎಂದು ಪಟ್ಟಣದ ಸಾಯಿ ಸೇವಾ ಅನಾಥಾಶ್ರಮದ ಮುಖ್ಯಸ್ಥ ಸಾಯಿಕುಮಾರ್‌ ಮನವಿ ಮಾಡಿದರು. ಬಾಲಕಿಯರನ್ನು ದತ್ತು ಪಡೆಯುವುದಾಗಿ ಆಸರೆ ಟ್ರಸ್ಟ್‌ ಮುಖ್ಯಸ್ಥ ಜಯರಾಜ್‌ ನಾಯ್ದು ಭರವಸೆ ನೀಡಿದರು. ‘ಒಬ್ಬ ಹೆಣ್ಣು ಮಗಳನ್ನು ದತ್ತು ಕೊಡಿ’ ಎಂದು ಸ್ಥಳೀಯರೊಬ್ಬರು ಅಧಿಕಾರಿಗಳಲ್ಲಿ ಮನವಿ ಮಾಡಿದರು.

*********

ತಹಶೀಲ್ದಾರ್‌, ಡಿ.ಸಿ ವಿರುದ್ಧ ಆಕ್ರೋಶ

ಸಂಕಷ್ಟ ಸ್ಥಿತಿಯಲ್ಲಿರುವ ಬಾಲಕಿಯರ ಸ್ಥಿತಿ ನೋಡಿ ರಾಜ್ಯದಾದ್ಯಂತ ಜನರು ಮುಮ್ಮಲ ಮರುಗಿದರು. ಸಾಮಾಜಿಕ ಜಾಲತಾಣಗಳಲ್ಲಿ ಈ ವರದಿ ಹರಿದಾಡಿತು. ಜಿಲ್ಲಾಧಿಕಾರಿಗಳು ತಕ್ಷಣವೇ ಗ್ರಾಮಕ್ಕೆ ತೆರಳಿ ಬಾಲಕಿಯರ ಕಷ್ಟ ಕೇಳಬೇಕು, ಸೂರು ಹಾಗೂ ಇತರ ಸೌಲಭ್ಯ ಒದಗಿಸಬೇಕು ಎಂಬ ಒತ್ತಾಯ ವ್ಯಕ್ತವಾಯಿತು.

ಆದರೆ ಸ್ಥಳಕ್ಕೆ ಭೇಟಿ ನೀಡದ ಶ್ರೀರಂಗಪಟ್ಟಣ ತಹಶೀಲ್ದಾರ್‌ ಶ್ವೇತಾ ರವೀಂದ್ರ, ಜಿಲ್ಲಾಧಿಕಾರಿ ಡಾ.ಎಚ್‌.ಎನ್‌.ಗೋಪಾಲಕೃಷ್ಣ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ‘ರಾಜ್ಯದ ಮೂಲೆಮೂಲೆಯಿಂದ ಕರೆಗಳು ಬರುತ್ತಿವೆ. ಬಾಲಕಿಯರನ್ನು ದತ್ತು ಪಡೆಯುವುದಾಗಿ ಕೇಳುತ್ತಿದ್ದಾರೆ. ಆದರೆ ಶ್ರೀರಂಗಪಟ್ಟಣ ತಹಶೀಲ್ದಾರ್‌ ಹಾಗೂ ಜಿಲ್ಲಾಧಿಕಾರಿಗೆ ಏನಾಗಿದಿಯೋ ಗೊತ್ತಿಲ್ಲ. ಬಾಲಕಿಯರನ್ನು ಭೇಟಿಯಾಗದ ಅವರಿಗೆ ನಾಚಿಕೆಯಾಗಬೇಕು’ ಎಂದು ಮಹದೇವಪುರದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

********

ಮದ್ಯದ ಅಮಲಿನಲ್ಲಿದ್ದ ಅಪ್ಪ

ಶುಕ್ರವಾರ ವಿವಿಧ ಸಂಘಟನೆಗಳ ಸದಸ್ಯರು ಗ್ರಾಮಕ್ಕೆ ಭೇಟಿ ನೀಡಿ ಯುವತಿಯರಿಗೆ ಧೈರ್ಯ ತುಂಬಿದರು. ಎಲ್ಲಾ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದರು. ಆದರೆ, ಯುವತಿಯ ತಂದೆ ಸಂದೀಪ್‌ ಮದ್ಯದ ಅಮಲಿನಲ್ಲಿ ತೇಲಾಡುತ್ತಿದ್ದರು. ಹೆಣ್ಣುಮಕ್ಕಳ ಬಗ್ಗೆ ಕನಿಷ್ಠ ಚಿಂತೆ ಇಲ್ಲದೇ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದುದನ್ನು ಕಂಡು ಜನರ ಮನಸ್ಸು ಕರಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT