ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ನಿದುರಂತ ತಡೆಗೆ ಮುನ್ನೆಚ್ಚರಿಕೆ ಕ್ರಮ: ಕೃಷ್ಣಬೈರೇಗೌಡ ಸೂಚನೆ

Published 30 ಅಕ್ಟೋಬರ್ 2023, 16:11 IST
Last Updated 30 ಅಕ್ಟೋಬರ್ 2023, 16:11 IST
ಅಕ್ಷರ ಗಾತ್ರ

ಬೆಂಗಳೂರು: ನಗರ ಪ್ರದೇಶದಲ್ಲಿ ಹೆಚ್ಚುತ್ತಿರುವ ಅಗ್ನಿ ದುರಂತಗಳಿಂದ ಪ್ರಾಣಾಪಾಯಗಳು ಹೆಚ್ಚುತ್ತಿವೆ. ಅಗ್ನಿ ದುರಂತಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಹಿಸಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸೂಚಿಸಿದ್ದಾರೆ.

ವಿಕಾಸಸೌಧದಲ್ಲಿ ಅಗ್ನಿ ಶಾಮಕದಳದ ಅಧಿಕಾರಿಗಳ ಜೊತೆಗಿನ ಸಭೆಯಲ್ಲಿ ಮಾತನಾಡಿದ ಕೃಷ್ಣ ಬೈರೇಗೌಡ, ಕಳೆದ 20 ದಿನಗಳ ಅವಧಿಯಲ್ಲಿ ಬೆಂಗಳೂರಿನಲ್ಲೇ ಮೂರು ಕಡೆಗಳಲ್ಲಿ ಅಗ್ನಿ ಅನಾಹುತಗಳು ಸಂಭವಿಸಿವೆ. ಅಗ್ನಿ ದುರಂತಗಳಿಂದ ಜನರೂ ಭಯಭೀತರಾಗಿದ್ದಾರೆ. ಹೀಗಾಗಿ ಬೆಂಗಳೂರು ನಗರದ ಭಾಗಗಳೂ ಸೇರಿ ರಾಜ್ಯಾದ್ಯಂತ ಅಗ್ನಿ ದುರಂತಗಳು ಸಂಭವಿಸದಂತೆ ತಡೆಯುವಂತಾಗಬೇಕು ಎಂದು ಅವರು ಸಲಹೆ ನೀಡಿದರು.

ಅತ್ತಿಬೆಲೆ ಪಟಾಕಿ ಗೋದಾಮಿನ ದುರಂತದಲ್ಲಿ 13 ಕಾರ್ಮಿಕರು ಮೃತಪಟ್ಟಿದ್ದರು. ಕೋರಮಂಗಲದ ಮಡ್‌ಪೈಪ್ ರೆಸ್ಟೋಕೆಫೆ ಅಗ್ನಿ ದುರಂತಕ್ಕೆ ಈಡಾಗಿತ್ತು. ಈ ದುರಂತದಲ್ಲಿ ಇಬ್ಬರು ಮೃತಪಟ್ಟಿದ್ದರೆ, ಹಲವರು ಗಾಯಗೊಂಡಿದ್ದರು. ಇದರ ಬೆನ್ನಿಗೆ ಹಜ್‌ ಭವನವೂ ಬೆಂಕಿಗೆ ಆಹುತಿಯಾಗಿದೆ. ಕನಿಷ್ಠ ₹3 ಕೋಟಿ ನಷ್ಟವಾಗಿದೆ. ಇಂತಹ ದುರಂತಗಳಿಗೆ ಕಾರಣವೇನು? ಇದನ್ನು ತಡೆಯಲು ತೆಗೆದುಕೊಳ್ಳಬೇಕಾದ ಕ್ರಮಗಳೇನು ಎಂಬ ಕುರಿತು ಅಗ್ನಿಶಾಮಕ ದಳ ಚಿಂತನೆ ನಡೆಸಬೇಕಿದೆ ಎಂದರು.

ಅಗ್ನಿಶಾಮಕ ದಳದ ಉನ್ನತೀಕರಣಗಳ ಬಗ್ಗೆಯೂ ಗಮನವಹಿಸಬೇಕಿದೆ. ಇದರ ಜೊತೆಗೆ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡುವಾಗಲೇ ಅಗ್ನಿ ದುರಂತ ತಡೆಗೆ ತೆಗೆದುಕೊಳ್ಳಲಾಗಿರುವ ಕ್ರಮಗಳ ಬಗ್ಗೆಯೂ ಪರಿಶೀಲಿಸಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಬೇಕು ಎಂದೂ ಸೂಚಿಸಿದರು.

ಅಗ್ನಿಶಾಮಕ ದಳದ ಉನ್ನತೀಕರಣ ಹಾಗೂ ಹೊಸ ಅಗ್ನಿಶಾಮಕ ದಳಗಳನ್ನು ಸ್ಥಾಪಿಸುವ ಕುರಿತ ಕ್ರಿಯಾ ಯೋಜನೆ ಮಂಡಿಸಿದ ಅಗ್ನಿ ಶಾಮಕದಳ ಪೊಲೀಸ್ ಮಹಾ ನಿರ್ದೇಶಕ ಕಮಲ್‌ ಪಂತ್, ಉಡುಪಿ ಜಿಲ್ಲೆಯ ಮಣಿಪಾಲ, ದಾವಣಗೆರೆಯ ನ್ಯಾಮತಿ, ವಿಜಯಪುರ ಜಿಲ್ಲೆಯ ನಿಡಗುಂದಿ– ಬಬಲೇಶ್ವರ, ರಾಯಚೂರಿನ ಮಸ್ಕಿ, ಬೆಳಗಾವಿಯ ಮೂಡಲಗಿ, ಬಳ್ಳಾರಿಯ ಕಂಪ್ಲಿ ಹಾಗೂ ಕಲಬುರಗಿಯ ಶಹಬಾದ್‌ ಭಾಗದಲ್ಲಿ ನೂತನ ಅಗ್ನಿಶಾಮಕ ದಳ ಸ್ಥಾಪಿಸುವ ವಿವರ ನೀಡಿದರು.

ಬೆಂಗಳೂರು ಸೇರಿ ನಗರ ಪ್ರದೇಶಗಳಲ್ಲಿ ಸಂಭವಿಸುತ್ತಿರುವ ಅಗ್ನಿ ಅವಘಡಗಳ ತಡೆಗೆ ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬ ಕುರಿತು ಶೀಘ್ರದಲ್ಲೇ ಇಲಾಖೆಗೆ ವರದಿ ನೀಡುವುದಾಗಿಯೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT