ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಖಾಸಗಿ ಶಾಲೆ: ಆ.26ರಿಂದ ಕಪ್ಪುಪಟ್ಟಿ ಧರಿಸಿ ಕೆಲಸ

ಶಿಕ್ಷಕರ ಕಲ್ಯಾಣ ನಿಧಿ ಬಳಕೆಯಲ್ಲಿನ ತಾರತಮ್ಯ ಆರೋಪ
Published 24 ಆಗಸ್ಟ್ 2024, 16:30 IST
Last Updated 24 ಆಗಸ್ಟ್ 2024, 16:30 IST
ಅಕ್ಷರ ಗಾತ್ರ

ಬೆಂಗಳೂರು: ಶಿಕ್ಷಕರ ಕಲ್ಯಾಣ ನಿಧಿ ಬಳಕೆಯಲ್ಲಿನ ತಾರತಮ್ಯ ಖಂಡಿಸಿ ಖಾಸಗಿ ಶಾಲಾ ಶಿಕ್ಷಕರು ಆ. 26ರಿಂದ ಕಪ್ಪುಪಟ್ಟಿ ಧರಿಸಿ ಕೆಲಸಕ್ಕೆ ಹಾಜರಾಗಲಿದ್ದಾರೆ.

ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕರ್ನಾಟಕ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆ,‘ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಪ್ರತಿ ವರ್ಷ ಶಿಕ್ಷಕರ ಕಲ್ಯಾಣ ನಿಧಿಗೆ ಪ್ರಾಥಮಿಕ ಶಿಕ್ಷಕರಿಂದ ₹50 ಹಾಗೂ ಪ್ರೌಢಶಾಲಾ ಶಿಕ್ಷಕರು, ಪದವಿಪೂರ್ವ ಕಾಲೇಜು ಉಪನ್ಯಾಸಕರಿಂದ ₹100 ಸಂಗ್ರಹಿಸಲಾಗುತ್ತಿದೆ. ಆದರೆ, ಸಂಗ್ರಹಿಸಿದ ಹಣವನ್ನು ಸರ್ಕಾರಿ ಶಾಲಾ ಶಿಕ್ಷಕರ ಕಲ್ಯಾಣಕ್ಕಷ್ಟೇ ಬಳಸಲಾಗುತ್ತಿದೆ’ ಎಂದು ದೂರಿದರು.

'ಶಿಕ್ಷಕರು ನಿಧನರಾದರೆ, ಆರೋಗ್ಯ ಸಮಸ್ಯೆಗೆ ತುತ್ತಾದರೆ, ಶಿಕ್ಷಕರ ಮಕ್ಕಳ ಪ್ರತಿಭಾ ಪ್ರೋತ್ಸಾಹಕ್ಕೆ ಶಿಕ್ಷಕರ ನಿಧಿ ಬಳಸಲಾಗುತ್ತದೆ. ಈ ಎಲ್ಲ ಸೌಲಭ್ಯಗಳನ್ನು ಖಾಸಗಿ ಶಾಲಾ ಶಿಕ್ಷಕರಿಗೂ ಅನ್ವಯಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನಾ ಧ್ವನಿ ಎತ್ತಲಾಗಿದೆ. ಬೇಡಿಕೆ ಈಡೇರದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ’ ಎಂದರು. 

ಶಿಕ್ಷಕರ ದಿನಾಚರಣೆ ವೇಳೆ ನೀಡುವ ಅತ್ತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಖಾಸಗಿ ಶಾಲಾ ಶಿಕ್ಷಕರನ್ನು ಪರಿಗಣಿಸಬೇಕು. 1995ರ ನಂತರ ಆರಂಭವಾದ ಕನ್ನಡ ಮಾದ್ಯಮ ಶಾಲೆಗಳನ್ನು  ಅನುದಾನಕ್ಕೆ ಒಳಪಡಿಸಬೇಕು. ಗಡಿನಾಡು ಕನ್ನಡ ಶಾಲೆಗಳಲ್ಲಿ ಮಕ್ಕಳು–ಶಿಕ್ಷಕರ ಅನುಪಾತವನ್ನು ಕಡ್ಡಾಯಗೊಳಿಸಬಾರದು ಎಂಬುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.

ಆರ್‌ಟಿಇ ಮರು ಜಾರಿಗೆ ಒತ್ತಾಯ

ಕೇಂದ್ರದ ಯುಪಿಎ ಸರ್ಕಾರ ಬಡ ಮಕ್ಕಳ ಶಿಕ್ಷಣಕ್ಕಾಗಿ 2009ರಲ್ಲಿ ರೂಪಿಸಿದ್ದ ಕಡ್ಡಾಯ ಶಿಕ್ಷಣ ನೀತಿಯ ಸ್ವರೂಪವನ್ನೇ ಬದಲಿಸಲಾಗಿದೆ. ಹಿಂದೆ ಇದ್ದಂತೆ ಆರ್‌ಟಿಇ ಮರುಜಾರಿಗೊಳಿಸಬೇಕು. ಎಲ್ಲ ಖಾಸಗಿ ಶಾಲೆಗಳಲ್ಲೂ ಆರ್‌ಟಿಇ ಅಡಿ ಮಕ್ಕಳನ್ನು ದಾಖಲು ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಲೋಕೇಶ್‌ ತಾಳಿಕಟ್ಟೆ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT