ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಬಲ ಬೆಲೆಯಲ್ಲಿ ವರ್ಷವಿಡೀ ಕೊಬ್ಬರಿ ಖರೀದಿಗೆ ಕೇಂದ್ರಕ್ಕೆ ಪ್ರಸ್ತಾವನೆ

Published 31 ಆಗಸ್ಟ್ 2023, 16:22 IST
Last Updated 31 ಆಗಸ್ಟ್ 2023, 16:22 IST
ಅಕ್ಷರ ಗಾತ್ರ

ಬೆಂಗಳೂರು: ಕೊಬ್ಬರಿಗೆ ವರ್ಷ ಪೂರ್ತಿ ಬೆಂಬಲ‌ ಬೆಲೆ ನೀಡಿ ಖರೀದಿಸಲು‌ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಬೆಲೆ ಸ್ಥಿರೀಕರಣ ಸಚಿವ ಸಂಪುಟ ಉಪ ಸಮಿತಿ ತೀರ್ಮಾನಿಸಿದೆ.

ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಸಮಿತಿಯ ಸಭೆ ಗುರುವಾರ ನಡೆಯಿತು. ನಿಗದಿತ 54,750 ಟನ್ ಕೊಬ್ಬರಿ ಖರೀದಿ ಗುರಿ ಸಾಧಿಸಬೇಕು, ಜೊತೆಗೆ ಬೆಂಬಲ ಬೆಲೆಯಲ್ಲಿ ತೆಂಗಿನಕಾಯಿ ಖರೀದಿಸುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲು ಕೂಡಾ ಸಭೆಯಲ್ಲಿ ತೀರ್ಮಾನಿಸಲಾಯಿತು.

ಕೇರಳ ಮಾದರಿಯಲ್ಲಿ ರಾಜ್ಯದಲ್ಲಿಯೂ ಕೊಬ್ಬರಿ ಉತ್ಪನ್ನಗಳ ಮೌಲ್ಯವರ್ಧನೆಗೆ ಗಮನಹರಿಸಬೇಕು. ಕೃಷಿ ಆವರ್ತನ ನಿಧಿಗೆ ಕಾಯಂ ಅನುದಾನ ಒದಗಿಸಬೇಕು. ಅದರ ಒಟ್ಟು ಪ್ರಮಾಣ ಏರಿಕೆಯಾಗುತ್ತಾ ಹೋಗಬೇಕು ಎಂದು ಸಭೆಯಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತವಾಯಿತು.

ರೈತರಿಗೆ ಅನುಕೂಲವಾಗುವಂತೆ ಸಕಾಲದಲ್ಲಿ ಮಾರುಕಟ್ಟೆ ಮಧ್ಯಪ್ರವೇಶಿಸಬೇಕು, ಖರೀದಿಸಿದ ಉತ್ಪನ್ನಗಳಿಗೆ ತಕ್ಷಣ ಹಣ ನೀಡಬೇಕು. ಚಾಮರಾಜನಗರ ರೈತರಿಂದ ಅರಿಶಿಣ ಖರೀದಿಸಿ ಹಣ ನೀಡಿಕೆ ವಿಳಂಬ ಮಾಡಿರುವ ಪ್ರಕರಣಗಳಲ್ಲಿ 53 ರೈತರಿಗೆ ಬಡ್ಡಿ ಸೇರಿಸಿ ಹಣ ನೀಡುವಂತೆಯೂ ಸಮಿತಿ ಸೂಚನೆ ನೀಡಿತು.

ಮುಂಬರುವ ಜನವರಿಯಿಂದ ಯಾವುದೇ ಲೋಪಗಳಾಗದೆ ನಿಯಮಾನುಸಾರ ಬೆಂಬಲ ಬೆಲೆಯಲ್ಲಿ ಭತ್ತ, ರಾಗಿ, ಜೋಳ ಖರೀದಿಸಬೇಕು. ಈರುಳ್ಳಿ ರಫ್ತಿನ ಮೇಲೆ ಹೆಚ್ಚು ತೆರಿಗೆ ವಿಧಿಸಿರುವುದರಿಂದ ರೈತರಿಗೆ ಉತ್ತಮ ದರ ಪಡೆಯುವ ಅವಕಾಶ ತಪ್ಪಿದೆ. ಈ ಬಗ್ಗೆ ಕೇಂದ್ರ ಕ್ರಮ ವಹಿಸಬೇಕು ಎಂದು ಒತ್ತಾಯಿಸಲು ಸಮಿತಿ ನಿರ್ಣಯಿಸಿತು.

ಸಚಿವ ಸಂಪುಟ ಉಪ ಸಮಿತಿಯ ಸದಸ್ಯರಾದ ಕಾನೂನು ‌ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ, ಆಹಾರ ಸಚಿವ ಕೆ.ಎಚ್. ಮುನಿಯಪ್ಪ, ಸಹಕಾರ ಸಚಿವ ಕೆ.ಎನ್. ರಾಜಣ್ಣ, ಕೃಷಿ ಉತ್ಪನ ಮಾರುಕಟ್ಟೆ ಸಮಿತಿ ಸಚಿವ ಶಿವಾನಂದ ಪಾಟೀಲ ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT