ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗುತ್ತಿಗೆದಾರರ ಬಾಕಿ ಶೀಘ್ರ ಬಿಡುಗಡೆ: ಹೈಕೋರ್ಟ್‌ಗೆ ರಾಜ್ಯ ಸರ್ಕಾರ

Published 3 ಸೆಪ್ಟೆಂಬರ್ 2024, 16:04 IST
Last Updated 3 ಸೆಪ್ಟೆಂಬರ್ 2024, 16:04 IST
ಅಕ್ಷರ ಗಾತ್ರ

ಬೆಂಗಳೂರು: ‘ಗುತ್ತಿಗೆದಾರರ ಬಾಕಿ ಹಣವನ್ನು ಗರಿಷ್ಠ ಒಂದು ಅಥವಾ ಎರಡು ವಾರಗಳಲ್ಲಿ ಬಿಡುಗಡೆ ಮಾಡಲಾಗುವುದು’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

ಈ ಸಂಬಂಧ ಮೆಸರ್ಸ್‌ ನಿಕ್ಷೇಪ ಇನ್ಫ್ರಾ ಪ್ರಾಜೆಕ್ಟ್ಸ್‌ ಪಾಲುದಾರ ಬಿ.ಎಸ್‌.ಧನಂಜಯ ಸೇರಿದಂತೆ ಒಟ್ಟು 44 ಗುತ್ತಿಗೆ ಕಂಪನಿಗಳು ಹಾಗೂ ಗುತ್ತಿಗೆದಾರರು ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೊರತುಪಡಿಸಿ ಉಳಿದೆಲ್ಲಾ ಸಂಸ್ಥೆಗಳು ಶೇ 100ರಷ್ಟು ಹಣ ಬಿಡುಗಡೆ ಮಾಡಿವೆ. ಬಿಬಿಎಂಪಿ ಶೇ 75ರಷ್ಟು ಬಾಕಿ ಬಿಡುಗಡೆ ಮಾಡಿದ್ದು, ಶೇ 25ರಷ್ಟು ಬಾಕಿ ಉಳಿಸಿಕೊಂಡಿದೆ. ಸರ್ಕಾರದ ಕಾಮಗಾರಿಗಳಿಂದ ದೊರೆಯುವ ಲಾಭ ಶೇ 10ಕ್ಕೂ ಕಡಿಮೆ. ಶೇ 25ರಷ್ಟು ಹಣ ಉಳಿಸಿಕೊಂಡರೆ ಏನು ಮಾಡುವುದು? ಈ ನಡುವೆ ಜಿಎಸ್‌ಟಿ ನೋಟಿಸ್ ಸಹ ಬರುತ್ತಿವೆ’ ಎಂದು ಆಕ್ಷೇಪಿಸಿದರು.

ಇದಕ್ಕೆ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ, ‘ಬಾಕಿ ಹಣವನ್ನು ಗರಿಷ್ಠ ಒಂದು ಅಥವಾ ಎರಡು ವಾರಗಳಲ್ಲಿ ಬಿಡುಗಡೆ ಮಾಡಿಸಲಾಗುವುದು’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಅರ್ಜಿದಾರರ ಪರ ವಕೀಲರನ್ನು ಉದ್ದೇಶಿಸಿದ ನ್ಯಾಯಪೀಠವು, ‘ಶೇ 75ರಷ್ಟು ಹಣ ಬಿಡುಗಡೆಯಾಗಿದೆಯಲ್ಲಾ? ಈಗ ಬಾಕಿ ಹಣ ಬಿಡುಗಡೆಗೆ ಅಡ್ವೊಕೇಟ್ ಜನರಲ್ ಭರವಸೆ ನೀಡಿದ್ದಾರೆ’ ಎಂದು ವಿಚಾರಣೆಯನ್ನು ಇದೇ 24ಕ್ಕೆ ಮುಂದೂಡಿತು.

2019-20ರಿಂದ 2022-23ರ ಅವಧಿಯಲ್ಲಿ ಗುತ್ತಿಗೆದಾರರಿಗೆ ನೀಡಿರುವ ಕಾಮಗಾರಿಗಳ ಗುಣಮಟ್ಟ ಮತ್ತಿತರ ಅಂಶಗಳ ತನಿಖೆಗಾಗಿ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ಆಯೋಗ ರಚನೆ ಮಾಡಿ 2023ರ ಆಗಸ್ಟ್ 5ರಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT