ಬೆಂಗಳೂರು: ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತುರ್ತುಪರಿಸ್ಥಿತಿ ಹೇರಲು ಮುಂದಾಗಿದೆ. ಆದರೆ, ನಮ್ಮ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ಇವರ ಗೊಡ್ಡು ಬೆದರಿಕೆಗಳಿಗೆ ಹೆದರುವುದೂ ಇಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದರು.
‘ನಾಗಮಂಗಲದ ಕೋಮುಗಲಭೆ ವಿಚಾರದಲ್ಲಿ ಸರಿಯಾಗಿ ತನಿಖೆ ನಡೆಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದು ಮಾತ್ರವಲ್ಲದೇ, ಅಲ್ಲಿನ ಜನರು ಹೇಳಿದ್ದ ವಿಚಾರವನ್ನು ಆಧರಿಸಿ ‘ಎಕ್ಸ್’ ಮಾಡಿದ್ದೆ. ಸತ್ಯ ಹೇಳಿದ್ದಕ್ಕಾಗಿ ನಮ್ಮನ್ನು ಬೆದರಿಸಲು ಎಫ್‌ಐಆರ್ ದಾಖಲಿಸಿದ್ದಾರೆ’ ಎಂದು ಅವರು ಸುದ್ದಿಗಾರರ ಜತೆ ಮಾತನಾಡಿ ತಿಳಿಸಿದರು.
‘ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದನ್ನು ಸುಳ್ಳು ಎಂದು ಸಚಿವರೇ ಹೇಳಿದ್ದರು. ಬಳಿಕ ಅದು ನಿಜ ಎಂದು ಸಾಬೀತಾಯಿತು. ಹಾಗಾದರೆ ಸಚಿವರ ವಿರುದ್ಧವೂ ಎಫ್‌ಐಆರ್ ದಾಖಲಿಸಬೇಕಿತ್ತಲ್ಲ’ ಎಂದು ಅವರು ಪ್ರಶ್ನಿಸಿದರು.
‘ವಿರೋಧಪಕ್ಷದ ನಾಯಕನಾಗಿ ತನಿಖೆ ಮಾಡಿ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದೇನೆ. ಸರ್ಕಾರದ ಸರ್ವಾಧಿಕಾರಿ ಧೋರಣೆ ವಿರುದ್ಧ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುತ್ತೇವೆ. ಪೊಲೀಸರನ್ನು ಕೈಗೊಂಬೆ ಮಾಡಿಕೊಂಡು ಆಡಿಸುತ್ತಿದ್ದಾರೆ. ಇವರು ರಾಜ್ಯಪಾಲರ ಅಧಿಕಾರ ಕಸಿಯಲು ಮುಂದಾಗಿದ್ದಾರೆ’ ಎಂದು ಹೇಳಿದರು.
‘ಸಿದ್ದರಾಮಯ್ಯ ಸರ್ವಾಧಿಕಾರಿ’
‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದಮೇಲೆ ಹಿಟ್ಲರ್ ಆಗಿದ್ದಾರೆ. ರಾಜ್ಯದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಹೇರಿದ್ದಾರೆ’ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಬಿಜೆಪಿ ಸಂಸದರು ಮತ್ತು ಶಾಸಕರ ಮೇಲೆ ನಿರಂತರವಾಗಿ ಎಫ್‌ಐಆರ್ ದಾಖಲಿಸಲಾಗುತ್ತಿದೆ. ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ವಿರೋಧ ಪಕ್ಷದ ನಾಯಕ ಮತ್ತು ಕೇಂದ್ರ ಸಚಿವರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ’ ಎಂದು ದೂರಿದರು.
‘ವಿರೋಧಪಕ್ಷದ ನಾಯಕ ಅಶೋಕ ಮತ್ತು ನಾನು ಮಾಡಿದ ತಪ್ಪೇನು? ಯಾವ ಅಪರಾಧಕ್ಕಾಗಿ ನೀವು ಎಫ್‌ಐಆರ್ ಹಾಕಿದ್ದೀರಿ? ನಾವು ನಿಮ್ಮನ್ನು ಪ್ರಶ್ನಿಸಿದ್ದು ನಮ್ಮ ಅಪರಾಧವೇ? ಅಲ್ಪಸಂಖ್ಯಾತರನ್ನು ಓಲೈಕೆ ಮಾಡುವುದಕ್ಕಾಗಿ ಪ್ರಜಾತಂತ್ರವನ್ನು ಕಗ್ಗೊಲೆ ಮಾಡುತ್ತಿದ್ದೀರಿ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.