ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯದ ಹಲವೆಡೆ ಸತತ ಮಳೆ: ಸೇತುವೆ ಮುಳುಗಡೆ

ಕೃಷ್ಣಾ, ದೂಧಗಂಗಾ, ಘಟಪ್ರಭಾ ನದಿಗಳ ನೀರಿನ ಮಟ್ಟ ದಿಢೀರ್‌ ಏರಿಕೆ
Published : 26 ಆಗಸ್ಟ್ 2024, 23:30 IST
Last Updated : 26 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments
ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶ ಹಾಗೂ ಜಿಲ್ಲೆಯ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಿಂದಾಗಿ, ದೂಧಗಂಗಾ ನದಿಯ ಮಲಿಕವಾಡ– ದತ್ತವಾಡ ಸೇತುವೆ ಸೋಮವಾರ ಜಲಾವೃತಗೊಂಡಿದೆ.

ಹುಬ್ಬಳ್ಳಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶ ಮತ್ತು ಬೆಳಗಾವಿ ಜಿಲ್ಲೆಯ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಿಂದ ಕೃಷ್ಣಾ, ದೂಧಗಂಗಾ ಹಾಗೂ ವೇದಗಂಗಾ ನದಿಗಳ ನೀರಿನ ಮಟ್ಟ ಸೋಮವಾರ ದಿಢೀರ್‌ ಏರಿಕೆಯಾಗಿದೆ. ನದಿ ತೀರದ ಜನರಿಗೆ ಎಚ್ಚರಿಕೆ ನೀಡಲಾಗಿದೆ.

ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ರಾಜಾಪುರ ಬ್ಯಾರೇಜಿನಿಂದ ಕೃಷ್ಣಾ ನದಿಗೆ 47,250 ಕ್ಯುಸೆಕ್ ಹೊರ ಹರಿವು ಇದೆ. ದೂಧಗಂಗಾ ನದಿಗೆ 15,840 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ–ಯಡೂರ ಬ್ಯಾರೇಜ್ ಬಳಿಯಲ್ಲಿ ಕೃಷ್ಣಾ ನದಿಗೆ 63,090 ಕ್ಯುಸೆಕ್ ನೀರು ಹರಿದು ಬರುತ್ತಿದೆ. ದೂಧಗಂಗಾ ನದಿಯ ಮಲಿಕವಾಡ–ದತ್ತವಾಡ ಸೇತುವೆ ಜಲಾವೃತಗೊಂಡಿದೆ.

ಘಟಪ್ರಭಾ ನದಿ ನೀರಿನ ಹರಿವು ಹೆಚ್ಚಾಗಿದ್ದು, ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ಢವಳೇಶ್ವರ ಸೇತುವೆ ಮುಳುಗಡೆಯಾಗಿದೆ. ನಂದಗಾಂವ-ಅವರಾದಿ ಸೇತುವೆ ಸಹ ಮುಳುಗಡೆ ಆಗಿದೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಭಟ್ಕಳ, ಹೊನ್ನಾವರ, ಕುಮಟಾದಲ್ಲಿ ಬಿರುಸಿನ ಮಳೆಯಾದರೆ, ಜೊಯಿಡಾ ತಾಲ್ಲೂಕಿನ ಅಣಶಿ, ಕುಂಬಾರವಾಡಾ, ಕ್ಯಾಸಲ್‍ರಾಕ್ ಪ್ರದೇಶದ ನಿರಂತರವಾಗಿ ಮಳೆ ಸುರಿಯುತ್ತಿದೆ.

ಕೊಡಗಿನ ಕೆಲವೆಡೆ ಜೋರು ಮಳೆ (ಮಡಿಕೇರಿ ವರದಿ): ಕೊಡಗು ಜಿಲ್ಲೆಯ ಕೆಲವೆಡೆ ಭಾನುವಾರ ರಾತ್ರಿಯಿಂದ ಮಳೆ ಬಿರುಸುಗೊಂಡಿದೆ.

ಭಾಗಮಂಡಲದಲ್ಲಿ 5 ಸೆ.ಮೀ. ಹಾಗೂ ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿಯಲ್ಲಿ 4 ಸೆಂ.ಮೀ. ಮಳೆ ಸುರಿದಿದೆ. ಮಡಿಕೇರಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಬಿಟ್ಟು ಬಿಟ್ಟು ಜೋರು ಮಳೆ ಬಿದ್ದಿತು. ಪರಿಣಾಮ, ಹಾರಂಗಿ ಜಲಾಶಯಕ್ಕೆ 2ಸಾವಿರ ಕ್ಯುಸೆಕ್‌ ನೀರು ಹರಿದುಬರುತ್ತಿದೆ.

ಉಡುಪಿ ವರದಿ: ಉಡುಪಿ ಜಿಲ್ಲೆಯಾದ್ಯಂತ ಸೋಮವಾರ ಸಂಜೆ ಧಾರಾಕಾರ ಮಳೆ ಸುರಿಯಿತು.‌‌ ಅಷ್ಟಮಿ ಅಂಗವಾಗಿ ಉಡುಪಿಯ ಕೃಷ್ಣ ಮಠಕ್ಕೆ ಸಂಜೆ ಭೇಟಿ ನೀಡಿದ್ದ ಭಕ್ತರಿಗೆ ತೊಂದರೆಯಾಯಿತು. ರಥಬೀದಿಯಲ್ಲಿನ ವ್ಯಾಪಾರಿಗಳಿಗೂ ಸಮಸ್ಯೆಯಾಯಿತು. ಮಂಗಳೂರು ನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ಸಾಧಾರಣ ಮಳೆಯಾಯಿತು.

ಶಿರೂರು ದುರಂತ: ಪಿಎಂ ನಿಧಿಯಿಂದ ತಲಾ ₹2 ಲಕ್ಷ ಪರಿಹಾರ

ಕಾರವಾರ: ‘ಅಂಕೋಲಾ ತಾಲ್ಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿತ ದುರಂತದಲ್ಲಿ ಮೃತರ ಕುಟುಂಬಗಳಿಗೆ ತಲಾ ₹2 ಲಕ್ಷ ಮತ್ತು ಗಾಯಗೊಂಡವರಿಗೆ ₹50 ಸಾವಿರ ಪರಿಹಾರವನ್ನು ಪ್ರಧಾನಿ ನರೇಂದ್ರ ಮೋದಿ ಮಂಜೂರು ಮಾಡಿದ್ದಾರೆ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

‘ಶಿರೂರು ದುರ್ಘಟನೆಯಲ್ಲಿ ಸಂತ್ರಸ್ತರಾದ ಕುಟುಂಬಗಳಿಗೆ ಅಗತ್ಯ ಪರಿಹಾರ ನೀಡಲು ಪ್ರಧಾನಿಯವರಿಗೆ ಕೋರಿದ್ದೆ. ಅದಕ್ಕೆ ಸ್ಪಂದಿಸಿದ ಅವರು ಪ್ರಧಾನ ಮಂತ್ರಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ ಪರಿಹಾರ ಬಿಡುಗಡೆ ಮಾಡಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

‘ಕೇಂದ್ರ ಸರ್ಕಾರವು ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಸಂತ್ರಸ್ತರ ಮಾಹಿತಿಯನ್ನು ಎಕ್ಸ್–ಗ್ರೇಶಿಯಾ ಪೋರ್ಟಲ್‍ನಲ್ಲಿ ನಮೂದಿಸಲು ಸೂಚಿಸಿ ಆದೇಶಿಸಿದೆ. ಪರಿಹಾರ ಮೊತ್ತವು ನೇರವಾಗಿ ಸಂತ್ರಸ್ತರ ಖಾತೆಗೆ ಪಾವತಿಯಾಗಲಿದೆ ಎಂದೂ ತಿಳಿಸಿದೆ’ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ

ಬೆಂಗಳೂರು: ರಾಜ್ಯದ ಉಡುಪಿ, ದಕ್ಷಿಣ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಂಗಳವಾರ ಮತ್ತು ಬುಧವಾರ ಭಾರಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ, ಈ ಜಿಲ್ಲೆಗಳಲ್ಲಿ ‘ಆರೆಂಜ್ ಅಲರ್ಟ್‌’ ಘೋಷಿಸಿದೆ.

ಈ ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಭಾರಿ ಮಳೆಯೊಂದಿಗೆ ಗಾಳಿಯ ವೇಗವು ಪ್ರತಿ ಗಂಟೆಗೆ 30ರಿಂದ 40 ಕಿ.ಮೀ ತಲುಪುವ ಸಾಧ್ಯತೆಯಿದೆ. ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗೆ ‘ಯೆಲ್ಲೊ ಅಲರ್ಟ್‌’ ನೀಡಲಾಗಿದೆ. ಕರಾವಳಿಯಲ್ಲಿ ಗಂಟೆಗೆ 35 ಕಿ.ಮೀ.ಗಳಿಂದ 55 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಂಭವವಿದೆ. ಆದ್ದರಿಂದ ಮೀನುಗಾರರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT