ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಣೆಕಟ್ಟುಗಳ ಸುರಕ್ಷತೆ ಪರಿಶೀಲನೆಗೆ ರಾಕೇಶ್‌ ಸಿಂಗ್ ಸಮಿತಿ?

ನಿವೃತ್ತ ಎಸಿಎಸ್‌ ನೇತೃತ್ವದಲ್ಲಿ ಸಮಿತಿ ರಚಿಸಲು ಹಾಲಿ ಎಸಿಎಸ್‌ಗೆ ಡಿಕೆಶಿ ಸೂಚನೆ
Published 15 ಆಗಸ್ಟ್ 2024, 15:23 IST
Last Updated 15 ಆಗಸ್ಟ್ 2024, 15:23 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಎಲ್ಲ ಜಲಾಶಯಗಳ ಗೇಟ್‌ಗಳ ಸುರಕ್ಷತೆಯನ್ನು ಪರಿಶೀಲಿಸಿ ವರದಿ ನೀಡಲು ನಿವೃತ್ತ ಐಎಎಸ್‌ ಅಧಿಕಾರಿ ರಾಕೇಶ್‌ ಸಿಂಗ್‌ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸುವಂತೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತ ಅವರಿಗೆ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಸೂಚಿಸಿದ್ದಾರೆ.

ಜಲಸಂಪನ್ಮೂಲ ಇಲಾಖೆಯಲ್ಲಿ ಸುಮಾರು ಎಂಟು ವರ್ಷ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆ ನಿಭಾಯಿಸಿದ್ದ ರಾಕೇಶ್‌ ಸಿಂಗ್‌ ಅವರು ಇತ್ತೀಚೆಗೆ ವಯೋನಿವೃತ್ತಿ ಹೊಂದಿದ್ದರು. 

ಗೌರವ್‌ ಗುಪ್ತ ಅವರಿಗೆ ಇದೇ 12ರಂದು ಟಿಪ್ಪಣಿ ನೀಡಿರುವ ಡಿ.ಕೆ. ಶಿವಕುಮಾರ್‌, ‘ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ ಗೇಟ್‌ ತುಂಡಾದ ಘಟನೆಯು, ಈ ಜಲಾಶಯವನ್ನೂ ಸೇರಿ ಎಲ್ಲ ಜಲಾಶಯಗಳ ಗೇಟ್‌ಗಳ ಭದ್ರತೆಯನ್ನು ಪರಿಶೀಲಿಸಬೇಕೆಂಬ ಎಚ್ಚರಿಕೆಯ ಸಂದೇಶವನ್ನು ನೀಡಿದೆ. ಹೀಗಾಗಿ, ಸೂಕ್ತ ತಾಂತ್ರಿಕ ನಿಪುಣರನ್ನು ಒಳಗೊಂಡ ಸಮಿತಿ ರಚಿಸಿ, ರಾಜ್ಯದ ಎಲ್ಲ ಜಲಾಶಯಗಳ ಗೇಟ್‌ಗಳ ಪರಿಶೀಲನೆ, ದುರಸ್ತಿ ಮತ್ತು ಬದಲಾವಣೆ ಮಾಡುವ ಕೆಲಸವನ್ನು ತಕ್ಷಣ ಆರಂಭಿಸಬೇಕಿದೆ. ಈ ಹಿನ್ನೆಲೆಯಲ್ಲಿ ರಾಕೇಶ್‌ ಸಿಂಗ್‌ ನೇತೃತ್ವದಲ್ಲಿ ಸಮಿತಿ ರಚಿಸಿ, ಈ ಎಲ್ಲ ಕೆಲಸಗಳನ್ನು ತಕ್ಷಣ ಕೈಗೊಳ್ಳಬೇಕು’ ಎಂದು ತಿಳಿಸಿದ್ದಾರೆ.

‘ಅಣೆಕಟ್ಟು ಸುರಕ್ಷತಾ ಸಮಿತಿ ರಚಿಸಿ, ಆ ಸಮಿತಿಯು ಎಲ್ಲ ಅಣೆಕಟ್ಟುಗಳ ಅಧ್ಯಯನ ನಡೆಸಿ ಮುಂದಿನ ಒಂದು ತಿಂಗಳ ಒಳಗೆ ವರದಿ ನೀಡುವಂತೆ ಸೂಚಿಸಲಾಗುವುದು’ ಎಂದು ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದ ಬೆನ್ನಲ್ಲೆ, ರಾಕೇಶ್‌ ಸಿಂಗ್‌ ಅವರ ನೇತೃತ್ವದಲ್ಲಿ ಸಮಿತಿ ರಚನೆಗೂ ಅವರು ನಿರ್ದೇಶನ ನೀಡಿದ್ದಾರೆ.

ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿ ಆರ್ಥಿಕ ಹೊರೆ ಆಗಿರುವ ಗುತ್ತಿಗೆ– ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ನಿವೃತ್ತ ಸರ್ಕಾರಿ ಅಧಿಕಾರಿ, ನೌಕರರನ್ನು ತಕ್ಷಣದಿಂದಲೇ ಕರ್ತವ್ಯದಿಂದ ಬಿಡುಗಡೆ ಮಾಡಿ, ಆ ಹುದ್ದೆಗಳಿಗೆ ಹಾಲಿ ಸೇವೆಯಲ್ಲಿರುವ ಸರ್ಕಾರಿ ಅಧಿಕಾರಿ, ನೌಕರರನ್ನು ನಿಯೋಜಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಸೂಚನೆ ನೀಡಿದ್ದರು. ಆದರೂ ನಿವೃತ್ತರಿಗೆ ಮಣೆ ಹಾಕುತ್ತಿರುವುದಕ್ಕೆ ಇಲಾಖೆಯಲ್ಲೇ ಆಕ್ಷೇಪ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT