ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಷ್ಟ್ರಪತಿ ಅಂಕಿತಕ್ಕೆ ನೋಂದಣಿ ತಿದ್ದುಪಡಿ ಮಸೂದೆ

Published : 19 ಸೆಪ್ಟೆಂಬರ್ 2024, 15:43 IST
Last Updated : 19 ಸೆಪ್ಟೆಂಬರ್ 2024, 15:43 IST
ಫಾಲೋ ಮಾಡಿ
Comments

ಬೆಂಗಳೂರು: ಉಪ–ನೋಂದಣಾಧಿಕಾರಿ ಕಚೇರಿಗೆ ಭೇಟಿ ನೀಡದೆಯೇ ಆಸ್ತಿ ನೋಂದಣಿಗೆ ಅವಕಾಶ ಕಲ್ಪಿಸುವ ‘ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆ’ಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಅವರು ಅನುಮೋದನೆ ನೀಡಿದ್ದು, ಮಸೂದೆಯನ್ನು ರಾಜ್ಯ ಸರ್ಕಾರ ರಾಷ್ಟ್ರಪತಿ ಅಂಕಿತಕ್ಕೆ ಕಳುಹಿಸಿದೆ.

ಈ ಮಸೂದೆಗೆ ವಿಧಾನಮಂಡಲವು ಇದೇ ಫೆಬ್ರುವರಿಯಲ್ಲಿ ಅನುಮೋದನೆ ನೀಡಿತ್ತು. ಅದನ್ನು ರಾಜ್ಯಪಾಲರ ಅನುಮೋದನೆಗೆ ಕಳುಹಿಸಲಾಗಿತ್ತು. ಆದರೆ, ಅವರು ಕೆಲವು ಸ್ಪಷ್ಟನೆಗಳನ್ನು ಕೇಳಿ ಮಸೂದೆಯನ್ನು ಸರ್ಕಾರಕ್ಕೆ ಮರಳಿಸಿದ್ದರು.

ಮಸೂದೆಯಲ್ಲಿ ಕೆಲವು ಅಂಶಗಳನ್ನು ಉಲ್ಲೇಖಿಸಿ, ‘ತಿದ್ದುಪಡಿ ಪ್ರಕಾರ, ನೋಂದಣಿಗೆ ಸಂಬಂಧಿಸಿದಂತೆ ಡಿಜಿಟಲ್‌ ಸಹಿ ಇರುವ ದಾಖಲೆಗಳನ್ನು ನೀಡಲಾಗುತ್ತದೆ. ಇದು ಹಣಕಾಸು ವಂಚನೆ ಮತ್ತು ನೋಂದಣಿ ಪ್ರಕ್ರಿಯೆ ವೇಳೆಯಲ್ಲಿ ವಂಚನೆಗೆ ಕಾರಣವಾಗಬಹುದು. ಈ ಅಪಾಯವನ್ನು ಬಹಳ ಎಚ್ಚರದಿಂದ ನಿರ್ವಹಿಸಬೇಕು’ ಎಂದಿದ್ದರು. ಇದಕ್ಕೆ ಸುದೀರ್ಘವಾದ ವಿವರಣೆಗಳ ಸಹಿತ ಕಂದಾಯ ಇಲಾಖೆಯು ರಾಜ್ಯಪಾಲರಿಗೆ ಸ್ಪಷ್ಟೀಕರಣ ನೀಡಿತ್ತು. ಅಲ್ಲದೆ, ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ಈ ಮಸೂದೆ ಕುರಿತು ವಿವರಣೆ ನೀಡಿದ್ದರು.

‘ರಾಜ್ಯ ಸರ್ಕಾರ ಸ್ಪಷ್ಟೀಕರಣ ನೀಡಿರುವ ಹಿನ್ನೆಲೆಯಲ್ಲಿ ರಾಷ್ಟ್ರಪತಿಯ ಅಂಕಿತಕ್ಕೆ ಮೀಸಲಿಟ್ಟು ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆಗೆ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ. ರಾಷ್ಟ್ರಪತಿಯ ಅಂಕಿತಕ್ಕಾಗಿ ಮಸೂದೆಯನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಗುರುವಾರ (ಸೆ. 19) ಕಳುಹಿಸಲಾಗಿದೆ. ಕೇಂದ್ರ ಕಂದಾಯ ಸಚಿವಾಲಯ, ಕಾನೂನು ಸಚಿವಾಲಯ, ಸಹಕಾರ ಸಚಿವಾಲಯವೂ ಸೇರಿದಂತೆ ಆರು ಸಚಿವಾಲಯಗಳಿಂದ ಅಭಿಪ್ರಾಯ ಪಡೆದ ಬಳಿಕ ಗೃಹ ಸಚಿವಾಲಯವು ಈ ಮಸೂದೆಯನ್ನು ರಾಷ್ಟ್ರಪತಿ ಭವನಕ್ಕೆ ಕಳುಹಿಸಲಿದೆ’ ಎಂದು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯ ಕಾರ್ಯದರ್ಶಿ ಜಿ. ಶ್ರೀಧರ್‌ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT