ಮಧುಗಿರಿ (ತುಮಕೂರು): ರಾಜ್ಯದಲ್ಲಿ ಅಪಘಾತ ಸಂಖ್ಯೆ ತಗ್ಗಿಸಲು ₹100 ಕೋಟಿ ಮೊತ್ತದ ಯೋಜನೆ ಸಿದ್ಧಪಡಿಸಿ ಹಣಕಾಸು ಇಲಾಖೆಗೆ ಸಲ್ಲಿಸಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಸೋಮವಾರ ಇಲ್ಲಿ ಹೇಳಿದರು.
ಭಾನುವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಆರು ಮಂದಿ ಮೃತಪಟ್ಟ ಸ್ಥಳ ಪರಿಶೀಲಿಸಿದ ನಂತರ ಸುದ್ದಿಗಾರ ರೊಂದಿಗೆ ಅವರು ಮಾತನಾಡಿದರು.
ರಸ್ತೆ ಅಪಘಾತಗಳ ಸಂಖ್ಯೆ ನಿಯಂತ್ರಿಸುವುದು ಹಾಗೂ ಅಪಘಾತದ ಪ್ರಮುಖ ಸ್ಥಳ ಗುರುತಿಸಿ ಸರಿಪಡಿಸುವ ಸಲುವಾಗಿ ₹100 ಕೋಟಿ ಮೊತ್ತದ ಯೋಜನೆಯನ್ನು ಗೃಹ ಇಲಾಖೆ ಅಧಿಕಾರಿಗಳು ಸಿದ್ಧಪಡಿಸಿದ್ದರು. ಅದನ್ನು ಪರಿಶೀಲಿಸಿ ಒಪ್ಪಿಗೆಗಾಗಿ ಹಣಕಾಸು ಇಲಾಖೆಗೆ ಕಳುಹಿಸಿಕೊಡ ಲಾಗಿದೆ. ಅನುಮತಿ ಸಿಕ್ಕ ನಂತರ ಕೆಲಸ ಆರಂಭವಾಗಲಿದೆ ಎಂದು ತಿಳಿಸಿದರು.
ಬೆಂಗಳೂರು– ಮೈಸೂರು ಹೆದ್ದಾರಿ ನಿರ್ಮಾಣವಾದ ಆರಂಭದ ಮೊದಲ ನಾಲ್ಕು ತಿಂಗಳಲ್ಲೇ ಸಂಭವಿಸಿದ ಅಪಘಾತದಲ್ಲಿ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ತಕ್ಷಣ ರಸ್ತೆ ಕಾಮಗಾರಿ ನಿರ್ವಹಿಸಿದವರು, ತಾಂತ್ರಿಕ ಪರಿಣತರೊಂದಿಗೆ ಚರ್ಚಿಸಲಾಯಿತು. ಸ್ಥಳಕ್ಕೆ ತಾಂತ್ರಿಕ ಸಮಿತಿ ಕಳುಹಿಸಿ ವರದಿ ಪಡೆದು, ಅಗತ್ಯ ಕ್ರಮ ತೆಗೆದುಕೊಂಡ ನಂತರ ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಮಾಹಿತಿ ನೀಡಿದರು.