ಬೆಳಗಾವಿ: ‘ನಾವಷ್ಟೇ ಅಲ್ಲ, ಹಿಂದಿನ ಸರ್ಕಾರಗಳು ಸಾಕಷ್ಟು ಬಾರಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿವೆ. ರಾಜ್ಯದಲ್ಲಿ ಈವರೆಗಿನ ಯಾವ ಮುಖ್ಯಮಂತ್ರಿಯೂ ಇದನ್ನು ತಡೆದಿಲ್ಲ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸಮರ್ಥಿಸಿಕೊಂಡರು.
‘ನೀರು ಹರಿಸಬೇಕು ಎಂಬ ಆದೇಶವನ್ನು ಬಿಜೆಪಿ, ಜೆಡಿಎಸ್ ಸರ್ಕಾರ ಪಾಲಿಸಿವೆ. ಇದು 10 ಸಲ ನಡೆದಿದೆ. ಯಾರೆಲ್ಲ ಮುಖ್ಯಮಂತ್ರಿ ಇದ್ದಾಗ, ಎಷ್ಟು ನೀರು ಬಿಡಲಾಗಿದೆ? ಲೆಕ್ಕ ತೆಗೆಯಲಿ’ ಎಂದು ಅವರು ಸುದ್ದಿಗಾರರಿಗೆ ಗುರುವಾರ ತಿಳಿಸಿದರು.
‘ತಮಿಳುನಾಡಿನವರು ಹಿಂದಿನಿಂದಲೂ ಕೇಂದ್ರದ ಮೇಲೆ ಪ್ರಭಾವ ಬೀರಿ, ನೀರು ಬಿಡಲು ಒತ್ತಾಯಸುತ್ತಾರೆ. ನೀರು ಹರಿಸಲು ಯಾರು ಆದೇಶ ಮಾಡಿದ್ದಾರೋ ಅವರ ವಿರುದ್ಧ ಪ್ರತಿಭಟನೆ ಮಾಡಬೇಕೆ ಹೊರತು ನಮ್ಮ ಸರ್ಕಾರದ ವಿರುದ್ಧವಲ್ಲ’ ಎಂದು ಅವರು ಹೇಳಿದರು.
‘ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಕೇಂದ್ರ ಸರ್ಕಾರದ ಅಧೀನದಲ್ಲಿದೆ. ರಾಜ್ಯದ ಬಿಜೆಪಿಯ ಸಂಸದರು ಪ್ರಾಧಿಕಾರದ ಮುಂದೆ ಈ ವಿಷಯ ತಿಳಿಸಬೇಕಿತ್ತು. ಕೇಂದ್ರ ಜಲಸಂಪನ್ಮೂಲ ಸಚಿವರಿಗೆ ಇಲ್ಲಿನ ಪರಿಸ್ಥಿತಿ ಮನವರಿಕೆ ಮಾಡಿಕೊಡಬೇಕಿತ್ತು. ಇನ್ನಾದರೂ ಪ್ರಧಾನಿ, ಕೇಂದ್ರದ ಸಚಿವರು ಮಧ್ಯಸ್ಥಿಕೆ ವಹಿಸಿ, ನಮ್ಮ ಮತ್ತು ತಮಿಳುನಾಡಿನವರ ಹಿತ ಕಾಪಾಡಬೇಕು’ ಎಂದೂ ಅವರು ಆಗ್ರಹಿಸಿದರು.
ಯಾರು ಬಾಹುಬಲಿ?
‘ಈ ಹಿಂದೆ, ಜೆಡಿಎಸ್ ಜತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಾಗ ನಮಗೆ ನಷ್ಟವಾಗಿತ್ತು. ಆದರೆ, ಜೆಡಿಎಸ್– ಬಿಜೆಪಿ ಮೈತ್ರಿಯ ಪರಿಣಾಮಗಳ ಬಗ್ಗೆ ಈಗಲೇ ಹೇಳಲಾಗದು. ಲೋಕಸಭೆ ಚುನಾವಣೆ ವೇಳೆ ಜನರ ಮನಸ್ಥಿತಿ ಹೇಗಿರುತ್ತದೆಯೇ ಏನೋ? ಈ ಚುನಾವಣೆಯಲ್ಲಿ ಯಾರು ಬಾಹುಬಲಿ ಆಗುತ್ತಾರೆ ಎಂಬುದನ್ನು ಕಾದುನೋಡಬೇಕು’ ಎಂದರು.
‘ಗ್ಯಾರಂಟಿ ಯೋಜನೆಗಳಿಂದ ಸರ್ಕಾರಿ ನೌಕರರ ವೇತನ ನೀಡಲು ಸಮಸ್ಯೆ ಆಗಿದೆ ಎಂಬುದು ಸುಳ್ಳು. ತಾಂತ್ರಿಕ ಕಾರಣದಿಂದ ಒಂದಷ್ಟು ಮಂದಿ ಸಂಬಳ ವಿಳಂಬವಾಗಿರಬಹುದು. 3 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರಿದ್ದಾರೆ. ಅವರೆಲ್ಲರಿಗೆ ವೇತನ ಕೊಟ್ಟಿರದಿದ್ದರೆ, ಇಷ್ಟೊತ್ತಿಗೆ ಹಾಹಾಕಾರ ಸೃಷ್ಟಿಯಾಗುತ್ತಿತ್ತು’ ಎಂದರು.
‘ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ವಿಧಾನಮಂಡಲ ಚಳಿಗಾಲದ ಅಧಿವೇಶನ ನಡೆಸಲು ಯತ್ನಿಸಲಾಗುವುದು’ ಎಂದರು.
ನನ್ನನ್ನು ಉಪಮುಖ್ಯಮಂತ್ರಿ ಮಾಡುವಂತೆ ಕೆಲವರು ಅಭಿಮಾನದಿಂದ ಹೇಳುತ್ತಿದ್ದಾರೆ. ಈ ವಿಚಾರವಾಗಿ ಪಕ್ಷ ತೀರ್ಮಾನ ಕೈಗೊಳ್ಳುತ್ತದೆ
- ಸತೀಶ ಜಾರಕಿಹೊಳಿ ಲೋಕೋಪಯೋಗಿ ಸಚಿವ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.