ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಸ್‌ಬಿಐ, ಪಿಎನ್‌ಬಿ ಠೇವಣಿ ವಾಪಸ್‌: ಸರ್ಕಾರ ಸೂಚನೆ

Published : 14 ಆಗಸ್ಟ್ 2024, 15:37 IST
Last Updated : 14 ಆಗಸ್ಟ್ 2024, 15:37 IST
ಫಾಲೋ ಮಾಡಿ
Comments

ಬೆಂಗಳೂರು: ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಮತ್ತು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗಳಲ್ಲಿ (ಪಿಎನ್‌ಬಿ) ಹೊಂದಿರುವ ಖಾತೆಗಳನ್ನು ತಕ್ಷಣವೇ ಮುಚ್ಚಿ ಮತ್ತು ನಿಶ್ಚಿತ ಠೇವಣಿ ಮತ್ತಿತರ ಹೂಡಿಕೆಗಳನ್ನು ವಾಪಸ್ ಪಡೆಯಿರಿ ಎಂದು ರಾಜ್ಯ ಸರ್ಕಾರವು ತನ್ನೆಲ್ಲಾ ಇಲಾಖೆಗಳು, ನಿಗಮ ಮಂಡಳಿಗಳು, ಅಧೀನ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಸೂಚಿಸಿದೆ.

ಈ ಸಂಬಂಧ ಆರ್ಥಿಕ ಇಲಾಖೆಯು ಸರ್ಕಾರದ ಎಲ್ಲ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಮತ್ತು ಕಾರ್ಯದರ್ಶಿಗಳಿಗೆ ಸೂಚನೆ ನೀಡಿದೆ.

‘ಈ ಎರಡೂ ಬ್ಯಾಂಕ್‌ಗಳಲ್ಲಿ ರಾಜ್ಯದ ವಿವಿಧ ಮಂಡಳಿಗಳು ಮಾಡಿದ್ದ ಹೂಡಿಕೆಯಲ್ಲಿ ವಂಚನೆಯಾಗಿದ್ದು, ಅವುಗಳ ಪರಿಹಾರಕ್ಕೆ ಬ್ಯಾಂಕ್‌ಗಳು ನಿರಾಕರಿಸುತ್ತಿವೆ. ಈ ಪ್ರಕರಣಗಳು ದೀರ್ಘಕಾಲದಿಂದ ನ್ಯಾಯಾಲಯದಲ್ಲಿವೆ. ಇದು ಮಹಾಲೇಖಪಾಲರ (ಸಿಎಜಿ) ವರದಿಯಲ್ಲೂ ಉಲ್ಲೇಖವಾಗಿದೆ. ಸಾರ್ವಜನಿಕ ಲೆಕ್ಕ ಪತ್ರಗಳ ಸಮಿತಿಯ ಸಭೆಗಳಲ್ಲಿ ಈ ವಿಚಾರ ಅನೇಕ ಬಾರಿ ಚರ್ಚೆಗೆ ಬಂದಿತ್ತು. ಈ ಎರಡೂ ಬ್ಯಾಂಕ್‌ಗಳಲ್ಲಿನ ಖಾತೆ ಸ್ಥಗಿತ ಮತ್ತು ಹೂಡಿಕೆ ವ್ಯವಹಾರ ನಿಲ್ಲಿಸುವಂತೆ ಸಮಿತಿಯು ಶಿಫಾರಸು ಮಾಡಿತ್ತು’ ಎಂದು ಸುತ್ತೋಲೆ ಉಲ್ಲೇಖಿಸಿದೆ.

‘ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು 2011ರಲ್ಲಿ ಪಿಎನ್‌ಬಿಯ ರಾಜಾಜಿನಗರ ಶಾಖೆಯಲ್ಲಿ ₹25 ಕೋಟಿ ನಿಶ್ಚಿತ ಠೇವಣಿ ಇಟ್ಟಿತ್ತು. ಇದಕ್ಕೆ ಸೇಲಂನ ಶಂಕ್ರೀ ಶಾಖೆನಿಂದ ₹12 ಕೋಟಿ ಮತ್ತು ₹13 ಕೋಟಿಯ ಎರಡು ಪ್ರತ್ಯೇಕ ರಸೀದಿ ನೀಡಲಾಗಿತ್ತು. ಅವಧಿ ಪೂರ್ಣಗೊಂಡ ನಂತರ ₹13 ಕೋಟಿಯಷ್ಟೇ ವಾಪಸ್ಸಾಗಿದ್ದು, ಉಳಿದ ಮೊತ್ತ ಮಂಡಳಿಯ ಖಾತೆಗೆ ಜಮೆಯಾಗಿರುವುದಿಲ್ಲ. ಬ್ಯಾಂಕ್‌ ಅಧಿಕಾರಿಗಳಿಂದ ವಂಚನೆ ನಡೆದಿದೆ ಎಂಬ ಕಾರಣ ನೀಡಿ, ಬ್ಯಾಂಕ್‌ ಹಣ ಮರುಪಾವತಿ ಮಾಡುತ್ತಿಲ್ಲ. ಈ ಪ್ರಕರಣ 10 ವರ್ಷಗಳಿಂದ ನ್ಯಾಯಾಲಯದಲ್ಲಿದೆ’ ಎಂದು ಸುತ್ತೋಲೆ ಉದಾಹರಿಸಿದೆ.

‘ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು 2013ರಲ್ಲಿ ಎಸ್‌ಬಿಎಂನ (ಈಗ ಎಸ್‌ಬಿಐ) ಅವೆನ್ಯೂ ರಸ್ತೆ ಶಾಖೆಯಲ್ಲಿ ₹10 ಕೋಟಿ ನಿಶ್ಚಿತ ಠೇವಣಿ ಇಟ್ಟಿತ್ತು. ಆದರೆ ಬ್ಯಾಂಕ್‌ನ ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಆ ಠೇವಣಿಯನ್ನು ಖಾಸಗಿ ಕಂಪನಿಯೊಂದರ ಸಾಲಕ್ಕೆ ಹೊಂದಾಣಿಕೆ ಮಾಡಿದ್ದಾರೆ. ಈ ಬಗ್ಗೆ ಹಲವು ಬಾರಿ ಪತ್ರ ವ್ಯವಹಾರ ನಡೆಸಿದ್ದರೂ ಹಣ ಮರುಪಾವತಿಗೆ ಎಸ್‌ಬಿಐ ನಿರಾಕರಿಸಿತು. ಇದಕ್ಕೆ ಸಂಬಂಧಿಸಿದ ಪ್ರಕರಣವೂ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ’ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

‘ಸಾರ್ವಜನಿಕ ಲೆಕ್ಕ ಪತ್ರಗಳ ಸಮಿತಿಯ ಶಿಫಾರಸಿನಂತೆ ಎರಡೂ ಬ್ಯಾಂಕ್‌ಗಳಲ್ಲಿರುವ ಖಾತೆಗಳನ್ನು ಸ್ಥಗಿತಗೊಳಿಸಿ, ಹೂಡಿಕೆಗಳನ್ನು ಹಿಂಪಡೆಯಬೇಕು. ಭವಿಷ್ಯದಲ್ಲಿಯೂ ಈ ಬ್ಯಾಂಕ್‌ಗಳಲ್ಲಿ ಯಾವುದೇ ರೀತಿಯ ಠೇವಣಿ/ಹೂಡಿಕೆಗಳನ್ನು ಮಾಡಬಾರದು’ ಎಂದು ಸುತ್ತೋಲೆ ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT