ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯ ಸರ್ಕಾರ ಆದೇಶಿಸಿದ ಕೆಲವೇ ದಿನಗಳಲ್ಲಿ ₹22 ಕೋಟಿ ಮರಳಿಸಿದ SBI, PNB

Published : 5 ಸೆಪ್ಟೆಂಬರ್ 2024, 14:41 IST
Last Updated : 5 ಸೆಪ್ಟೆಂಬರ್ 2024, 14:41 IST
ಫಾಲೋ ಮಾಡಿ
Comments

ಬೆಂಗಳೂರು: ನಿಶ್ಚಿತ ಠೇವಣಿಗಳಿಗೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ಪರಿಹಾರ ಒದಗಿಸದೇ ಇದ್ದ ಎಸ್‌ಬಿಐ ಮತ್ತು ಪಿಎನ್‌ಬಿ ಜತೆಗಿನ ವ್ಯವಹಾರವನ್ನು ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ಆದೇಶಿಸಿದ ಕೆಲವೇ ದಿನಗಳಲ್ಲಿ ಎರಡೂ ಬ್ಯಾಂಕ್‌ಗಳು, ಸರ್ಕಾರದ ವಿವಿಧ ನಿಗಮಗಳಿಗೆ ₹22 ಕೋಟಿಯನ್ನು ವಾಪಸ್‌ ಮಾಡಿವೆ.

ಈ ಬ್ಯಾಂಕ್‌ಗಳ ಜತೆಗೆ ವ್ಯವಹಾರ ನಿಲ್ಲಿಸಿ ಎಂದು ಹೊರಡಿಸಿದ್ದ ಆದೇಶವನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದೆ.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು 2011ರಲ್ಲಿ ಪಿಎನ್‌ಬಿಯ ರಾಜಾಜಿನಗರ ಶಾಖೆಯಲ್ಲಿ ₹25 ಕೋಟಿ ನಿಶ್ಚಿತ ಠೇವಣಿ ಇರಿಸಿತ್ತು. ಅವಧಿ ಮುಗಿದ ನಂತರ ಬ್ಯಾಂಕ್‌ ₹13 ಕೋಟಿಯನ್ನಷ್ಟೇ ಮರಳಿಸಿತ್ತು. ಇದೇ ರೀತಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು 2013ರಲ್ಲಿ ಎಸ್‌ಬಿಐನ (ಆಗ ಎಸ್‌ಬಿಎಂ) ಅವೆನ್ಯೂ ರಸ್ತೆ ಶಾಖೆಯಲ್ಲಿ ₹10 ಕೋಟಿ ನಿಶ್ಚಿತ ಠೇವಣಿ ಇರಿಸಿತ್ತು. ಆದರೆ ಅವಧಿ ಮುಗಿದ ನಂತರ ಎಸ್‌ಬಿಐ ಹಣ ಮರಳಿಸಿರಲಿಲ್ಲ.

‘ಬ್ಯಾಂಕ್‌ ಅಧಿಕಾರಿಗಳಿಂದ ವಂಚನೆಯಾಗಿದೆ. ಹೀಗಾಗಿ ತಕ್ಷಣಕ್ಕೆ ಹಣ ಮರಳಿಸಲಾಗುವುದಿಲ್ಲ’ ಎಂದು ಎರಡೂ ಬ್ಯಾಂಕ್‌ಗಳು ತಿಳಿಸಿದ್ದವು. ಇದರ ವಿರುದ್ಧ ಎರಡೂ ನಿಗಮಗಳು ನ್ಯಾಯಾಲಯದ ಮೆಟ್ಟಿಲೇರಿದ್ದವು. ಆದರೆ ಬ್ಯಾಂಕ್‌ಗಳು ಪರಿಹಾರ ಹಣ ಒದಗಿಸಲು ನಿರಾಕರಿಸಿದ್ದವು.

ಬ್ಯಾಂಕ್‌ಗಳ ಈ ನಿಲುವುಗಳನ್ನು ಖಂಡಿಸಿ ಆರ್ಥಿಕ ಇಲಾಖೆಯು ಇದೇ ಆಗಸ್ಟ್‌ 14ರಂದು ಸುತ್ತೋಲೆ ಹೊರಡಿಸಿ, ‘ಸಾರ್ವಜನಿಕ ಲೆಕ್ಕ ಪತ್ರಗಳ ಸಮಿತಿಯ ಶಿಫಾರಸಿನಂತೆ ಎರಡೂ ಬ್ಯಾಂಕ್‌ಗಳಲ್ಲಿರುವ ಖಾತೆಗಳನ್ನು ಸ್ಥಗಿತಗೊಳಿಸಿ, ಹೂಡಿಕೆಗಳನ್ನು ಹಿಂಪಡೆಯಬೇಕು. ಭವಿಷ್ಯದಲ್ಲಿಯೂ ಈ ಬ್ಯಾಂಕ್‌ಗಳಲ್ಲಿ ಯಾವುದೇ ರೀತಿಯ ಠೇವಣಿ/ಹೂಡಿಕೆಗಳನ್ನು ಮಾಡಬಾರದು’ ಎಂದು ಎಲ್ಲ ಇಲಾಖೆಗಳು, ನಿಗಮಗಳು, ಅಧೀನ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಆದೇಶಿಸಿತ್ತು.

ಇದರ ಬೆನ್ನಲ್ಲೇ ಆರ್ಥಿಕ ಇಲಾಖೆಯನ್ನು ಎಡತಾಕಿದ್ದ ಎಸ್‌ಬಿಐ ಮತ್ತು ಪಿಎನ್‌ಬಿ ಅಧಿಕಾರಿಗಳು ಮಾತುಕತೆಯ ಮೂಲಕ ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಳ್ಳುವುದಾಗಿ ಹೇಳಿದ್ದರು. ಜತೆಗೆ 15 ದಿನಗಳವರೆಗೆ ಆದೇಶವನ್ನು ತಡೆಹಿಡಿಯುವಂತೆ ಕೋರಿದ್ದವು. ನಂತರದ 15 ದಿನಗಳ ಒಳಗೆ ಪಿಎನ್‌ಬಿ ₹12 ಕೋಟಿ ಮತ್ತು ಎಸ್‌ಬಿಐ ₹10 ಕೋಟಿಯನ್ನು ಸಂಬಂಧಿತ ನಿಗಮಗಳಿಗೆ ವಾಪಸ್ ಮಾಡಿವೆ.

10 ವರ್ಷಗಳಿಂದ ನಿಶ್ಚಿತ ಠೇವಣಿ ಮರಳಿಸದೇ ಇದ್ದ ಎಸ್‌ಬಿಐ, ಪಿಎನ್‌ಬಿ

ರಾಜ್ಯ ಸರ್ಕಾರದ ವ್ಯವಹಾರ ಸ್ಥಗಿತ ತಂತ್ರಕ್ಕೆ ಮಣಿದ ಬ್ಯಾಂಕ್‌ಗಳು ವ್ಯವಹಾರ ಸ್ಥಗಿತ ಆದೇಶದ ಕೆಲವೇ ದಿನಗಳಲ್ಲಿ ಠೇವಣಿ ವಾಪಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT