ಬೆಂಗಳೂರು: ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಾಗ, ಪರಿಶಿಷ್ಟ ಜಾತಿಗಿರುವ ಶೇ 15ರಷ್ಟು ಮೀಸಲಾತಿಯಲ್ಲಿಯೇ ಒಳ ಮೀಸಲಾತಿ ಅಳವಡಿಸುವ ಕುರಿತಂತೆ ದಲಿತ ಎಡಗೈ ಮತ್ತು ಬಲಗೈ ಸಮುದಾಯ ಭಿನ್ನ ನಿಲುವು ತಳೆದಿರುವುದು ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಗುರುವಾರ (ಮಾರ್ಚ್ 5) ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬರಲಿದೆ.

ಶೇ 15ರ ಮೀಸಲಾತಿಯಲ್ಲಿಯೇ ಒಳ ಮೀಸಲಾತಿ ಕಲ್ಪಿಸುವಂತೆ ಎಡಗೈ ಸಮುದಾಯದ ಸಚಿವರು, ಮುಖಂಡರು ಪಟ್ಟು ಹಿಡಿದಿದ್ದಾರೆ. ಆದರೆ, ರೋಸ್ಟರ್ ಗೊಂದಲ, ನ್ಯಾಯಾಲಯದ ಅಡೆತಡೆ ನಿವಾರಣೆ ಆಗುವರೆಗೆ ಒಳ ಮೀಸಲಾತಿ ರಹಿತವಾಗಿ ಶೇ 15ರಷ್ಟು ಮೀಸಲಾತಿ ಜಾರಿಗೊಳಿಸಬೇಕು ಎಂದು ಬಲಗೈ ಸಮುದಾಯ ಒತ್ತಡ ಹೇರಿದೆ.

ಒಳ ಮೀಸಲಾತಿ ವಿಷಯದಲ್ಲಿ ಪರಿಶಿಷ್ಟ ಜಾತಿಯ ನಾಯಕರ ನಡುವೆ ಜಟಾಪಟಿ ತೀವ್ರಗೊಂಡಿರುವ ನಡುವೆ, ಬಲಗೈ ಹಾಗೂ ಎಡಗೈ ಸಮುದಾಯದ ನಾಯಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರತ್ಯೇಕವಾಗಿ ಬುಧವಾರ ಭೇಟಿ ಮಾಡಿ ತಮ್ಮ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.

ಸಚಿವರಾದ ಕೆ.ಎಚ್. ಮುನಿಯಪ್ಪ, ಆರ್.ಬಿ. ತಿಮ್ಮಾಪುರ, ಮಾಜಿ ಸಚಿವ ಎಚ್. ಆಂಜನೇಯ ನೇತೃತ್ವದಲ್ಲಿ ಎಡಗೈ ಸಮುದಾಯದ ನಾಯಕರು ಖರ್ಗೆಯವರನ್ನು ಭೇಟಿ ಮಾಡಿ, ನೇರ ನೇಮಕಾತಿಯಲ್ಲಿ ಒಳ ಮೀಸಲಾತಿ ಅನುಷ್ಠಾನ ಮಾಡುವ ಕುರಿತು ಚರ್ಚೆ ನಡೆಸಿದರು. ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ರಾಜ್ಯಸಭೆಯ ಮಾಜಿ ಸದಸ್ಯ ಎಲ್. ಹನುಮಂತಯ್ಯ, ಶಾಸಕ ಶ್ರೀನಿವಾಸ್ ಜೊತೆಗಿದ್ದರು.

ಖರ್ಗೆ ಭೇಟಿ ಬಳಿಕ ಮಾತನಾಡಿದ ಮುನಿಯಪ್ಪ, ‘ಎಲ್ಲರೂ ಒಟ್ಟಾಗಿ, ಸಮಸ್ಯೆ ಬಗೆಹರಿಸಿಕೊಳ್ಳಿ. ಯಾವುದೇ ಸಮಸ್ಯೆ ಆಗುವುದು ಬೇಡವೆಂದು ಖರ್ಗೆಯವರು ಸಲಹೆ ನೀಡಿದ್ದಾರೆ. ಯಾರಿಗೂ ಅನ್ಯಾಯ ಆಗುವುದೂ ಬೇಡ ಅಂದಿದ್ದಾರೆ. ನಾನು ಕೂಡ ಮುಖ್ಯಮಂತ್ರಿಗೆ ಹೇಳುತ್ತೇನೆಂದು ಹೇಳಿದ್ದಾರೆ’ ಎಂದರು.

‘ಖರ್ಗೆಯವರ ಸಲಹೆಗೆ ನಾವು ಸಮ್ಮತಿ ನೀಡಿದ್ದೇವೆ. ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಯಾವುದೇ ಜಾತಿಗೂ ಅನ್ಯಾಯ ಆಗಬಾರದು. ಇದು ನಮ್ಮ ನಿಲುವು. ಸಮಸ್ಯೆ ಬಗೆಹರಿಸಿಕೊಳ್ಳಲು ನಾವು ಸಿದ್ಧರಿದ್ದೇವೆ. ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ವಿಚಾರದ ಕುರಿತು ಚರ್ಚಿಸಿ, ಹಂಚಿಕೊಳ್ಳುತ್ತೇವೆ’ ಎಂದರು.

ಆರ್.ಬಿ. ತಿಮ್ಮಾಪುರ ಮಾತನಾಡಿ, ‘ನಾಯಕರಿಗೆ ವಿಷಯ ತಿಳಿಸುವುದು ನಮ್ಮ ಕರ್ತವ್ಯ. ಎಲ್ಲ ವಿಷಯವನ್ನು ಮುಖ್ಯಮಂತ್ರಿ ಜೊತೆ ಮಾತನಾಡುತ್ತೇನೆಂದು ಖರ್ಗೆ ಹೇಳಿದ್ದಾರೆ’ ಎಂದರು.

ಅದಕ್ಕೂ ಮೊದಲು ಸಚಿವರಾದ ಎಚ್.ಸಿ. ಮಹದೇವಪ್ಪ ಮತ್ತು ಜಿ. ಪರಮೇಶ್ವರ ಅವರು ಖರ್ಗೆಯವರನ್ನು ಭೇಟಿ ಮಾಡಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಈ ಬೆಳವಣಿಗೆಯ ನಂತರ, ಸದಾಶಿವನಗರದಲ್ಲಿರುವ ಪರಮೇಶ್ವರ ಅವರ ನಿವಾಸಕ್ಕೆ ಎಡಗೈ ಸಮುದಾಯದ ನಾಯಕರು ಭೇಟಿ ನೀಡಿ ಚರ್ಚೆ ನಡೆಸಿದರು.

ತಾಂತ್ರಿಕ ಸಮಿತಿ ರಚನೆ?

ಒಳ ಮೀಸಲಾತಿ ಹಂಚಿಕೆ ಮಾಡಿ ಈಗಾಗಲೇ ನಿಗದಿಪಡಿಸಿರುವ ‘ರೋಸ್ಟರ್ ಬಿಂದು’ ಪ್ರಕಾರ ನೇಮಕಾತಿ ಪ್ರಕ್ರಿಯೆ ನಡೆದರೆ ಗ್ರೂಪ್ ‘ಎ’ಗೆ (ಎಡಗೈ ಸಂಬಂಧಿತ ಜಾತಿಗಳು) ಅವಕಾಶ ಹೆಚ್ಚು ಸಿಗುತ್ತಿದ್ದು, ಗ್ರೂಪ್ ‘ಬಿ’ (ಬಲಗೈ ಸಂಬಂಧಿತ ಜಾತಿಗಳು) ಮತ್ತು ಗ್ರೂಪ್ ‘ಸಿ’ಗೆ (ಸ್ಪಶ್ಯ ಸಂಬಂಧಿತ ಮತ್ತು ಅಲೆಮಾರಿ, ಅರೆ ಅಲೆಮಾರಿ ಜಾತಿಗಳು) ಹುದ್ದೆ ಸಿಗುವ ಅವಕಾಶಗಳು ಕಡಿಮೆ ಎನ್ನುವುದು ಬಲಗೈ ಸಮುದಾಯದ ನಾಯಕರ ಆಕ್ಷೇಪ.

ಸಚಿವ ಸಂಪುಟ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬರಲಿದೆ. ಮೂರೂ ಗುಂಪುಗಳಿಗೆ ಸಮಾನ ಅವಕಾಶ ಸಿಗುವಂತೆ ‘ರೋಸ್ಟರ್ ಬಿಂದು’ ಮರು ನಿಗದಿಪಡಿಸಲು ತಾಂತ್ರಿಕ ಸಮಿತಿಯನ್ನು ರಚಿಸುವ ಬಗ್ಗೆ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.