ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿ ಕಿತ್ತೊಗೆದು ದೇಶ ಕಾಪಾಡಿ: ಸಿಎಂ ಸಿದ್ದರಾಮಯ್ಯ

Published 9 ನವೆಂಬರ್ 2023, 15:30 IST
Last Updated 9 ನವೆಂಬರ್ 2023, 15:30 IST
ಅಕ್ಷರ ಗಾತ್ರ

ಬೆಂಗಳೂರು: ‘ಸೇವಾದಳ ಕಾರ್ಯಕರ್ತರ ಪ್ರಾಮಾಣಿಕ ಹೋರಾಟದಿಂದ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಯನ್ನು ಬುಡಸಮೇತ ಕಿತ್ತೊಗೆದು ದೇಶವನ್ನು ಕಾಪಾಡಬೇಕೆಂಬ ರಾಹುಲ್ ಗಾಂಧಿ ಅವರ ಗುರಿಯನ್ನು ಸಾಧಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಸೇವಾದಳದ ಶತಮಾನೋತ್ಸವ ಮತ್ತು ರಾಜ್ಯಮಟ್ಟದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ಸಿನ ಅಡಿಪಾಯ ಸೇವಾದಳ. ಸಾಮಾಜಿಕ ನ್ಯಾಯ, ಹೋರಾಟ, ದೇಶದ ಸಮಗ್ರತೆ ಬಗ್ಗೆ ನಂಬಿಕೆ ಇಟ್ಟಕೊಂಡು ದೇಶವನ್ನು, ಸಮಾಜವನ್ನು ಬೆಸೆಯುವ ಕೆಲಸವನ್ನು ಕಾಂಗ್ರೆಸ್‌ ಮತ್ತು ಸೇವಾದಳ ಮಾಡುತ್ತಿದೆ’ ಎಂದರು.

‘ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡ ಚರಿತ್ರೆಯಾಗಲಿ, ಇತಿಹಾಸವಾಗಲಿ ಇಲ್ಲ’ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ‘ಈ ದೇಶದ ಇತಿಹಾಸ ಗೊತ್ತಿಲ್ಲದವರು ಈಗ ‘ಭಾರತ’ ಎಂದು ಹೆಸರು ಬದಲಿಸಲು ಹೊರಟಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬರುವ ಮುಂಚಿತವಾಗಿಯೇ, ಪಕ್ಷದ ಸಂಸ್ಥೆಗೆ ‘ಭಾರತ’ ಸೇವಾದಳ ಎಂದು ಹೆಸರಿಟ್ಟವರು ನಾವು (ಕಾಂಗ್ರೆಸ್‌)’ ಎಂದರು.

‘ಸೇವಾದಳದ ಸದಸ್ಯರು ಸರ್ಕಾರದ ಕಾರ್ಯವೈಖರಿ ಹೇಗೆ ನಡೆಯಬೇಕು, ಯೋಜನೆಗಳನ್ನು ಜನರಿಗೆ ತಲುಪಿಸಲು ಪರಿಣಾಮಕಾರಿಯಾಗಿ ಹೇಗೆ ಕೆಲಸ ಮಾಡಬೇಕೆಂಬ ಬಗ್ಗೆ ಸಲಹೆ ನೀಡಬಹುದು. ಸೇವಾ ದಳದ ಸದಸ್ಯರಿಗೆ ಸಲ್ಲಬೇಕಾದ ಗೌರವವನ್ನು ನೀಡಬೇಕೆಂದು ಪಕ್ಷದ ಬ್ಲಾಕ್, ತಾಲ್ಲೂಕು ಮತ್ತು ಜಿಲ್ಲಾ ಘಟಕಗಳ ಅಧ್ಯಕ್ಷರು, ಶಾಸಕರು ಮತ್ತು ಸಚಿವರಿಗೆ ಸೂಚನೆ ನೀಡಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT