ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವ ಸರ್ಕಾರದ ದಶಮುಖಗಳು: ಇದೇ ನೋಡಿ ಸಿದ್ದರಾಮಯ್ಯ ಸಂಪುಟ

ಸಿಎಂ ಹಾಗೂ ನೂತನ ಸಚಿವರ ಕಿರು ಪರಿಚಯ ಇಲ್ಲಿದೆ
Published 20 ಮೇ 2023, 23:53 IST
Last Updated 20 ಮೇ 2023, 23:53 IST
ಅಕ್ಷರ ಗಾತ್ರ

ಸಿದ್ದರಾಮಯ್ಯ

ಚಳವಳಿಗಳ ನೇತಾರರ ಸಖ್ಯದೊಂದಿಗೆ ಬೆಳೆದ ಸಿದ್ದರಾಮಯ್ಯ, ಶೋಷಿತರ ಪರ ಗಟ್ಟಿ ಧ್ವನಿ. ಎಸ್. ಬಂಗಾರಪ್ಪನವರ ಬಳಿಕ ಹಿಂದುಳಿದ ಸಮುದಾಯದ ಅನಭಿಷಕ್ತ ನಾಯಕರಾಗಿ ರೂಪುಗೊಂಡವರು. ಕುರಿ ಕಾಯುವವನಿಗೆ ಏನುಗೊತ್ತು ಆರ್ಥಿಕತೆ ವಿಷಯ ಎಂಬ ಹಂಗಿಸುವವರಿಗೆ ಸಡ್ಡುಹೊಡೆಯುವ ರೀತಿಯಲ್ಲಿ 13 ಬಾರಿ ಸಮತೋಲನ ಹಾಗೂ ಸಾಮಾಜಿಕ ನ್ಯಾಯದ ಪರ ಇರುವ ಬಜೆಟ್ ಮಂಡಿಸಿದವರು. 2006ರಲ್ಲಿ ಕಾಂಗ್ರೆಸ್ ಸೇರಿ, 2009ರಿಂದ ಸತತವಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ. ಎಂಟು ವರ್ಷ ವಿರೋಧ ಪಕ್ಷದ ನಾಯಕರಾಗಿ, ಎದುರಾಳಿ ಸರ್ಕಾರದ ಬೆವರಿಳಿಸಿದವರು.

ಹೆಸರು: ಡಿ.ಕೆ. ಶಿವಕುಮಾರ್
ವಿದ್ಯಾರ್ಹತೆ: ಎಂ.ಎ
ವಯಸ್ಸು: 61 ವರ್ಷ
ಜಾತಿ: ಒಕ್ಕಲಿಗ
ಕ್ಷೇತ್ರ: ಕನಕಪುರ
ಎಷ್ಟನೇ ಬಾರಿಗೆ ಶಾಸಕ: ಎಂಟನೇ ಬಾರಿ
ಹಿಂದೆ ನಿರ್ವಹಿಸಿದ ಖಾತೆ: ಬಂಧಿಖಾನೆ, ನಗರಾಭಿವೃದ್ಧಿ , ಇಂಧನ, ಜಲಸಂಪನ್ಮೂಲ

* * *

ರಾಜ್ಯದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಗೆಲುವಿನ ದಡ ಮುಟ್ಟಿಸಿದ ಸಾಧನೆಯಲ್ಲಿ ಡಿ.ಕೆ. ಶಿವಕುಮಾರ್‌ ಅವರ ಪಾತ್ರವೂ ಪ್ರಮುಖವಾಗಿದೆ. ಸತತ ಎಂಟನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ‘ಡಿಕೆಶಿ’ ಸದ್ಯ ರಾಜ್ಯ ರಾಜಕಾರಣದ ಪ್ರಭಾವಿ ನಾಯಕರಲ್ಲಿ ಒಬ್ಬರು. ಪಕ್ಷವನ್ನು ಯಶಸ್ವಿಯಾಗಿ ಗೆಲುವಿನ ದಡ ಮುಟ್ಟಿಸಿದ್ದಕ್ಕೆ ಉಪಮುಖ್ಯಮಂತ್ರಿಯಂತಹ ಉನ್ನತ ಹುದ್ದೆ ಒಲಿದು ಬಂದಿದೆ. ಈ ಹಿಂದೆ ನಾಲ್ವರು ಮುಖ್ಯಮಂತ್ರಿಗಳ ಆಡಳಿತದಲ್ಲಿ ಹಲವು ಖಾತೆ ನಿರ್ವಹಿಸಿದ ಅನುಭವ ಬೆನ್ನಿಗಿದೆ. 

ನೇರ ನಡೆ–ನುಡಿಯ, ಎಂತಹದ್ದೇ ಕಠಿಣ ಪರಿಸ್ಥಿತಿಯಲ್ಲೂ ಪಕ್ಷದ ಪರ ನಿಲ್ಲುವ ಅವರ ನಿಷ್ಠೆಯೇ ಇಂತಹ ಅವಕಾಶಗಳನ್ನು ತಂದುಕೊಟ್ಟಿದೆ. ಯಾವ ಅಂಜಿಕೆ, ಅಳಕು, ಹಿಂಜರಿಕೆ, ಮುಲಾಜಿಲ್ಲದ ದಾರ್ಷ್ಟ್ಯ ವ್ಯಕ್ತಿತ್ವವೇ ಶಿವಕುಮಾರ್ ಹೆಗ್ಗುರುತು. ಪಕ್ಷ ಆಪತ್ತಿನಲ್ಲಿ ಇರುವಾಗ ಮುನ್ನುಗ್ಗುವ ಛಾತಿಯಿಂದಾಗಿಯೇ ‘ಬಂಡೆ’, ‘ಟ್ರಬಲ್‌ ಶೂಟರ್‌’ ಎಂದು ಚಿರಪರಿಚಿತ.  

ಹೆಸರು: ಕೆ.ಜೆ. ಜಾರ್ಜ್‌

ವಿದ್ಯಾರ್ಹತೆ: ಬಿ.ಎ (ಅಪೂರ್ಣ)

ವಯಸ್ಸು: 73

ಧರ್ಮ: ಕ್ರೈಸ್ತ

ಕ್ಷೇತ್ರ: ಸರ್ವಜ್ಞನಗರ

ಎಷ್ಟನೇ ಬಾರಿಗೆ ಶಾಸಕ: 6

ಹಿಂದೆ ನಿರ್ವಹಿಸಿದ ಖಾತೆ: ಗೃಹ ಮತ್ತು ಬೆಂಗಳೂರು ಅಭಿವೃದ್ಧಿ ಖಾತೆ 

ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಕೆ.ಜೆ. ಜಾರ್ಜ್‌ ಅವರ ಪೂರ್ಣ ಹೆಸರು ಕೇಳಚಂದ್ರ ಜೋಸೆಫ್ ಜಾರ್ಜ್. ಸೋನಿಯಾ ಗಾಂಧಿ ಕುಟುಂಬಕ್ಕೆ ಆಪ್ತರಾಗಿರುವ ಕೆ.ಜೆ. ಜಾರ್ಜ್‌, ಕಾಂಗ್ರೆಸ್‌ನ ಪ್ರಭಾವಿ ರಾಜಕಾರಣಿ ಮತ್ತು ಉದ್ಯಮಿ. ಕೊಡಗಿನವರಾದ ಜಾರ್ಜ್‌ ಮೊದಲು ಟಿಂಬರ್‌ ವ್ಯಾಪಾರ ನಡೆಸುತ್ತಿದ್ದರು. ನಂತರ, ರಾಜಕೀಯಕ್ಕೆ ಧುಮುಕಿದ ಅವರು, ರಾಜಕೀಯದಲ್ಲಿ ಒಂದೊಂದೇ ಮೆಟ್ಟಿಲು ಏರಿದವರು. ಕಳೆದ ಐದು ದಶಕಗಳಿಂದಲೂ ಪಕ್ಷ ಸಂಘಟನೆ ಜತೆಗೆ ಹಲವು ಮುಖ್ಯಮಂತ್ರಿಗಳ ಜತೆ ಕಾರ್ಯ ನಿರ್ವಹಿಸಿದ್ದಾರೆ.

ಎಸ್‌. ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ವಸತಿ ಮತ್ತು ನಗರಾಭಿವೃದ್ಧಿ ಸಚಿವರಾಗುವ ಮೂಲಕ ರಾಜಕೀಯದಲ್ಲಿ ಪ್ರವರ್ಧಮಾನಕ್ಕೆ ಬಂದರು. ಈ ಮೂಲಕ ಬೆಂಗಳೂರಿನ ಮೇಲೆ ಹಿಡಿತ ಸಾಧಿಸಿದರು. ಬಂಗಾರಪ್ಪ ಕಾಂಗ್ರೆಸ್ ತೊರೆದು, ಕೆಸಿಪಿ ಕಟ್ಟಿದಾಗ ಅವರ ಜತೆಗೆ ಹೋಗಿದ್ದರು. ಈ ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಗೃಹ ಸಚಿವರಾಗಿದ್ದ ವೇಳೆ, ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ರಾಜೀನಾಮೆ ನೀಡಿದ್ದರು. ನಂತರ, ಸಿಬಿಐ ತನಿಖೆಯಲ್ಲಿ ಅವರಿಗೆ ‘ಕ್ಲೀನ್‌ಚಿಟ್‌’ ದೊರೆಯಿತು.

ಹೆಸರು: ರಾಮಲಿಂಗಾರೆಡ್ಡಿ

ವಿದ್ಯಾರ್ಹತೆ: ಬಿ.ಎಸ್ಸಿ

ವಯಸ್ಸು: 70

ಜಾತಿ: ರೆಡ್ಡಿ

ಕ್ಷೇತ್ರ: ಬಿಟಿಎಂ ಲೇಔಟ್‌

ಎಷ್ಟನೇ ಬಾರಿಗೆ ಶಾಸಕ: ಎಂಟು

ಹಿಂದೆ ನಿರ್ವಹಿಸಿದ ಖಾತೆ: ಗೃಹ, ಸಾರಿಗೆ, ‍ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ

ರಾಮಲಿಂಗಾರೆಡ್ಡಿ ಎಂದ ಕೂಡಲೇ ಕಣ್ಮುಂದೆ ಬರುವುದು ಬಿಳಿ ಪ್ಯಾಂಟು, ಮೇಲೊಂದು ತುಂಬುತೋಳಿನ ಅಂಗಿ. ಇದು ಇವರ ಸಾಮಾನ್ಯ ಉಡುಗೆ. ಸಚಿವಗಿರಿಯ ಹಮ್ಮುಬಿಮ್ಮು ತೋರಿಸಿದವರಲ್ಲ. ಸರ್ಕಾರಿ ಕಾರು ಇರಲಿಲ್ಲವೆಂದರೆ ಸಿಕ್ಕಿದ ದ್ವಿಚಕ್ರ ವಾಹನದ ಹಿಂದೆ ಕುಳಿತೇ ಹೋಗುವಷ್ಟು ಸರಳ ವ್ಯಕ್ತಿತ್ವ. ಗೃಹ ಸಚಿವರಾಗಿದ್ದ ವಿಶೇಷ ಸವಲತ್ತುಗಳನ್ನು ಬಳಸಿದವರಲ್ಲ.  ಬೆಂಗಳೂರನ್ನು ತಮ್ಮ ಕೈಯಲ್ಲಿಟ್ಟಿಕೊಂಡಿರುವ ಪ್ರಭಾವಿ ನಾಯಕ.

1989ರಲ್ಲಿ ಜಯನಗರ ಕ್ಷೇತ್ರದಿಂದ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ ಇವರು ಸೋಲು ಕಂಡಿಲ್ಲ. ಜಯನಗರದಿಂದ ನಾಲ್ಕು ಬಾರಿ ಮತ್ತು ಬಿಟಿಎಂ ಲೇಔಟ್‌ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಚುನಾಯಿತರಾಗಿದ್ದಾರೆ. ಜನರ ಜತೆ ಸಾಮಾನ್ಯರಂತೆ ಬೆರೆಯುವುದು ಇವರ ವೈಶಿಷ್ಟ್ಯ. ಪಕ್ಷದಲ್ಲೂ ಹಲವು ಹುದ್ದೆಗಳನ್ನು ನಿಭಾಯಿಸಿರುವ ರಾಮಲಿಂಗಾರೆಡ್ಡಿ, ಸದ್ಯ ಕೆಪಿಸಿಸಿ ಕಾರ್ಯಾಧ್ಯಕ್ಷ. ಪಾಲಿಕೆ ಸದಸ್ಯರಾಗುವ ಮೂಲಕ ರಾಜಕೀಯ ಪ್ರವೇಶ ಮಾಡಿದವರು. 

ಎಂ.ಬಿ ಪಾಟೀಲ 

ವಯಸ್ಸು: 59

ಜಾತಿ: ಲಿಂಗಾಯತ

ಶಿಕ್ಷಣ: ಬಿ.ಇ.ಸಿವಿಲ್‌

ಕ್ಷೇತ್ರ: ಬಬಲೇಶ್ವರ

ಎಷ್ಟನೇ ಬಾರಿ ಶಾಸಕ: ಆರನೇ ಬಾರಿ

ಹಿಂದೆ ನಿರ್ವಹಿಸಿದ ಖಾತೆ: ಗೃಹ, ಜಲಸಂಪನ್ಮೂಲ


ಲಿಂಗಾಯತ ಸಮುದಾಯದ ಪ್ರಭಾವಿ ಮುಖಂಡರಾಗಿರುವ ಎಂ.ಬಿ. ಪಾಟೀಲರು ಅನುಭವಿ ರಾಜಕಾರಣಿ. ವಿಜಯಪುರದ ಬಿ.ಎಲ್.ಡಿ.ಇ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. ಇವರ ಸಹೋದರ ಸುನೀಲ್ ಗೌಡ ಪಾಟೀಲ ಹಾಲಿ ವಿಧಾನ ಪರಿಷತ್ ಸದಸ್ಯರಿದ್ದಾರೆ.

ತಂದೆಯ ಅಕಾಲಿಕ ನಿಧನದಿಂದ 1991ರಲ್ಲಿ ತೆರವಾದ ತಿಕೋಟಾ ಮತಕ್ಷೇತ್ರದಿಂದ ಪ್ರಥಮ ಬಾರಿಗೆ ಆಯ್ಕೆಯಾಗಿ ತಮ್ಮ 26ನೇ ವಯಸ್ಸಿನಲ್ಲಿಯೇ ಶಾಸಕರಾದ ಅವರು, ಹಿಂದಿರುಗಿ ನೋಡಿದ್ದಿಲ್ಲ. ಜಲಸಂಪನ್ಮೂಲ ಸಚಿವರಾಗಿದ್ದಾಗ ಹಲವು ಏತ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಸಿದ್ದರಾಮಯ್ಯ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಪಾಟೀಲರು ಲಿಂಗಾಯತ ಪ್ರತ್ಯೆಕ ಧರ್ಮ ಹೋರಾಟದ ಸಮಯದಲ್ಲಿ ಮುಂಚೂಣಿಯಲ್ಲಿದ್ದವರು. ಬಿಜೆಪಿಯಲ್ಲಿದ್ದ ಲಿಂಗಾಯತ ಮುಖಂಡರಾದ ಲಕ್ಷ್ಮಣ ಸವದಿ ಮತ್ತು ಜಗದೀಶ ಶೆಟ್ಟರ್‌ ಅವರನ್ನು ಕಾಂಗ್ರೆಸ್‌ಗೆ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.

ಹೆಸರು: ಕೆ.ಎಚ್‌.ಮುನಿಯ‌ಪ್ಪ

ವಿದ್ಯಾರ್ಹತೆ: ಕಾನೂನು ಪದವೀಧರ

ವಯಸ್ಸು: 75 ವರ್ಷ

ಜಾತಿ: ಪರಿಶಿಷ್ಟ ಜಾತಿ (ಎಡಗೈ)

ಕ್ಷೇತ್ರ: ದೇವನಹಳ್ಳಿ (ಎಸ್‌.ಸಿ ಮೀಸಲು) (ಬೆಂಗಳೂರು ಗ್ರಾಮಾಂತರ)

ಎಷ್ಟನೇ ಬಾರಿಗೆ ಶಾಸಕ: ಮೊದಲ ಬಾರಿ 

ಹಿಂದೆ ನಿರ್ವಹಿಸಿದ ಖಾತೆ: ರಾಜ್ಯದಲ್ಲಿ ಯಾವುದೇ ಖಾತೆ ನಿರ್ವಹಿಸಿಲ್ಲ. ಕೇಂದ್ರದಲ್ಲಿ ಹಲವಾರು ಖಾತೆ ನಿರ್ವಹಿಸಿದ ಅನುಭವ

****** 

ಸತತ ಏಳು ಬಾರಿ ಸಂಸದರಾಗಿ, ಯುಪಿಎ ಸರ್ಕಾರದ ಅವಧಿಯಲ್ಲಿ ಹತ್ತು ವರ್ಷ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ ಅಪಾರ ಆಡಳಿತ ಅನುಭವ ಹೊಂದಿರುವ ಹಿರಿಯ ರಾಜಕಾರಣಿ ಕೆ.ಎಚ್‌.ಮುನಿಯಪ್ಪ ಮೊದಲ ಬಾರಿ ಶಾಸಕರಾಗಿ ಮಂತ್ರಿ ಮಂಡಲ ಸೇರಿಕೊಂಡಿದ್ದಾರೆ. ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಮೊದಲ ಬಾರಿ ಸ್ಥಾನ ಪಡೆದಿದ್ದರೂ ಸಚಿವ ಸ್ಥಾನದ ನಿರ್ವಹಣೆ ಅವರಿಗೆ ಹೊಸದೇನಲ್ಲ.

2019ರ ಲೋಕಸಭಾ ಚುನಾವಣೆಯಲ್ಲಿ ಕೋಲಾರದಿಂದ ಸೋಲು ಕಂಡಿದ್ದ ಅವರಿಗೆ ತಾಯಿಯ ತವರೂರು ದೇವನಹಳ್ಳಿ ರಾಜಕೀಯ ಮರುಜನ್ಮ ನೀಡಿ, ರಾಜ್ಯ ರಾಜಕಾರಣಕ್ಕೆ ಕರೆತಂದಿದೆ. ಮುನಿಯಪ್ಪ ಅವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಕಂಬದಹಳ್ಳಿಯವರು. ತಾಲ್ಲೂಕು ಪಂಚಾಯಿತಿ ಚುನಾವಣೆ ಮೂಲಕ ರಾಜಕೀಯ ಪ್ರವೇಶ ಮಾಡಿದ್ದರು. ಆರಂಭದಲ್ಲಿ ವಕೀಲ ವೃತ್ತಿಯಲ್ಲಿ ತೊಡಗಿದ್ದರು. ಅವರ ಪುತ್ರಿ ರೂಪಕಲಾ ಎಂ.ಶಶಿಧರ್‌ ಕೆಜಿಎಫ್‌ ಮೀಸಲು ಕ್ಷೇತ್ರದಿಂದ ಸತತ ಎರಡನೇ ಬಾರಿ ಗೆದ್ದಿದ್ದಾರೆ. ಈ ಮೂಲಕ ಅಪ್ಪ–ಮಗಳು ಜೊತೆಯಲ್ಲಿ ವಿಧಾನಸಭೆ ಪ್ರವೇಶಿಸಿದಂತಾಗಿದೆ. ರಾಜಕಾರಣ ಪ್ರವೇಶಿಸಿದ ದಿನದಿಂದ ಇಲ್ಲಿವರೆಗೆ ಕಾಂಗ್ರೆಸ್‌ ಹಾಗೂ ಪಕ್ಷದ ಹೈಕಮಾಂಡ್‌ಗೆ ನಿಷ್ಠಾವಂತರಾಗಿದ್ದಾರೆ. 

ಹೆಸರು: ಸತೀಶ ಲಕ್ಷ್ಮಣರಾವ್ ಜಾರಕಿಹೊಳಿ
ವಿದ್ಯಾರ್ಹತೆ:ಪಿಯುಸಿ
ವಯಸ್ಸು:61

ಜಾತಿ: ವಾಲ್ಮೀಕಿ(ಎಸ್‌ಟಿ)
ಕ್ಷೇತ್ರ:ಯಮಕನಮರಡಿ (ಬೆಳಗಾವಿ ಜಿಲ್ಲೆ)
ಎಷ್ಟನೇ ಬಾರಿಗೆ ಶಾಸಕ: ಆರು ಬಾರಿ (ಎರಡು ಬಾರಿ ಎಂ.ಎಲ್‌.ಸಿ)
ಹಿಂದೆ ನಿರ್ವಹಿಸಿದ ಖಾತೆ: ಜವಳಿ, ಅಬಕಾರಿ, ಸಣ್ಣ ಕೈಗಾರಿಕೆ, ಅರಣ್ಯ

––––

ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ಸತೀಶ ಜಾರಕಿಹೊಳಿ, ಈ ಬಾರಿ ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್‌ 11 ಸ್ಥಾನ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಿದ್ದರಾಮಯ್ಯ ಆಪ್ತ ಬಳಗದಲ್ಲಿ ಒಬ್ಬರಾಗಿರುವ ಅವರಿಗೆ ಈ ಹಿಂದೆ ನಾಲ್ಕು ಬಾರಿ ಸಚಿವರಾಗಿ ಕೆಲಸ ಮಾಡಿದ ಅನುಭವವಿದೆ. ಜವಳಿ, ಅಬಕಾರಿ, ಸಣ್ಣ ಕೈಗಾರಿಕೆ ಮತ್ತು ಅರಣ್ಯ ಸಚಿವರಾಗಿ ಹೊಣೆ ನಿಭಾಯಿಸಿದ್ದಾರೆ. ಮೊದಲು ಜೆಡಿಎಸ್‌ನಲ್ಲಿದ್ದರು. 2006ರಲ್ಲಿ ಸಿದ್ದರಾಮಯ್ಯ ಜತೆಗೆ ಕಾಂಗ್ರೆಸ್‌ ಸೇರಿದರು. ಅಹಿಂದದ ನಾಯಕರಾಗಿಯೂ ಅವರು ಗುರ್ತಿಸಿಕೊಂಡವರು.

ಮಾನವ ಬಂಧುತ್ವ ವೇದಿಕೆ ಮೂಲಕ ಮೌಢ್ಯಗಳ ವಿರುದ್ಧ ಸಮರ ಸಾರಿದವರು ಸತೀಶ. ಗ್ರಹಣ, ಹುಣ್ಣಿಮೆ, ಅಮಾವಾಸ್ಯೆ ದಿನಗಳಂದು ಸ್ಮಶಾನದಲ್ಲೇ ಊಟ ಮಾಡಿ, ಮಲಗಿ ದಿನ ಕಳೆಯುವ ಕಾರ್ಯಕ್ರಮ ಕೂಡ ಮಾಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಅವರು ರಾಹುಕಾಲದಲ್ಲೇ ನಾಮಪತ್ರ ಸಲ್ಲಿಸುವುದು ವಾಡಿಕೆ. ಈ ಬಾರಿಯೂ ಅದನ್ನೇ ಅನುಸರಿಸಿದರು. ಯಾವುದೇ ವಾಹನ ಖರೀದಿ ಅಥವಾ ಹೊಸ ಕೆಲಸಕ್ಕೆ ಸ್ಮಶಾನದಿಂದ ಚಾಲನೆ ನೀಡುವ ಮೂಲಕ, ಅಂಧಶ್ರದ್ಧೆಗಳ ವಿರುದ್ಧ ಸಮರ ಸಾರುತ್ತಾ ಬಂದಿದ್ದಾರೆ. 

ಹೆಸರು: ಡಾ.ಜಿ.ಪರಮೇಶ್ವರ
ವಿದ್ಯಾರ್ಹತೆ: ಎಂ.ಎಸ್‌ಸಿ., ಪಿಎಚ್.ಡಿ
ವಯಸ್ಸು: 72 ವರ್ಷ
ಜಾತಿ: ಪರಿಶಿಷ್ಟ ಜಾತಿ (ಬಲಗೈ)
ಕ್ಷೇತ್ರ: ಕೊರಟಗೆರೆ (ಎಸ್‌.ಸಿ– ಮೀಸಲು) (ತುಮಕೂರು ಜಿಲ್ಲೆ)
ಎಷ್ಟನೇ ಬಾರಿ ಶಾಸಕ: ಆರನೇ ಬಾರಿ
ಹಿಂದೆ ನಿರ್ವಹಿಸಿದ ಖಾತೆ: ಉಪ ಮುಖ್ಯಮಂತ್ರಿ, ಗೃಹ, ಉನ್ನತ ಶಿಕ್ಷಣ, ವೈದ್ಯಕೀಯ, ರೇಷ್ಮೆ, ವಿಜ್ಞಾನ– ತಂತ್ರಜ್ಞಾನ, ಐ.ಟಿ, ಬಿ.ಟಿ, ಕ್ರೀಡೆ, ವಾರ್ತಾ ಮತ್ತು ಪ್ರಚಾರ

**

ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರವನ್ನು ಜಿ.ಪರಮೇಶ್ವರ ಸಮಚಿತ್ತದಿಂದ ನಿಭಾಯಿಸಿ, ಎರಡೂ ಕಡೆಯೂ ಸೈ ಎನಿಸಿಕೊಂಡಿದ್ದಾರೆ. ನಾಲ್ಕು ದಶಕಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಎಂದೂ ತಮ್ಮತ್ತ ಬೆರಳು ತೋರಿಸಿಕೊಂಡವರಲ್ಲ. ಅಪವಾದ ಹಾಗೂ ಆರೋಪಗಳಿಂದ ದೂರವೇ ಉಳಿದು, ವೈಯಕ್ತಿಕ ಹಾಗೂ ರಾಜಕೀಯ ಟೀಕೆಗಳಿಗೂ ಅಷ್ಟೇ ಎಚ್ಚರಿಕೆಯಿಂದ ಉತ್ತರ ನೀಡುತ್ತಾ ಬಂದವರು.

ವಿದೇಶದಲ್ಲಿ ಪಡೆದ ಉನ್ನತ ಶಿಕ್ಷಣದ ಅನುಭವಗಳನ್ನು ತಾವು ಉನ್ನತ ಶಿಕ್ಷಣ ಸಚಿವರಾಗಿದ್ದಾಗ ಬಳಸಿಕೊಂಡು ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆ ತಂದರು. ವಿಶ್ವವಿದ್ಯಾಲಯಗಳಿಗೆ ಕಾಯಕಲ್ಪ ಕೊಟ್ಟು, ಕೆಲವೇ ಭಾಗಕ್ಕೆ ಸೀಮಿತಗೊಂಡಿದ್ದ ವಿ.ವಿಗಳನ್ನು ಇತರೆ ಜಿಲ್ಲೆಗಳಿಗೂ ವಿಸ್ತರಿಸಲು ಅಡಿಪಾಯ ಹಾಕಿದರು. ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಐ.ಟಿ, ಬಿ.ಟಿ ಸಚಿವರಾಗಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪ್ರಗತಿಗೆ ಭದ್ರ ಬುನಾದಿ ಹಾಕಿದರು. ಸತತ ಎಂಟು ವರ್ಷ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನೂ ಅಷ್ಟೇ ಸಮರ್ಥವಾಗಿ ಮುನ್ನಡೆಸಿದ ಹೆಗ್ಗಳಿಕೆ ಹೊಂದಿದ್ದಾರೆ. 

ಹೆಸರು: ಪ್ರಿಯಾಂಕ್ ಖರ್ಗೆ
ವಿದ್ಯಾರ್ಹತೆ: ಡಿಪ್ಲೋಮಾ ಇನ್ ಗ್ರಾಫಿಕ್ಸ್ ಮತ್ತು ‌ಎನಿಮೇಷನ್
ವಯಸ್ಸು: 44
ಜಾತಿ: ಪರಿಶಿಷ್ಟ ಜಾತಿ (ಬಲಗೈ)
ಕ್ಷೇತ್ರ: ಚಿತ್ತಾಪುರ
ಎಷ್ಟನೇ ಬಾರಿಗೆ ಶಾಸಕ: 3ನೇ ಬಾರಿಗೆ
ಹಿಂದೆ ನಿರ್ವಹಿಸಿದ ಖಾತೆ: ಸಮಾಜ ಕಲ್ಯಾಣ, ಐಟಿ, ಬಿಟಿ, ಪ್ರವಾಸೋದ್ಯಮ

***

ಕಲಬುರಗಿ ಜಿಲ್ಲೆಯ ಚಿತ್ತಾಪುರ ಮೀಸಲು ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಸಚಿವ ಪ್ರಿಯಾಂಕ್ ಖರ್ಗೆ ಜನಮುಖಿ ಚಿಂತನೆಯುಳ್ಳ ಯುವ ನಾಯಕ. ಸಮಾಜ ಕಲ್ಯಾಣ ಸಚಿವರಾಗಿದ್ದ ವೇಳೆ ಇಲಾಖೆಯಲ್ಲಿ ಹಲವು ಜನಪರ ಯೋಜನೆ ಜಾರಿಗೊಳಿಸಿದವರು. ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷರಾಗಿರುವ ಪ್ರಿಯಾಂಕ್, ಪಿಎಸ್‌ಐ ನೇಮಕಾತಿ ಅಕ್ರಮ ಹಗರಣ, ಬಿಟ್ ಕಾಯಿನ್ ಹಗರಣ, ಸಮಾಜ ಕಲ್ಯಾಣ ಇಲಾಖೆಯ ಗಂಗಾ ಕಲ್ಯಾಣ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಬಗ್ಗೆ ನಿರಂತರ ಧ್ವನಿ ಎತ್ತಿದರು. ಪ್ರತಿ ಬಾರಿ ಗೆದ್ದಾಗಲೂ ಅವರು ಸಚಿವರಾಗಿರುವುದು ವಿಶೇಷ.

ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳು ಉತ್ತಮ ಪರಿಸರದಲ್ಲಿ ಅಧ್ಯಯನ ಮಾಡಲಿ ಎಂಬ ಉದ್ದೇಶದಿಂದ ಕಲಬುರಗಿಯಲ್ಲಿ ₹ 45 ಕೋಟಿ ವೆಚ್ಚದಲ್ಲಿ ಎರಡು ಬೃಹತ್ ಹಾಸ್ಟೆಲ್‌ ನಿರ್ಮಿಸಿ ಶಿಕ್ಷಣಪ್ರೇಮ ಮೆರೆದವರು ಅವರು. 

ಹೆಸರು: ಜಮೀರ್‌ ಅಹಮದ್‌ ಖಾನ್‌

ವಿದ್ಯಾರ್ಹತೆ: ಎಸ್ಸೆಸ್ಸೆಲ್ಸಿ ಅಪೂರ್ಣ

ವಯಸ್ಸು: 55

ಧರ್ಮ: ಮುಸ್ಲಿಂ

ಕ್ಷೇತ್ರ: ಚಾಮರಾಜಪೇಟೆ

ಎಷ್ಟನೇ ಬಾರಿಗೆ ಶಾಸಕ: 5 ಬಾರಿ

ಹಿಂದೆ ನಿರ್ವಹಿಸಿದ ಖಾತೆ: ಸಾರಿಗೆ, ಹಜ್ ಮತ್ತು ವಕ್ಫ್

‘ನ್ಯಾಷನಲ್‌ ಟ್ರಾವೆಲ್ಸ್‌’ ಮೂಲಕ ಸಾರಿಗೆ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಜಮೀರ್‌ ಅಹಮದ್‌ ಖಾನ್‌, ಪ್ರಭಾವಿ ಮುಸ್ಲಿಂ ರಾಜಕಾರಣಿ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿನ ನೂರಕ್ಕಿಂತಲೂ ಹೆಚ್ಚು ಕ್ಷೇತ್ರಗಳಲ್ಲಿ ಪಕ್ಷದ ಪರ ಪ್ರಚಾರ ಮಾಡಿ ಗಮನಸೆಳೆದಿದ್ದರು.

ಜೆಡಿಎಸ್‌ನಿಂದಲೇ ರಾಜಕೀಯ ಜೀವನ ಆರಂಭಿಸಿದ್ದ ಜಮೀರ್‌, ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್‌ - ಜೆಡಿಎಸ್ ಮೊದಲ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ತರುವಲ್ಲಿ ಶ್ರಮ ಹಾಕಿದ್ದರು. ವಿಧಾನಸೌಧದಿಂದ ತಾವೇ ಬಸ್‌ ಚಲಾಯಿಸಿ ಶಾಸಕರನ್ನು ರೆಸಾರ್ಟ್‌ಗೆ ಕರೆದೊಯ್ದಿದ್ದರು. ನಂತರ, ಎಚ್‌.ಡಿ. ಕುಮಾರಸ್ವಾಮಿ ಅವರ ಜತೆ ವಿರಸದಿಂದ ಕಾಂಗ್ರೆಸ್‌ ಸೇರಿ, ಸಿದ್ದರಾಮಯ್ಯ ಅವರ ಆಪ್ತರಾದರು.

ಬೆಂಗಳೂರಿನಲ್ಲಿ ಜಮೀರ್‌ ನಿರ್ಮಿಸಿರುವ ಬೃಹತ್‌ ಬಂಗಲೆ ಹಲವು ಬಾರಿ ಸುದ್ದಿಯಾಗುತ್ತಲೇ ಇದೆ. ಈ ಐಷಾರಾಮಿ ಬಂಗಲೆ ಮೇಲೆ ಇಡಿ, ಎಸಿಬಿ ದಾಳಿಯೂ ಕೂಡ ನಡೆದಿತ್ತು. ಚಾಮರಾಜಪೇಟೆ ಕ್ಷೇತ್ರದ ಜನರಿಗೆ ಸಹಾಯ ಹಸ್ತ ಚಾಚುವಲ್ಲಿ ಇವರು ಮುಂಚೂಣಿಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT