ಬೆಂಗಳೂರು: ‘ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಅವರೇ ಮುಂದುವರಿಯುತ್ತಾರೆ, ಬದಲಾವಣೆ ಪ್ರಶ್ನೆಯೇ ಇಲ್ಲ’ ಎನ್ನುತ್ತಲೇ ಮುಖ್ಯಮಂತ್ರಿ ಪಟ್ಟದ ಮೇಲೆ ಆಸೆ ವ್ಯಕ್ತಪಡಿಸುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ‘ಹೈಕಮಾಂಡ್ ಒಪ್ಪಿದರೆ, ಸಿದ್ದರಾಮಯ್ಯ ಅನುಮತಿ ಕೊಟ್ಟರೆ ನಾನು ಮುಖ್ಯಮಂತ್ರಿ ಆಗುತ್ತೇನೆ’ ಎಂಬ ಕಾಂಗ್ರೆಸ್ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಹೇಳಿಕೆ ಚರ್ಚೆಯಾಗುತ್ತಿದ್ದಂತೆ, ಆ ಕುರ್ಚಿಗಾಗಿ ತೆರೆಮರೆಯಲ್ಲಿ ಸಚಿವರುಗಳ ಮಧ್ಯೆ ಮಾತಿನ ಸಮರ ಆರಂಭವಾಗಿದೆ.
‘ನಾನು ಸಿದ್ದರಾಮಯ್ಯಗಿಂತ ಎರಡು ವರ್ಷ ದೊಡ್ಡವನು. ಸಚಿವ ಆಗಿ ಆಗಿ ದಣಿದಿದ್ದೇನೆ. ಇನ್ನೇನಿದ್ದರೂ ಮುಖ್ಯಮಂತ್ರಿ ಆಗಬೇಕಷ್ಟೆ. ಎಲ್ಲರಂತೆಯೇ ನನಗೂ ಆಸೆ ಇದೆ’ ಎಂದು ಆರ್.ವಿ. ದೇಶಪಾಂಡೆ ಕೆಲವು ದಿನಗಳ ಹಿಂದೆ ತಮ್ಮ ಬಯಕೆ ಬಹಿರಂಗಪಡಿಸಿದ್ದರು.
ಈ ಬೆನ್ನಲ್ಲೇ, ‘ಹಿರಿಯರು ಮುಖ್ಯಮಂತ್ರಿ ಆಗಲಿ’ ಎಂದು ಸಚಿವ ಶಿವಾನಂದ ಪಾಟೀಲ ನೀಡಿದ ಹೇಳಿಕೆಗೆ, ‘ನಾನೂ ಹಿರಿಯನಿದ್ದೇನೆ. ಒಂದಲ್ಲ ಒಂದು ದಿನ ಮುಖ್ಯಮಂತ್ರಿ ಆಗುವೆ’ ಎಂದು ಎಂ.ಬಿ. ಪಾಟೀಲ ಪ್ರತಿಕ್ರಿಯಿಸಿದ್ದಾರೆ. ಅವರಿಬ್ಬರ ಜಟಾಪಟಿ ಮಧ್ಯೆ, ‘ಮುಂದಿನ ಮುಖ್ಯಮಂತ್ರಿ ಸತೀಶ ಜಾರಕಿಹೊಳಿ’ ಎಂಬ ಅಭಿಯಾನಕ್ಕೂ ಚಾಲನೆ ಸಿಕ್ಕಿದೆ.
ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾದ ರಿಟ್ ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ. ಕಾಂಗ್ರೆಸ್ ನಾಯಕರು ಸಾಮೂಹಿಕವಾಗಿ ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ದಾರೆ. ಈ ಬೆಳವಣಿಗೆಯ ನಡುವೆ ಮುಖ್ಯಮಂತ್ರಿ ಪಟ್ಟದ ಚರ್ಚೆ ಮುನ್ನೆಲೆಗೆ ಬಂದಿದೆ.
‘ಸಿದ್ದರಾಮಯ್ಯ ರಾಜೀನಾಮೆ ಕೊಟ್ಟರೆ ಸತೀಶ ಜಾರಕಿಹೊಳಿ ಅವರು ಮುಖ್ಯಮಂತ್ರಿ ಆಗಲಿ’ ಎಂದು ಸತೀಶ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸತೀಶ ಅವರು ಇತ್ತೀಚೆಗೆ ದೆಹಲಿಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದರು. ಅದಕ್ಕೂ ಮೊದಲು ಗೃಹ ಸಚಿವ ಜಿ. ಪರಮೇಶ್ವರ ಜೊತೆ ಗೌಪ್ಯವಾಗಿ ಚರ್ಚೆ ನಡೆಸಿದ್ದರು. ಸತೀಶ ಅವರ ಈ ನಡೆ ಕುತೂಹಲಕ್ಕೆ ಕಾರಣವಾಗಿತ್ತು. ಆದರೆ, ಈ ಮುಖ್ಯಮಂತ್ರಿ ಪಟ್ಟದ ಕುರಿತ ಚರ್ಚೆಗಳನ್ನು ಸತೀಶ ತಳ್ಳಿಹಾಕಿದ್ದಾರೆ.
ಸುದ್ದಿಗಾರರ ಜೊತೆ ಬೆಳಗಾವಿಯಲ್ಲಿ ಮಾತನಾಡಿದ ಸತೀಶ ಜಾರಕಿಹೊಳಿ, ‘ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಮುಂದುವರಿಯುತ್ತಾರೆ. ನಾನು ಎಲ್ಲಿಯೂ ಮುಖ್ಯಮಂತ್ರಿ ಸ್ಥಾನಕ್ಕೆ ಕ್ಲೇಮ್ ಮಾಡಿಲ್ಲ. ಇದಕ್ಕೆ ಗುದ್ದಾಡುವ ಮತ್ತು ಕುಸ್ತಿ ಆಡುವ ಅವಶ್ಯಕತೆ ಇಲ್ಲ’ ಎಂದಿದ್ದಾರೆ.
‘ಯಾರೋ ಒಬ್ಬರು ಜಾಲತಾಣದಲ್ಲಿ ಪೋಸ್ಟ್ ಹಾಕಿದರೆ, ಅದು ಇಡೀ ರಾಜ್ಯದ ಅಭಿಪ್ರಾಯ ಆಗುವುದಿಲ್ಲ. ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಮಾಡುವಂಥ ಸನ್ನಿವೇಶ ಇಲ್ಲ’ ಎಂದೂ ಹೇಳಿದ್ದಾರೆ.
‘ಮುಡಾ ವಿಚಾರದಲ್ಲಿ ಸಿದ್ದರಾಮಯ್ಯ ಅವರಿಗೆ ನ್ಯಾಯ ಸಿಗುವ ವಿಶ್ವಾಸವಿದೆ. ಹೀಗಿರುವಾಗ, ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಬರುವುದಿಲ್ಲ. ಆರ್.ವಿ. ದೇಶಪಾಂಡೆ, ಪರಮೇಶ್ವರ, ಡಿ.ಕೆ. ಶಿವಕುಮಾರ್, ಎಂ.ಬಿ. ಪಾಟೀಲ, ಶಿವಾನಂದ ಪಾಟೀಲ ಹಿರಿಯರಿದ್ದಾರೆ. ಎಲ್ಲರಿಗೂ ಮುಖ್ಯಮಂತ್ರಿ ಆಗುವ ಅಸೆ ಇದ್ದೇ ಇರುತ್ತೆ. ಸದ್ಯ ಈ ಪ್ರಶ್ನೆ ಉದ್ಭವಿಸುವುದಿಲ್ಲ, ಮುಂದೇನಾಗುತ್ತೋ ನೋಡೋಣ’ ಎಂದಿದ್ದಾರೆ.
ಸಿದ್ದರಾಮಯ್ಯ ಅವರು ಇದು ಕೊನೆ ಚುನಾವಣೆ ಎಂದು ಈಗಾಗಲೇ ಹೇಳಿದ್ದಾರೆ. ಆ ಮೂಲಕ, ಚುನಾವಣಾ ಕಣದಿಂದ ಹಿಂದೆ ಸರಿಯುವುದಾಗಿ ಘೋಷಣೆ ಮಾಡಿದ್ದಾರೆ. ‘2028ಕ್ಕೆ ಮುಖ್ಯಮಂತ್ರಿ ಆಗುವ ತಯಾರಿ ನಮ್ಮದು’ ಎನ್ನುವ ಮೂಲಕ, ‘ಮುಂದಿನ ಸರದಿ ನನ್ನದು’ ಎನ್ನುವ ಸಂದೇಶವನ್ನು ಕಾಂಗ್ರೆಸ್ ನಾಯಕರಿಗೆ ಸತೀಶ ರವಾನಿಸಿದ್ದಾರೆ ಎಂದೇ ವಿಶ್ಲೇಷಿಸಲಾಗಿದೆ.
ಸಿದ್ದರಾಮಯ್ಯ ಅವರ ಬಳಿಕ ಡಿ.ಕೆ. ಶಿವಕುಮಾರ್ ಹೆಸರು ಚರ್ಚೆಯಲ್ಲಿರುವಾಗಲೇ ಸತೀಶ ಅವರ ಹೇಳಿಕೆ ರಾಜ್ಯ ಕಾಂಗ್ರೆಸ್‌ನಲ್ಲಿ ಸಂಚಲನ ಮೂಡಿಸಿದೆ.
ನಾನು ಈಗ ಮುಖ್ಯಮಂತ್ರಿ ಸ್ಥಾನದ ಕನಸು ಕಂಡಿಲ್ಲ. ಸಿದ್ದರಾಮಯ್ಯ ಅವರಿಗೆ ಬೆಂಬಲ ಕೊಟ್ಟಿದ್ದೇನೆ. 2028ರ ವೇಳೆಗೆ ಮುಖ್ಯಮಂತ್ರಿ ಆಗಲು ತಯಾರಿ ಮಾಡಿಕೊಳ್ಳುತ್ತೇವೆ.– ಸತೀಶ ಜಾರಕಿಹೊಳಿ, ಲೋಕೋಪಯೋಗಿ ಸಚಿವ
‘ನಾನೂ ಕಾಂಗ್ರೆಸ್‌ನ ಹಿರಿಯ ನಾಯಕ’
ವಿಜಯಪುರ: ‘ಶಿವಾನಂದ ಪಾಟೀಲ ಮತ್ತು ಸಿದ್ದರಾಮಯ್ಯ ಜೆಡಿಎಸ್‌ನಿಂದ ಬಂದವರು. ಆದರೆ ಸಿದ್ದರಾಮಯ್ಯ ಅವರದ್ದು ವಿಶೇಷ ಪ್ರಕರಣ. ಅವರು ದೊಡ್ಡ ನಾಯಕರು’ ಎಂದು ಸಚಿವ ಎಂ.ಬಿ. ಪಾಟೀಲ ಬಣ್ಣಿಸಿದರು.
‘ಮುಖ್ಯಮಂತ್ರಿ ಆಗಲು ಕಾಂಗ್ರೆಸ್‌ನಲ್ಲಿ ಎಂ.ಬಿ. ಪಾಟೀಲಗಿಂತ ಬಹಳ ಜನರು ಹಿರಿಯರಿದ್ದಾರೆ’ ಎಂಬ ಸಚಿವ ಶಿವಾನಂದ ಪಾಟೀಲರ ಹೇಳಿಕೆಗೆ ಅವರು ಪ್ರತಿಕ್ರಿಯಿಸಿದರು.
‘ಪಕ್ಷದಲ್ಲಿ ಹಿರಿಯರೆಂದರೆ ನಾನು ಡಿ.ಕೆ. ಶಿವಕುಮಾರ್ ಸತೀಶ ಜಾರಕಿಹೊಳಿ ಪರಮೇಶ್ವರ. ನಾವೆಲ್ಲ ಒಂದು. ನಾನು ಸತೀಶ ಜಾರಕಿಹೊಳಿ ಅವರಿಗಿಂತ ಹಿರಿಯವ. ನಮಗಿಂತ ಹಿರಿಯರೆಂದರೆ ಮಲ್ಲಿಕಾರ್ಜುನ ಖರ್ಗೆ ಸಿದ್ದರಾಮಯ್ಯ ಮತ್ತು ದೇಶಪಾಂಡೆ. ಆದರೆ ರಾಜ್ಯದಲ್ಲಿ ಈಗ ಸಿ.ಎಂ ಸ್ಥಾನ ಖಾಲಿ ಇಲ್ಲ’ ಎಂದರು.
‘ಕೆಪಿಪಿಸಿ ಅಧ್ಯಕ್ಷರು ಮಂತ್ರಿಗಳು ಶಾಸಕರು ಮತ್ತು ಎಲ್ಲ ಕಾರ್ಯಕರ್ತರು ಸಿದ್ದರಾಮಯ್ಯ ಪರ ಇದ್ದೇವೆ. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರಿಗೆ ನ್ಯಾಯ ಸಿಗುವ ವಿಶ್ವಾಸವಿದೆ’ ಎಂದರು.
‘ನಾನು ಮುಖ್ಯಮಂತ್ರಿಯಾದರೆ ಜನರಿಗೆ ಒಳ್ಳೆಯದನ್ನೇ ಮಾಡುತ್ತೇನೆ. ನೀರಾವರಿ ಮಂತ್ರಿ ಆಗಿದ್ದಾಗ ಒಳ್ಳೆ ಕೆಲಸ ಮಾಡಿದ್ದೇನೆ’ ಎಂದು ಹೇಳಿದರು.
ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಬದಲಾಗುವ ಪ್ರಶ್ನೆಯೇ ಇಲ್ಲ. ಆಸೆಗಳು ಇದ್ದೇ ಇರುತ್ತವೆ.– ಬೈರತಿ ಸುರೇಶ್, ನಗರಾಭಿವೃದ್ಧಿ ಸಚಿವ
ಸಿದ್ದರಾಮಯ್ಯ ಸರದಿ ಮುಗಿದ ಬಳಿಕ ಮುಂದೊಂದು ದಿನ ನಾನು ಮುಖ್ಯಮಂತ್ರಿ ಆಗುತ್ತೇನೆ. ಸಿ.ಎಂ ಆಗುವ ಆಸೆಯಿದೆ. ಆದರೆ ಯಾರದೋ ಸ್ಥಾನ ಕಸಿದುಕೊಂಡು ಆಗುವ ದುರಾಸೆ ನನಗಿಲ್ಲ– ಎಂ.ಬಿ. ಪಾಟೀಲ, ಕೈಗಾರಿಕಾ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.