ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವ ಮೂಲಕ ಕರ್ನಾಟಕದಲ್ಲಿ ಜನ ನಾಯಕರ ಅಧಿಕಾರದ ಯುಗಾಂತ್ಯವಾಗಿದೆ.

ಈಚೆಗಿನ ಸರಿ ಸುಮಾರು ಮೂರು ದಶಕಗಳಲ್ಲಿ ನಾಡನ್ನು ಬಹುವಾಗಿ ಪ್ರಭಾವಿಸಿದವರು 93ರ ಹಿರೀಕರಾದ ಎಚ್.ಡಿ. ದೇವೇಗೌಡ, 83ರ ವಯೋಮಾನದ ಬಿ.ಎಸ್. ಯಡಿಯೂರಪ್ಪ ಹಾಗೂ 77 ವರ್ಷದ ಸಿದ್ದರಾಮಯ್ಯ. ಗೌಡ ಎಂದರೆ ದೇವೇಗೌಡ, ಅಪ್ಪ ಎಂದರೆ ಯಡಿಯೂರಪ್ಪ, ಅಯ್ಯ ಎಂದರೆ ಸಿದ್ದರಾಮಯ್ಯ ಎಂಬಷ್ಟರಮಟ್ಟಿಗೆ ಈ ಮೂವರು ಜನಾನುರಾಗಿಗಳು. ರಾಜೀನಾಮೆ ಸಲ್ಲಿಸಿದ ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, ‘ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗಿರುವೆ’ ಎಂದು ಹೇಳಿದ್ದಾರೆ.

ಹೋರಾಟದ ಕುಲಮೆಯಲ್ಲಿ ಪಳಗಿ, ಜನರ ನಡುವಿನಿಂದಲೇ ನಾಯಕರಾಗಿ ಹೊರಹೊಮ್ಮಿ, ಜನಸಮೂಹವನ್ನೇ ತಮ್ಮ ಪ್ರಭಾವಳಿಯ ಒಳಗು ಮಾಡುವ ಮೋಹಕತ್ವ ಈ ಮೂವರು ನಾಯಕರಲ್ಲಿರುವ ಸಾಮ್ಯತೆ. ಅಂತಹದೇ, ವ್ಯಕ್ತಿತ್ವವನ್ನು ಹೊಂದಿದ್ದ ದೇವರಾಜ ಅರಸು, ರಾಮಕೃಷ್ಣ ಹೆಗಡೆ, ಎಸ್. ಬಂಗಾರಪ್ಪ, ಎಸ್.ಎಂ. ಕೃಷ್ಣ ಅವರೆಲ್ಲ ಈಗಿಲ್ಲ.

ಸದ್ಯ ನಮ್ಮೊಡನಿರುವ ಹಿರಿಯ ತಲೆಯಾಳುಗಳ ಪೈಕಿ ಸಿದ್ದರಾಮಯ್ಯ ಮಾತ್ರ ರಾಜ್ಯರಾಜಕಾರಣದಲ್ಲಿ ಸಕ್ರಿಯ. ಕರ್ನಾಟಕದ ಮಣ್ಣಿನಲ್ಲಿ ನಿಂತು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಿಂದ ಒಕ್ಕೂಟ ವ್ಯವಸ್ಥೆಗೆ ಒದಗಿರುವ ಧಕ್ಕೆ, ಕೋಮುವಾದಿ ರಾಜಕಾರಣದ ಅಪಾಯದ ಬಗ್ಗೆ ಎಚ್ಚರಿಸುವ ಧೈರ್ಯ ತೋರುವ ಏಕೈಕ ನಾಯಕ ಸಿದ್ದರಾಮಯ್ಯ. ಸರ್ಕಾರ ನಡೆಸುವವರಿಗೆ ಇರಬೇಕಾದ ಹೃದಯವೈಶಾಲ್ಯದ ಜತೆಗೆ ಸಾಮಾಜಿಕ ನ್ಯಾಯದ ಪಸೆ ಆರದಂತೆ, ಶೋಷಿತರ ಅಳಲಿಗೆ ಧ್ವನಿಯಾಗುವ ಕಾಯಕವನ್ನು ಬಿಡದೇ ನಡೆಸಿದ್ದರು.

ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನವೇ ಯಾರೊಬ್ಬರೂ ಹಸಿವಿನಿಂದ ಮಲಗಬಾರದು ಎಂಬ ಕಳಕಳಿ ತೋರಿದ್ದ ಅವರು ಅನ್ನಭಾಗ್ಯ ಯೋಜನೆ ಜಾರಿ ಮಾಡಿದ್ದಲ್ಲದೇ, ಕೈಗೆಟುಕುವ ದರದಲ್ಲಿ ಊಟ–ಉಪಾಹಾರ ಸಿಗುವಂತೆ ಇಂದಿರಾ ಕ್ಯಾಂಟೀನ್ಗಳನ್ನು ತೆರೆದಿದ್ದರು. ಸಾಮಾಜಿಕ ನ್ಯಾಯದ ವಿಷಯದಲ್ಲಿ ದೇವರಾಜ ಅರಸು ಅವರ ಮಟ್ಟಕ್ಕೆ ಏರಲು ಸಾಧ್ಯವಾಗದೇ ಇದ್ದರೂ ಅವರ ಹಾದಿಯಲ್ಲಿ ಸಾಗಿದರು. ಎರಡನೇ ಅವಧಿಯ ಮೂರು ವರ್ಷಗಳಲ್ಲಿ ‘ಗ್ಯಾರಂಟಿ’ಗಳ ಜತೆಗೆ, ವ್ಯವಸ್ಥೆಯ ಸುಧಾರಣೆಗಾಗಿ ವಿಧೇಯಕ ರಾಜಕಾರಣಕ್ಕೆ ಸೀಮಿತರಾಗದೆ ವಿಧಾಯಕ ರಾಜಕಾರಣದ ದಾರಿಯನ್ನೂ ಹಾಕಿಕೊಟ್ಟರು.

ಹೋರಾಟವೇ ಬದುಕು: ಕಾಂಗ್ರೆಸ್ ಪಕ್ಷದ ಹೈಕಮಾಂಡ್, ರಾಜ್ಯದ ಮುಖ್ಯಮಂತ್ರಿಗಳನ್ನು ಸಾಮಂತರಂತೆ ನಡೆಸಿಕೊಳ್ಳುವುದು ಹೊಸತೇನೂ ಅಲ್ಲ. ಅದಕ್ಕಾಗಿಯೇ, ಅನೇಕ ಬಾರಿ ಅದು ಪೆಟ್ಟನ್ನೂ ತಿಂದಿದೆ. ಶಾಸಕರಿಂದ ಆಯ್ಕೆಯಾದ ಶಾಸಕಾಂಗ ಪಕ್ಷದ ನಾಯಕರ ಅಧಿಕಾರವನ್ನು ಮೊಟಕುಗೊಳಿಸಿದ್ದು ಕಾಂಗ್ರೆಸ್ನ ‘ಹೆಗ್ಗಳಿಕೆ’.

ಕರ್ನಾಟಕದಲ್ಲಿ ದೇವರಾಜ ಅರಸು, ವೀರೇಂದ್ರ ಪಾಟೀಲ, ಎಸ್. ಬಂಗಾರಪ್ಪ ಈ ರೀತಿಯಲ್ಲಿ ಬಲಿಯಾಗಿದ್ದಾರೆ. ಹಾಗೆ ನೋಡಿದರೆ, ಸಿದ್ದರಾಮಯ್ಯ ಅವರು ಮೊದಲ ಬಾರಿ ಪೂರ್ಣಾವಧಿ, ಎರಡನೇ ಬಾರಿ ಸುದೀರ್ಘ ಮೂರು ವರ್ಷ ಅಧಿಕಾರ ಅನುಭವಿಸುವ ಅದೃಷ್ಟವನ್ನು ಪಡೆದರು. 2014ರ ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಹೈಕಮಾಂಡ್ ಸಂಪೂರ್ಣ ನೆಲಕಚ್ಚಿದ್ದರಿಂದಾಗಿ ಬಹುಶಃ ಸಿದ್ದರಾಮಯ್ಯನವರ ಬಲ ಹೆಚ್ಚಾಯಿತು.

ಸಿದ್ದರಾಮಯ್ಯ ಅವರಂತೆಯೇ ಹೋರಾಟವನ್ನೇ ತಮ್ಮ ಜೀವನವನ್ನಾಗಿಸಿಕೊಂಡು, ಅದರಲ್ಲೇ ಬಳಲಿ ಬೆಂಡಾದ ದೇವೇಗೌಡ ಹಾಗೂ ಯಡಿಯೂರಪ್ಪ ಅವರು ಅಧಿಕಾರ ಅನುಭವಿಸಿದ್ದು ಕಡಿಮೆ. ದಶಕಗಳ ಬದುಕನ್ನೇ ಅಡವಿಟ್ಟು ನಾಡಿನ ರೈತರಿಗಾಗಿ, ನೀರಿಗಾಗಿ ಹೋರಾಡಿದ ದೇವೇಗೌಡರು ಎರಡು ವರ್ಷ ಮುಖ್ಯಮಂತ್ರಿಯಾದರು. ಬಹುಶಃ ಪ್ರಧಾನಿ ಪಟ್ಟ ಅರಸಿ ಬರದೇ ಇದ್ದರೆ ಮತ್ತೊಂದು ಅವಧಿಯ ಅಧಿಕಾರ ಅವರಿಗೆ ದಕ್ಕುತ್ತಿತ್ತು. ಆದರೆ, ತಮ್ಮ ಜೀವಿತದಲ್ಲೇ ಅಸಾಧ್ಯ ಎನ್ನಿಸುವ ಮಟ್ಟಕ್ಕೆ ರಾಷ್ಟ್ರಮಟ್ಟಕ್ಕೆ ಗೌಡರು ಜಿಗಿದಿದ್ದು ಚರಿತ್ರಾರ್ಹ ಸಂಗತಿ.

ಇನ್ನು ಯಡಿಯೂರಪ್ಪ ಕೂಡ ರೈತರ ಹೋರಾಟದ ಮೂಸೆಯಲ್ಲಿಯೇ ಬೆಳೆದುಬಂದವರು. ದಾಖಲೆಯಂತೆ ನಾಲ್ಕು ಬಾರಿ ಮುಖ್ಯಮಂತ್ರಿಯಾದರೂ ಅಧಿಕಾರ ಅನುಭವಿಸಿದ್ದು ಮಾತ್ರ ಅಲ್ಪಾವಧಿ. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಕೇಸರಿ ಪತಾಕೆ ಹಾರಿಸಿದರಾದರೂ ಪಕ್ಷದ ವರಿಷ್ಠರು ಅಕಾಲದಲ್ಲೇ ಕುರ್ಚಿಯಿಂದ ಹೊರದಬ್ಬಿದರು. ಅಸಾಧ್ಯವೆನ್ನಿಸುವ ಕಾಲದಲ್ಲೂ ‘ಆಪರೇಷನ್ ಕಮಲ’ದ ಅಡ್ಡದಾರಿಯಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಯಾದರೂ ಎರಡು ವರ್ಷ ಪೂರ್ಣಗೊಳಿಸುವಷ್ಟರಲ್ಲೇ ಮತ್ತೆ, ಅಧಿಕಾರದಿಂದ ಇಳಿಸಲಾಯಿತು.

ದೇವೇಗೌಡರು ಸದ್ಯ ರಾಜ್ಯಸಭೆ ಸದಸ್ಯರಾಗಿದ್ದರೆ, ಯಡಿಯೂರಪ್ಪ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯರಾಗಿದ್ದಾರೆ. ತಮ್ಮ ಸುದೀರ್ಘ ರಾಜಕೀಯ ಬದುಕಿನಲ್ಲಿ ನೇರ ಚುನಾವಣೆಯನ್ನು ಎದುರಿಸಿ ಜನ ರಾಜಕಾರಣವನ್ನು ಮಾಡಿಕೊಂಡು ಬಂದಿರುವ ಸಿದ್ದರಾಮಯ್ಯ ಅವರಿಗೆ ರಾಜ್ಯಸಭೆಯ ಆಮಿಷವನ್ನು ಕಾಂಗ್ರೆಸ್ ಹೈಕಮಾಂಡ್ ಮುಂದಿಟ್ಟಿತು. ಸುರಕ್ಷತಾ ವಲಯದಲ್ಲಿ ಇರಲು ಇಷ್ಟಪಡದ ಸಿದ್ದರಾಮಯ್ಯ, ರಾಜ್ಯ ರಾಜಕಾರಣದಲ್ಲಿ ಉಳಿಯುವ ನಿರ್ಧಾರಕ್ಕೆ ಬಂದಿದ್ದಾರೆ.

ಪದತ್ಯಾಗದ ಬಳಿಕ ಸಕ್ರಿಯವಾಗಿ ಇರುವೆ ಎಂದು ಸಿದ್ದರಾಮಯ್ಯ ಹೇಳಿದ್ದಾರಾದರೂ ಬದಲಾಗುತ್ತಲೇ ಇರುವ ಕಾಲಮಾನದಲ್ಲಿ ಅವರಿಗೆ ಎಷ್ಟು ಪ್ರಾಧಾನ್ಯ ಸಿಗುತ್ತದೆ ಎಂಬುದು ಗೊತ್ತಿಲ್ಲ. ಶಿಷ್ಟ, ಜನಪರ ಕಾಳಜಿಯ ರಾಜಕಾರಣದ ಕೊನೆಯ ಕೊಂಡಿಯಂತಿದ್ದ ಸಿದ್ದರಾಮಯ್ಯ ಕೆಳಗಿಳಿಯುವುದರೊಂದಿಗೆ, ಹೋರಾಟ ಕಲಿಗಳ ರಾಜಕಾರಣದ ಒಂದು ಅಧ್ಯಾಯ ಕೊನೆಗೊಂಡಂತಾಗಿದೆ. ಕಾರ್ಪೋರೇಟ್ ಶೈಲಿಯ ರಾಜಕಾರಣದ ಥೈಲಿಯ ಹೊಸ ತಲೆಮಾರು ಅಧಿಕಾರದ ಕೇಂದ್ರಕ್ಕೆ ಬಂದು ನಿಂತಿದೆ.

ಕೃತಿಗಿಳಿಯದ ಕೋಮುವಾದದ ವಿರೋಧ

2023ರಲ್ಲಿ ಅಧಿಕಾರಕ್ಕೆ ಬರುವ ಮೊದಲು ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟವಾಗಿ ಮಾಡುವುದಾಗಿ ಸಿದ್ದರಾಮಯ್ಯ ಹೇಳಿದ್ದರು. ಅಧಿಕಾರ ತ್ಯಾಗದ ಗಳಿಗೆಯಲ್ಲಿ, ಕೋಮುವಾದಿ ರಾಜಕಾರಣದ ವಿರುದ್ಧ ಹೋರಾಟ ನಿರಂತರ ಎಂದಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ, ಮತದ್ವೇಷ ಬೆಂಕಿ ರಾಜ್ಯವನ್ನು ಬಾಧಿಸಲಿಲ್ಲ. ಆದರೆ, ಕೋಮುವಾದಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಅವಕಾಶ ಇದ್ದರೂ ಆ ಧೈರ್ಯವನ್ನು ಅವರು ತೋರಲೇ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.