ಬೆಂಗಳೂರು: ಮೂರು ವರ್ಷಗಳ ಆಡಳಿತ ಪೂರೈಸಿರುವ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡಿದ್ದಾರೆ. ಅವರ ಉತ್ತರಾಧಿಕಾರಿಯಾಗುವ ಹಂಬಲದಲ್ಲಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ವಿಧಾನಸೌಧದ ಮೂರನೇ ಮಹಡಿಯಲ್ಲಿ ಅಧಿಕಾರಕ್ಕೇರುವ ಬಾಗಿಲು ತೆರೆದಿದೆ.

ಸುಮಾರು ಆರೇಳು ತಿಂಗಳುಗಳಿಂದ ಆಡಳಿತಾರೂಢ ಕಾಂಗ್ರೆಸ್ನಲ್ಲಿ ಆಗಾಗ್ಗೆ ಕೋಲಾಹಲಕ್ಕೆ ಕಾರಣವಾಗುತ್ತಿದ್ದ ‘ಅಧಿಕಾರ ಹಸ್ತಾಂತರ’ದ ಪ್ರಹಸನಕ್ಕೆ ಕೊನೆಗೂ ತೆರೆಬೀಳುವ ಮುಹೂರ್ತ ಕೂಡಿ ಬಂದಂತಾಗಿದೆ. ಸಿದ್ದರಾಮಯ್ಯ ರಾಜೀನಾಮೆಯಿಂದ ತೆರವಾಗಿರುವ ಸ್ಥಾನವನ್ನು ಅಲಂಕರಿಸಲು ಅಣಿಯಾಗಿರುವ ಶಿವಕುಮಾರ್ ಅವರು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗಬೇಕಾದ ಕೊನೆಯ ಮೆಟ್ಟಿಲೊಂದು ಬಾಕಿ ಉಳಿದಿದೆ.

‘ರಾಜೀನಾಮೆ ನೀಡಬಾರದು, ನೀಡಲೇಬೇಕಾದರೆ ಸಮಯ ತೆಗೆದುಕೊಳ್ಳಿ’ ಎಂದು ತಮ್ಮ ಆಪ್ತ ಸಚಿವರು, ಶಾಸಕರ ಒತ್ತಡಕ್ಕೆ ಮಣಿಯದ ಸಿದ್ದರಾಮಯ್ಯ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕೊಟ್ಟ ಮಾತಿನಂತೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದರು. ಇದರೊಂದಿಗೆ ಇನ್ನು ಎರಡು ವರ್ಷದ ಅವಧಿಗೆ ಶಿವಕುಮಾರ್, ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಂತಾಗಿದೆ.

ತಮ್ಮ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಗುರುವಾರ ಬೆಳಿಗ್ಗೆ ಸಂಪುಟ ಸಹೋದ್ಯೋಗಿಗಳಿಗೆ ಆಯೋಜಿಸಿದ್ದ ಉಪಾಹಾರ ಕೂಟಕ್ಕೆ ಬಂದಿದ್ದ ಶಿವಕುಮಾರ್ ಅವರನ್ನು ಆಲಿಂಗಿಸಿಕೊಂಡ ಸಿದ್ದರಾಮಯ್ಯ ಒಗ್ಗಟ್ಟಿನ ಸಂದೇಶ ರವಾನಿಸಿದರು. ಇದೇ ವೇಳೆ ಶಿವಕುಮಾರ್ ಅವರು ಸಿದ್ದರಾಮಯ್ಯ ಅವರ ಕಾಲಿಗೆ ಎರಗಿ ಆಶೀರ್ವಾದ ಪಡೆದರು.

‘ವರಿಷ್ಠರ ಸೂಚನೆಯಂತೆ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿದ್ದೇನೆ ಎಂದು ಉಪಾಹಾರ ಸಭೆಯಲ್ಲಿ ಸಿದ್ದರಾಮಯ್ಯ ಪ್ರಕಟಿಸಿದರು. ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಎಂದೂ ಘೋಷಿಸಿದರು. ವಿದಾಯ ಮಾತುಗಳನ್ನು ಆಡುತ್ತಲೇ ಅವರು ಗದ್ಗದಿತರಾದರು. ಆ ಸನ್ನಿವೇಶವು ಭಾವುಕ ಕ್ಷಣಗಳನ್ನು ಸೃಷ್ಟಿಸಿದವು’ ಎಂದು ಮೂಲಗಳು ಹೇಳಿವೆ.

ಉಪಾಹಾರ ಸಭೆಯಲ್ಲಿ ಭಾಗವಹಿಸಿ ತೆರಳುವ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ, ‘ಡಿ.ಕೆ. ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು’ ಎಂದರು. ಸಚಿವ ರಾಮಲಿಂಗಾರೆಡ್ಡಿ ಕೂಡಾ ಅದೇ ಮಾತನ್ನು ಪುನರುಚ್ಚರಿಸಿದರು.

ಮಧ್ಯಾಹ್ನ ಲೋಕಭವನಕ್ಕೆ ತೆರಳಿದ ಸಿದ್ದರಾಮಯ್ಯ, ರಾಜ್ಯಪಾಲ ಥಾವರಚಂದ್ ಗೆಹಲೋತ್ ಅನುಪಸ್ಥಿತಿ ಕಾರಣ ವಿಶೇಷ ಕಾರ್ಯದರ್ಶಿ ಆರ್. ಪ್ರಭುಶಂಕರ್ ಅವರಿಗೆ ತಮ್ಮ ರಾಜೀನಾಮೆ ಪತ್ರ ಹಸ್ತಾಂತರಿಸಿದರು. ತುರ್ತುಕಾರ್ಯದ ನಿಮಿತ್ತ ಬುಧವಾರ ತಡರಾತ್ರಿ ಗೆಹಲೋತ್ ಅವರು ತಮ್ಮ ತವರು ಇಂದೋರ್ಗೆ ತೆರಳಿದ್ದರು. ರಾಜೀನಾಮೆ ಪತ್ರ ಸಲ್ಲಿಸಿದ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಸೇರಿದಂತೆ ಸಚಿವರು, ಕೆಲವು ಶಾಸಕರು, ಪರಿಷತ್ ಸದಸ್ಯರು ಸಿದ್ದರಾಮಯ್ಯ ಅವರಿಗೆ ಜತೆಯಾದರು. ರಾಜ್ಯಪಾಲರು ಮರಳಿದ ನಂತರ ರಾಜೀನಾಮೆ ಪತ್ರವನ್ನು ಕೂಲಂಕಶವಾಗಿ ಪರಿಶೀಲಿಸಿ ಅಧಿಕೃತವಾಗಿ ಅಂಗೀಕರಿಸಲಿದ್ದಾರೆ.

ಸಚಿವರ ಕಣ್ಣೀರು; ಭಾವುಕರಾದ ಸಿ.ಎಂ: ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಉಪಾಹಾರ ಸಭೆಯಲ್ಲಿ ಸಿದ್ದರಾಮಯ್ಯ ಪ್ರಕಟಿಸುತ್ತಿದ್ದಂತೆ ಇಡೀ ಸಭಾಂಗಣದಲ್ಲಿ ನೀರವ ಮೌನ ಆವರಿಸಿತು.

ಸುಮಾರು ಎರಡೂವರೆ ತಾಸು ಈ ಸಭೆ ನಡೆಯಿತು. ಸಿದ್ದರಾಮಯ್ಯ ಅವರ ಅಕ್ಕಪಕ್ಕದಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಜಿ. ಪರಮೇಶ್ವರ ಇದ್ದರು. ಸಿದ್ದರಾಮಯ್ಯ ಅವರ ಮಾತು ಆಲಿಸುತ್ತಲೇ ಕೆಲವು ಸಚಿವರು ತೀವ್ರ ಭಾವೋದ್ವೇಗಕ್ಕೆ ಒಳಗಾದರು. ಸಭೆಗಳಲ್ಲಿ ಸದಾ ಗಂಭೀರವಾಗಿರುತ್ತಿದ್ದ ಸಿದ್ದರಾಮಯ್ಯ ಅವರೂ ಒಂದು ಕ್ಷಣ ಭಾವುಕರಾದರು.

‘ಕಳೆದ ಮೂರು ವರ್ಷಗಳ ಆಡಳಿತಾವಧಿಯಲ್ಲಿ ನಾನು ಮಾಡಿದ ಕೆಲಸಗಳು ಸಂಪೂರ್ಣ ಸಮಾಧಾನ ತಂದಿದೆ. ನಿಮ್ಮೆಲ್ಲರ ಸಹಕಾರಕ್ಕೆ ಧನ್ಯವಾದಗಳು’ ಎಂದು ಸಿದ್ದರಾಮಯ್ಯ ಗದ್ಗದಿತ ಕಂಠದಿಂದ ನುಡಿದರು ಎಂದು ಮೂಲಗಳು ಹೇಳಿವೆ.

ಸಭೆಯಲ್ಲಿ ಸಚಿವರಾದ ಎಚ್.ಕೆ. ಪಾಟೀಲ, ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ, ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ ಸೇರಿದಂತೆ ಪ್ರಮುಖ ನಾಯಕರು ಇದ್ದರು. ಸಭೆ ಮುಗಿದ ನಂತರ ಬಹುತೇಕ ಸಚಿವರು ಕೈ ಮುಗಿಯುತ್ತಾ ಮುಖ್ಯಮಂತ್ರಿ ಮನೆಯಿಂದ ಹೊರಟರು.

‘ರಾಜ್ಯಸಭೆ ಒಲ್ಲೆ, ನನ್ನ ನೆಲೆ ರಾಜ್ಯದ ರಾಜಕಾರಣದಲ್ಲೇ’

‘ರಾಜ್ಯಸಭೆಗೆ ಹೋಗಿ ಎಂಬ ಸಲಹೆ ಬಂತು. ವಿನಮ್ರವಾಗಿ ಇಲ್ಲವೆಂದೆ. ನಾನು ರಾಷ್ಟ್ರ ರಾಜಕಾರಣ ಪ್ರವೇಶಿಸುವುದಿಲ್ಲ. ರಾಜ್ಯ ರಾಜಕಾರಣದಲ್ಲೇ ಸಕ್ರಿಯವಾಗಿ ಮುಂದುವರಿಯುತ್ತೇನೆ...’

ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ತಮ್ಮ ಆಪ್ತ ಶಾಸಕರು, ಸಚಿವರು, ಬೆಂಬಲಿಗರ ಮಧ್ಯೆ ಕಿಕ್ಕಿರಿದ ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಭಾವೋದ್ವೇಗದಿಂದ ಅವರ ಗಂಟಲು ಉಬ್ಬಿ ಬಂದಿತು. ಅಲ್ಲಲ್ಲಿ ಮಾತಿಗೆ ವಿರಾಮ ನೀಡಿ ತಮ್ಮ ಲಹರಿಯನ್ನು ಭಾರವಾದ ಹೃದಯದಿಂದ ಮುಂದುವರಿಸಿದರು.

‘ನಿಮ್ಮ ರಾಜೀನಾಮೆಗೆ ಕಾರಣವೇನು, ಯಾರದ್ದಾದರೂ ಒತ್ತಡವಿತ್ತೇ’ ಎಂಬ ಪ್ರಶ್ನೆಗೆ, ‘ಹೈಕಮಾಂಡ್ ರಾಜೀನಾಮೆ ಕೊಡಿ ಎಂದು ಹೇಳಿತು. ಅವರು ಹೇಳಿದ ತಕ್ಷಣವೇ ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡಿದ್ದೇನೆ’ ಎಂದರು.

‘ರಾಷ್ಟ್ರ ರಾಜಕಾರಣಕ್ಕೆ ಹೋಗುತ್ತೀರಾ’ ಎಂಬ ಮತ್ತೊಂದು ಪ್ರಶ್ನೆಗೆ, ‘ಇಲ್ಲ... ರಾಜ್ಯಸಭೆಗೆ ಹೋಗಿ ಎಂಬ ಸಲಹೆ ಬಂದಿತು. ನಾನು ವಿನಮ್ರನಾಗಿ ಆಗುವುದಿಲ್ಲ, ನನಗೆ ಆಸಕ್ತಿ ಇಲ್ಲ ಎಂದು ಹೇಳಿದೆ. 5 ವರ್ಷದಲ್ಲಿ ಇನ್ನು
ಎರಡು ವರ್ಷಗಳ ಅವಧಿ ಬಾಕಿ ಇದೆ. ಕರ್ನಾಟಕದ ಜನರಿಗಾಗಿ ಸಕ್ರಿಯ ರಾಜಕಾರಣದಲ್ಲೇ ಇರುತ್ತೇನೆ’ ಎಂದು ಸ್ಪಷ್ಟಪಡಿಸಿದರು.

‘ಮುಂದಿನ ಸಿ.ಎಂ: ಸಿಎಲ್ಪಿ, ಹೈಕಮಾಂಡ್ ತೀರ್ಮಾನ’

‘ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ಶಾಸಕಾಂಗ ಪಕ್ಷದ ಸಭೆ ಮತ್ತು ಹೈಕಮಾಂಡ್ ತೀರ್ಮಾನಿಸುತ್ತದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಉಪಾಹಾರ ಸಭೆಯಲ್ಲಿ ಶಿವಕುಮಾರ್ ಅವರ ಹೆಸರನ್ನು ಸಿದ್ದರಾಮಯ್ಯ ಘೋಷಿಸಿದ್ದಾರೆ ಎಂದು ಸಚಿವರಾದ
ಎಚ್.ಕೆ. ಪಾಟೀಲ, ರಾಮಲಿಂಗಾರೆಡ್ಡಿ ಹೇಳಿದ್ದರು.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ ಸಿದ್ದರಾಮಯ್ಯ ಅವರು, ಮುಂದಿನ ಮುಖ್ಯಮಂತ್ರಿ ಯಾರು ಎಂಬ ಗುಟ್ಟನ್ನು ಬಹಿರಂಗಪಡಿಸಲು ಇಚ್ಛಿಸಲಿಲ್ಲ.

‘ನಿಮ್ಮ ಉತ್ತರಾಧಿಕಾರಿ ಯಾರು? ನಿಮ್ಮ ಪಕ್ಕದಲ್ಲಿ ಕೂತಿದ್ದಾರಲ್ಲ ಅವರಿಬ್ಬರಲ್ಲಿ ಯಾರು’ ಎಂದು ಸುದ್ದಿಗಾರರು ಪದೇ ಪದೇ ಪ್ರಶ್ನಿಸಿದಾಗ, ‘ಯಾರೆಂಬುದನ್ನು ಶಾಸಕಾಂಗ ಪಕ್ಷದ ಸಭೆ ಮತ್ತು ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ’ ಎಂದು ಎರಡು ಬಾರಿ ಹೇಳಿದರು. ಪಕ್ಕದಲ್ಲಿ ಕುಳಿತಿದ್ದ ಡಿ.ಕೆ.ಶಿವಕುಮಾರ್ ಅವರು ತಮ್ಮ ಹೆಸರು ಹೇಳಬಹುದೇನೋ ಎಂಬ ಭಾವದಲ್ಲಿ ಕೆಲ ಕ್ಷಣ ಸಿದ್ದರಾಮಯ್ಯ ಅವರ ಮುಖವನ್ನೇ ದಿಟ್ಟಿಸಿದರು.

ಇಂದು ರಾಹುಲ್ ಭೇಟಿ

ನವದೆಹಲಿ: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಿದ್ದರಾಮಯ್ಯ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಶುಕ್ರವಾರ ಬೆಳಿಗ್ಗೆ 9ಕ್ಕೆ ಭೇಟಿ ಮಾಡಿ ಸಮಾಲೋಚನೆ ನಡೆಸಲಿದ್ದಾರೆ.

ಸಿದ್ದರಾಮಯ್ಯ ಹಾಗೂ ಆಪ್ತ ಸಚಿವರನ್ನು ಹೊತ್ತು ಸಂಜೆ 4.30ಕ್ಕೆ ಬೆಂಗಳೂರಿನಿಂದ ಹೊರಟ ವಿಶೇಷ ವಿಮಾನ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾತ್ರಿ 7ಕ್ಕೆ ಇಳಿಯಬೇಕಿತ್ತು. ಹವಾಮಾನ ವೈಪರೀತ್ಯದ ಕಾರಣದಿಂದ ಜೈಪುರದಲ್ಲಿ ಇಳಿಯಿತು.

ಈ ವಿಮಾನದಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಸಚಿವರಾದ ಕೆ.ಜೆ.ಜಾರ್ಜ್, ಬೈರತಿ ಸುರೇಶ್, ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ, ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ ಮತ್ತಿತರರು ಇದ್ದರು. ತಡರಾತ್ರಿ ಅಥವಾ ಬೆಳಿಗ್ಗೆ ಮುಖ್ಯಮಂತ್ರಿ ಅವರು ದೆಹಲಿಗೆ ಬರಲಿದ್ದಾರೆ. ಜನಪಥ್ನಲ್ಲಿರುವ ನಿವಾಸದಲ್ಲಿ ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ರಾಹುಲ್ ಅವರನ್ನು ಸಿದ್ದರಾಮಯ್ಯ ಭೇಟಿ ಮಾಡಲಿದ್ದಾರೆ.

2–3 ಸಲ ಗೆದ್ದು ಈವರೆಗೆ ಸಚಿವರಾಗದವರಿಗೆ ಹೊಸ ಸಂಪುಟದಲ್ಲಿ ಆದ್ಯತೆ ನೀಡಲು ಹೈಕಮಾಂಡ್ ಯೋಜಿಸಿದೆ. ನಾಲ್ಕೈದು ಬಾರಿ ಸಚಿವರಾಗಿದ್ದವರನ್ನು ಪಕ್ಷದ ಕೆಲಸಕ್ಕೆ ನಿಯೋಜಿಸುವ ಸಂಭವ ಇದೆ.

ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಹಲವರಿಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ. ಈ ಹಿನ್ನಲೆಯಲ್ಲಿ ಆಪ್ತರು ಸಿದ್ದರಾಮಯ್ಯ ಅವರಲ್ಲಿ ಅಳಲು ತೋಡಿಕೊಂಡಿದ್ದರು. ಹೈಕಮಾಂಡ್ ಮೇಲೆ ಒತ್ತಡ ಹೇರುವಂತೆ ಒತ್ತಾಯಿಸಿದ್ದರು. ಇದಕ್ಕೆ ಮುಖ್ಯಮಂತ್ರಿಯವರು ಆರಂಭದಲ್ಲಿ ಒಪ್ಪಿರಲಿಲ್ಲ. ಒತ್ತಡ ಹೆಚ್ಚಾದ ಬಳಿಕ ಮನಸ್ಸು ಬದಲಾಯಿಸಿದ್ದರು. ರಾಹುಲ್ ಭೇಟಿಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗುರುವಾರ ರಾತ್ರಿ ದೆಹಲಿಗೆ ಬಂದಿದ್ದು, ಹೈಕಮಾಂಡ್ ನಾಯಕರನ್ನು ಶುಕ್ರವಾರ ಭೇಟಿ ಮಾಡಲಿದ್ದಾರೆ. ಸಂಪುಟದ ಸ್ವರೂಪದ ಬಗ್ಗೆ ವರಿಷ್ಠರೊಂದಿಗೆ ಸಮಾಲೋಚನೆ ನಡೆಸಲು ಯೋಜಿಸಿದ್ದಾರೆ.

ನಾಯಕನ ಆಯ್ಕೆಗೆ ಸಿಎಲ್ಪಿ

ರಾಜ್ಯದ ಚುಕ್ಕಾಣಿ ಹಿಡಿಯುವ ಹೊಸ ನಾಯಕನ ಆಯ್ಕೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ಪಿ) ಸಭೆ ಒಂದೆರಡು ದಿನಗಳಲ್ಲಿ ನಡೆಯಲಿದೆ.

ಸಿದ್ದರಾಮಯ್ಯನವರ ರಾಜೀನಾಮೆ ಅಂಗೀಕಾರಕೊಂಡ ಬಳಿಕ, ಎಐಸಿಸಿ ವೀಕ್ಷಕರ ಸಮ್ಮುಖದಲ್ಲಿ ಸಿಎಲ್ಪಿ ಸಭೆ ನಿಗದಿಯಾಗಲಿದೆ. ಆ ಸಭೆಯಲ್ಲಿ, ಮುಂದಿನ ನಾಯಕನ ಆಯ್ಕೆಯನ್ನು ಘೋಷಿಸಿ, ಅನುಮೋದನೆ
ಪಡೆಯಲಾಗುತ್ತದೆ. ಆಯ್ಕೆಯಾದ ನಾಯಕ, ತಮಗೆ ಬಹುಮತ ಇದೆ ಎಂದು ದೃಢಪಡಿಸಲು ಶಾಸಕರ ಸಹಿ ಇರುವ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿ, ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಕೋರಬೇಕು. ಅದಾದ ನಂತರವಷ್ಟೇ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ.

ಉಪಾಹಾರ ಸಭೆಯಿಂದ ದೆಹಲಿ ಪಯಣದವರೆಗೆ...

ಬೆಳಿಗ್ಗೆ 9: ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉಪಾಹಾರ ಸಭೆ.
ಡಿ.ಕೆ.ಶಿವಕುಮಾರ್ ಆದಿಯಾಗಿ ಎಲ್ಲ ಸಚಿವರು ಭಾಗಿ

ಶಿವಕುಮಾರ್ ಅವರ ಜತೆ ಪ್ರತ್ಯೇಕವಾಗಿ 30 ನಿಮಿಷಕ್ಕೂ ಹೆಚ್ಚು ಚರ್ಚೆ ನಡೆಸಿದ ಸಿದ್ದರಾಮಯ್ಯ. ಉಪಾಹಾರ ಸಭೆಯಲ್ಲಿ ರಾಜೀನಾಮೆ ವಿಚಾರ ಪ್ರಸ್ತಾಪ. 11.30ರ ಹೊತ್ತಿಗೆ ಸಭೆ ಅಂತ್ಯ

ಮಧ್ಯಾಹ್ನ 2.45: ಕಾವೇರಿ ನಿವಾಸದಿಂದ ಸಚಿವರ ದಂಡಿನ ಜತೆ ಲೋಕಭವನದತ್ತ ಹೊರಟ ಸಿದ್ದರಾಮಯ್ಯ

ಮಧ್ಯಾಹ್ನ 3: ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಅವರ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಸಿದ ಮುಖ್ಯಮಂತ್ರಿ

ಮಧ್ಯಾಹ್ನ 3.30: ಗೃಹಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ. ರಾಜೀನಾಮೆ ವಿಚಾರವನ್ನು ಅಧಿಕೃತವಾಗಿ ಮಾಧ್ಯಮಗಳಿಗೆ ತಿಳಿಸಿದ ಮುಖ್ಯಮಂತ್ರಿ

ಸಂಜೆ 4.30: ದೆಹಲಿಗೆ ಪ್ರಯಾಣಿಸಲು ಎಚ್ಎಎಲ್ ವಿಮಾನ ನಿಲ್ದಾಣದತ್ತ ತೆರಳಿದ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಸಚಿವರಾದ ಕೆ.ಜೆ.ಜಾರ್ಜ್,
ಬೈರತಿ ಸುರೇಶ್, ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ

ಸಂಜೆ 5: ತಮ್ಮ ಸದಾಶಿವನಗರದ ಮನೆಗೆ ತೆರಳಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್. ಮನೆಯ ಬಳಿ ಜಮಾಯಿಸಲು ಆರಂಭಿಸಿದ ಬೆಂಬಲಿಗರು, ಅಭಿಮಾನಿಗಳು

‘ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಡಿ.ಕೆ.ಶಿವಕುಮಾರ್ ಅವರಿಗೆ ಅಭಿನಂದನೆಗಳು’ ಎಂಬ ಬರಹ ಇರುವ ಬ್ಯಾನರ್ ಕಟ್ಟಿದ ಅಭಿಮಾನಿಗಳು. ಸಂಜೆ 6ರ ವೇಳೆಗೆ ಶಾಸಕರು, ಸಚಿವರಿಂದ ಶಿವಕುಮಾರ್ ಅವರ ಭೇಟಿ ಮತ್ತು ಮಾತುಕತೆ

ರಾತ್ರಿ 7.45: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಡಿ.ಕೆ.ಶಿವಕುಮಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.