ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮಾಜವಾದದ ಮುಖವಾಡ ಕಳಚಿ ಬಿದ್ದಿದೆ. ಅವರು ತಕ್ಷಣವೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮನೆಗೆ ತೊಲಗಲಿ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.
ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರ ರಾಜೀನಾಮೆಗೆ ಆಗ್ರಹಿಸಿ ನಗರದ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಬಿಜೆಪಿ- ಜೆಡಿಎಸ್ ಶಾಸಕರ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಭ್ರಷ್ಟ ಕಾಂಗ್ರೆಸ್, ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ- ಜೆಡಿಎಸ್ ನಿರಂತರ ಹೋರಾಟ ನಡೆಸುತ್ತಿವೆ. ಈ ಹೋರಾಟ ಇದೀಗ ತಾರ್ಕಿಕ ಅಂತ್ಯಕ್ಕೆ ಬಂದಿದೆ. ಮೈಸೂರಿನ ಮುಡಾ ಹಗರಣ, ವಾಲ್ಮೀಕಿ ನಿಗಮದ ಹಗರಣಗಳು ಇದರಲ್ಲಿ ಪ್ರಮುಖವಾಗಿವೆ. ಮುಡಾದಲ್ಲಿ ಸುಮಾರು ₹5 ಸಾವಿರ ಕೋಟಿಯ ನಿವೇಶನಗಳನ್ನು ನುಂಗಿ ಹಾಕಿದ್ದಾರೆ. ಇದನ್ನು ಖಂಡಿಸಿ, ಸಿಎಂ ಸಿದ್ದರಾಮಯ್ಯನವರ ರಾಜೀನಾಮೆಗೆ ಆಗ್ರಹಿಸುತ್ತಿದ್ದೇವೆ ಎಂದರು.
ಭಂಡತನ ಬಿಟ್ಟು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಿತ್ತು. ಆದರೆ, ಸಿದ್ದರಾಮಯ್ಯನವರು ಗೂಂಡಾಗಿರಿಗೆ ಇಳಿದಿದ್ದಾರೆ. ರಾಜ್ಯಪಾಲರ ಮೇಲೆ ಆರೋಪ ಮಾಡುವುದನ್ನು ಬಿಟ್ಟು, ಕೂಡಲೇ ಸಿದ್ದರಾಮಯ್ಯನವರು ರಾಜೀನಾಮೆ ಕೊಡಬೇಕಿದೆ ಎಂದು ಆಗ್ರಹಿಸಿದರು.
ಭ್ರಷ್ಟರಿಂದ, ಭ್ರಷ್ಟರಿಗಾಗಿ, ಭ್ರಷ್ಟರಿಗೋಸ್ಕರ ಕಾಂಗ್ರೆಸ್ ಸರಕಾರ ಇದೆ. ಹೈಕಮಾಂಡ್ ಕಾಪಾಡುವ, ಸಚಿವರು, ಶಾಸಕರು ಬೆನ್ನಿಗೆ ನಿಲ್ಲುವ ಭ್ರಮೆಯಿಂದ ಹೊರಕ್ಕೆ ಬನ್ನಿ. ಕಾನೂನನ್ನು ಎದುರಿಸಿ. ಪುಂಡಾಟಿಕೆ ಒಪ್ಪಲಾಗದು. ತಪ್ಪನ್ನು ಒಪ್ಪಿಕೊಂಡು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕಾನೂನು ಕ್ರಮ ಎದುರಿಸಿ ಎಂದು ಒತ್ತಾಯಿಸಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮಾತನಾಡಿ, ಮುಡಾ ಹಗರಣದಲ್ಲಿ ಸಾವಿರಾರು ಕೋಟಿ ಲೂಟಿ ಆಗಿದೆ. ವಾಲ್ಮೀಕಿ ನಿಗಮದಲ್ಲೂ ₹187 ಕೋಟಿಯ ಹಗರಣ ಆಗಿದೆ. ಸಿದ್ದರಾಮಯ್ಯನವರು ಕುರ್ಚಿ ಬಿಡಬೇಕೆಂದು ಜನರು ಬಯಸುತ್ತಿದ್ದಾರೆ ಎಂದು ತಿಳಿಸಿದರು.
ಲೂಟಿಕೋರ ಸಿದ್ದರಾಮಯ್ಯನವರು ಕೂಡಲೇ ರಾಜೀನಾಮೆ ಕೊಡಬೇಕು. ಅಪರಾಧಿ ಅಲ್ಲ ಎನ್ನಲು ವಿಧಾನಸಭೆಯ ಅಧಿವೇಶನದಲ್ಲಿ ಅವಕಾಶವಿತ್ತು. ಸ್ವಚ್ಛತೆಯನ್ನು ವಿಧಾನಸಭೆಯಲ್ಲೇ ಸ್ಪಷ್ಟಪಡಿಸದೆ ಓಡಿ ಹೋಗಿದ್ದೀರಿ ಎಂದು ಟೀಕಿಸಿದರು.
ಹೋರಾಟ ಮಾಡಲು ಮುಂದಾದ ಕಾಂಗ್ರೆಸ್ ಕಾನೂನು- ಸುವ್ಯವಸ್ಥೆ ಹದಗೆಡಲು ಕಾರಣವಾಗುತ್ತಿದೆ. ಕಾಂಗ್ರೆಸ್ಸಿಗರು ಕಾನೂನನ್ನು ಕೈಗೆ ತೆಗೆದುಕೊಂಡಿದ್ದಾರೆ. ಕೂಡಲೇ ರಾಜ್ಯಪಾಲರ ಆಡಳಿತ ಜಾರಿಗೊಳಿಸಬೇಕು ಎಂದು ಗವರ್ನರ್ ಅವರಿಗೆ ಮನವಿ ಮಾಡಿದರು.
ಜಾರ್ಜ್ ಫರ್ನಾಂಡಿಸ್, ಅಡ್ವಾಣಿ, ರಾಮಕೃಷ್ಣ ಹೆಗಡೆ ಅವರು ಆಪಾದನೆ ಬಂದಾಗ ರಾಜೀನಾಮೆ ಕೊಟ್ಟದ್ದನ್ನೂ ವಿವರಿಸಿದರು. ನಾಗೇಂದ್ರರಿಗೊಂದು ಕಾನೂನು, ನಿಮಗೊಂದು ಕಾನೂನೇ ಎಂದು ಜನರೇ ಪ್ರಶ್ನಿಸುತ್ತಿದ್ದಾರೆ ಎಂದು ತಿಳಿಸಿದರು.
₹5.95 ಲಕ್ಷದ ಜಮೀನಿಗೆ ₹62 ಕೋಟಿ ಕೇಳುವುದು ಸರಿಯೇ ಎಂದು ಕೇಳಿದರು. ಇದು ಬಿಜೆಪಿ- ಜೆಡಿಎಸ್ ಹೋರಾಟ. ಸಿಎಂ ರಾಜೀನಾಮೆ ಕೊಡುವವರೆಗೆ ಹೋರಾಟ ನಿಲ್ಲದು ಎಂದು ಎಚ್ಚರಿಸಿದರು. ಕಾಂಗ್ರೆಸ್ ಇನ್ನೆಷ್ಟು ದಿನ, ಎಷ್ಟು ತಿಂಗಳು ಅಧಿಕಾರದಲ್ಲಿ ಇರಲಿದೆ ಎಂದು ಕೇಳಿದರು.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಸಂವಿಧಾನದ ಹುದ್ದೆಯಾದ ರಾಜ್ಯಪಾಲರಿಗೆ ಅವಮಾನ ಮಾಡಿದರೆ ಅದು ಸಂವಿಧಾನಕ್ಕೆ ಮಾಡಿದ ಅವಮಾನ ಎಂದು ಟೀಕಿಸಿದರು. ದಲಿತರನ್ನು ಸಿದ್ದರಾಮಯ್ಯನವರು ಸಂಪೂರ್ಣ ನಾಶ ಮಾಡಿದ್ದಾರೆ. ನಿಮ್ಮನ್ನು ನಂಬಿದ ದಲಿತರ ಚರ್ಮ ಸುಲಿದು ಚಪ್ಪಲಿ ಮಾಡಿದ್ದೀರಿ ಎಂದು ಆಕ್ಷೇಪಿಸಿದರು.
ಸುಳ್ಳು ಹೇಳುವುದರಲ್ಲಿ ವೀರಪ್ಪ ಮೊಯಿಲಿ ಅವರನ್ನೂ ಸಿದ್ದರಾಮಯ್ಯ ಮೀರಿಸಿದ್ದಾರೆ ಎಂದರಲ್ಲದೆ, ಸಿಎಂ ಹುದ್ದೆ ಆಕಾಂಕ್ಷಿಗಳಾದ ಕಾಂಗ್ರೆಸ್ಸಿನ ಬಹಳ ಜನರಿಗೆ ಅನ್ಯಾಯ ಮಾಡದಿರಿ ಎಂದು ಕಿವಿಮಾತು ಹೇಳಿದರು. ಕಥೆ ಬಿಟ್ಟು ರಾಜೀನಾಮೆ ಕೊಡಿ ಎಂದು ಆಗ್ರಹಿಸಿದರು.
ವಿಧಾನಸೌಧದ ಬಳಿ ಬಿಜೆಪಿ–ಜೆಡಿಎಸ್ ಪ್ರತಿಭಟನೆ
ಮೇಲ್ನೋಟಕ್ಕೆ ದಾಖಲೆ ಲಭಿಸಿದರೆ ಸ್ವಯಂಪ್ರೇರಿತವಾಗಿ ತನಿಖೆಗೆ ಸೂಚನೆ ಕೊಡಲು ರಾಜ್ಯಪಾಲರಿಗೆ ಅವಕಾಶ ಇದೆ. ನೋಟಿಸ್‌ಗೆ ಸಿದ್ದರಾಮಯ್ಯನವರು ಉತ್ತರ ಕೊಟ್ಟಿಲ್ಲ. ರಾಜ್ಯಪಾಲರು ಕಾನೂನಾತ್ಮಕವಾಗಿ ನಡೆದುಕೊಂಡಿದ್ದಾರೆ. ಸಿದ್ದರಾಮಯ್ಯನವರು ನಿಜವಾಗಿ ಸತ್ಯ ಹರಿಶ್ಚಂದ್ರ ಆಗಲು ಗೌರವದಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಿದೆ. ಸಾರ್ವಜನಿಕರನ್ನು ತಪ್ಪು ದಾರಿಗೆ ಎಳೆಯದಿರಿ.-ಡಿ.ವಿ.ಸದಾನಂದ ಗೌಡ, ಮಾಜಿ ಮುಖ್ಯಮಂತ್ರಿ
ಮುಡಾ ಹಗರಣ ಆಗಿದೆ ಎಂದಾಕ್ಷಣ ನಗರಾಭಿವೃದ್ಧಿ ಸಚಿವರು ಮೈಸೂರಿಗೆ ಧಾವಿಸಿ ಕಡತಗಳನ್ನು ಹೊತ್ತೊಯ್ದಿದ್ದಾರೆ. ಯಾತಕ್ಕೆಂದು ಕೇಳಿ? ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ನಾಶ ಮಾಡುವ ಹಾಗಿದೆ. ಇದರ ಅರ್ಥ ಏನು? ಶಾಸಕರು, ಸಚಿವರು, ಕಾರ್ಯಕರ್ತರು ನಿಮ್ಮ ಜೊತೆ ಇದ್ದರೆ ಅನ್ಯಾಯ ನ್ಯಾಯ ಆಗುತ್ತದೆಯೇ? ದಾಖಲೆ ಸಹಿತ ನೀವು ಸಿಕ್ಕಿ ಹಾಕಿಕೊಂಡಿದ್ದೀರಿ. ನಿಮ್ಮ ಹೈಕಮಾಂಡ್ ಕೂಡ ಭ್ರಷ್ಟಾಚಾರದಲ್ಲಿ ಮುಳುಗೆದ್ದಿದೆ. ದಿಕ್ಕು ದೆಸೆಯಿಲ್ಲದೆ ಹುಚ್ಚು ಕುದುರೆಯಂತೆ ಕರ್ನಾಟಕ ಇವತ್ತು ನಡೆಯುವಂತಾಗಿದೆ.- ಅರಗ ಜ್ಞಾನೇಂದ್ರ, ಮಾಜಿ ಸಚಿವ
‘ಗ್ಯಾರಂಟಿ’ ನಿಮಗೆ ಭ್ರಷ್ಟಾಚಾರ ನಡೆಸಲು ಕೊಟ್ಟ ಲೈಸನ್ಸ್ ಅಲ್ಲ. ಲೂಟಿ ಹೊಡೆದರೆ ಕೇಳುವಂತಿಲ್ಲ ಎಂಬುದು ಸರಿಯಲ್ಲ. ರೇಟ್ ಕಾರ್ಡ್ ಫಿಕ್ಸ್ ಮಾಡಲು ನಿಮಗೆ ಅನುಮತಿ ನೀಡಿಲ್ಲ. ರಾಜ್ಯದ ಜನರು ಭ್ರಷ್ಟಾಚಾರದ ವಿರುದ್ಧ ಇದ್ದಾರೆ. ನಿಮ್ಮ ಬ್ಲ್ಯಾಕ್ ಮೇಲ್ ರಾಜಕಾರಣ ಬಿಡಿ; ಮುಖ್ಯಮಂತ್ರಿಗಳೇ ಕೂಡಲೇ ರಾಜೀನಾಮೆ ಕೊಡಿ. ತನಿಖೆ ಎದುರಿಸಿ. ತಪ್ಪೇ ಮಾಡಿಲ್ಲವೆಂದು ಸಾಬೀತಾದರೆ ಮತ್ತೆ ಸಿಎಂ ಆಗಬಹುದು.-ಸಿ.ಟಿ.ರವಿ, ವಿಧಾನಪರಿಷತ್ ಸದಸ್ಯ
ಸಿದ್ದರಾಮಯ್ಯನವರ ಸರಕಾರದಲ್ಲಿ ಹಲವಾರು ಹಗರಣಗಳು ನಡೆದಿವೆ. ಇದು ಹಗರಣವೋ ಹಗರಣಗಳ ಸರಕಾರ. ಸ್ವಚ್ಛ ಸಿದ್ದರಾಮಯ್ಯನವರ ಭ್ರಷ್ಟಾಚಾರ ನೋಡಿ, ನಗಬೇಕೋ, ಅಳಬೇಕೋ ಎಂದು ಜನರಿಗೆ ಗೊತ್ತಾಗುತ್ತಿಲ್ಲ.- ಅರವಿಂದ ಬೆಲ್ಲದ, ಬಿಜೆಪಿ ಶಾಸಕ
ಮುಖ್ಯಮಂತ್ರಿ ರಾಜೀನಾಮೆ ಕೊಡುವವರೆಗೆ ಎನ್‌ಡಿಎ ಅಂಗಪಕ್ಷಗಳಾದ ನಾವು ಹೋರಾಟ ಮಾಡಲಿದ್ದೇವೆ. ಅಹಿಂದದಲ್ಲಿ ‘ದ’ ಎಂಬ ಅಕ್ಷರವನ್ನು ಸಿದ್ದರಾಮಯ್ಯನವರು ನುಂಗಿಹಾಕಿದ್ದಾರೆ. ಇನ್ನೆರಡು ಅಕ್ಷರಗಳನ್ನು ಯಾವತ್ತು ನುಂಗುವರೋ ಗೊತ್ತಿಲ್ಲ. ಮುಖ್ಯಮಂತ್ರಿಯವರು ಕೂಡಲೇ ರಾಜೀನಾಮೆ ಕೊಡಬೇಕು.- ಕೃಷ್ಣಾರೆಡ್ಡಿ, ಜೆಡಿಎಸ್ ಮುಖಂಡ
ಕಾಂಗ್ರೆಸ್ ಸರಕಾರ ಬ್ರಹ್ಮಾಂಡ ಭ್ರಷ್ಟಾಚಾರ ಮಾಡುತ್ತಿದೆ. ಜನತಾದಳದ ಪ್ರಾಡಕ್ಟ್ ಆಗಿದ್ದ ಸಿದ್ದರಾಮಯ್ಯನವರು ನಮ್ಮ ಪಕ್ಷದಲ್ಲಿ ಇದ್ದಾಗ ಭ್ರಷ್ಟಾಚಾರ ಮಾಡಲು ಅವಕಾಶ ಕೊಟ್ಟಿರಲಿಲ್ಲ. ಸಿದ್ದರಾಮಯ್ಯನವರಿಗೆ ಸ್ಮರಣ ಶಕ್ತಿ ಕಡಿಮೆ ಆಗಿದೆ. ಆತ್ಮಸಾಕ್ಷಿ ಇದ್ದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು. ಅವರು ಜೈಲಿಗೆ ಹೋದರೆ ಬಂಡೆ ಜೊತೆಗೆ ಇರುವುದಿಲ್ಲ.- ಶರವಣ, ಜೆಡಿಎಸ್ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.