ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಸಚಿವ ಪ್ರಲ್ಹಾದ ಜೋಶಿ

Published 17 ಆಗಸ್ಟ್ 2024, 10:02 IST
Last Updated 17 ಆಗಸ್ಟ್ 2024, 10:02 IST
ಅಕ್ಷರ ಗಾತ್ರ

ಹುಬ್ಬಳ್ಳಿ: 'ತಮ್ಮ ಜೀವನ ತೆರೆದ ಪುಸ್ತಕ ಇದ್ದಂತೆ ಎಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಡಾ ಹಗರಣದಲ್ಲಿ ನೈತಿಕ  ಹೊಣೆ ಹೊತ್ತು ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕು' ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದರು.

ಇಲ್ಲಿನ ತಮ್ಮ ನಿವಾಸದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ತಪ್ಪು ಮಾಡಿಲ್ಲ ಎಂದಾದರೆ ಭಯ ಪಡುವ ಅಗತ್ಯ ಇಲ್ಲ. ಈ ವಿಷಯದಲ್ಲಿ ಅವರು ಕಾನೂನು ಹೋರಾಟ ಮಾಡಲು ನಮ್ಮ‌ ತಕರಾರು ಇಲ್ಲ‌. ಕಾನೂನು ಹೋರಾಟದ ನೆಪದಲ್ಲಿ ತನಿಖೆಗೆ ಅಡ್ಡಿಪಡಿಸುವ ಕೆಲಸ ಮಾಡಬಾರದು ಎಂದರು.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆಯಾಗಬೇಕು ಎಂಬ ಉದ್ದೇಶದಿಂದ ರಾಜ್ಯಪಾಲರು ಸಾಕಷ್ಟು ಸಮಯ ತೆಗೆದುಕೊಂಡು, ಕಾನೂನು ತಜ್ಞರ ಸಲಹೆ ಪಡೆದು, ಅಳೆದು ತೂಗಿ ಸಿ.ಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ‌ ನೀಡಿದ್ದಾರೆ ಎಂದು ಹೇಳಿದರು.

ಯಾವುದೇ ವ್ಯಕ್ತಿಯ ಸಾರ್ವಜನಿಕ ಜೀವನದಲ್ಲಿ ಶುದ್ಧತೆ, ಪ್ರಾಮಾಣಿಕತೆ ಕಾಯ್ದುಕೊಳ್ಳಬೇಕು. ಉನ್ನತ ಸ್ಥಾನದಲ್ಲಿ ಇದ್ದಾಗ ಯಾವುದೇ ಆರೋಪಗಳು ಬಂದರೆ ಆ ಬಗ್ಗೆ ತನಿಖೆಯಾಗಬೇಕು. ಸಾರ್ವಜನಿಕ‌ ಜೀವನದಲ್ಲಿ ಶುದ್ಧತೆ ಕಾಯ್ದುಕೊಳ್ಳದಿದ್ದರೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದಂತಾಗುತ್ತದೆ ಎಂದರು.

ಶಶಿಕಲಾ ಜೊಲ್ಲೆ‌ ಅವರ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆದು, ಆರೋಪದಲ್ಲಿ ಸತ್ಯಾಂಶ ಇಲ್ಲ ಎಂದು ತಿಳಿದು ಬಂದಿದೆ. ಈ ವಿಷಯದಲ್ಲಿ ಕಾಂಗ್ರೆಸ್ ನವರು ನ್ಯಾಯಾಲಯದ ಮೊರೆ ಹೋಗಬಹುದು. ಆದರೆ, ಅವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟಿರಲಿಲ್ಲ, ಸಿ.ಎಂ ವಿರುದ್ಧ ಅನುಮತಿ ನೀಡಿದ್ದಾರೆ ಎಂದು ವಾದ ಮಾಡುವುದು ಸರಿಯಲ್ಲ ಎಂದು ಹೇಳಿದರು‌.

ಈ ವಿಷಯದಲ್ಲಿ ಕಾಂಗ್ರೆಸ್ ನವರು ರಾಜಕಾರಣ ಮಾಡಿ, ಪ್ರತಿಭಟನೆ ಮಾಡಿದರೆ ಅದಕ್ಕೆ ಜನರೇ ತಕ್ಕ ಉತ್ತರ ನೀಡುತ್ತಾರೆ. ಸಿದ್ದರಾಮಯ್ಯ ಅವರ ವಿರುದ್ಧ ಆರೋಪ‌ ಕೇಳಿ ಬಂದಿದ್ದರಿಂದ ತನಿಖೆಯಾಗಬೇಕು. ಹೀಗಾಗಿ ಕಾಂಗ್ರೆಸ್ ನವರು ಪ್ರತಿಭಟನೆ ನಡೆಸುವ ಅಗತ್ಯ ಇಲ್ಲ ಎಂದರು.

ಐದು ವರ್ಷ ಆಡಳಿತ ನಡೆಸಲು ಜನರು ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿದ್ದಾರೆ‌. ಈ ಸರ್ಕಾರವನ್ನು ಅಸ್ಥಿರಗೊಳಿಸಿ ನಾವು ಅಧಿಕಾರಕ್ಕೆ ಬರಬೇಕು ಎಂಬ ಉದ್ದೇಶ ನಮಗಿಲ್ಲ. ಅವರು ಐದು ವರ್ಷ ಪೂರೈಸಬೇಕು ಎಂಬುದು ನಮ್ಮ ಆಸೆ. ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರು ತನಿಖೆ ಎದುರಿಸಿ, ಆರೋಪ ಮುಕ್ತರಾದ ನಂತರ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿದರೂ ನಮ್ಮ ಅಭ್ಯಂತರವಿಲ್ಲ ಎಂದು ಹೇಳಿದರು.

ರಾಜ್ಯಪಾಲರು ಬಿಜೆಪಿ ಏಂಜೆ‌ಟ್ ರೀತಿ ವರ್ತಿಸುತ್ತಿದ್ದಾರೆ ಎಂಬ ಕಾಂಗ್ರೆಸ್ ನವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಈ ಹಿಂದೆ ಹಂಸರಾಜ್ ಭಾರದ್ವಾಜ್ ಅವರು ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾಗ ಯಡಿಯೂರಪ್ಪ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿದ್ದರು. ಆಗ ನಾವು ರಾಜ್ಯಪಾಲರು ಕಾಂಗ್ರೆಸ್ ಏಜೆಂಟ್ ಎಂದು ಹೇಳಿರಲಿಲ್ಲ ಎಂದರು.

ಬಿಜೆಪಿಯಲ್ಲಿ ಯಾವುದೇ ಆಂತರಿಕ ಬೇಗುದಿ ಇಲ್ಲ. ಇದ್ದರೆ ಅದು ಸರಿಯಾಗುತ್ತದೆ. ಬಸನಗೌಡ ಪಾಟೀಲ ಯತ್ನಾಳ, ರಮೇಶ ಜಾರಕಿಹೊಳಿ ಅವರು ತಾವು ಅಸಮಾಧಾನಗೊಂಡಿದ್ದೇವೆ ಎಂದು ಎಲ್ಲಿಯೂ ಹೇಳಿಲ್ಲ. ಹೀಗಾಗಿ ಅವರನ್ನು ಸಮಾಧಾನ ಪಡಿಸುವ ಪ್ರಶ್ನೆಯೇ ಇಲ್ಲ. ಪಾದಯಾತ್ರೆ ಕುರಿತು ವರಿಷ್ಠರು, ರಾಜ್ಯ ಉಸ್ತುವಾರಿ, ರಾಜ್ಯ ಘಟಕದ ಅಧ್ಯಕ್ಷರು ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT