ಬೆಂಗಳೂರು: ‘ಮತ್ತೆ ಮತ್ತೆ ಕುಟುಂಬವಾದವನ್ನು ಪ್ರಸ್ತಾಪಿಸಿ ಕಾಂಗ್ರೆಸ್ ಪಕ್ಷವನ್ನು ಚುಚ್ಚುವ ಪ್ರಯತ್ನ ಮಾಡಿದ್ದೀರಿ. ಕುಟುಂಬವಾದದ ಬಗೆಗಿನ ನಿಮ್ಮ ನಿಲುವು ವೈಯಕ್ತಿಕವಾದದ್ದೇ. ಇಲ್ಲವೇ ಪಕ್ಷದ್ದೇ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಕುಟುಂಬ ರಾಜಕಾರಣ ಕುರಿತ ಪ್ರಧಾನಿ ಹೇಳಿಕೆಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಅವರು, ‘ಕರ್ನಾಟಕದ ಚುನಾವಣೆಯಲ್ಲಿ ಈ ಬಾರಿ ನಿಮ್ಮ ಪಕ್ಷ ‘ಕುಟುಂಬ ರಾಜಕಾರಣ’ಕ್ಕೆ ಸೇರುವ 34 ಅಭ್ಯರ್ಥಿಗಳಿಗೆ ಟಿಕೆಟ್ ನೀಡಿತ್ತು. ಬಿ.ಎಸ್. ಯಡಿಯೂರಪ್ಪನವರ ಕುಟುಂಬ, ಜಾರಕಿಹೊಳಿ ಕುಟುಂಬ, ಕತ್ತಿ ಕುಟುಂಬ, ಜೊಲ್ಲೆ, ನಿರಾಣಿ, ಗಣಿ ರೆಡ್ಡಿಗಳು, ಗುತ್ತೇದಾರ್‌ಗಳು ಇವರೆಲ್ಲಾ ನಿಮ್ಮ ಪಕ್ಷದ ಟಿಕೆಟ್ ಪಡೆದು ಚುನಾವಣೆ ಎದುರಿಸಲಿಲ್ಲವೇ’ ಎಂದೂ ಕೇಳಿದ್ದಾರೆ.
‘ಅಡ್ಡ ಮಾರ್ಗದಲ್ಲಿ ಅಧಿಕಾರ ಹಿಡಿಯಲು ಹೊರಟಾಗ ನಿಮಗೆ ಕುಟುಂಬವಾದದ ನೆನಪಾಗುವುದಿಲ್ಲವೇ? ಕರ್ನಾಟಕದಲ್ಲಿ ದೇವೇಗೌಡರ ಕುಟುಂಬ, ಮಹಾರಾಷ್ಟ್ರದಲ್ಲಿ ಠಾಕ್ರೆ ಕುಟುಂಬ, ಹರಿಯಾಣದಲ್ಲಿ ಚೌತಾಲಾ ಕುಟುಂಬ, ಕಾಶ್ಮೀರದಲ್ಲಿ ಮುಫ್ತಿ ಕುಟುಂಬ, ಪಂಜಾಬ್‌ನಲ್ಲಿ ಬಾದಲ್ ಪರಿವಾರದೊಂದಿಗೆ ನಿಮ್ಮ ಪಕ್ಷ ಅಧಿಕಾರ ಸವಿದಿಲ್ಲವೇ’ ಎಂದೂ ಕುಟುಕಿದ್ದಾರೆ.
‘ಜಾತಿ, ಧರ್ಮಗಳ ಆಧಾರದಲ್ಲಿ ದೇಶ ಒಡೆಯುವ ಬಿಜೆಪಿ ಕಾರ್ಯಸೂಚಿ ಈಗ ಗುಪ್ತವಾಗಿ ಉಳಿದಿಲ್ಲ. ಸರ್ಕಾರದ ಸಾಧನೆಗಳ ಆಧಾರದಲ್ಲಿ ಮುಂಬರುವ ಲೋಕಸಭಾ ಚುನಾವಣೆ ಎದುರಿಸಲು ಸಾಧ್ಯ ಇಲ್ಲ ಎನ್ನುವುದು ನಿಮಗೆ ಮನದಟ್ಟಾಗಿದೆ. ಈ ಪರಿಸ್ಥಿತಿಯಲ್ಲಿ ಉಳಿದಿರುವ ಮತ್ತು ನಿಮಗೆ ಅತ್ಯಂತ ಪ್ರಿಯವಾದ ಅಸ್ತ್ರ ಅನ್ಯ ಧರ್ಮಗಳ ದ್ವೇಷ ಮತ್ತು ಕಾಂಗ್ರೆಸ್ ವಿರುದ್ಧ ರಾಜಕಾರಣ ಮಾತ್ರ’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.